ADVERTISEMENT

ನನಗೂ ನೋವಾಗಿತ್ತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST
ನನಗೂ ನೋವಾಗಿತ್ತು
ನನಗೂ ನೋವಾಗಿತ್ತು   

ಬೆಂಗಳೂರಿನಲ್ಲಿ ಕೆಲವರಿಗೆ ಮಾತು ಮಾರುಕಟ್ಟೆ. ಬದುಕಿಗೆ ಮಾತು ಬೇಕು. ಆದರಿಲ್ಲಿ ಮಾತೇ ಬದುಕಾದವರು ಅಸಂಖ್ಯ. ಕಾಲ್‌ಸೆಂಟರ್‌ನಲ್ಲಿ ಕೂತು ವಿದೇಶಿ ಗ್ರಾಹಕನ ಸಮಸ್ಯೆ ಪರಿಹರಿಸುವ ಕನ್ನಡಿಗ, ಮಾರುಕಟ್ಟೆಯಲ್ಲಿ ಬೆಳಿಗ್ಗೆ ಕೆಲವು ತಾಸು ಹರಾಜು ಕೂಗುತ್ತಾ ಗಂಟಲು ಹರಿದುಕೊಳ್ಳುವ ವ್ಯಕ್ತಿ, ತರಕಾರಿ ಗಾಡಿ ತಳ್ಳುತ್ತಾ ತನ್ನದೇ ಶೈಲಿನ ಧ್ವನಿಯಿಂದ `ಪರ್ಮನೆಂಟ್ ಗ್ರಾಹಕರು~ ಮನೆಯಿಂದ ಹೊರಬರುವಂತೆ ಮಾಡುವ ಜಾಣ, ರೇಡಿಯೋ ಜಾಕಿಗಳು, ಟೀವಿ ನಿರೂಪಕರು, ವಿವಿಧೆಡೆಯ ಉದ್ಘೋಷಕರು, `ಹಾಸ್ಯೋತ್ಸವ~ದ ಹಿಂಡುಗಟ್ಟಲೆ ಜೀವಗಳು, ಸಲಹೆಗಾರರು-
 
ಹೀಗೆ ಬಗೆಬಗೆಯ ಮಾರುಕಟ್ಟೆಯಲ್ಲಿ ಮಾತನ್ನು ನಿರಂತರವಾಗಿ ಹರಿಬಿಡುತ್ತಿರುವವರ ದಂಡು ದೊಡ್ಡದಿದೆ. ಅಂಥವರು ಆಗಾಗ ಇಲ್ಲಿ ಕಾಣಿಸಿಕೊಂಡು ನುಡಿಮುತ್ತಿನ ಕಿಮ್ಮತ್ತಿನ ಕುರಿತು ಮಾತಾಡುತ್ತಾರೆ. ಈಗ ರೇಡಿಯೋ ಜಾಕಿ ಪಲ್ಲವಿ ಮಾತಾಡುತ್ತಿದ್ದಾರೆ. ಕೇಳಿಸಿಕೊಳ್ಳಿ...

                                                 -------------

ನಾನು ನಗರದ ಯಶವಂತಪುರದವಳು. ಓದಿದ್ದು ಬಿಕಾಂ. ಬಾಲ್ಯದಿಂದಲೂ ಆಸಕ್ತಿಯಿದ್ದ ಕ್ಷೇತ್ರ ಮಾಧ್ಯಮ. ಹಾಗಾಗಿ ಈ ವೃತ್ತಿ ಆಯ್ಕೆ ಮಾಡಿಕೊಂಡೆ. ನಿರರ್ಗಳವಾಗಿ ಮಾತನಾಡಲು ವಾಯ್ಸ ಟ್ಯೂನ್ ಆಗಿರುತ್ತದೆ.

ಕೆಲವೊಮ್ಮೆ ಬಾಲ್ಯದಿಂದಲೇ ಅದು ಬಂದಿರುತ್ತದೆ. ನಾನು ನನ್ನ ಪ್ರೋಗ್ರಾಂಗೆ ಮೊದಲು ನಾಲ್ಕು ಗಂಟೆ ತಯಾರಿ ಮಾಡಿಕೊಳ್ಳುತ್ತೇನೆ. ಅನೇಕ ಸಲ ಇಂಟರ್‌ನೆಟ್, ನ್ಯೂಸ್ ಪೇಪರ್, ಟೀವಿಯ ಮೂಲಕ ಅಪ್‌ಡೇಟ್ ಆಗುತ್ತೇನೆ. ನನ್ನ ಮಾತೃಭಾಷೆ ತೆಲುಗು. ನನಗೆ ಎಲ್ಲ ಭಾಷೆ ಕಲಿಯಲು ಬಾಲ್ಯದಿಂದಲೂ ಇಷ್ಟವಿತ್ತು. ಕನ್ನಡ ಒಲಿದದ್ದೂ ಅದರಿಂದಲೇ. 

ನಾನು ಯುವತಿ. ಅದಕ್ಕೇ ಯುವಕರ ನಾಡಿಮಿಡಿತ ಚೆನಾಗಿ ಗೊತ್ತು. ನಾನು ಬಿಎಂಟಿಸಿ ಬಸ್‌ನಲ್ಲಿ ಓಡಾಡುವುದರಿಂದ ಜನರ ಯೋಚನಾಕ್ರಮ, ಶೈಲಿ ಗೊತ್ತಾಗುತ್ತದೆ. ಎಲ್ಲರಂತೆ ನಾನೂ ತಪ್ಪು ಮಾಡುತ್ತೇನೆ. ಬದುಕಿನಿಂದ ಕಲಿತ ಪಾಠಗಳು ಹಾಗೂ ಆಗುವ ಅನುಭವಗಳಿಂದಲೇ ವಿವಿಧ ಮನಸ್ಸುಗಳನ್ನು ಸ್ಪಂದಿಸುವುದು ಸಾಧ್ಯ.

ಎಲ್ಲಾ ರೇಡಿಯೋ ಜಾಕಿಗಳ ಅರ್ಹತೆ ನಿರರ್ಗಳ ಮಾತು. ನಾನೂ ಪಟಪಟನೆ ಮಾತಾಡುತ್ತೇನೆ. ನಮ್ಮದು ಹಿಪ್ನೊಟೈಸ್ ಮಾಡುವಂಥ ಮಾತಲ್ಲ. ನಮ್ಮ ಜೊತೆ ಮಾತಾಡುವವರು ಸ್ನೇಹಿತರು ಎಂಬ ಭಾವನೆ ಇಟ್ಟುಕೊಂಡಿರುತ್ತಾರೆ. ಅದರಿಂದ ಸಂವಹನ ಸುಲಭ.

ನನಗೂ ಅನೇಕ ಸಲ ಮನುಷ್ಯ ಸಹಜ ನೋವು- ನಲಿವು ಉಂಟಾಗಿದೆ. ಆದರೆ, ಒಮ್ಮೆ ಕಾರ್ಯಕ್ರಮಕ್ಕೆಂದು ಕೂತರೆ ಅವನ್ನೆಲ್ಲಾ ಮರೆಯಬೇಕು.  ವೃತ್ತಿನಿಷ್ಠೆ ಮುಖ್ಯ. ಕೆಲವೊಮ್ಮೆ  ಸಣ್ಣ ಪುಟ್ಟ ಘಟನೆಗಳನ್ನು ನಮ್ಮ ಕೇಳುಗರೊಂದಿಗೂ ಹಂಚಿಕೊಳ್ಳುತ್ತೇವೆ. ಅವರು ಅನೇಕ ಸಲ ನನಗೆ ಸಮಾಧಾನ ಮಾಡಿರುವುದೂ ಉಂಟು.

ಈ ವೃತ್ತಿಯಲ್ಲಿ ಸಿಹಿಕಹಿ ಅನುಭವ ಇದ್ದೇ ಇರುತ್ತದೆ. ಸಿಹಿ ಅನುಭವ ಹಲವಾರು. ಕೆಲವು ಕೇಳುಗರಂತೂ ಉಡುಗೊರೆಗಳನ್ನು ಕಳಿಸುತ್ತಾರೆ. ಅವನ್ನು ಕಂಡಾಗ ನಮ್ಮ ಮಾತಿಗೆ ಇಷ್ಟೊಂದು ಕಿಮ್ಮತ್ತಿದೆಯೇ ಎನ್ನಿಸುತ್ತದೆ.
 
ಒಬ್ಬ ಕೇಳುಗ ಮದುವೆಯಾಗುವಂತೆ ಪೀಡಿಸಿದ್ದು ನನ್ನ ಬದುಕಿನ ಕಹಿ ಘಟನೆ. ಆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ಹತ್ತಿತ್ತು. ಆಗ ನಾನು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಜೀವನದಲ್ಲಿ ಸದಾ ಸಂತೋಷವಾಗಿರಿ ಎಂದು ನಾನು ಜನರಿಗೆ ಹೇಳುತ್ತಲೇ ಇರುತ್ತೇನೆ. ಹಾಗೆ ಹೇಳುತ್ತಾ ಹೇಳುತ್ತಾ ನನಗೂ ಸಂತೋಷವಾಗುತ್ತದೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.