ADVERTISEMENT

ಟಿಸಿಎಸ್ ಸಮೀಕ್ಷೆಯಲ್ಲಿ ಹೊರಬಿದ್ದ ಅಂಶಗಳು

ಟಿಸಿಎಸ್ ಸಮೀಕ್ಷೆಯಲ್ಲಿ ಹೊರಬಿದ್ದ ಅಂಶಗಳು

ಪ್ರಜಾವಾಣಿ ವಿಶೇಷ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST
ಟಿಸಿಎಸ್ ಸಮೀಕ್ಷೆಯಲ್ಲಿ ಹೊರಬಿದ್ದ ಅಂಶಗಳು
ಟಿಸಿಎಸ್ ಸಮೀಕ್ಷೆಯಲ್ಲಿ ಹೊರಬಿದ್ದ ಅಂಶಗಳು   

ಐಟಿ ಸಂಸ್ಕೃತಿಯನ್ನು ಆವಾಹಿಸಿಕೊಂಡು ಬೆಳೆಯುತ್ತಿರುವ ಬೆಂಗಳೂರು, ಇಲ್ಲಿನ ಮಕ್ಕಳನ್ನು ಗ್ಯಾಡ್ಜೆಟ್ ಮೋಹಿಯನ್ನಾಗಿಸಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳು ಈಗ ಮೇಲ್ವರ್ಗದ ಮಕ್ಕಳನ್ನಷ್ಟೇ ಅಲ್ಲದೇ ಕೆಳ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಮಕ್ಕಳನ್ನು ಸೆಳೆದಿವೆ. ಮಕ್ಕಳಲ್ಲಿ ಗ್ಯಾಡ್ಜೆಟ್ ಮೋಹ ಎಷ್ಟಿದೆ? ಹಾಗೂ ತಂತ್ರಜ್ಞಾನ ಯುವಪೀಳಿಗೆಯ ಪ್ರವೃತ್ತಿಯನ್ನು ಹೇಗೆ ಬದಲಾಯಿಸಿದೆ ಎಂದು ಅರಿಯುವ ಸಲುವಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈಚೆಗೆ `ವೆಬ್ 3.0' ಎಂಬ ಸಮೀಕ್ಷೆ ಆಯೋಜಿಸಿತ್ತು. ಈ ಸಮೀಕ್ಷೆಯಲ್ಲಿ ಅನೇಕ ಅಚ್ಚರಿಯ ಅಂಶಗಳು ಹೊರಬಿದ್ದಿವೆ. ಟಿಸಿಎಸ್ ಕಾರ್ಪೋರೆಟ್ ಕಮ್ಯನಿಕೇಷನ್ಸ್‌ನ ಗ್ಲೋಬಲ್ ಹೆಡ್ ಪ್ರದೀಪ್ತ ಭಗ್ಜಿ ಸಮೀಕ್ಷೆ ಕುರಿತು ಮಾತನಾಡಿದ್ದಾರೆ.

ಟಿ.ಸಿ.ಎಸ್ ಸಮೀಕ್ಷೆಯ ಹಿಂದಿನ ಉದ್ದೇಶ?
ಶಾಲಾ ವಿದ್ಯಾರ್ಥಿಗಳ ಡಿಜಿಟಲ್ ಹವ್ಯಾಸಗಳ ನಾಡಿಮಿಡಿತ ತಿಳಿಯುವುದು ಸಮೀಕ್ಷೆಯ ಪ್ರಮುಖ ಉದ್ದೇಶವಾಗಿತ್ತು. ಕಳೆದ ಐದು ವರ್ಷಗಳಿಂದ ಈ ಸಮೀಕ್ಷೆ ಆಯೋಜಿಸುತ್ತಾ ಬರುತ್ತಿದ್ದೇವೆ. ಆದರೆ ಈ ವರ್ಷದ ಸಮೀಕ್ಷೆ ಹಿಂದಿನವುಗಳಿಗಿಂತ ಭಿನ್ನ. ಈ ಸಮೀಕ್ಷೆ ವಿದ್ಯಾರ್ಥಿಗಳ ಪ್ರವೃತ್ತಿ, ಸಾಮಾಜಿಕ ಜಾಲತಾಣದಲ್ಲಿನ ಅವರ ಆದ್ಯತೆಗಳು ಮತ್ತು ಆಸಕ್ತಿಯನ್ನು ಕಂಡುಕೊಳ್ಳುವುದಾಗಿತ್ತು.

ಸಮೀಕ್ಷೆಯಲ್ಲಿ ಯಾವ ಯಾವ ವಯಸ್ಸಿನ ಮಕ್ಕಳು ಪಾಲ್ಗೊಂಡಿದ್ದರು? ಬೆಂಗಳೂರಿನ ಎಷ್ಟು ಮಕ್ಕಳು ಪಾಲ್ಗೊಂಡಿದ್ದರು?
13ರಿಂದ 17ವರ್ಷ ವಯಸ್ಸಿನ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇಡೀ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ 17 ಸಾವಿರ ಮಕ್ಕಳು ಪಾಲ್ಗೊಂಡಿದ್ದರು. ಅದರಲ್ಲಿ ಬೆಂಗಳೂರಿನ 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳೇನು?
ಬೆಂಗಳೂರು ನಗರಿಯಲ್ಲಿ ನಡೆಸಿದ ಸಮೀಕ್ಷೆ ಹಲವು ಅಚ್ಚರಿಯ ಸಂಗತಿಗಳನ್ನು ಹೊರಹಾಕಿತು. ಇಲ್ಲಿನ ಶೇ 76 ಮಕ್ಕಳು ಮೊಬೈಲ್ ಬಳಕೆ ಮಾಡುತ್ತಾರೆ. ಶೇ 65 ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಸ್ವಂತ ಕಂಪ್ಯೂಟರ್ ಹೊಂದಿದ್ದಾರೆ. ಹಾಗೆಯೇ, ಫೇಸ್‌ಬುಕ್, ಟ್ವಿಟ್ಟರ್ (ಶೇ 68), ಎಸ್‌ಎಂಎಸ್ (ಶೇ 59), ಇ-ಮೇಲ್ (ಶೇ 45) ಇನ್‌ಸ್ಟ್ಯಾಂಟ್ ಮೆಸೆಜಿಂಗ್ (ಶೇ 53) ಮೂಲಕ ಸಂವಹನ ನಡೆಸುತ್ತಾರೆ. ಬೆಂಗಳೂರು ನಗರಿಯ ಮೇಲೆ ಐಟಿ ಪ್ರಭಾವ ಹೆಚ್ಚಿರುವುದರಿಂದ ಇಲ್ಲಿನ ಮಕ್ಕಳು ಗ್ಯಾಡ್ಜೆಟ್‌ಗಳ ಬಳಕೆಯಲ್ಲೂ ಮುಂದಿದ್ದಾರೆ.

ಈಚಿನ ಮಕ್ಕಳು ಗ್ಯಾಡ್ಜೆಟ್‌ಗಳತ್ತ ಹೆಚ್ಚು ಆಕರ್ಷಿತಗೊಳ್ಳತ್ತಿದ್ದಾರೆ. ಆಕರ್ಷಣೆಯ ಹಿಂದಿರುವ ಸೆಳೆತ ಯಾವುದು?
ಗ್ಯಾಡ್ಜೆಟ್‌ಗಳು ಈಗ ಎಲ್ಲರ ಬದುಕಿನ ಒಂದು ಭಾಗವೇ ಆಗಿದೆ. ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಡಿಜಿಟಲ್ ಸಂವಹನ ಮಾಧ್ಯಮ ಮಕ್ಕಳನ್ನು ಬಹುವಾಗಿ ಸೆಳೆದಿದೆ. ಅದರಲ್ಲೂ ಸ್ಮಾರ್ಟ್‌ಫೋನ್ ಬಳಕೆಯಿಂದಾಗಿ ಮೊಬೈಲ್ ಇಂಟರ್‌ನೆಟ್ ಬಳಕೆ ಹೆಚ್ಚಾಗಿದೆ. ನಾಲ್ಕರಲ್ಲಿ ಮೂರು ಮಕ್ಕಳು ಶಾಲೆ ಸಂಬಂಧಿತ ಕೆಲಸಗಳಿಗೆ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಸ್ನೇಹಿತರೊಂದಿಗೆ ಸಂಪರ್ಕ ಹೊಂದಲು ಇವುಗಳನ್ನು ಬಳಕೆ ಮಾಡುತ್ತಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಇತರರೊಂದಿಗೆ ತಕ್ಷಣ, ವೇಗವಾಗಿ ಹಂಚಿಕೊಳ್ಳಲು ಫೇಸ್‌ಬುಕ್ ಬಳಕೆ ಮಾಡುತ್ತಿದ್ದಾರೆ. ಗ್ಯಾಡ್ಜೆಟ್‌ಗಳ ವೇಗವೇ ವಿದ್ಯಾರ್ಥಿಗಳ ಆಕರ್ಷಣೆಯ ಕೇಂದ್ರಬಿಂದು.   

ಗ್ಯಾಡ್ಜೆಟ್‌ಗಳು ಮಕ್ಕಳ ಕಲಿಕೆಗೆ ಪೂರಕವೋ ಅಥವಾ ಪ್ರತಿಕೂಲವೋ?
ಸ್ಮಾರ್ಟ್ ಸಾಧನಗಳು, ಆನ್‌ಲೈನ್ ಸಂವಹನ ಇಂದಿನ ಪೀಳಿಗೆಯನ್ನು ಹೆಚ್ಚು ನಿಕಟವಾಗಿಸಿರುವುದು ಈ ಸಮೀಕ್ಷೆಯನ್ನು ಇಡಿಯಾಗಿ ಗಮನಿಸಿದಾಗ ತಿಳಿಯುತ್ತದೆ. ಈಗಿನ ಪೀಳಿಗೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಗ್ಯಾಡ್ಜೆಟ್‌ಗಳ ಪ್ರಭಾವ ಸಾಕಷ್ಟಿದೆ. ಡಿಜಿಟಲ್ ಟೂಲ್‌ಗಳು ಮಕ್ಕಳ ಕಲಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಚುರುಕುಗೊಳಿಸಿದ ಕೀರ್ತಿ ಇವುಗಳಿಗೆ ಸಲ್ಲಬೇಕು. ಪೂರಕ ವ್ಯಾಸಂಗಕ್ಕೆ, ಹೆಚ್ಚಿನ ಜ್ಞಾನಾಭಿವೃದ್ಧಿಗೆ, ಪ್ರಾಜೆಕ್ಟ್ ತಯಾರಿಕೆಗೆ, ಪರೀಕ್ಷೆ ಸಿದ್ಧತೆಗೆ ಹೀಗೆ ಎಲ್ಲಕ್ಕೂ ಅವು ನೆರವಾಗಿವೆ. ಗ್ಯಾಡ್ಜೆಟ್‌ಗಳು ಮಕ್ಕಳ ಕಲಿಕೆಗೆ ಪ್ರತಿಕೂಲ ಒಡ್ಡುವುದಕ್ಕಿಂತಲೂ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ.

ಗ್ಯಾಡ್ಜೆಟ್‌ಗಳು ಮಕ್ಕಳ ಮನಸ್ಸನ್ನು ವಿಕೃತಿಗೊಳಿಸುತ್ತವೆ ಎನ್ನುವ ವಾದವೂ ಇದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?
ಸ್ವಲ್ಪ ಮಟ್ಟಿಗೆ ಮಾತ್ರ ಇದು ಸತ್ಯ. ಸಂವಹನ ಮತ್ತು ಮನರಂಜನೆಯ ಕೊಂಡಿಯನ್ನು ಮಿತಿ ಇಲ್ಲದೆ ತೆರೆದಿಟ್ಟರುವ ಗ್ಯಾಡ್ಜೆಟ್‌ಗಳಿಂದಾಗಿ ಕೆಲವು ಮಕ್ಕಳ ದಿಕ್ಕು ತಪ್ಪುತ್ತಿದ್ದಾರೆ. ಹಾಗಂತ ಗ್ಯಾಡ್ಜೆಟ್‌ಗಳ ಬಳಕೆಯೇ ತಪ್ಪು ಎನ್ನಲು ಆಗುವುದಿಲ್ಲ. ತಂತ್ರಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದೇ ಇದಕ್ಕಿರುವ ಏಕೈಕ ಪರಿಹಾರ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT