ADVERTISEMENT

‘ನಮ್ಮ ಶಕ್ತಿ ನಾವು ಅರಿಯೋಣ’

ಭೀಮಪ್ಪ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
‘ನಮ್ಮ ಶಕ್ತಿ ನಾವು ಅರಿಯೋಣ’
‘ನಮ್ಮ ಶಕ್ತಿ ನಾವು ಅರಿಯೋಣ’   

ನಾನು ಹೆಣ್ಣಾಗಿರುವುದೇ ನನಗೆ ಹೆಮ್ಮೆ ಅಂತ ಅನ್ನಿಸಿದ ಕ್ಷಣ ಯಾವುದು?
ನನಗೆ ನನ್ನ ಅಜ್ಜಿಯೇ ಸ್ಫೂರ್ತಿ. ಅವರಿಗೆ  ಬಾಲ್ಯವಿವಾಹವಾಗಿತ್ತು. ಅವರು ಗಂಡನ ಮನೆಗೆ ಹೋಗದೇ ತರಗತಿಯಲ್ಲಿ ಹುಡಗರ ಜೊತೆ ಒಬ್ಬಳೆ ಕುಳಿತು ಪಾಠ ಕೇಳಿ ಬಿಎಸ್ಸಿ ಆನರ್ಸ್‌, ಬಿಇಡಿ ಪದವಿ ಪಡೆದು ತನ್ನ ಸ್ವಂತ ಕೆಲಸ ಕಂಡುಕೊಂಡ ಮೇಲೆಯೇ ಗಂಡನ ಮನೆಗೆ ಹೋಗಿದ್ದು. ಅಜ್ಜಿಯೇ ನಿಜ ಜೀವನದ ಹೀರೊಯಿನ್‌. ನಾನು ಹದಿನಾರು ವರ್ಷ ಐಬಿಎಮ್‌, ಇನ್ಫೊಸಿಸ್‌ನಂತ ಕಂಪನಿಗಳಲ್ಲಿ ಕೆಲಸ ಮಾಡಿದ್ದರಿಂದ ಹೆಣ್ಣು ಎಲ್ಲಿ ಬೇಕಾದರೂ ಉದ್ಯೋಗ ಪಡೆಯಬಹುದು ಎನ್ನುವ ಧೈರ್ಯ ಇದೆ. ಹೆಣ್ಣಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ.

ನಿಮ್ಮ ಬಾಲ್ಯ ಹೇಗಿತ್ತು?
ಬಾಲ್ಯ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲ. ನನ್ನ ತಂದೆ ಜೀವನಕ್ಕೆ ಯಾವುದೇ ಸಮಸ್ಯೆ ಆಗದಂತೆ ಶಿಕ್ಷಣದ ಎಲ್ಲ ಹಂತಗಳಲ್ಲಿ ಸರಿಸಮಾನವಾಗಿ ಓದಿಸಿದರು. ತಂದೆಯ ಆಶಯಗಳು ನನ್ನನ್ನು ತುಂಬಿಕೊಂಡಿದ್ದರಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಸ್ವಂತ ದುಡಿಮೆಯಲ್ಲಿ ಬದುಕು ಸಾಗಿಸಲು ದಾರಿಯಾಯಿತು.

ಬೆಂಗಳೂರಿನಲ್ಲಿ ಲಿಂಗ ಸಮಾನತೆ ಇದೆಯೇ?
‘ನೀನು ಹೀಗೆ ಇರಬೇಕು, ಹೀಗೆ ಬೆಳೆಯಬೇಕು’ ಎನ್ನುವ ನಿಯಮಗಳನ್ನು ಸಮಾಜ ಹೆಣ್ಣಿನ ಮೇಲೆ ಹೇರುತ್ತದೆ. ಇದು ತಪ್ಪು. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನತೆ ಸೂತ್ರಗಳ ಪಾಠ ಹೇಳಿ ಬೆಳೆಸಬೇಕು. ಮನೆ, ಶಾಲೆ, ಕಾಲೇಜು ಸೇರಿದಂತೆ ಎಲ್ಲೆಡೆ ಸಮಾನತೆಯಿಂದ ಕಾಣಬೇಕು. ರಾಜಸ್ತಾನ, ಗುಜರಾತ್‌, ಜಾರ್ಖಂಡ್ ರಾಜ್ಯಗಳಲ್ಲಿ ನಾನು ತಿರುಗಾಡಿದ್ದೇನೆ. ಅಲ್ಲೆಲ್ಲಾ ಗಂಡುಮಕ್ಕಳಿಗೆ ಹೆಚ್ಚು ಒತ್ತು ಕೊಡುತ್ತಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಲಿಂಗ ಸಮಾನತೆ ಸಾಕಷ್ಟು ಇದೆ. ಐಟಿ–ಬಿಟಿ ಕಂಪನಿಗಳಲ್ಲಿ ಸಮಾನತೆ ಇದೆ. ಎಲ್ಲರೂ ಒಟ್ಟಿಗೆ ಹೋಗಬೇಕು ಎನ್ನುವ ಮನೋಭಾವವಿದೆ.

ADVERTISEMENT

ಭವಿಷ್ಯದ ಸಮಾಜದಲ್ಲಿ ಹೆಣ್ಣು ನೆಮ್ಮದಿಯಾಗಿ ಬಾಳಲು ಗಂಡು ಹೆತ್ತವರು ವಹಿಸಬೇಕಾದ ಕಾಳಜಿಗಳೇನು?
ಹೆಣ್ಣು ಎನ್ನುವ ಕರುಣೆ ನಮಗೆ ಅಗತ್ಯವಿಲ್ಲ. ಭೂಮಿಯಲ್ಲಿ ಸಸ್ಯ, ನೀರು, ಗಾಳಿ ಇರಲು ಜಾಗವಿರುವಂತೆ ನಮಗೂ ಬದುಕುವ ಹಕ್ಕು ಇದೆ. ಪುರುಷರು ದುರಾಸೆಯಿಂದ ಎಲ್ಲೆಡೆ ಮೇಲುಗೈ ಸಾಧಿಸಲು ಯತ್ನಿಸುತ್ತಾರೆ. ಎಲ್ಲವನ್ನು ಸಮವಾಗಿ ಪಡೆದು, ಸಂತೋಷವಾಗಿ ಬಾಳಬೇಕು. ಗಂಡಿಗೆ ಹೆಚ್ಚು ಮಹತ್ವ ಸಲ್ಲದು.

’ಛೇ ನಾನು ಹುಡುಗ ಆಗಬೇಕಿತ್ತು’ ಅಂತ ನಿಮಗೆ ಯಾವತ್ತಾದ್ರೂ ಅನಿಸಿತ್ತೆ?
ಛೀ ಆ ಥರ ಅನಿಸಿಲ್ಲ. ನಮ್ಮ ಜನ್ಮವನ್ನು ನಾವು ಇಷ್ಟಪಡಬೇಕು. ಮನೆಯಲ್ಲಿ ಹೆಣ್ಣಿಗೆ ಗೌರವವಿದೆ. ನಾವು ಬೆಳೆಯುವಾಗ ಸಿಕ್ಕ ಮಾರ್ಗದರ್ಶನ, ಅಳವಡಿಸಿಕೊಂಡ ಮೌಲ್ಯಗಳನ್ನು ಇಂದಿನ ಹೆಣ್ಣುಮಗುವಿಗೂ ಹೇಳಿಕೊಡಬೇಕು. ಹತ್ತು ವರ್ಷಗಳಿಂದ ಭಾರತದ ಖಾಸಗಿ ಕಂಪನಿಗಳಲ್ಲಿ ಹೆಣ್ಣು ಹೆಚ್ಚು ಉದ್ಯೋಗಗಳನ್ನು ಪಡೆದಿದ್ದಾಳೆ. ಗೌರವಯುತ ಉನ್ನತ ಸ್ಥಾನ ಗಳಿಸಿಕೊಂಡು ಪುರುಷರನ್ನು ಹಿಂದಿಕ್ಕಿದ್ದಾಳೆ ಎನ್ನುವುದು ಖುಷಿ ಸಂಗತಿ.

ನಿಮ್ಮ ಪ್ರಕಾರ ಮಹಿಳಾ ದಿನ ಎಂದರೆ ಏನು?
ತನ್ನ ಶಕ್ತಿ ತಾನು ಅರ್ಥಮಾಡಿಕೊಂಡು, ಯಾರನ್ನೂ ಸಹಾಯ ಕೇಳದೇ ಸ್ವಇಚ್ಛೆಯಿಂದ ಅಭಿವೃದ್ಧಿ ಸಾಧಿಸಲು ಕಾತರರಾಗಿರಬೇಕು. ನಮಗೆ ಗೊತ್ತಿಲ್ಲದ ಆತ್ಮವಿಶ್ವಾಸ ನಮ್ಮಲ್ಲಿದೆ. ಅದನ್ನು ಹೊರಗೆ ತರಲು ಪೆಪ್ಸಿ ಕಂಪನಿಯ ಸಿಇಒ ಇಂದ್ರನೂಯಿ ಥರದ ಮಹಿಳೆಯನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.