ADVERTISEMENT

ದೇವಸೇನಾ ಆಗುವಾಸೆ: ನಿತ್ಯಾ

ಕಿರುತೆರೆ

ಸುಮನಾ ಕೆ
Published 2 ಜೂನ್ 2017, 19:30 IST
Last Updated 2 ಜೂನ್ 2017, 19:30 IST
ನಿತ್ಯಾರಾಮ್‌
ನಿತ್ಯಾರಾಮ್‌   

ದುಂಡು ಮುಖ, ಆಕರ್ಷಕ ಕಂಗಳು, ನಕ್ಕಾಗ ಗುಳಿ ಬೀಳುವ ಕೆನ್ನೆ, ಸದಾ ಮಂದಸ್ಮಿತ ನಟಿ ನಿತ್ಯಾರಾಮ್‌.  ಕಿರುತೆರೆಯಲ್ಲಿ ‘ಬೆಂಕಿಯಲ್ಲಿ ಅರಳಿದ ಹೂವು’, ‘ರಾಜಕುಮಾರಿ’, ‘ಮನೆ ದೇವರು’, ‘ಎರಡು ಕನಸು’, ‘ಕರ್ಪೂರದ ಗೊಂಬೆ’ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ತಮಿಳು  ಹಾಗೂ ತೆಲುಗು ಧಾರಾವಾಹಿಗಳಲ್ಲೂ ಬಣ್ಣಹಚ್ಚಿದ್ದಾರೆ. ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಇವರು ತಮ್ಮ ವೃತ್ತಿ ಪಯಣ ಸಾಗುತ್ತಿರುವ ಬಗೆಯನ್ನು ವಿವರಿಸುವುದು ಹೀಗೆ...

*‘ನಂದಿನಿ’ ಧಾರಾವಾಹಿಗೆ ಅವಕಾಶ ದೊರಕಿದ್ದು ಹೇಗೆ?
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಾಂಗಲ್ಯ’ ಧಾರಾವಾಹಿಯ ನಿರ್ದೇಶಕ ಸತೀಶ್‌ ಕೃಷ್ಣ ನನ್ನ ಬಳಿ ‘ನಂದಿನಿ’ ಧಾರಾವಾಹಿಯಲ್ಲಿ ಅಭಿನಯಿಸುವಂತೆ ಕೇಳಿಕೊಂಡರು. ಬಳಿಕ ಧಾರಾವಾಹಿ ನಿರ್ಮಾಪಕರು ಚೆನ್ನೈಗೆ ಮಾತುಕತೆಗೆ  ಕರೆಸಿಕೊಂಡರು. ನೋಡಿದ ತಕ್ಷಣ ಧಾರಾವಾಹಿಯ ಗಂಗಾ ಪಾತ್ರಕ್ಕೆ ಆಯ್ಕೆ ಮಾಡಿಕೊಂಡರು.

*ಈ ಧಾರಾವಾಹಿ ಒಪ್ಪಲು ಕಾರಣ?
ಇದರಲ್ಲಿ ಖ್ಯಾತ ನಟಿಯರಾದ ಖುಷ್ಬು, ವಿಜಯಲಕ್ಷ್ಮಿ, ವಿಜಯಕುಮಾರ್‌ ನಟಿಸುತ್ತಿದ್ದಾರೆ. ಕತೆ ವಿಭಿನ್ನವಾಗಿದೆ. ಈ ಧಾರಾವಾಹಿ ಸಿನಿಮಾದಂತಿದೆ.  ಸಂಚಿಕೆಯಿಂದ ಸಂಚಿಕೆಗೆ ಕತೆಯಲ್ಲಿ ಟ್ವಿಸ್ಟ್‌ ಇರುತ್ತದೆ. ನನ್ನ ವೃತ್ತಿಜೀವನದಲ್ಲೇ ನನಗೆ ಸಿಕ್ಕ ಅತಿ ಮುಖ್ಯ ಪಾತ್ರ ಇದು.

*ಸ್ವಲ್ಪಕಾಲ ಕಿರುತೆರೆ, ಹಿರಿತೆರೆಯಿಂದ ದೂರವಾಗಿದ್ದಿರಲ್ಲ?
ನಾನು ನಟನೆಯಿಂದೇನೂ ದೂರವಾಗಿರಲಿಲ್ಲ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದೆ. ಅಲ್ಲಿ ‘ಮುದ್ದು ಗುಡ್ಡ’, ‘ಅಮ್ಮನ ಕೊಡಲ’ ಎಂಬ ಎರಡು ಧಾರಾವಾಹಿಗಳಲ್ಲಿ ನಟಿಸಿದೆ. ಈ ಎರಡೂ ಧಾರಾವಾಹಿಗಳು ನನಗೆ ಅಲ್ಲಿ ಒಳ್ಳೆಯ ಹೆಸರು ತಂದುಕೊಟ್ಟವು.

*ಧಾರಾವಾಹಿಯಲ್ಲಿರುವಂತೆ ದೆವ್ವ, ಹಾವು ಮನುಷ್ಯನಾಗಿ  ಬದಲಾಗುವ ವಿಚಾರವನ್ನು ನಂಬುತ್ತೀರಾ?
ದೇವರಲ್ಲಿ ನಂಬಿಕೆಯಿದೆ. ಆದರೆ ದೆವ್ವದ ಕಾಟ, ಹಾವು ಮನುಷ್ಯನ ರೂಪದಲ್ಲಿ ಬಂದು ಸೇಡು ತೀರಿಸಿಕೊಳ್ಳುವುದನ್ನು ನಾನು ನಂಬಲ್ಲ. ಧಾರಾವಾಹಿಯಲ್ಲಿ ಮಾತ್ರ ಇದು ಸಾಧ್ಯ. ನಿರ್ದೇಶಕರು ಹೇಳಿದ ಹಾಗೆ, ಕತೆ ಸಾಗಿದಂತೆ ನಾವು ಅಭಿನಯಿಸುತ್ತಾ ಹೋಗುತ್ತೇವೆ. ನಟಿಸುವುದು ನಮ್ಮ ಕೆಲಸ.

*ನಿಜಜೀವನದಲ್ಲಿ ಹಾವು ಕಂಡರೆ ನಿಮಗೆ ಭಯವೇ?
ನಂಗೆ ಹಾವು, ದೆವ್ವ ಎರಡೂ ಕಂಡರೂ ಭಯ. ಧಾರಾವಾಹಿ ಆರಂಭದಲ್ಲಿ ನೀನೇ ನಾಗಿಣಿ ಪಾತ್ರ ಮಾಡಬೇಕು ಎಂದು  ಹೇಳುತ್ತಿದ್ದರು. ಆಗ ಶೂಟಿಂಗ್‌ ಮುಗಿಸಿ ಮನೆಗೆ ಬಂದು ರಾತ್ರಿ ಮಲಗಿದರೆ ಕನಸಲ್ಲಿ ಹಾವು ಬರುತ್ತಿತ್ತು. ಧಾರಾವಾಹಿಯಲ್ಲಿ ಗ್ರಾಫಿಕ್ಸ್‌ ಹಾವು ತೋರಿಸ್ತಾರೆ. ನಿಜ ಹಾವು ಆಗಿದ್ದರೆ ಅಲ್ಲಿ ಇರ್ತಾನೇ ಇರ್ಲಿಲ್ವೆನೋ. ಕತ್ತಲು ಅಂದ್ರೆ ಸಾಕು ದೆವ್ವ ನೆನಪಾಗಿಬಿಡುತ್ತೆ.

*ಯಾವ ರೀತಿಯ ಪಾತ್ರಗಳಲ್ಲಿ ನಟಿಸುವ ಆಸೆಯಿದೆ?
ನಾನು ಈ ಮುಂಚೆ ಬರಿ ಪಾಸಿಟಿವ್‌ ಪಾತ್ರಗಳನ್ನು ಅಷ್ಟೇ ಮಾಡಿದ್ದೆ. ಈಗ ‘ನಂದಿನಿ’ಯಲ್ಲಿ ಎರಡೂ ಬಗೆಯ ಪಾತ್ರಗಳಲ್ಲಿ ನಟಿಸಿದ್ದೇನೆ. ಅವಕಾಶ ಸಿಕ್ಕರೆ ‘ಬಾಹುಬಲಿ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮಾಡಿದ ದೇವಸೇನಾಳಂತಹ ಪಾತ್ರ ಮಾಡುವ ಆಸೆಯಿದೆ.

* ನಟನೆಗೆ ಮನೆಯವರ ಬೆಂಬಲ ಹೇಗಿದೆ?
ತಂಗಿ ರಚಿತಾರಾಮ್‌, ಅಪ್ಪ–ಅಮ್ಮ ತುಂಬಾ ಚೆನ್ನಾಗಿ ನನ್ನ ನಟನೆಗೆ ವಿಮರ್ಶೆ ಮಾಡುತ್ತಾರೆ. ರಚಿತಾ ನಟನೆ ಬಗ್ಗೆ ನಂಗೆ ಟಿಪ್ಸ್‌ ನೀಡ್ತಾಳೆ. ನಾವಿಬ್ಬರೂ ಶೂಟಿಂಗ್ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ.

ADVERTISEMENT



*ಫಿಟ್‌ನೆಸ್‌ಗೆ ಏನು ಮಾಡ್ತಿರಿ?
ನಂಗೆ ಮನೆಯೂಟ ತುಂಬಾ ಇಷ್ಟ. ನಾನು ಈ ಧಾರಾವಾಹಿಗೆ ಮುಂಚೆ ಸ್ವಲ್ಪ ದಪ್ಪ ಇದ್ದೆ. ಹೀಗಾಗಿ ಬೆಳಿಗ್ಗೆ ವರ್ಕೌಟ್‌, ವ್ಯಾಯಾಮ ಶುರು ಮಾಡಿದೆ. ಮಾಂಸಾಹಾರ ತುಂಬ ಇಷ್ಟ. ದಿನಾ ಮೊಟ್ಟೆ, ಚಿಕನ್‌ ತಿನ್ನುತ್ತೇನೆ. ಆದರೆ ಎಣ್ಣೆ ಪದಾರ್ಥಗಳಿಂದ ದೂರ. ಈಗ ಶೂಟಿಂಗ್‌ಗಾಗಿ ನಾನು ಚೆನ್ನೈನಲ್ಲಿ ಇದ್ದೇನೆ. ಸಿಕ್ಕಾಪಟ್ಟೆ ಬಿಸಿಲು. ಮನೆಯಲ್ಲಿಯೇ ಕಡ್ಲೆಹಿಟ್ಟು, ಮೊಸರಿನಂತಹ ಪದಾರ್ಥಗಳಿಂದ ಫೇಶಿಯಲ್‌ ಮಾಡಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.