ADVERTISEMENT

ತ್ವಚೆ ರಕ್ಷಣೆಗೆ ಮನೆ ಮದ್ದು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST
ತ್ವಚೆ ರಕ್ಷಣೆಗೆ ಮನೆ ಮದ್ದು
ತ್ವಚೆ ರಕ್ಷಣೆಗೆ ಮನೆ ಮದ್ದು   

ನೈಸರ್ಗಿಕವಾಗಿ ಸಿಗುವ ಪದಾರ್ಥಗಳನ್ನು ತ್ವಚೆಯ ರಕ್ಷಣೆಗೆ ಬಳಸುವುದರಿಂದ ಉತ್ತಮ ಮೈಕಾಂತಿಯನ್ನು ಪಡೆಯಬಹುದು. ಅದೂ ಕಡಿಮೆ ಖರ್ಚಿನಲ್ಲಿ!

ಎಲ್ಲ ದುಬಾರಿ ಕ್ರೀಮ್ ಮತ್ತು ಲೋಷನ್‌ಗಳನ್ನು ಆಚೆಗೆ ತಳ್ಳಿ. ಏಕೆಂದರೆ ನಿಮ್ಮ ತ್ವಚೆಯ ರಕ್ಷಣೆಗೆ ನಿಮ್ಮದೇ ಅಡುಗೆ ಮನೆಯಲ್ಲಿ ಹಲವು ಪದಾರ್ಥಗಳು ದೊರೆಯುತ್ತವೆ. ಇದಕ್ಕೆ ಸ್ವಲ್ಪ ಹೆಚ್ಚು ಸಮಯ ತಗುಲಿದರೂ ಕೂಡ ನಿಮ್ಮ ತ್ವಚೆ ಮಾತ್ರ ಅತ್ಯಾಕರ್ಷಕ ಹಾಗೂ ನೈಸರ್ಗಿಕ ಅಂದವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರತಿಯೊಂದು ನೈಸರ್ಗಿಕ ಪದಾರ್ಥವೂ ತನ್ನದೇ ಆದ ವಿಶೇಷ ಗುಣಗಳನ್ನು ಹೊಂದಿರುತ್ತದೆ. ಜತೆಗೆ ಅದು ತ್ವಚೆಯನ್ನು ಕೋಮಲ ಮತ್ತು ಸುಂದರವಾಗಿಸುವಲ್ಲಿ ನೆರವಾಗುತ್ತವೆ. ಈ ಪ್ರಾಕೃತಿಕ ಪದಾರ್ಥಗಳು ನಮ್ಮನ್ನು ಸದಾ ಉಲ್ಲಾಸಭರಿತವಾಗಿ ಇಡುತ್ತವೆ.
 
ಈ ನೈಸರ್ಗಿಕ ಚಿಕಿತ್ಸೆಯನ್ನು ನೀವು ಎಂದಿನಂತೆ ನಿಮ್ಮ ಪ್ರತಿ ವಾರದ ಬ್ಯೂಟಿ ರುಟಿನ್ ಸಮಯದಲ್ಲಿ ಮಾಡಿಕೊಳ್ಳಬಹುದು ಅಥವಾ ವಿಶೇಷ ಸಭೆ, ಸಮಾರಂಭಗಳಿಗೂ ಮುನ್ನ ತ್ವಚೆಗೆ ಪ್ರಾಕೃತಿಕ ಸ್ಪರ್ಶ ನೀಡಿ ಸಮಾರಂಭದ ಕೇಂದ್ರ ಬಿಂದು ಆಗಬಹುದು.
 
ಜೇನು: ಅತ್ಯಗತ್ಯ ವಿಟಮಿನ್‌ಗಳು, ಮಿನರಲ್ಸ್ ಮತ್ತು ಅಮೀನೊ ಆಸಿಡ್‌ನಂತಹ ಶ್ರೀಮಂತ ನೈಸರ್ಗಿಕ ಅಂಶಗಳನ್ನು ಒಳಗೊಂಡಿರುವ ಜೇನು ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿ ನೈಸರ್ಗಿಕ ಪದಾರ್ಥ. ಜತೆಗೆ ಅತ್ಯುತ್ತಮ ಸ್ಕಿನ್ ಮಾಯಿಶ್ವರೈಸರ್ ಕೂಡ.

ಚರ್ಮಕ್ಕೆ ಸೂಕ್ತ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಜೇನನ್ನು ಹಲವು ಹಣ್ಣುಗಳ ಜತೆ ಬೆರೆಸಿ ಸೇವಿಸಬಹುದು. ಸ್ಟ್ರಾಬೆರ‌್ರಿಯಲ್ಲಿ ಎಲಿಜಿಕ್ ಆಸಿಡ್ ಹೆಚ್ಚಾಗಿದ್ದು, ಎಕ್ಸ್‌ಫೋಲಿಯೇಷನ್‌ಗೆ ಸೂಕ್ತವಾಗಿದೆ. ಮುಖಕ್ಕೆ ಒಂದು ಒಳ್ಳೆಯ ಫ್ರೂಟ್ ಪ್ಯಾಕ್ ರೂಪಿಸಿಕೊಳ್ಳಲು, ಸ್ಟ್ರಾಬೆರ‌್ರಿಯೊಂದಿಗೆ ಕ್ರೀಮ್ ಮತ್ತು ಜೇನನ್ನು ಮಿಶ್ರಣ ಮಾಡಿಕೊಂಡು ಬಳಸಬಹುದಾಗಿದೆ.

ಹನಿ ಪೇಸ್ಟ್, ನಿಂಬೆಯ ರಸ ಮತ್ತು ಮೊಸರನ್ನು ಸಹ ಸ್ಕಿನ್ ಕ್ಲೀನ್ಸಿಂಗ್ ಪ್ಯಾಕ್ ಆಗಿ ಬಳಸಬಹುದು. ಇದು ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ.
 
ಇದರೊಂದಿಗೆ ಜೇನನ್ನು ಗೋಧಿ ಹಿಟ್ಟು ಮತ್ತು ಓಟಮೀಲ್ ಅಥವಾ ಅಲ್ಮೋಡ್ ಪೇಸ್ಟ್ ಜತೆಯೂ ಬೆರೆಸಿ ಬಳಸಬಹುದು. ಈ ಸ್ಕ್ರಬ್ ನಿಮ್ಮ ಮುಖಕ್ಕೆ ಹಾಟ್ ಟವೆಲ್ ಟ್ರೀಟ್ಮೆಂಟ್ ಜತೆಗೆ ಬಳಸಲು ಸಲಹೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಮುಖದ ಕಾಂತಿ ಕೂಡ ವೃದ್ಧಿಸುತ್ತದೆ.

ತೆಂಗು: ಇದು ಸಹ ಒಂದು ಅತ್ಯುತ್ತಮ ತ್ವಚೆಯ ಸಂರಕ್ಷಕ. ಇದು ಅನನ್ಯವಾದ ರೀತಿಯಲ್ಲಿ ತ್ವಚೆಯನ್ನು ಹೈಡ್ರೇಟ್ ಮಾಡುವ ಜತೆಜತೆಗೆ ತೇವಾಂಶವನ್ನು ಕಾಪಾಡುತ್ತದೆ. ಜತೆಗೆ ತ್ವಚೆಗೆ ಅಂದ ಮತ್ತು ಆರೋಗ್ಯವನ್ನೂ ನೀಡುತ್ತದೆ.

ಮಾಯಿಶ್ಚರನ್ನು ನೇರವಾಗಿ ತ್ವಚೆಗೆ ಬಿಡುವ ವಿಶೇಷ ಗುಣ ಹೊಂದಿದೆ. ಹೀಗಾಗಿ ತ್ವಚೆಯ ಮೇಲೆ ಇದರ ಪರಿಣಾಮ ಬಹುಕಾಲ ಉಳಿಯುತ್ತದೆ.
ತೆಂಗಿನ ಮತ್ತೊಂದು ಲಕ್ಷಣವೆಂದರೆ ಇದು ತ್ವಚೆಯ ನೈಸರ್ಗಿಕ ಲಿಪಿಡ್‌ಗಳ ರೀತಿಯಲ್ಲೆೀ ಇರುವುದು. ಇದು ತ್ವಚೆಯ ಕೋಶಗಳನ್ನು ಮುಚ್ಚುವ ಜತೆಗೆ ಬ್ಯಾರಿಯರ್ ಕ್ರಿಯೆಯನ್ನು ಪುನರ್‌ನಿರ್ಮಿಸಲು ನೆರವಾಗುತ್ತದೆ.

ಮಾಲಿನ್ಯ, ಅಧಿಕ ಬಿಸಿಲು, ಕ್ಲೋರಿನೇಟೆಡ್ ಈಜುಕೊಳಗಳಿಂದಾಗಿ ತೇವಾಂಶ ಅಳಿಸಿಹೋಗುವ ಜತೆಗೆ, ತ್ವಚೆಯ ಪ್ರತಿರೋಗ ಶಕ್ತಿ ನಾಶವಾಗುತ್ತದೆ. ಹೀಗಾಗಿ ನಮ್ಮ ದೇಹದ ಪೂರ್ಣ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ತ್ವಚೆಯ ಮೇಲೆ ಅತಿ ಹೆಚ್ಚು ಒತ್ತಡ ಬೀಳುತ್ತಿರುವುದರಿಂದ ಸಾಧ್ಯವಾದಾಗಲೆಲ್ಲ ನೈಸರ್ಗಿಕ ಮಾಯಿಶ್ಚರೈಸಿಂಗ್ ಪದಾರ್ಥಗಳನ್ನು ಬಳಸುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.