ADVERTISEMENT

ನಿನ್ನಂಥ ಅಪ್ಪ ಇಲ್ಲ!

ಮಂಜುಶ್ರೀ ಎಂ.ಕಡಕೋಳ
Published 15 ಜೂನ್ 2018, 13:20 IST
Last Updated 15 ಜೂನ್ 2018, 13:20 IST
ಅಪ್ಪ ಶ್ರೀನಿವಾಸ ಕಪ್ಪಣ್ಣ ಅವರೊಂದಿಗೆ ಸ್ಕೂಟರಿ ಸವಾರಿಯಲ್ಲಿ ಸ್ನೇಹಾ ಕಪ್ಪಣ್ಣ
ಅಪ್ಪ ಶ್ರೀನಿವಾಸ ಕಪ್ಪಣ್ಣ ಅವರೊಂದಿಗೆ ಸ್ಕೂಟರಿ ಸವಾರಿಯಲ್ಲಿ ಸ್ನೇಹಾ ಕಪ್ಪಣ್ಣ   

‘ನನ್ನಪ್ಪ ಶ್ರೀನಿವಾಸ ಜಿ.ಕಪ್ಪಣ್ಣ ಸಾಂಸ್ಕೃತಿಕ ಲೋಕದಲ್ಲಿ ಹೆಸರು ಮಾಡಿದವರು. ನಾನು ಕಲಾ ಲೋಕಕ್ಕೆ ಬರಬಾರದು ಅಂದುಕೊಂಡಿದ್ದೆ. ಆದರೆ, ಕೊನೆಗೂ ಆ ಸೆಳೆತಕ್ಕೆ ಸಿಕ್ಕಿಬಿದ್ದೆ. ಅಪ್ಪ ರಂಗಭೂಮಿಯಲ್ಲಿ ಹೆಸರು ಮಾಡಿದ್ದು ನನ್ನ ಮೇಲೆ ಪ್ರಭಾವ ಬೀರಿತ್ತು. ಆದರೆ, ನಾನು ನೃತ್ಯವನ್ನು ಆರಿಸಿಕೊಂಡೆ. ನನ್ನ ಸ್ವಂತಬಲದಿಂದಲೇ ಗುರುತಿಸಿಕೊಳ್ಳಬೇಕೆಂದು ಬಯಸುವವಳು ನಾನು. ಅಪ್ಪನಿಗೂ ಅದುವೇ ಇಷ್ಟ.

ಅಪ್ಪ ನನಗಿಂತಲೂ ವೇಗವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಾರೆ. ಇಮೇಲ್, ಫೇಸ್‌ಬುಕ್ ಅನ್ನು ನನಗಿಂತ ಅವರೇ ಚೆನ್ನಾಗಿ ಬಳಸುತ್ತಾರೆ. ಆಧುನಿಕತೆಗೆ ತೆರೆದುಕೊಳ್ಳುವ ಅಪ್ಪನ ಈ ಸ್ವಭಾವ ನನಗಿಷ್ಟ. ಅಪ್ಪ ತಮಗೆ ಗೊತ್ತಿದ್ದೇ ಸತ್ಯ ಅಂತ ಅಂದುಕೊಳ್ಳಲ್ಲ. ಗೊತ್ತಿಲ್ಲದ್ದನ್ನು ಕೇಳಿ ಅರಿಯುತ್ತಾರೆ ಅವರು.

ಅಪ್ಪ ಮತ್ತು ನನ್ನ ಬಾಂಧವ್ಯವನ್ನು ಪದಗಳಲ್ಲಿ ಹೇಳುವುದು ನಿಜಕ್ಕೂ ಕಷ್ಟ. ಅಪ್ಪ ನನಗೆ ಬಾಲ್ಯದಿಂದಲೇ ಸ್ವಾವಲಂಬನೆಯ ಪಾಠ ಹೇಳಿಕೊಟ್ಟವರು. ನಾನು ಪ್ರಥಮ ಪಿಯುಸಿಯಲ್ಲಿದ್ದಾಗ ಕೆಲಸ ಮಾಡ್ತೀನಿ ಅಂದೆ. ಇತರ ಅಪ್ಪಂದಿರಾಗಿದ್ದರೆ ನಿನಗೇಕೆ ಕೆಲಸ ನಾನಿಲ್ವಾ ಅನ್ನುತ್ತಿದ್ದರೇನೋ? ಆದರೆ, ಅಪ್ಪ ಮಾರ್ಗದರ್ಶನ ಮಾಡಿದ್ರು. ಎಂ.ಎಸ್ಸಿ ಕೋರ್ಸ್ ಅನ್ನು ನನ್ನ ಖರ್ಚಿನಲ್ಲೇ ನಿಭಾಯಿಸಿದೆ. ನನ್ನ ಸಾಮರ್ಥ್ಯ ಏನೆಂದು ಮನವರಿಕೆ ಮಾಡಿಕೊಟ್ಟವರು ಅಪ್ಪ. ಇಂದಿಗೂ ನನ್ನ ಕಾರ್ಯಕ್ರಮಗಳಿಗೆ ಅಪ್ಪನೇ ಶಬ್ದ–ಬೆಳಕಿನ ವಿನ್ಯಾಸ ಮಾಡೋದು.

ADVERTISEMENT

ಅಪ್ಪನಿಗೆ ನಾಟಿಕೋಳಿ–ಮುದ್ದೆ ಅಂದ್ರೆ ಸಖತ್ ಇಷ್ಟ. ಅಮ್ಮ ಮಾಡಿದರೆ ನಾನು ಬಡಿಸ್ತೀನಿ ಅಷ್ಟೇ!.

ಒಮ್ಮೆ ನಾನು ಮುಂಬೈಗೆ ಹೋಗಬೇಕಿತ್ತು. ಅಲ್ಲೀತನಕ ಅಪ್ಪಅಮ್ಮನನ್ನು ಬಿಟ್ಟು ಅಷ್ಟು ದೂರ ಹೋಗಿರಲಿಲ್ಲ. ಎಲ್ಲರೂ ಅತ್ತು ಕರೆದು ನನ್ನನ್ನು ರೈಲು ಹತ್ತಿಸಿದರು. ನಾನು ಮುಂಬೈ ತಲುಪುವ ಹೊತ್ತಿಗೆ ಎಷ್ಟು ಸ್ಟೇಷನ್‌ಗಳಿವೆಯೋ ಅಲ್ಲೆಲ್ಲಾ ಅಪ್ಪನ ಸ್ನೇಹಿತರು ನನ್ನನ್ನು ಭೇಟಿ ಮಾಡಿ ಸಿಹಿತಿನಿಸು, ಹಣ್ಣುಗಳನ್ನು ಕೊಟ್ಟು, ನಾನು ಒಂಟಿ ಅನ್ನೋ ಕೊರತೆ ನೀಗಿಸಿದ್ರು. ದಟ್ ಇಸ್ ಮೈ ಅಪ್ಪ. ಜಗತ್ತೇ ನನ್ನ ವಿರುದ್ಧ ನಿಂತ್ರೂ ನನ್ನಪ್ಪ ಮಾತ್ರ ಯಾವತ್ತೂ ನನ್ನ ಜತೆಗೇ ಇರ್ತಾರೆ.
-ಸ್ನೇಹಾ ಕಪ್ಪಣ್ಣ, ನೃತ್ಯ ಕಲಾವಿದೆ

*


ಮಗಳೇ ನನ್ನ ಆಪ್ತ ಸ್ನೇಹಿತೆ!
ನಾನು ಹೆಚ್ಚು ಓದಿದವನಲ್ಲ. ಆದರೆ, ನನ್ನ ಮಗಳು ಸ್ನೇಹಾ ಎಂ.ಎಸ್ಸಿ ಸೈಕಾಲಜಿ ಮಾಡಿದಾಗ ತುಂಬಾ ಖುಷಿಪಟ್ಟೆ. ಅವಳು ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದು ನನ್ನ ಹೆಮ್ಮೆಗೆ ಮತ್ತಷ್ಟು ಗರಿ ಮೂಡಿಸಿತ್ತು. ಆದರೆ, ಮಗಳು ನನ್ನ ಹಾದಿಯಲ್ಲೇ ಕಲಾಕ್ಷೇತ್ರಕ್ಕೆ ಕಾಲಿಟ್ಟಳು. ‘ನಾನು ಸ್ನೇಹಾ ಅವರ ಅಪ್ಪ’ ಅಂತ ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತೆ.

ಷೋನ ಸಂಪೂರ್ಣ ಯಶಸ್ಸು ಅವಳಿಗೇ ಸಲ್ಲಬೇಕು ಅನ್ನೋದು ನನ್ನಾಸೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಳು ನನಗಿಂತ ಭಿನ್ನ. ‘ಭ್ರಮರಿ’ ತಂಡ ಹಾಗೂ ‘ಕಥಾ ಕಾರ್ನರ್’ ಮೂಲಕ ತನ್ನದೇ ಹೆಜ್ಜೆಗುರುತು ಮೂಡಿಸಿದ್ದಾಳೆ. ಮೊನ್ನೆ ಸಿಜಿಕೆ ರಂಗೋತ್ಸವದಲ್ಲಿ ‘ಕಥಾ ಪಡಸಾಲೆ’ಯನ್ನು ಎಷ್ಟೊಂದು ಚೆನ್ನಾಗಿ ನಿರ್ವಹಿಸಿದಳು ಗೊತ್ತಾ? ಅಂದು ಅಲ್ಲಿ ನಾನಿರಲಿಲ್ಲ. ದೂರದ ಸಿರಿಗೆರೆಯಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದೆ. ಮಗಳು ನನ್ನೊಂದಿಗೆ ಎಷ್ಟೊಂದು ವಿಷಯಕ್ಕೆ ಕನೆಕ್ಟ್ ಆಗ್ತಾಳೆ ಅನಿಸ್ತು.

ನಿಮಗೆ ಗೊತ್ತಾ? ನಾನು ಈ ಹಿಂದೆ ದೊಡ್ಡ ಕೆಲಸಗಳನ್ನು ಮಾಡಿದಾಗ ದೊಡ್ಡದಾಗಿ ಪಾರ್ಟಿ ಮಾಡುತ್ತಾ ಇದ್ದೆ. ಆದರೆ, ನನ್ನ ಮಗಳು ಹಾಗಲ್ಲ. ಅವಳು ಎಷ್ಟೇ ದೊಡ್ಡ ಕೆಲಸ ಮಾಡಿದ್ರೂ ಪಾನಿಪೂರಿಯನ್ನೇ ತಿನ್ತಾಳೆ. ನಾನು ರಸ್ತೆಬದಿಯ ಪಾನಿಪೂರಿ ತಿನ್ಬೇಡ ಮಗಳೇ ಅಂದ್ರೆ. ಅದನ್ನೇ ಗೊತ್ತಿಲ್ಲದೇ ನನಗೆ ಪಾರ್ಸೆಲ್ ತಂದುಕೊಡ್ತಾಳೆ. ಆಗ ನಾನು ಅದನ್ನು ಇಷ್ಟಪಟ್ಟು ತಿನ್ತೀನಿ. ಅದುವೇ ನನಗೆ ಖುಷಿ! ನಿಜ ಹೇಳಬೇಕೆಂದರೆ ನನಗೀಗ ಇಬ್ಬರು ಆಪ್ತ ಸ್ನೇಹಿತೆಯರು. ಒಬ್ಬಳು ಹೆಂಡ್ತಿ, ಮತ್ತೊಬ್ಬಳು ಮಗಳು!
–ಶ್ರೀನಿವಾಸ ಜಿ. ಕಪ್ಪಣ್ಣ, ಹಿರಿಯ ರಂಗಕರ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.