ADVERTISEMENT

ಧರಿಸಬಹುದಾದ ಕಲೆ!

ಡಿ.ಕೆ.ರಮೇಶ್
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST
ಧರಿಸಬಹುದಾದ ಕಲೆ!
ಧರಿಸಬಹುದಾದ ಕಲೆ!   

ಸಂಜೆಯ ಮಂದ ವಾತಾವರಣಕ್ಕೆ ಸೆಡ್ಡು ಹೊಡೆದಂತೆ ಆಭರಣಗಳ ಬೆಳಕು. ಸುತ್ತಲೂ ತೂಗಿನಿಂತ ಚಿತ್ರಪಟಗಳು. ತೇಲಿ ಬರುತ್ತಿರುವ ಗಾನ. ಜತೆಗೆ ಲಲನೆಯರ ನರ್ತನ. ಚಿತ್ರಗಳು, ಒಡವೆಗಳನ್ನು ತದೇಕಚಿತ್ತದಿಂದ ನೋಡುತ್ತಿರುವವರು, ಹಾಡಿಗೆ ತಲೆದೂಗುತ್ತಿರುವವರಿಗೆ ಲೆಕ್ಕವಿಲ್ಲ. ನಗರದ ಯು.ಬಿ.ಸಿಟಿಯಲ್ಲಿರುವ ತೂಗು ಗ್ಯಾಲರಿ `ಸ್ಕೈ ಗೆಲೇರಿಯಾ~ದಲ್ಲಿ `ಬೈ ದ ಲೊಂಬೊಕ್ ಮೂನ್‌ಲೈಟ್~ ಕಲಾಪ್ರದರ್ಶನ ಉದ್ಘಾಟನೆಗೊಂಡ ಪರಿ ಇದು.

ಕಲೆಯಿಲ್ಲದೆ ಆಭರಣಗಳಿಲ್ಲ. ಅದು ಸಾರ್ವಕಾಲಿಕ ಸತ್ಯ. ಆದರೆ ಕಲೆಗೇ ಆಭರಣ ತೊಡಿಸಲು ಹೊರಟರೆ? ಇಂಥದ್ದೊಂದು ವಿಶಿಷ್ಟ ಸಾಹಸ ಮಾಡಿದ್ದು ಆಭರಣ ವಿನ್ಯಾಸಕಿ ಪಲ್ಲವಿ ಫೋಲೆ ಹಾಗೂ ಚಿತ್ರ ಕಲಾವಿದ ವಿಜಿತ್ ಪಿಳ್ಳೈ. ಪಲ್ಲವಿ ವಿನ್ಯಾಸಗೊಳಿಸಿರುವ ಆಭರಣಗಳಿಂದ ಸ್ಫೂರ್ತಿ ಪಡೆದು ವಿಜಿತ್ ಚಿತ್ರ ರಚಿಸಿದ್ದಾರೆ.
 
ಪ್ರತಿ ಆಭರಣಕ್ಕೂ ಒಂದೊಂದು ಚಿತ್ರ ಎಂಬಂತೆ ಸುಮಾರು 20 ಕಲಾಕೃತಿಗಳು ಪ್ರದರ್ಶನದಲ್ಲಿದ್ದವು. ವಿಶಿಷ್ಟ ವಿನ್ಯಾಸದ ಆಭರಣಗಳನ್ನು ತೊಟ್ಟ ರೂಪದರ್ಶಿಯರ ಛಾಯಾಚಿತ್ರಗಳು ಪ್ರದರ್ಶನಕ್ಕೆ ಹೊಸ ಸ್ಪರ್ಶ ನೀಡಿದವು. ಭಾರತೀಯ ಕಲೆಗೆ ಹೊಸ ಸ್ಪರ್ಶ ನೀಡಿದ ಪಾಶ್ಚಾತ್ಯ ಕಲಾಪಂಥ `ಅವಾಂತ್ ಗಾರ್ಡ್~ ಈ ಕಲಾಕೃತಿಗಳಿಗೆ ಸ್ಫೂರ್ತಿ.

ಆಗ್ನೇಯ ಏಷ್ಯಾದ ಪಾರಂಪರಿಕ ಕಲೆಯನ್ನೂ ಪ್ರದರ್ಶನ ಒಳಗೊಂಡಿರುವುದಕ್ಕೆ ಪಲ್ಲವಿ ಅವರ ಪ್ರವಾಸಪ್ರಿಯತೆ ಕಾರಣ. ದೇಶದಾಚೆಗಿನ ಸಂಸ್ಕೃತಿ ಕಥನವನ್ನು ಅವರು ಆಭರಣಗಳ ಮೂಲಕ ಹೇಳಿದ್ದಾರೆ. ಬೆಳದಿಂಗಳನ್ನು ರೂಪಕವಾಗಿ ಬಳಸಲು ಅವರು ಮುತ್ತನ್ನು ಬಳಸಿಕೊಂಡಿದ್ದಾರೆ. ಬೆಳ್ಳಿ, ಬಂಗಾರದ ವಿನ್ಯಾಸಗಳು ಸೂರ್ಯ ಚಂದ್ರನ ಹೋಲಿಕೆಗಳಂತೆ ತೋರಿದರೆ ಅತಿಶಯೋಕ್ತಿಯಲ್ಲ.  

 ಪಲ್ಲವಿ ವಿನ್ಯಾಸಗಳಿಂದ ಸ್ಫೂರ್ತಿ ಪಡೆದ ವಿಜಿತ್ ರಚಿಸಿರುವುದು ಅಮೂರ್ತ ಕಲಾಕೃತಿಗಳನ್ನು. ಅವರೊಳಗೆ ಗಣಪತಿಗೆ ಸ್ಥಾನವಿರುವಂತೆ ಬುದ್ಧನಿಗೂ ನೆಲೆಯುಂಟು. ಹಸಿರಿನ ಸಿರಿ ಇರುವಂತೆ ಕಾಂಕ್ರಿಟ್ ಕಾಡಿನ ಛಾಯೆಯುಂಟು.
 
ಇಂಥ ವೈವಿಧ್ಯಮಯ ಪರಿಕಲ್ಪನೆಗಳನ್ನು ಆಭರಣಗಳ ಜತೆ ಸಮೀಕರಿಸುವುದು ವಿಜಿತ್ ಅವರಿಗೆ ಸವಾಲಿನ ಕೆಲಸವಾಗಿತ್ತಂತೆ. ಅದನ್ನು ಅವರು ಸಲೀಸಾಗಿ ನಿರ್ವಹಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಬುದ್ಧನ ಕಲಾಕೃತಿಯೊಂದೇ ಸಾಕು.
 
ಆಯತಾಕಾರದ ಮುತ್ತಿನ ಆಭರಣಕ್ಕೆ ಹಿನ್ನೆಲೆಯಾಗಿ ಬುದ್ಧ ಪವಡಿಸಿರುವ ಕಲಾಕೃತಿಯಿದೆ. ಆಭರಣದ ಆಯಾತಾಕಾರದಂತೆ ತೋರುವ ಆಕೃತಿಗಳ ಮಧ್ಯೆ ಬುದ್ಧ ಮಲಗಿರುವುದನ್ನು ಚಿತ್ರಿಸಿರುವ ಅವರ ಜಾಣ್ಮೆಗೆ ಸಾಟಿ ಇಲ್ಲ.

ದೆಹಲಿಯ ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (ಎನ್‌ಐಎಫ್‌ಟಿ) ಪದವಿ ಪಡೆದ ಪಲ್ಲವಿ ದೇಶದ ಪ್ರಮುಖ ಆಭರಣ ವಿನ್ಯಾಸಕಿ. ಒಂಬತ್ತೂವರೆ ವರ್ಷಗಳಿಂದ ಆಭರಣ ವಿನ್ಯಾಸದಲ್ಲಿ ಅವರು ತೊಡಗಿದ್ದಾರೆ.
 
ಖ್ಯಾತ ಆಭರಣ ಸಂಸ್ಥೆ ತನಿಷ್ಕ್‌ನೊಂದಿಗೆ ದುಡಿದ ಅನುಭವವಿರುವ ಅವರು 2006 ಹಾಗೂ 2007ರಲ್ಲಿ ಮಿಸ್ ಇಂಡಿಯಾ ಯೂನಿವರ್ಸ್ ತೊಟ್ಟ ಕಿರೀಟವನ್ನು ವಿನ್ಯಾಸಗೊಳಿಸಿದ್ದರು. ಇಂಥ ಅನೇಕ ಸಾಧನೆಗಳಿಗಾಗಿ ದೇಶ ವಿದೇಶಗಳ ಹತ್ತಾರು ಪ್ರಶಸ್ತಿಗಳನ್ನು ಅವರು ಮುಡಿಗೇರಿಸಿಕೊಂಡಿದ್ದಾರೆ. ನಗರದ ಲೀಲಾ ಪ್ಯಾಲೇಸ್‌ನಲ್ಲಿ ಇವರು ಸ್ಟುಡಿಯೋ ಹೊಂದಿದ್ದಾರೆ.

ಕಲಾವಿದ ವಿಜಿತ್ ಬಹುಮುಖ ಪ್ರತಿಭೆ. ಚಿಕ್ಕಂದಿನಿಂದಲೇ ಕಲೆಯತ್ತ ಆಕರ್ಷಿತರಾದ ಅವರು ಜಾಹೀರಾತು ಕಂಪೆನಿ ನಡೆಸುತ್ತಿದ್ದಾರೆ. ಛಾಯಾಗ್ರಹಣ ಅವರ ಮತ್ತೊಂದು ಹವ್ಯಾಸ. ನವಮಾಧ್ಯಮ ಕಲೆಯಲ್ಲಿ ಅವರದು ದೊಡ್ಡ ಹೆಸರು. 

ಪ್ರದರ್ಶನದಲ್ಲಿ ಉಪಸ್ಥಿತರಿದ್ದ ಗ್ಯಾಲರಿಯ ಸಂಸ್ಥಾಪಕಿ ಉಜ್ಮಾ ಇರ್ಫಾನ್ `ಇಬ್ಬರು ಮಹಾನ್ ಕಲಾವಿದರನ್ನು ನಗರಕ್ಕೆ ವಿಶಿಷ್ಟ ರೀತಿಯಲ್ಲಿ ಪರಿಚಯಿಸಿದ ತೃಪ್ತಿ ಇದೆ. ಎರಡು ಬೇರೆ ಬೇರೆ ಕಲಾ ಪ್ರಕಾರಗಳನ್ನು ಒಗ್ಗೂಡಿಸಿರುವ ರೀತಿ ಅನನ್ಯ~ ಎಂದರು.

ಅಂದಹಾಗೆ ಆಭರಣ ಹಾಗೂ ಕಲಾಕೃತಿಗಳು ಮಾರಾಟಕ್ಕೂ ಲಭ್ಯ. ಬೆಲೆ ಎಷ್ಟು ಎಂಬುದನ್ನು ಮಾತ್ರ ಕಾರ್ಯಕ್ರಮ ಸಂಘಟಕರು ಬಹಿರಂಗಪಡಿಸಿಲ್ಲ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9886099736/ 9845706155.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.