ADVERTISEMENT

ನಟರ ಕೈಯಲ್ಲಿ ಕ್ರಿಕೆಟ್ ಬ್ಯಾಟ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST
ನಟರ ಕೈಯಲ್ಲಿ ಕ್ರಿಕೆಟ್ ಬ್ಯಾಟ್
ನಟರ ಕೈಯಲ್ಲಿ ಕ್ರಿಕೆಟ್ ಬ್ಯಾಟ್   

ಜನರಿಗೆ ಕ್ರಿಕೆಟ್ ಮತ್ತು ಸಿನಿಮಾ ಎಂದರೆ ಅತೀವ ಮೋಹ. ಈ ಎರಡು ರಂಗದಲ್ಲಿರುವ ರೋಚಕತೆ  ಎಂಥವರನ್ನೂ ಹುಚ್ಚೆಬ್ಬಿಸುತ್ತದೆ. ಈ ಪರಿಯ ಕ್ರೇಜ್ ಬಡಿದೆಬ್ಬಿಸುವ ಕ್ರಿಕೆಟ್ ಮತ್ತು ಸಿನಿಮಾ ಒಂದೆಡೆ ಮೇಳೈಸಲಿವೆ. ಸಿನಿಮಾ ಮತ್ತು ಕ್ರಿಕೆಟ್ ಎರಡನ್ನೂ ಇಷ್ಟಪಡುವ ಮಂದಿಗೆ ಜೂನ್ 4ರಿಂದ ರಸದೌತಣ.

ಹೌದು. ಸಿನಿಮಾ ಮಂದಿ ತಮ್ಮ ದೈನಂದಿನ ಶೂಟಿಂಗ್ ಮರೆತು ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಕ್ರೀಡಾ ಪ್ರೇಮ ಮೆರೆಯಲಿದ್ದಾರೆ. ಹೀಗಾಗಿ ಕ್ರಿಕೆಟ್‌ಗೆ ಸಿನಿಮಾದ ಗ್ಲಾಮರ್ ಕೂಡ ಲೇಪಿತಗೊಳ್ಳಲಿದೆ.
 
ಸ್ಯಾಂಡಲ್‌ವುಡ್, ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸ್ಟಾರ್‌ಗಳ ನಡುವೆ ಕ್ರಿಕೆಟ್ ಪಂದ್ಯದ ರೋಚಕ ಹಣಾಹಣಿ ನಡೆಯಲಿದೆ.ಪ್ರಾರಂಭಿಕ ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ವೇದಿಕೆಯಾಗಲಿದೆ.

ಸ್ಯಾಂಡಲ್‌ವುಡ್ ಪ್ರತಿನಿಧಿಸುತ್ತಿರುವ  `ಕರ್ನಾಟಕ ಬುಲ್ಡೋಜರ್ಸ್‌~ ತಂಡ ತಮ್ಮ ಕ್ರಿಕೆಟ್ ಪ್ರೀತಿ, ಪಂದ್ಯ ಗೆಲ್ಲಲು ನಡೆಸುತ್ತಿರುವ ಕಠಿಣ ಅಭ್ಯಾಸ, ಸುದೀಪ್ ಅವರ ನಾಯಕತ್ವ, ತಂಡದ ಸಾಂಘಿಕತೆ ಇವೆಲ್ಲವನ್ನು ತಂಡದ ಆಟಗಾರರು `ಮೆಟ್ರೋ~ ಜೊತೆ ಹಂಚಿಕೊಂಡರು. ಅದರ ಕೆಲವು ಝಲಕ್‌ಗಳು ಇಲ್ಲಿವೆ.

ಈ ತಂಡದ ಸದಸ್ಯರಾದ ಚಾಕಲೋಟ್ ಹಿರೋ ಧರ್ಮ ಕೀರ್ತಿರಾಜ್ ಅವರಿಗೆ ಚಿಕ್ಕಂದಿನಿಂದಲೂ ಕ್ರಿಕೆಟ್ ಮೇಲೆ ಇನ್ನಿಲ್ಲದ ಪ್ರೀತಿ. ಗಲ್ಲಿ ಕ್ರಿಕೆಟ್ ಆಡಿ ಪಳಗಿರುವ ಧರ್ಮ ತಂಡದ ಪ್ರಮುಖ ಆಲ್‌ರೌಂಡರ್. ಫೀಲ್ಡ್‌ನಲ್ಲಿ ಇವರ ಆಟವನ್ನು ನೋಡಿದ ನಾಯಕ ಸುದೀಪ್ ಇವರಿಗೆ `ಜಾಂಟಿ ರಾಡ್ಸ್~ ಎಂಬ ಬಿರುದು ನೀಡಿದ್ದಾರೆ.

`ಪ್ರತಿ ನಿತ್ಯ ಬೆಳಿಗ್ಗೆ 6ಕ್ಕೆ ಎನ್‌ಆರ್‌ಐ ಮೈದಾನಕ್ಕೆ ಬಂದು 9ರ ವರೆಗೆ ಅಭ್ಯಾಸ ಮಾಡಿ ಬೆವರಿಳಿಸುತ್ತೇವೆ. ಇಲ್ಲಿ ನಮಗೆ ಕೋಚ್ ಜಿ.ಕೆ.ಅನಿಲ್ ಕುಮಾರ್, ಫಿಟ್‌ನೆಸ್ ಗುರು ರಮಾಕಾಂತ್ ಕಠಿಣ ತರಬೇತಿ ನೀಡುತ್ತಾರೆ. ತಂಡದ ಸಾಂಘಿಕ ಹೋರಾಟವೇ ನಮ್ಮ ತಂಡದ ಬಲ~ ಎಂದರು ಧರ್ಮ ಕೀರ್ತಿರಾಜ್.

ಖಳ ನಟ ದಿ. ಸುಧೀರ್ ಅವರ ಮಗ ತರುಣ್ ಸುಧೀರ್ ಪದವಿ ವ್ಯಾಸಂಗದ ವೇಳೆ ವಿವಿಯನ್ನು ಪ್ರತಿನಿಧಿಸುತ್ತಿದ್ದವರು. ಇವರಿಗೆ ಕ್ರಿಕೆಟ್ ಜೊತೆಗಿನ ನಂಟು ಹೊಸದೇನಲ್ಲ. `ಅಪ್ಪನಿಗೆ ನಾನು ಕ್ರಿಕೆಟ್ ಆಟಗಾರನಾಗಬೇಕು ಎಂದು ತುಂಬಾ ಆಸೆಯಿತ್ತಂತೆ. ಆದರೆ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ~ ಎಂದರು.

`ಕಳೆದ ಒಂದು ತಿಂಗಳಿನಿಂದ ಕಠಿಣ ಅಭ್ಯಾಸ ಮಾಡುತ್ತಿದ್ದೇವೆ. ನಾವು ನಿತ್ಯ ಬೆಳಿಗ್ಗೆ ಎದ್ದು ಬಂದು ಇಲ್ಲಿ ಕಾಟಾಚಾರಕ್ಕೆ ಅಭ್ಯಾಸ ನಡೆಸುವುದಿಲ್ಲ. ತಂಡದ ಪ್ರತಿಯೊಬ್ಬ ಆಟಗಾರನಿಗೂ ಕ್ರಿಕೆಟ್ ಮೇಲೆ ತುಂಬಾ ಪ್ರೀತಿಯಿದೆ. ಹಾಗಾಗಿ ನಾವು ಎದುರಾಳಿಗೆ ಕಠಿಣ ಸ್ಪರ್ಧೆ ನೀಡುತ್ತೇವೆ. ನಮ್ಮ ಸಮಯ ಹೊಂದಾಣಿಕೆಗೆ ಅಂಬರೀಷ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನೀಡಿರುವ ಸಹಕಾರ ದೊಡ್ಡದು~ ಎಂದು ಹೇಳಿದರು ತರುಣ್.

ಖಳನಟ ಕಾರ್ತಿಕ್, ನಿರ್ಮಾಪಕ ಮಹೇಶ್ ಅವರಿಗೆ ನಾಯಕ ಸುದೀಪ್ ಅವರ ಮೇಲೆ ಇನ್ನಿಲ್ಲದ ಭರವಸೆ. ಬುಲ್ಡೋಜರ್ಸ್‌ ತಂಡ ಎದುರಾಳಿಗಳನ್ನು ನುಜ್ಜುಗುಜ್ಜು ಮಾಡುವುದರಲ್ಲಿ ಸಂದೇಹವೇ ಇಲ್ಲ. ತಂಡ ಕಪ್ ಗೆದ್ದರೆ ಅದರ ಸಂಪೂರ್ಣ ಕ್ರೆಡಿಟ್ ನಾಯಕನಿಗೆ ಸಲ್ಲಬೇಕು. ನಾವೆಲ್ಲರೂ ಅವರ ಈ ಅದಮ್ಯ ಬಯಕೆಯನ್ನು ಈಡೇರಿಸಲು ಟೊಂಕ ಕಟ್ಟಿದ್ದೇವೆ ಎನ್ನುವಾಗ ಆತ್ಮ ವಿಶ್ವಾಸ ಎದ್ದು ಕಾಣುತ್ತಿತ್ತು.

`ಪಂದ್ಯದ ಪ್ರತಿ ಆಟಗಾರರನ್ನು ಹುರಿದುಂಬಿಸುವ, ಅವರಲ್ಲಿರುವ ಪ್ರತಿಭೆಯನ್ನು ಬಡಿದೆಬ್ಬಿಸುವ ತಂಡದ ನಾಯಕ ಸುದೀಪ್ ಎಂದರೇ ನಮ್ಮೆಲ್ಲರಿಗೂ ಅಚ್ಚುಮೆಚ್ಚು.ಅವರು 16 ಜನರು ಒಂದು ಮಿಲಿಟರಿ ಪಡೆಯನ್ನೇ ತಯಾರು ಮಾಡಿದ್ದಾರೆ.

ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನು ಆಲ್‌ರೌಂಡರ್! ಇಲ್ಲಿ ಪ್ರತಿ ಆಟಗಾರನೂ ಬೌಲಿಂಗ್ ಮಾಡುತ್ತಾನೆ, ಬ್ಯಾಟಿಂಗ್ ಮಾಡುತ್ತಾನೆ, ಸಂದರ್ಭ ಬಂದರೇ ಕೀಪಿಂಗ್ ಕೂಡ ಮಾಡಲು ಅಣಿಯಾಗುತ್ತಾನೆ. ಈ ರೀತಿ ತಂಡವನ್ನು ಕಟ್ಟಿದ್ದಾರೆ.

ಸುದೀಪ್ ಅವರು ಇಂಡಿಯನ್ ಟೀಮ್‌ನಲ್ಲಿ ಇದ್ದಿದ್ದರೆ ನಮ್ಮ ದೇಶಕ್ಕೆ ವರ್ಲ್ಡ್ ಕಪ್ ಇದಕ್ಕೂ ಮುಂಚಿತವಾಗಿಯೇ ಬಂದಿರುತ್ತಿತ್ತು~ ಎಂದು ಮನದುಂಬಿ ನುಡಿದವರು ರಾಜೀವ್, ಪ್ರದೀಪ್ ಮತ್ತು ಹೇಮಂತ್.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಸ್ಯಾಂಡಲ್‌ವುಡ್ ತಂಡ ಬಾಲಿವುಡ್ ತಂಡವನ್ನು ಎದುರಿಸಲಿದೆ. ಹಿಂದಿ ಚಿತ್ರರಂಗದ ಯುನಿವರ್ಸಲ್ ನಟರನ್ನು ಹೊಂದಿರುವ ತಂಡವನ್ನು ಕರ್ನಾಟಕ ಬುಲ್ಡೋಜರ್ಸ್‌ ಬಗ್ಗುಬಡಿಯುವುದೇ ಇಲ್ಲವೇ ಎಂಬುದಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.