ADVERTISEMENT

ತಪ್ಪು ದಾರಿಯ ಹಾಡುಗಳು!

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST
ಮಹೇಶ್ ದೇವ, ಬ್ಯಾಂಕ್‌ ಪರಶುರಾಮ, ಮಂಜು ಕವಿ
ಮಹೇಶ್ ದೇವ, ಬ್ಯಾಂಕ್‌ ಪರಶುರಾಮ, ಮಂಜು ಕವಿ   

ಇಡೀ ಚಿತ್ರರಂಗ ತಪ್ಪು ದಾರಿಯಲ್ಲಿ ಒಂದು ಹಂತಕ್ಕೆ ಬಂದು ಮುಟ್ಟಿದ ನಿರಾಳತೆಯಲ್ಲಿತ್ತು. ಹಾ, ತಪ್ಪು ದಾರಿ ಎಂದಾಕ್ಷಣ ತಪ್ಪು ಅರ್ಥ ಮಾಡಿಕೊಳ್ಳಬೇಡಿ. ಈ ಚಿತ್ರದ ಹೆಸರೇ ‘ರಾಂಗ್‌ ರೂಟ್‌ 9’.

ಚಿತ್ರರಂಗಕ್ಕೆ ಬಹುತೇಕ ಹೊಸಬರೇ ಆಗಿರುವ ಹಲವರು ಸೇರಿಕೊಂಡು ಮಾಡಿರುವ ಚಿತ್ರ ‘ರಾಂಗ್‌ ರೂಟ್‌ 9’. ಇತ್ತೀಚೆಗೆ ಪ್ರಥಮ್‌ ಅವರ ಸಮ್ಮುಖದಲ್ಲಿ ಚಿತ್ರತಂಡ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿತು.

ರಂಗಭೂಮಿಯಲ್ಲಿದ್ದ ಬ್ಯಾಂಕ್‌ ಪರಶುರಾಮ್‌ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ನಿರ್ಮಾಣದ ಜಬಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಒಬ್ಬ ಅಮಾಯಕ ಮನುಷ್ಯ, ಹೆಣ್ಣಿನಿಂದ ನೋವು ಅನುಭವಿಸಿ ಹೇಗೆಲ್ಲಾ ತಪ್ಪು ದಾರಿ ಹಿಡಿಯುತ್ತಾನೆ ಎನ್ನುವುದೇ ಈ ಚಿತ್ರದ ಕಥೆ’ ಎಂದು ಒಂದೇ ಸಾಲಿನಲ್ಲಿ ಎಳೆಯನ್ನು ತಿಳಿಸಿದರು ಪರಶುರಾಮ್‌.

ADVERTISEMENT

ಚಿತ್ರದಲ್ಲಿನ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಮಂಜು ಕವಿ ಸಾಹಿತ್ಯವನ್ನೂ ಬರೆದಿದ್ದಾರೆ. ‘ಒಂದು ಪ್ಯಾಥೋ ಸಾಂಗ್‌, ಇನ್ನೊಂದು ಡ್ಯುಯೆಟ್‌, ಮತ್ತೊಂದು ಸೋಲೊ ಸಾಂಗ್‌ ಈ ಚಿತ್ರದಲ್ಲಿದೆ. ನಾವೊಂದಿಷ್ಟು ಜನ ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರವಿದು. ಜನರು ಪ್ರೋತ್ಸಾಹಿಸಬೇಕು’ ಎಂದು ಮಂಜು ಕವಿ ಕೇಳಿಕೊಂಡರು.

ನಾಯಕ ಮಹೇಶ್‌ ದೇವ ಅವರಿಗಿದು ಮೂರನೇ ಸಿನಿಮಾ. ‘ನನಗೆ ಗೊತ್ತಿಲ್ಲದ ಹಲವು ಸಂಗತಿಗಳನ್ನು ಈ ಚಿತ್ರದ ಮೂಲಕ ಅರಿತುಕೊಂಡಿದ್ದೇನೆ’ ಎಂದು ಅವರು ಹೇಳಿದರು. ಸಹನಿರ್ಮಾಣ ಮಾಡಿರುವ ಸೋಮಶೇಖರ್ ಒಂದು ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಅಂಶಗಳನ್ನು ಸೇರಿಸಿ ನಿರ್ದೇಶಕರು ಈ ಚಿತ್ರವನ್ನು ಮಾಡಿದ್ದಾರೆ. ಸಸ್ಪೆನ್ಸ್‌ ಚಿತ್ರವೋ ಥ್ರಿಲ್ಲರ್‌ ಚಿತ್ರವೋ ಎಂಬುದೇ ಗೊತ್ತಾವುದಿಲ್ಲ’ ಎಂದು ಹೊಗಳುತ್ತಿದ್ದಾರೋ ಟೀಕಿಸುತ್ತಿದ್ದಾರೋ ಎಂದು ಗೊತ್ತಾಗದ ಹಾಗೆ ಮಾತನಾಡಿದರು ಸೋಮಶೇಖರ್.

ಸಂತೋಷ್‌ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲಿ ತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.