ಭಾರತೀಯರ ಜೀವನದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜ್ಯೋತಿಷ್ಯ ಶಾಸ್ತ್ರವು ಭೂಮಂಡಲದ ಶಾಸ್ತ್ರಗಳಲ್ಲೇ ಪುರಾತನವಾದುದು. ರಾಜ್ಯದಲ್ಲಿ ಈ ಶಾಸ್ತ್ರವನ್ನು ಬೆಳೆಸಿ-ಉಳಿಸಿ ಮಾರ್ಗದರ್ಶನ ನೀಡಿರುವಲ್ಲಿ ಡಾ. ಬಿ.ವಿ.ರಾಮನ್ ಅಗ್ರಗಣ್ಯರು.
ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಜನಿಸಿದ ರಾಮನ್, ಪ್ರಸಿದ್ಧ ಜ್ಯೋತಿಷ್ಯ ದಿವಂಗತ ಸೂರ‌್ಯನಾರಾಯಣ ಅವರ ಮೊಮ್ಮಗ. ಜ್ಯೋತಿಷ್ಯ ಶಾಸ್ತ್ರಾಭ್ಯಾಸಕ್ಕೆ ಅಜ್ಜನೇ ಮೊದಲ ಗುರು. ಸುಮಾರು 62 ವರ್ಷ ಜ್ಯೋತಿಷ್ಯ ಶಾಸ್ತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ರಾಮನ್, ಭಾರತೀಯ ಜ್ಯೋತಿಷ ಶಾಸ್ತ್ರವನ್ನು ವೈಜ್ಞಾನಿಕ ಎಂದು ಪ್ರತಿಪಾದಿಸಿದರು.
ನಾಳೆ ಕಾರ್ಯಕ್ರಮ
ಕರ್ನಾಟಕದ ಸುಮಾರು 50 ಜ್ಯೋತಿಷ ಬೋಧನಾ ಸಂಸ್ಥೆಗಳು, ಶ್ರಿ ರಾಮನ್ ಮತ್ತು ರಾಜೇಶ್ವರಿ ರಿಸರ್ಚ್ ಫೌಂಡೇಶನ್ ಸಂಸ್ಥೆ ಮತ್ತು ಪ್ರೊ. ಎಂ.ಪಿ.ಎಲ್. ಶಾಸ್ತ್ರಿ ಎಜುಕೇಶನ್ ಫೌಂಡೇಶನ್ಸ್ ಇಂಡೋಲಾಜಿಕಲ್ ರಿಸರ್ಚ್ ಸೆಂಟರ್‌ನ ಸಹಯೋಗದಲ್ಲಿ ಡಾ.ಬಿ.ವಿ.ರಾಮನ್ ಜನ್ಮ ಶತಮಾನೋತ್ಸವ ಸಮಾರಂಭ ಭಾನುವಾರ ಏರ್ಪಾಡಾಗಿದೆ.
ಮಲ್ಲೇಶ್ವರಂನ ಎಂ.ಇ.ಎಸ್ ಕಾಲೇಜು ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಭಾನುವಾರ ಬೆಳಿಗ್ಗೆ 10ಕ್ಕೆ ಕರ್ನಾಟಕದ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸುತ್ತಾರೆ. ರಿಜಿಸ್ಟ್ರಾರ್ ಪ್ರೊ. ಸಿದ್ದೇಗೌಡ, ಮೈಸೂರು ಎಜುಕೇಷನಲ್ ಸೊಸೈಟಿಯ ಅಧ್ಯಕ್ಷೆ ವಿಮಲಾ ರಂಗಾಚಾರ್, ಧರ್ಮಸ್ಥಳದ ಡಿ. ಸುರೇಂದ್ರಕುಮಾರ್, ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾ ನಿರ್ದೇಶಕ ಡಾ.ಮಹೇಶ್ ಜೋಶಿ ಅತಿಥಿಗಳು. ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.