ADVERTISEMENT

ನರ್ಗೀಸ್‌ ಸಂಗೀತ ಪ್ರೀತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 19:30 IST
Last Updated 10 ಆಗಸ್ಟ್ 2016, 19:30 IST
ನರ್ಗೀಸ್‌ ಫಕ್ರಿ
ನರ್ಗೀಸ್‌ ಫಕ್ರಿ   

ಬಾಲಿವುಡ್‌ ನಟಿ ನರ್ಗೀಸ್‌ ಫಕ್ರಿ ಅವರಿಗೆ ಸಂಗೀತದ ಬಗ್ಗೆ ಬಾಲ್ಯದಲ್ಲಿಯೇ ಆಸಕ್ತಿ ಇತ್ತು. ಆದರೆ ಬಡತನದ ಕಾರಣದಿಂದ ಸಂಗೀತಾಭ್ಯಾಸ ಸಾಧ್ಯವಾಗಿಲ್ಲವಂತೆ.

ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಹೊಸ ಸಿನಿಮಾ ‘ಬ್ಯಾಂಜೋ’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

‘ಬಾಲ್ಯದಲ್ಲಿಯೇ ಆಸಕ್ತಿ ಇದ್ದರೂ ಸಂಗೀತ ಕಲಿಯಲಾಗಲಿಲ್ಲ. ಯಾಕೆಂದರೆ ನಮ್ಮದು ತೀರಾ ಬಡತನದ ಕುಟುಂಬ. ಹಣ ಕೊಟ್ಟು ಸಂಗೀತಾಭ್ಯಾಸ ಮಾಡುವುದು ಸಾಧ್ಯವಾಗಲೇ ಇಲ್ಲ. ಆ ನೋವು ಇನ್ನೂ ಇದೆ’ ಎಂದು ಅವರು ಬೇಸರ ಹಂಚಿಕೊಂಡಿದ್ದಾರೆ. ಅಂದಹಾಗೆ ‘ಬ್ಯಾಂಜೋ’ ಸಿನಿಮಾದಲ್ಲಿ ಫಕ್ರಿ ಅವರು ನ್ಯೂಯಾರ್ಕ್‌ನ ಡಿ.ಜೆ. ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸ್ವತಃ ಸಂಗೀತ ಕಲಿಯಲಾಗದಿದ್ದರೂ ಅವರಿಗೆ ಸಂಗೀತಗಾರರ ಕುರಿತು ಅಪಾರ ಗೌರವವಿದೆ. ‘ಯಾವುದಾದರೊಂದು ವಾದ್ಯವನ್ನು ನುಡಿಸುವುದು ನಿಜಕ್ಕೂ ಅದ್ಭುತ ಸಂಗತಿ. ಅದಕ್ಕೆ ಸಾಕಷ್ಟು ಪ್ರತಿಭೆಯೂ ಬೇಕು’ ಎಂದೂ ಅವರು ಹೇಳಿದ್ದಾರೆ.

‘ರಾಕ್‌ಸ್ಟಾರ್‌’ ಮೂಲಕ ಬಾಲಿವುಡ್‌ಗೆ ಅಡಿಯಿಟ್ಟ ಈ ಸುಂದರಿ, ಆ ಸಿನಿಮಾದಿಂದ ಗಿಟಾರ್‌ನತ್ತ ಆಕರ್ಷಿತರಾಗಿ ಅದನ್ನು ಕಲಿಯಲು ಶುರು ಮಾಡಿದರಂತೆ.
‘ಸಂಗೀತದತ್ತ ನನ್ನ ಗಮನ ಸೆಳೆಯುವ ಜನರು ನನ್ನ ಸುತ್ತಲೂ ಇರಲಿಲ್ಲ. ‘ರಾಕ್‌ಸ್ಟಾರ್‌’ ನಂತರ ನಾನು ಸಂಗೀತದತ್ತ ಆಕರ್ಷಿತಳಾದೆ. ಅಕಾಸ್ಟಿಕ್‌ ಗಿಟಾರ್‌ ಕಲಿಯಲು ಶುರು ಮಾಡಿದೆ. ಅದೊಂದು ಚಂದನೆಯ ಅನುಭವ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ರವಿ ಜಾಧವ್‌ ನಿರ್ದೇಶನದ ‘ಬ್ಯಾಂಜೋ’ ಸಿನಿಮಾದಲ್ಲಿ ಫಕ್ರಿ ಅವರು ರಿತೇಶ್‌ ದೇಶಮುಖ್‌ ಜತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕುರಿತೂ ಸಂತಸದ ಮಾತುಗಳನ್ನಾಡಿರುವ ಅವರು, ‘ನನ್ನ ಪ್ರಕಾರ ಇದೊಂದು ಒಳ್ಳೆಯ ಕಥೆ ಇದಕ್ಕೊಂದು ಆತ್ಮವಿದೆ.

ನಿರೂಪಣೆಯ ವಿಧಾನವೂ ಅದ್ಭುತವಾಗಿದೆ. ನನ್ನ ಪಾತ್ರವೂ ಅಷ್ಟೇ ಮಹತ್ವದ್ದು. ಅದಕ್ಕಾಗಿಯೇ ಈ ಚಿತ್ರವನ್ನು ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ. ‘ಬ್ಯಾಂಜೋ’ ಸೆಪ್ಟೆಂಬರ್ 23ಕ್ಕೆ ತೆರೆ ಕಾಣಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.