ADVERTISEMENT

ಟೀವಿ ಐಪಿಎಲ್ ಸಿನಿಮಾ ಟೆಸ್ಟ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST
ಟೀವಿ ಐಪಿಎಲ್ ಸಿನಿಮಾ ಟೆಸ್ಟ್
ಟೀವಿ ಐಪಿಎಲ್ ಸಿನಿಮಾ ಟೆಸ್ಟ್   

ಒಂದು ಕಾಲದಲ್ಲಿ ಜೂಲಿ ಐ ಲವ್ ಯೂ ಎಂದು ಎಲ್ಲರ ಬಾಯಲ್ಲೂ ಗುನುಗುನಿಸುವಂತೆ ಮಾಡಿದ ಜೂಲಿ ಲಕ್ಷ್ಮಿ ದಯವಿಟ್ಟು ಸ್ವಲ್ಪ ನನ್ನ ಮಾತು ಕೇಳ್ತಿರಾ.... ಎಂಬ ಡೈಲಾಗನ್ನು ಸುವರ್ಣ ವಾಹಿನಿಯಲ್ಲಿ ಹೇಳುತ್ತಿರುವುದನ್ನು ಅನೇಕರು ಕೇಳಿರಬೇಕು. ಸಂಜೆ ವಯಸ್ಸಿನವರಾದರೂ ಮುಖದಲ್ಲಿ ಅದೇ ಬೆಳಕು. ಮೋಡಿ ಮಾಡುವಂತಹ ಮಾತು.

`ನೀನಾ? ನಾನಾ?~ ಟಾಕ್ ಶೋ ನಡೆಸಿ ಕೊಡುತ್ತಿರುವ ಅವರು ಮಾತಿಗೆ ತೆರೆದುಕೊಂಡರು.

ಕಾಟನ್ ಸೀರೆಯುಟ್ಟು, ಸಹಜ ಹಾಗೂ ಸರಳ ಮೇಕಪ್‌ನಲ್ಲಿದ್ದ ಲಕ್ಷ್ಮಿ ಭಾವೋದ್ವೇಗ ಬೆರೆಸಿಯೇ ಮಾತಿಗಿಳಿದರು...

“ಮೊದಲು `ಕತೆ ಅಲ್ಲ ಜೀವನ~ ಶುರು ಮಾಡಿದ್ದು. ಅಲ್ಲಿ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದೆ. ಕಣ್ಣೀರಿಡುತ್ತಿದ್ದೆ. ಮಾನಸಿಕ ಒತ್ತಡ ಹೆಚ್ಚಾಗತೊಡಗಿತು. ಕೆಲವೊಮ್ಮೆ ಖಿನ್ನಳಾಗಿದ್ದೂ ಇದೆ.  

ಈಗ `ನೀನಾ? ನಾನಾ?~ ಟಾಕ್ ಶೋಗೆ ಒಪ್ಪಿಕೊಂಡೆ. ಇಲ್ಲಿ ಯಾರ ಬದುಕಿನೊಂದಿಗೂ ಮುಖಾಮುಖಿಯಾಗುವುದಿಲ್ಲ. ಕೇವಲ ಅಭಿಪ್ರಾಯಗಳು ವಿನಿಮಯವಾಗುತ್ತವೆ.

ಇವುಗಳನ್ನು ವಿಶ್ಲೇಷಿಸುವುದು ಸುಲಭ. ಅದರ ಬಗ್ಗೆ ಚರ್ಚಿಸುವುದೂ, ಕಲಿಯುವುದೂ ಹೆಚ್ಚಾಗಿದೆ ಎಂದು ಎರಡೂ ಕಾರ್ಯಕ್ರಮಗಳ ಅನುಭವವನ್ನು ಹಂಚಿಕೊಂಡರು.

ನನ್ನ ಖಾಸಗಿ ಜೀವನದ ಮೇಲೆ ಈ ಶೋ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಆದರೆ `ಕತೆಯಲ್ಲ ಜೀವನ~ದಲ್ಲಿ ನಾನು ತುಂಬಾನೇ ಕಲಿತುಕೊಂಡೆ. `ನೀನಾ? ನಾನಾ?~

ಕಾರ್ಯಕ್ರಮದಲ್ಲಿ ಮಾತ್ರ ಇನ್ನೊಬ್ಬರನ್ನು ಸಂಭಾಳಿಸುವ ಕಲೆ ಕಲಿತುಕೊಂಡೆ. ನನಗೆ ಯಾವತ್ತೂ ಈ ಶೋ ಬೇಸರ ತಂದಿಲ್ಲ. ಯಾಕೆಂದರೆ ನಾನು ಇಲ್ಲಿ ಬಂದವರನ್ನು ಸ್ನೇಹಿತರಂತೆ, ಸಹೋದರ- ಸಹೋದರಿಯರಂತೆ ಭಾವಿಸುತ್ತೇನೆ. ಹಾಗೆಯೇ ವಿಷಯವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಪ್ರತಿ ಸಂಚಿಕೆಯ ನಂತರವೂ ನಿರಾಳಭಾವ ಇರುತ್ತದೆ.

ಒಂದು ಸಲ `ನೀನಾ? ನಾನಾ?~ ಕಾರ್ಯಕ್ರಮದಲ್ಲಿ `ಮರು ಮದುವೆ ಬೇಕಾ? ಬೇಡವಾ~ ಎಂಬ ವಿಷಯದ ಬಗ್ಗೆ ಚರ್ಚೆಯಾಗುತ್ತಿತ್ತು. ಒಬ್ಬವಿಧವೆ  ಎದ್ದು ನಿಂತು, `ನನಗೊಂದು ಮದುವೆ ಬೇಕು ಮೇಡಂ~ ಎಂದಾಗ ನನಗೆ ಆಶ್ಚರ್ಯವಾಯಿತು. ಆದರೆ ಅವಳ ಬದುಕಿನ ಕತೆ ಕೇಳಿದಾಗ ಅವಳು ಅನುಭವಿಸುತ್ತಿದ್ದ ನೋವಿನ ಅರಿವಾಯಿತು (ಕಣ್ಣಲ್ಲಿ ಹನಿ).

ಈ ಕಾರ್ಯಕ್ರಮದಲ್ಲಿ ನಾನು ನಕ್ಕಿದ್ದೇ ಹೆಚ್ಚು. ಕೆಲವರ ಉತ್ತರದಿಂದ ನಗು ತಡಿಯೋದಕ್ಕೆ ಆಗದೇ ಕಾರ್ಯಕ್ರಮದ ಚಿತ್ರೀಕರಣವನ್ನು ನಿಲ್ಲಿಸಿದ್ದೂ ಉಂಟು. ಒಂದು ದಿನ `ಮದುವೆ ಬೇಡ ಆದರೆ ಹೆಂಡ್ತಿ ಬೇಕು... ಅದರಲ್ಲೂ ಇನ್ನೊಬ್ಬರ ಹೆಂಡ್ತಿ ಬೇಕು~ ಎಂಬ ಹಾಸ್ಯಭರಿತ ಉತ್ತರ ಕೊಟ್ಟದ್ದು, ಅರೇಂಜ್ ಮ್ಯಾರೇಜ್ ಒಳ್ಳೆಯದು ಎಂದು ವಾದಿಸುತ್ತಿದ್ದ ಹುಡುಗನ ಪ್ರೇಯಸಿ ಅವನ ಎದುರಲ್ಲೇ ಕುಳಿತುಕೊಂಡಿದ್ದು- ಇಂಥ ಸನ್ನಿವೇಶಗಳನ್ನು ನನಗೆ ಮರೆಯಲು ಅಸಾಧ್ಯ. ಆದರೆ ನನಗೆ ಯಾವತ್ತೂ ಯಾರ ಮೇಲೂ ಕೋಪ ಬಂದಿಲ್ಲ. ನವರಸಗಳಲ್ಲಿ ನನ್ನ ಬಳಿ ದ್ವೇಷ, ಕೋಪಕ್ಕೆ ಜಾಗವಿಲ್ಲ.

ಇಂಥ ಚರ್ಚಾ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳನ್ನು ನಿಯಂತ್ರಿಸುವುದು ಕಷ್ಟ. ಶೋ ನಡೆಯುವಾಗ ಕೋಪಿಸಿಕೊಂಡು ಎದ್ದು ಹೋಗಿಬಿಡುತ್ತಾರೆ. ಅವರ ಮನವೊಲಿಸಿ ಕರೆದುಕೊಂಡು ಬಂದು ಮತ್ತೆ ಕಾರ್ಯಕ್ರಮ ಶುರು ಮಾಡಿದ ಸಂದರ್ಭವೂ ಇತ್ತು.
ಸಿನಿಮಾದಲ್ಲಿ ನನಗೆ ಆಸಕ್ತಿ ಕಡಿಮೆಯಾಗಿಲ್ಲ. ಇತ್ತೀಚಿನ ಚಿತ್ರ ಸಂಗೀತ ತುಂಬಾನೇ ಇಷ್ಟ.
 
ಈಗೀಗ ಯಾಕೋ ಸಿನಿಮಾ ಸ್ವಲ್ಪ ಮಟ್ಟಿಗೆ ಕಿರಿಕಿರಿ ಅನಿಸುತ್ತದೆ. ಅದು ಒಂದು ರೀತಿ ಟೆಸ್ಟ್ ಕ್ರಿಕೆಟ್ ಮ್ಯಾಚ್ ಥರ. ಇಂಥ ಟೀವಿ ಶೋಗಳು ಐಪಿಎಲ್ ಕ್ರಿಕೆಟ್ ಪಂದ್ಯಗಳಂತೆ. ಟೀವಿ ಶೋಗಳ ಚಿತ್ರೀಕರಣ ಈ ಪಂದ್ಯಗಳಂತೆ ಬೇಗ ಮುಗಿಯುವುದರಿಂದ ನನಗಿಷ್ಟ.
ಕನ್ನಡ ಚಿತ್ರಗಳಲ್ಲಿ ತುಂಬಾ ಅವಕಾಶ ಸಿಕ್ಕಿದೆ. ಆದರೆ `ವಂಶಿ~ ನಂತರ ಕೆಲವರು ಅದೇ ರೀತಿಯ ಕಥೆ ಮಾಡಿಕೊಂಡು ಬಂದರು. ಅವೆಲ್ಲಾ ನನಗೆ ಅಷ್ಟು ಇಷ್ಟ ಆಗಲಿಲ್ಲ. ಒಂದು ಪಾತ್ರವನ್ನು ಒಂದು ಸಲ ಮಾತ್ರ ಮಾಡಿದರೆ ಚೆಂದ.

ಕೆಲವೊಮ್ಮೆ ಸಾಕು ಈ ಜಂಜಾಟ; ಲಾಂಗ್ ಲೀವ್ ಹಾಕಿ ದೂರ ಹೋಗೋಣ ಅನಿಸ್ದ್ದಿದೂ ಇದೆ. ಆದರೆ, ಮರಳಿ ಗೂಡಿಗೆ ಅನ್ನುವ ಹಾಗೆ ಇದರತ್ತಲೇ ಮನಸ್ಸು ವಾಲುತ್ತದೆ.

ಸಿನಿಮಾಕ್ಕಿಂತ ಟೀವಿಯ ಇಂಥ ಕಾರ್ಯಕ್ರಮಗಳೇ ನನಗೆ ಇಷ್ಟ. ಇಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಒಂದು ಒಳ್ಳೆಯ ವೇದಿಕೆ ಇದು.”

ಹೀಗೆ ತಮ್ಮ ಮನದಾಳ ಬಿಚ್ಚಿಟ್ಟ ಲಕ್ಷ್ಮೀ ಈಗ ತೆಲುಗಿನ `ಮಿಥುನ~ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.