ADVERTISEMENT

ತಂದೆ ಮಗಳ ನಾದನದಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ಮಂಗಳವಾರದ ಇಳಿಸಂಜೆ. ರೆಕ್ಕೆ ಅಗಲಿಸಿ ದಿನವಹಿ ಹಾರಿದ ಹಕ್ಕಿಗಳು ಗೂಡಿನತ್ತ ಮುಖ ಮಾಡುವ ಹೊತ್ತು. ಅರಮನೆ ಮೈದಾನದಲ್ಲಿ ಸಂಗೀತಾಸಕ್ತರ ದಂಡು. ಅರಮನೆ ಮೈದಾನದ ಆಸುಪಾಸಿನ ರಸ್ತೆಗಳೆಲ್ಲಾ ಅತ್ತ ಧಾವಿಸುತ್ತಿವೆಯೋ ಎಂಬಂತಹ ಭಾವ.

7.30...7.40....7.50... ಇನ್ನೆಷ್ಟು ಹೊತ್ತು ಕಾಯಿಸುತ್ತೀರಿ, ಸತಾಯಿಸುತ್ತೀರಿ ಎಂಬಂತೆ ಕತ್ತು ನೀಳವಾಗಿಸಿ ನೋಡುತ್ತಿದ್ದ ಜನ. ಕೊನೆಗೂ ಕಾರ್ಯಕ್ರಮ ಆರಂಭವಾದಾಗ ನಿಡಿದಾದ ಉಸಿರು.

ಹೌದೌದು.. ಆ ಕಾರ್ಯಕ್ರಮವೇ ಹಾಗಿತ್ತು. ವಿಶ್ವವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಮಂಗಳವಾರ ಬೆಂಗಳೂರಿಗೆ ಬಂದಿದ್ದರು. ತಮ್ಮ ಪುತ್ರಿ ಅನುಷ್ಕಾ ಜತೆ `ಫೇರ್‌ವೆಲ್ ಟು ಬೆಂಗಳೂರು~ (ಬೆಂಗಳೂರಿಗೆ ವಿದಾಯ) ಸಂಗೀತ ಕಛೇರಿಯಲ್ಲಿ ಭಾಗವಹಿಸಲು ಬಂದಿದ್ದ ಈ ಮಹಾನ್ ಕಲಾವಿದನತ್ತ ನಗರದ ಜನತೆ ಆದರದ ಹೊಳೆ ಹರಿಸಿದರು.

ಮೂರು ತಾಸು ನಡೆದ ಸಂಗೀತ ಕಛೇರಿಯುದ್ದಕ್ಕೂ ಸಭಾಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಂಡರು. ನಾದದ ಮಾಧುರ್ಯ ಆವರಿಸಿದಾಗ ಕರತಾಡನದ ಸಂಭ್ರಮ. ಕಛೇರಿ ಕಳೆಗುಂದುತ್ತಿದೆ ಅನ್ನಿಸಿದಾಗ ಸಂಯಮ.

ಈ ವಿಶಿಷ್ಟ ಸಂಗೀತ ಕಛೇರಿಯಲ್ಲಿ ಬರೀ ಸಂಗೀತ ಬಲ್ಲವರು, ಸಂಗೀತ ಪ್ರೇಮಿಗಳು ಮಾತ್ರ ಇರಲಿಲ್ಲ. ಮಹೋನ್ನತ ಸಂಗೀತಗಾರನೊಬ್ಬ ನಮ್ಮೂರಿಗೆ ಬಂದು ಹಾಡುತ್ತಿದ್ದಾನೆ. ಆ ಕ್ಷಣಕ್ಕೆ ಸಾಕ್ಷಿಯಾಬೇಕು. ಆ ಸಂಭ್ರಮದಲ್ಲಿ ಭಾಗಿಯಾಬೇಕು ಎಂಬ ತುಡಿತ ಹೊತ್ತು ಬಂದವರೇ ಹೆಚ್ಚಿದ್ದರು.

ಅನಾಥರಿಗೆ ಆಸರೆಯಾಗುವ ಪ್ರೇಮಾಂಜಲಿ ಪ್ರತಿಷ್ಠಾನದ ಸಹಾಯಾರ್ಥ ಪೂರ್ವಾಂಕರ ಏರ್ಪಡಿಸಿದ್ದ ಈ ಕಛೇರಿಯಲ್ಲಿ ಭಾಗಿಯಾಗಲು ಭಾರತರತ್ನ ಪಂಡಿತ್ ರವಿಶಂಕರ್ ಅಮೆರಿಕದಿಂದ ಬಂದಿಳಿದಿದ್ದರು. ಹೆಸರೇ ಹೇಳುವಂತೆ ಇದು ಬೆಂಗಳೂರಿನಲ್ಲಿ ಪಂಡಿತ್‌ಜಿ ಅವರ ಕೊನೆಯ ಕಛೇರಿ.

ಈ ಅಪರೂಪದ ಸಿತಾರ್ ಸಂಜೆ ಆರಂಭವಾಗಿದ್ದೇ ಅನುಷ್ಕಾ ಅವರಿಂದ. ಪಂಡಿತ್‌ಜಿ ಕಛೇರಿಗೆ ಮುನ್ನುಡಿಯಾಗಿ 45 ನಿಮಿಷಗಳ ಕಾರ್ಯಕ್ರಮ ನೀಡಿದರು.

ಹಂಸ ಬಣ್ಣದ ಉಡುಪು ತೊಟ್ಟು, ನೆರಿಗೆ ಚಿಮ್ಮುತ್ತ ವೇದಿಕೆಗೆ ಬಂದ ಅವರು ಹಿಮಕನ್ಯೆಯಂತೆ ಕಂಗೊಳಿಸಿದರು. ಆ ನೀಳ ಬೆರಳ ಸ್ಪರ್ಶದಲ್ಲಿ ಯಾವುದೋ ಮಾಂತ್ರಿಕತೆ ಇದೆ ಎಂಬಂತೆ ಸಿತಾರ್ ತಂತಿಯಿಂದ ಹರಿದುಕ್ಕಿತು ಜುಳುಜುಳು ನಾದ ನದಿ.

ಪಕ್ಕವಾದ್ಯದ ಸಾಥ್ ನೀಡಲು ಬಂದಿದ್ದ ಪ್ರತಿಭಾವಂತ ವೇಣುವಾದಕ ರವಿಚಂದ್ರ ಕುಳೂರ್ ಕೊಳಲು ನುಡಿಸಿದಾಗ ಅನುಷ್ಕಾ ಮೆಚ್ಚುಗೆಯಿಂದ ತಲೆಯಾಡಿಸಿದರು. ತಮ್ಮ ಸಿತಾರ್‌ನಿಂದ ಅನುಪಮ ಸ್ವರ ಹೊಮ್ಮಿದಾಗಲೂ ತನ್ಮಯತೆಯಿಂದ ಆಸ್ವಾದಿಸಿದರು.

92 ವರ್ಷದ ಸಿತಾರ್ ಸಾಧಕ ವೇದಿಕೆಗೆ ಬಂದಾಗ ಇಡೀ ಸಭಾಂಗಣ ಎದ್ದು ನಿಂತು ಗೌರವ ಸಲ್ಲಿಸಿತು. ತಾಮ್ರವರ್ಣದ ಉಡುಪು ಧರಿಸಿದ್ದ ಬಿಳಿಯ ಗಡ್ಡದ ಪಂಡಿತ್‌ಜಿ ಸಿತಾರ್ ನುಡಿಸುತ್ತಿದ್ದಾಗ ನಾದಋಷಿಯಂತೆ ಕಂಗೊಳಿಸುತ್ತಿದ್ದರು.

ಪಂಡಿತ್‌ಜಿ ಮೊದಲಿಗೆ ಆಯ್ದುಕೊಂಡಿದ್ದು ತಮ್ಮ ಮೆಚ್ಚಿನ ಯಮನ್ ಕಲ್ಯಾಣ ರಾಗ. ಆನಂತರ ನುಡಿಸಿದ್ದು ಶ್ಯಾಮ್ ತಿಲಕ್ ರಾಗ. ತಂದೆಯ ವೃದ್ಧ ಬೆರಳುಗಳು ತಂತಿ ಮೀಟುವಲ್ಲಿ ಸೋಲತೊಡಗಿವೆ ಅನ್ನಿಸಿದಾಗಲೆಲ್ಲ ಅನುಷ್ಕಾ ನಾದದ ಎಳೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದರು.

ಕೊನೆಯ ರಾಗ ಪ್ರಸ್ತುತಪಡಿಸುವ ಮುನ್ನ ಪಂಡಿತ್‌ಜಿ ಏಕತಾನತೆ ಮುರಿಯಲೆಂದು ತಬಲಾದಲ್ಲಿದ್ದ ತನ್ಮಯ್ ಬೋಸ್ ಹಾಗೂ ತಾಳವಾದ್ಯದಲ್ಲಿದ್ದ ಪಿ. ತೇವರಾಜನ್ ನಡುವೆ ಚುಟುಕು ಜುಗಲ್‌ಬಂದಿ ಏರ್ಪಡಿಸಿದರು.
 
ಜುಗಲ್‌ಬಂದಿ ತೀವ್ರವಾಗುತ್ತಿದ್ದಂತೆ ವಾದ್ಯಗಳ ಬಡಿತಕ್ಕೆ ಸಮನಾಗಿ ನೂರಾರು ಕೈಗಳು ಲಯಬದ್ಧವಾಗಿ ಕರತಾಡನ ಮಾಡಿದವು.
ಕಛೇರಿಯ ಅಂತಿಮ ಚರಣದಲ್ಲಿ ಪಂಡಿತ್‌ಜಿ ಸ್ವರ, ಲಯ, ಚಂದ, ರಂಗ, ಭಾವ ಎಲ್ಲವೂ ಮಿಳಿತವಾಗಿದ್ದ ರಾಗಮಾಲಾ ವೈವಿಧ್ಯ ಪ್ರಸ್ತುತಪಡಿಸಿದರು.

ಸಂಗೀತ ಕಛೇರಿಯಲ್ಲಿ ಯುವ ಪ್ರತಿಭೆ ಅನುಷ್ಕಾ ಜಲಪಾತದಂತೆ ಭೋರ್ಗರೆದು ಪ್ರವಹಿಸಿದರೆ, ಪರಿಪಕ್ವ ರವಿಶಂಕರ್ ಗುಪ್ತಗಾಮಿನಿಯಂತೆ ನಿನಾದದ ಅಲೆ ಹರಡಿದರು.
ರಾತ್ರಿ 11ಕ್ಕೆ ಸಂಗೀತ ಕಛೇರಿ ಮುಗಿಸಿ ಹೊರಬಂದಾಗ ಶಿಶಿರದ ಚಳಿ ಮೆಲ್ಲಗೆ ಆವರಿಸಿತ್ತು. ಮಾಧುರ್ಯದ ಹೊಳೆಯಲ್ಲಿ ಮಿಂದೆದ್ದಂತೆ ನಕ್ಷತ್ರ ಗೊಂಚಲು ಉಜ್ವಲವಾಗಿ ಮಿನುಗುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.