ADVERTISEMENT

ನಿಮ್ಮನ್ನು ನಾವು ಮರೆತಿಲ್ಲ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಟ್ರಾಯ್‌ ಶಾಲೆಯ ಮಗು ಆಯಾಗೆ ತಿಂಡಿ ತಿನ್ನಿಸುತ್ತಿರುವುದು.
ಟ್ರಾಯ್‌ ಶಾಲೆಯ ಮಗು ಆಯಾಗೆ ತಿಂಡಿ ತಿನ್ನಿಸುತ್ತಿರುವುದು.   

ಶಾಲೆಯ ಮಕ್ಕಳ ಯೋಗಕ್ಷೇಮವನ್ನು ಆಯಾಗಳು ಹಾಗೂ ಇತರ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಆದರೆ ಮಕ್ಕಳೇ ಅಂಥವರ ಸೇವೆ ಮಾಡಿ, ಕೃತಜ್ಞತೆ ತೋರುವ ದಿನ ಆಚರಿಸುವುದು ಗೊತ್ತೆ? ಇಂಥ ಪ್ರಯತ್ನವನ್ನು ನಗರದ ‘ಟ್ರಾಯ್‌ ಟೊಟ್ಸ್‌’ ಶಾಲೆಯ 300 ಮಕ್ಕಳು ಮಾಡಿದ್ದಾರೆ. ಈ ಮಕ್ಕಳು ತಮ್ಮ ಶಾಲೆಯ 35 ಸಿಬ್ಬಂದಿಗೆ ತಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸಹಕಾರನಗರದ ’ಟ್ರಾಯ್‌ ಟೊಟ್ಸ್’ ಶಾಲೆಯಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ‘ಥ್ಯಾಂಕ್ಸ್‌ ಗಿವಿಂಗ್‌ ಡೇ’ ಹೆಸರಿನಲ್ಲಿ ಆಚರಿಸಲಾಯಿತು. ಮಕ್ಕಳು ತಂದೆ, ತಾಯಿಯರಿಂದ ಒಪ್ಪಿಗೆ ಪಡೆದು ಶಾಲಾ ಸಿಬ್ಬಂದಿಗೆ ಹಣ್ಣು, ಬ್ಯಾಗ್ ಹಾಗೂ ತಿನಿಸುಗಳ ಉಡುಗೊರೆ ನೀಡಿದರು. ಬೋಧಕೇತರರು ಎನಿಸಿಕೊಳ್ಳುವ ಆಯಾಗಳು, ಎಲೆಕ್ಟ್ರಿಷಿಯನ್‌ಗಳು, ಕಾರ್ಪೆಂಟರ್‌ಗಳು, ತೋಟದಮಾಲಿ, ವಾಹನ ಚಾಲಕರ ಜತೆ ಮಕ್ಕಳು ಒಂದು ಇಡೀ ದಿನವನ್ನು ಸಂತೋಷದಿಂದ ಕಳೆದರು. ತಮ್ಮ ಪುಟ್ಟ ಕೈಗಳಿಂದ ಆಯಾಗಳಿಗೆ ಊಟ ಬಡಿಸಿ, ತುತ್ತು ಮಾಡಿ ತಿನ್ನಿಸಿದರು.

‘ಮಕ್ಕಳು ಮನಸು ಬಲುಸೂಕ್ಷ್ಮ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ತಂದೆ, ತಾಯಿಯರ ಒಪ್ಪಿಗೆ ಪಡೆದು ಉಡುಗೊರೆ ತಂದಿದ್ದರು. ಅವರ ಮನಸು ಎಂಥದ್ದು’ ಎಂಬುದಕ್ಕೆ ಇಂಥ ಕಾರ್ಯಕ್ರಮಗಳು ಕನ್ನಡಿ ಎಂದವರು ಶಾಲೆಯ ಹಿರಿಯ ಲೆಕ್ಕಪತ್ರ ಅಧಿಕಾರಿ ಸಂಗೀತಾ ಜೋಶಿ.

ADVERTISEMENT

ನಮ್ಮ ಬದುಕಿನಲ್ಲಿ ಬಂದು ಹೋಗಿದ್ದ ವ್ಯಕ್ತಿಗಳ ಬಗ್ಗೆ ಮಹತ್ವ ಏನು ಎಂಬುದು ತಿಳಿದುಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಹೇಗೆ ನಾವು ದೇವರಿಗೆ ಪ್ರತಿದಿನ ಕೃತಜ್ಞತೆ ಸಲ್ಲಿಸುತ್ತೇವೆಯೋ, ಅದೇ ರೀತಿ ಬದುಕಿನಲ್ಲಿ ಬರುವ ಮತ್ತು ನಮಗೆ ಒಳಿತು ಮಾಡುವ ಇತರೆಲ್ಲ ವ್ಯಕ್ತಿಗಳ ಬಗ್ಗೆಯೂ ನಮ್ಮ ಅನಿಸಿಕೆ ಹಂಚಿಕೊಳ್ಳಲು ಇಂಥ ಕಾರ್ಯಕ್ರಮಗಳು ಅಗತ್ಯ.

‘ಮಕ್ಕಳು ಸುರಕ್ಷಿತ ಮತ್ತು ಆರೋಗ್ಯವಂತ ವಾತಾವರಣದಲ್ಲಿ ಸಮಗ್ರ ಬೆಳವಣಿಗೆ ಕಾಣಲು ಹಲವಾರು ಸಿಬ್ಬಂದಿ ತಮ್ಮದೇ ಆದ ಕೊಡುಗೆ ನೀಡುತ್ತಾರೆ. ಅವರ ಕಾರ್ಯವನ್ನು ಮೆಚ್ಚಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸುವ ವಿಶಿಷ್ಟ ಅವಕಾಶವನ್ನು ಈ ಕಾರ್ಯಕ್ರಮ ಕಲ್ಪಿಸಿಕೊಡುತ್ತದೆ.
ಸದಾ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಶಾಲೆಯ ಸಿಬ್ಬಂದಿ ಪುಟಾಣಿಗಳೊಂದಿಗೆ ಔತಣಕೂಟದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು’ ಎಂದು ಶಾಲೆಯ ಅಧಿಕಾರಿ ಗ್ರೇಷ್ಮಾ ಮೊಮಯಾ ಪ್ರತಿಕ್ರಿಯಿಸಿದರು.

–ಭೀಮಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.