ADVERTISEMENT

ನಾಯಿಗೂ ಒಂದು ಕಾಲ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ಆರು ನಾಯಿಗಳು. ಅದೂ ಒಂದೇ ಮನೆಯಲ್ಲಿ. ಒಂದು ಪಗ್, ಇನ್ನೊಂದು ಲ್ಯಾಬ್ರಡಾರ್, ಮತ್ತೊಂದು ಡಾಲ್ಮೇಸಿಯನ್, ರಿಟ್ರೈವರ್... ಹೀಗೆ ಮನೆ ತುಂಬೆಲ್ಲಾ ನಾಯಿಗಳದೇ ಓಡಾಟ. ಇದು ರೋಹಿತ್ ಅವರ ಮನೆಯಲ್ಲಿ ಕಾಣುವ ದೃಶ್ಯ. ಅವರ ಮನೆಯಲ್ಲಿರುವುದು ಒಟ್ಟು ಮೂರು ಮಂದಿ. ಆದರೆ ಹೆಚ್ಚಿನ ಕಾರುಬಾರು ನಾಯಿಗಳದ್ದೇ. ಅಂಗಳದಲ್ಲಿ ಪಗ್ ತುಂಟಾಟ, ಸೋಫಾ ಮೇಲೆ ಕುಳಿತ ರಿಟ್ರೈವರ್, ಬಾಗಿಲ ಬಳಿ ಓಡಾಡುವ ಡಾಲ್ಮೇಸಿಯನ್, ಯಾವುದೋ ಕೋಣೆಯಲ್ಲಿ ಅಡಗಿ ಕುಳಿತ ಪೊಮೇರಿಯನ್ ಹೀಗೆ ಎಲ್ಲಾ ಮೂಲೆಯಲ್ಲೂ ನಾಯಿಗಳದ್ದೇ ಹೆಜ್ಜೆಗುರುತು.

ಇವರಿಗೆ ಬೆಳಿಗ್ಗೆ, ಸಂಜೆಯ ವಾಕಿಂಗ್‌ಗೂ ನಾಯಿಯದ್ದೇ ಸಾಥ್ ಬೇಕು. ಅವೂ ಜತೆಗೇ ಹೆಜ್ಜೆ ಹಾಕಬೇಕು. ಈ ನಾಯಿಗಳ ಜಗಳ ಕಾದಾಟ ಸಾಮಾನ್ಯವಾದರೂ ಮನೆಯವರಿಗೆ ಇವೆಲ್ಲಾ ಅತಿ ಮುದ್ದು. ಒಮ್ಮೆ ಆಜ್ಞೆ ಮಾಡಿದರೆ ಸಾಕು, ಎಲ್ಲಾ ನಾಯಿಗಳೂ ಗಪ್ ಚುಪ್! ತಿಂಡಿ ಹೊತ್ತಿಗೆ ಬಾಲ  ಕುಣಿಸುತ್ತಾ ಅವುಗಳ ತಟ್ಟೆ ಮುಂದೆ ಹಾಜರ್. ಅವಕ್ಕೆ ಪ್ರೀತಿ ತೋರಿಸಿದರೆ ಸಾಕು, ನಮ್ಮಂದಿಗೆ ಸದಾ ಒಂದಾಗಿ ಬೆರೆಯುತ್ತವೆ, ಅವುಗಳ ತುಂಟಾಟ ನಿಜಕ್ಕೂ ಎಲ್ಲ ಬೇಸರವನ್ನೂ ಮರೆಸುತ್ತದೆ ಎನ್ನುತ್ತಾ ಪುಟ್ಟ ಪೊಮೆರಿಯನ್ ಒಂದನ್ನು ಕೈಗೆತ್ತಿಕೊಂಡು ಮುದ್ದಾಡಿದರು.

ಇಷ್ಟು ನಾಯಿಗಳನ್ನು ಸಾಕಿ ಸಲಹುವುದು ಕಷ್ಟವಲ್ಲವೇ ಎಂದು ಮನೆಯವರನ್ನು ಪ್ರಶ್ನಿಸಿದರೆ, `ನಮ್ಮ ಮನೆಯಲ್ಲಿ ಎಲ್ಲರಿಗೂ ನಾಯಿಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಮಗ ಧ್ರುವನಿಗೆ ಅದರೊಂದಿಗೆ ಆಡುವುದೆಂದರೆ ಭಾರಿ ಖುಷಿ. ನಮಗೂ ಅಷ್ಟೇ, ಅವುಗಳನ್ನು ಸಾಕುವುದರಲ್ಲಿ ಏನೋ ಸಂತಸವಿದೆ~ ಎಂಬ ಸಂತೃಪ್ತ ಉತ್ತರ ಬಂತು.

ನಗರದಲ್ಲಿ ಶ್ವಾನಪ್ರೀತಿ ಬೆಳೆದ ಪರಿ ಇದು. ಈಗ ನಾಯಿ ಸಾಕುವ ಗೀಳು ಒಬ್ಬರ ಮನೆಮಾತಲ್ಲ. ಬಹುತೇಕರ ಮನೆಯಲ್ಲಿ ಇಂಥ ನಾಯಿಪ್ರೀತಿ ಇದೆ. ಮನೆಮಂದಿಯೆಲ್ಲಾ ಶ್ವಾನಪ್ರಿಯರಾಗಿರುವುದರಿಂದ ನಾಯಿ ಸಾಕುವುದು ಈಗ ನೆಚ್ಚಿನ ಹವ್ಯಾಸವಾಗಿದೆ. ಮಕ್ಕಳಿಗಂತೂ ನಾಯಿಗಳೆಂದರೆ ಒಳ್ಳೆ ಸ್ನೇಹಿತರಂತೆ. ದುಬಾರಿ ನಾಯಿಗಳನ್ನು ಖರೀದಿಸಿ ಸಾಕುವುದು ಕಷ್ಟವೆನಿಸಿದವರು ಕನಿಷ್ಠ ಒಂದು ನಾಯಿಯನ್ನಾದರೂ ಸಾಕುವುದು ಇಂದಿನ ಫ್ಯಾಷನ್. ನಾಯಿಯನ್ನು ಮಕ್ಕಳಂತೆ ಸಾಕಿ ಸಲಹುವುದರಲ್ಲಿ ಖುಷಿ ಕಾಣುತ್ತಿರುವ ಮಂದಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದಾರೆ. ಅದರಲ್ಲೂ ಮಹಾನಗರಿಗಳಲ್ಲಿ ನಾಯಿ ಸಾಕುವುದು ಕೆಲವರ ಜೀವನಶೈಲಿಯೇ ಹೌದು.

ಬೆಂಗಳೂರಿನಲ್ಲಿ ನಾಯಿಗಳಿಲ್ಲದ ದೊಡ್ಡ ಮನೆಗಳು ಅಪರೂಪ ಎನ್ನುವಂತಾಗುತ್ತಿದೆ.
ನಾಯಿಗಳನ್ನು ಕೇವಲ ಭದ್ರತೆಗೆಂದು ಸಾಕುವ ಕಾಲ ಇದಲ್ಲ. ಪ್ರತಿಷ್ಠೆಗಾಗಿ ನಾಯಿ ಸಾಕುವ ಜಾಯಮಾನವೂ ಮುಗಿದು ಹೋಗಿದೆ. ಆದರೆ  ಶ್ವಾನದೊಂದಿಗೆ ನಿಕಟ ಸಂಬಂಧ ಬೆಳೆಸಿಕೊಳ್ಳುತ್ತಿರುವ ರೀತಿ ಮಾತ್ರ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು. ಕಾಲದೊಂದಿಗೆ `ನಾಯಿಗಳಿವೆ ಎಚ್ಚರಿಕೆ~ ಎಂಬ ಬಿಳಿ ಅಕ್ಷರದ ದಪ್ಪನೆಯ ಬೋರ್ಡ್ ಕೂಡ ಮೂಲೆ ಸೇರಿದೆ.

ಯಾವುದಾದರೂ ಹೊಸ ತಳಿಯ ನಾಯಿ ಕಾಣಿಸಿಕೊಂಡರೆ ಸಾಕು, `ಅದರ ಬೆಲೆ ಎಷ್ಟು? ಹೇಗಿದೆ? ಅದನ್ನು ಕೊಂಡುಕೊಳ್ಳಬಹುದಾ? ಸಾಕುವ ಬಗೆ ಹೇಗೆ? ಅದನ್ನು ನಿಭಾಯಿಸಬೇಕಾದ ರೀತಿ ಏನು?~ ಇಂತಹ ಮಾಹಿತಿಗಳನ್ನು ಕಲೆ ಹಾಕಿ ಅವುಗಳನ್ನು ಕೊಂಡುಕೊಳ್ಳಲು ಹಾತೊರೆಯುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.

`ನಾಯಿ ಖರೀದಿಸುವವರು, ಸಾಕುವವರ ಮಾತು ಒಂದೆಡೆಯಾದರೆ, ನಾಯಿ ಮಾರುವ ನಮ್ಮಂಥವರಿಗೂ ವ್ಯಾಪಾರ ಹೆಚ್ಚುತ್ತಿದೆ. ಹತ್ತು ವರ್ಷದ ಹಿಂದೆ ಹೋಲಿಸಿದರೆ ಬೆಂಗಳೂರಿನಲ್ಲಿ ನಾಯಿ ಮಾರುವವರ, ಕೊಳ್ಳುವವರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ~ ಎಂಬುದು ಪೆಟ್‌ಶಾಪ್ ಉದ್ಯಮಿಯೊಬ್ಬರ ಅಭಿಪ್ರಾಯ.

ನಾಯಿಗಳನ್ನು ಕೊಂಡುಕೊಳ್ಳುವುದಷ್ಟೇ ಅಲ್ಲ, ಅವುಗಳಿಗೆ ಸೂಕ್ತವಾದ ಆಹಾರ, ಕೊಠಡಿಗೂ ಪ್ರತ್ಯೇಕ ವ್ಯವಸ್ಥೆ ಇದೆ. ಅಷ್ಟೇ ಅಲ್ಲ, ನಾಯಿಗಳಿಗೆ ಪಾಟಿ (ಟಠಿಠಿ) ತರಬೇತಿ ನೀಡುವುದೂ ಇದೆ. ವಾರಕ್ಕೊಮ್ಮೆ ಅಲ್ಲಲ್ಲಿ ಶ್ವಾನ ಪ್ರದರ್ಶನ, ಮಾರಾಟ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ.

ಇತ್ತೀಚೆಗಷ್ಟೆ ರಿಚ್ಮಂಡ್ ಸಮೀಪದ ಶ್ವಾನ ಪ್ರಿಯ ಸಂಸ್ಥೆ `ನಿಮ್ಮ ಪ್ರೀತಿಯ ನಾಯಿಯೊಂದಿಗೆ ಬೆಳಗಿನ ಉಪಾಹಾರ ಸೇವಿಸಿ~ ಎಂದು ನಾಯಿಗಳಿಗೆಂದೇ ವಿಶೇಷ ಬೆಳಗಿನ ತಿಂಡಿಯ ವ್ಯವಸ್ಥೆಗೆ ಕರೆ ನೀಡಿತ್ತು. ಅದಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕ್ದ್ದಿದು ನಾಯಿಗಳಿಗೆ ನೀಡುತ್ತಿರುವ ವಿಶೇಷ ಆದ್ಯತೆಗೆ ಉದಾಹರಣೆ. ಮೊದಲೆಲ್ಲಾ ಸಾಮಾನ್ಯವಾಗಿ ಪೊಮೇರಿಯನ್ ನಾಯಿಗಳನ್ನು ಮನೆಗಳಲ್ಲಿ ಸಾಕುತ್ತಿದ್ದರು. ಆದರೆ ಈಗ ಎಲ್ಲ ತರಹದ ನಾಯಿಗಳನ್ನೂ ಖರೀದಿಸಲು, ಸಾಕಲು ಬಯಸುತ್ತಾರೆ. ಸಾಮಾನ್ಯ ವರ್ಗದವರೂ ಕೂಡ ದುಬಾರಿ ನಾಯಿಯನ್ನು ಸಾಕುವುದಕ್ಕೆ ಇಷ್ಟಪಡುತ್ತಾರೆ.

ವಿದೇಶೀ ತಳಿಯ ನಾಯಿಗಳು ಈಗೀಗ ಹಲವು ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಪಗ್, ಗೋಲ್ಡನ್ ರಿಟ್ರೈವರ್, ಡಾಬರ್‌ಮನ್, ಬುಲ್ ಡಾಗ್, ಬಾಕ್ಸರ್, ರಾಟ್‌ವೀಲರ್, ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಬೀಗಲ್, ಬರ್ನಾರ್ಡ್ ಹೀಗೆ ಹತ್ತು ಹಲವು ತಳಿಯ ನಾಯಿಗಳು ಕಾಣಸಿಗುತ್ತವೆ. ಅಷ್ಟೇ ಅಲ್ಲ, ತಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬಕ್ಕೆ ಮುದ್ದಾದ ನಾಯಿ ಮರಿಯನ್ನು ಉಡುಗೊರೆಯಾಗಿ ಕೊಡುವ ಪರಿಪಾಠವೂ ಹುಟ್ಟಿಕೊಂಡಿದೆ. ನೀವೂ ಶ್ವಾನಪ್ರಿಯರಾಗಿದ್ದಲ್ಲಿ ಇಂದೇ ಸಮೀಪದ ಪೆಟ್‌ಶಾಪ್‌ಗೆ ಭೇಟಿ ನೀಡಿ, ನಿಮ್ಮದೇ ಒಂದು ಮುದ್ದಾದ ನಾಯಿಮರಿಯನ್ನು ಮನೆ ತುಂಬಿಸಿಕೊಳ್ಳಿ. 
              
                    


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT