ADVERTISEMENT

ನೀನು ಸ್ಲಮ್ಮು, ನಿಮ್ಮಪ್ಪ ಸ್ಲಮ್ಮು...

ಅರುಣ್ ಜೋಳದ ಕೂಡ್ಲಿಗಿ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
(ಪ್ರಾತಿನಿಧಿಕ ಚಿತ್ರ) ಮೆಟ್ರೊ
(ಪ್ರಾತಿನಿಧಿಕ ಚಿತ್ರ) ಮೆಟ್ರೊ   

ಮೆಜೆಸ್ಟಿಕ್‌ನಿಂದ ನಾಗಸಂದ್ರಕ್ಕೆ ಮೆಟ್ರೊದಲ್ಲಿ ಚಲಿಸುವಾಗ ನನಗೊಂದು ವಿಚಿತ್ರ ಅನುಭವವಾಯಿತು. ನಾನು ಮೆಟ್ರೊ ಹತ್ತುವ ವೇಳೆಗೆ ಹುಡುಗಿಯೊಬ್ಬಳು ಕಟ್ಟುಮಸ್ತಾದ ಹುಡುಗನ ಜೊತೆ ಮುಸಿಮುಸಿ ಜಗಳ ಆಡುತ್ತಿದ್ದುದು ಕಣ್ಣಿಗೆ ಬಿತ್ತು (ಈ ಜಗಳ ಏಕೆ ಶುರುವಾಗಿತ್ತೋ ತಿಳಿಯಲಿಲ್ಲ). ಹುಡುಗ ಆ ಹುಡುಗಿಯ ಪಕ್ಕವೇ ಕುಳಿತ ತನ್ನ ಅಮ್ಮನಿಗೆ ‘ಮಮ್ಮಿ ಈ ಸ್ಲಮ್ಮುಗಳ ಹಣೆಬರವೇ ಇಷ್ಟು... ಕೊಚ್ಚೆ’ ಎಂದುಬಿಟ್ಟ.

ಈ ಮಾತು ಕೇಳುತ್ತಿದ್ದಂತೆ ಕೈಕಾಲುಗಳು ಒಣಗಿದಂತಿರುವ ಆ ತೆಳುವಾದ ದೇಹದೊಳಗಿಂದ ಧ್ವನಿ ಸ್ಫೋಟಗೊಂಡಿತು. ‘ಏಯ್... ರಾಸ್ಕಲ್ ಏನೋ ಬೊಗಳ್ತಿದೀಯಾ, ನೀನು ಸ್ಲಮ್ಮು, ನಿಮ್ ಅಪ್ಪ ಸ್ಲಮ್, ನಿಮ್ ಅಮ್ಮ ಸ್ಲಮ್, ನಿಮ್ ಮನೆಯವ್ರು ಸ್ಲಮ್ಮು...’ ಅಂತ ಉರಿಯುವ ಕೆಂಡದಂತಾಗಿ ಅವನ ಮೇಲೆ ದಾಳಿಗಿಳಿದಳು. ಜನರು ಮಾತ್ರ ಈ ಎಲ್ಲ ಸನ್ನಿವೇಶವನ್ನು ಧಾರಾವಾಹಿ ನೋಡಿದಷ್ಟೇ ನಿರ್ಲಿಪ್ತವಾಗಿ ನೋಡುತ್ತಿದ್ದರು.

ಹುಡುಗಿಯ ಆರ್ಭಟ ಕಂಡು ಹೆದರಿದವನಂತೆ ಕಂಡುಬಂದ ಆ ಹುಡುಗ ಏನನ್ನೂ ಮಾತನಾಡದೆ ವಟಗುಡುತ್ತ ಸ್ವಲ್ಪ ಮುಂದಕ್ಕೆ ಹೋಗಿ ನಿಂತುಕೊಂಡ. ಅವಳ ಜೊತೆ ಕೂತ ಹುಡುಗನ ತಾಯಿಯೂ ಹುಡುಗಿಯ ಆವೇಶ ಕಂಡು ಹೆದರಿದಂತೆ ಮೌನದಲ್ಲಿಯೇ ಆಕೆಯನ್ನು ಗುರಾಯಿಸಿದಳು.

ADVERTISEMENT

ಹುಡುಗಿಯ ಕೈ ಇನ್ನೂ ನಡುಗುತ್ತಿತ್ತು. ಅವಳ ಆಕ್ರೋಶ ಕಂಡು ಅಲ್ಲಿದ್ದವರಿಗೂ ಬೆರಗು. ಮಾಡ್ತೀನಿ ತಡಿ ಎಂದು ಯಾರು ಯಾರಿಗೋ ಶರವೇಗದಲ್ಲಿ ವಾಟ್ಸ್ಯಾಪ್ ಮೆಸೇಜ್ ಕಳುಹಿಸಿದಳು, ಕಾಲ್ ಮಾಡಿ ಘಟನೆಯನ್ನು ಜೋರು ಬಾಯಲ್ಲಿ ವಿವರಿಸುತ್ತಿದ್ದಳು. ಆದರೆ ಅಲ್ಲಿದ್ದ ಯಾರೂ ಇವಳ ನೆರವಿಗೆ ಮುಂದಾಗಲಿಲ್ಲ. ಕಾಲ್‌ ಮಾಡುವುದು, ಮೆಸೇಜ್‌ ಮಾಡುವುದು ಮುಂದುವರಿದೇ ಇತ್ತು. ಪೀಣ್ಯ ಬಂದಕೂಡಲೇ ತಾಯಿ ಮಗ ಸರಸರನೆ ಇಳಿದು ಹೋದರು. ಅವರು ಇಳಿಯುವುದನ್ನು ದಿಟ್ಟಿಸಿ ನೋಡಿ ಸುಮ್ಮನಾದಳು.

ಮೆಟ್ರೊ ಮುಂದೆ ಸಾಗಿದಂತೆ ಆಕೆಯ ಕೋಪ, ಆಕ್ರೋಶ ಕೂಡ ನಿಧಾನವಾಗಿ ಇಳಿದಂತೆ ಭಾಸವಾಯಿತು. ಸಿಟ್ಟು ತಡೆಹಿಡಿದು ನಿರಾಳವಾಗಲು ಪ್ರಯತ್ನಿಸುತ್ತಿದ್ದಳು. ತಕ್ಷಣವೇ ಕಣ್ಣೀರು ಹರಿಯತೊಡಗಿತು. ಬಿಕ್ಕಳಿಸಿದಳು. ಕರ್ಚೀಫಿನಿಂದ ಕಣ್ಣೊರಸಿಕೊಳ್ಳುತ್ತ ನೋಡುವವರಿಗೆ ಅಳುವುದು ತಿಳಿಯದಿರಲಿ ಎಂದು ಜೋರಾಗಿ ತನಗೆ ತಾನೇ ಧೈರ್ಯ ಹೇಳಿಕೊಳ್ಳುತ್ತಿರುವಂತೆ ಕಂಡಿತು.

ದಾಸರಹಳ್ಳಿ ಸ್ಟಾಪ್‌ ಬರುತ್ತಿದ್ದಂತೆ ದಡಬಡನೆ ಇಳಿದು ಹೋದಳು. ಜೋರು ಜೋರು ಹೆಜ್ಜೆಯಿಟ್ಟು ಕಣ್ಮರೆಯಾದಳು. ಆದರೂ ನನ್ನ ಮನಸ್ಸಿನಲ್ಲಿ ಮತ್ತೆ ಮತ್ತೆ ಪ್ರಶ್ನೆ ಕಾಡುತ್ತದೆ. ನನ್ನನ್ನೂ ಒಳಗೊಂಡತೆ ಯಾರೂ ಆ ಹುಡುಗಿಯ ಪರವಾಗಿ ಯಾಕೆ ಧ್ವನಿಗೂಡಿಸಲಿಲ್ಲ. ಮೂಳೆಗಳೆಲ್ಲ ಒಣಗಿದಂತೆಯೂ, ಯಾವುದೋ ರೋಗಕ್ಕೆ ತುತ್ತಾಗಿ ಗುಣಮುಖಗೊಳ್ಳುತ್ತಿರುವಂತೆಯೂ ಕಂಡದ್ದರಿಂದ ನೋಡುಗರೂ ಇವಳು ಸ್ಲಂ ಹುಡುಗಿಯೇ ಇರಬೇಕೆಂದು ತೀರ್ಮಾನಿಸಿದರೇ... ಒಂದೂ ಅರ್ಥವಾಗಲಿಲ್ಲ.

ಒಂದು ವೇಳೆ ಆ ಹುಡುಗಿ ನೋಡುವುದಕ್ಕೆ ಸುಂದರವಾಗಿ, ಮೇಲ್ವರ್ಗದವಳಂತೆ ಕಂಡಿದ್ದರೆ ಆ ಹುಡುಗ ಅಷ್ಟು ಸಲೀಸಾಗಿ ಕೊಚ್ಚೆ ಎಂದು ಬೈಯುತ್ತಿರಲಿಲ್ಲವೇನೋ. ಕೆಲವರಾದರೂ ಆಕೆಯ ಸಹಾಯಕ್ಕೆ ನಿಲ್ಲುತ್ತಿದ್ದರೇನೋ. ಸ್ಲಮ್ಮು ಎನ್ನುವುದನ್ನು ಕೀಳು ಅರ್ಥಕ್ಕೆ ಹೋಲಿಸಿ ಬೈದಿದ್ದಕ್ಕೆ ಯಾರಾದರೂ ತರಾಟೆಗೆ ತೆಗೆದುಕೊಳ್ಳಬಹುದಿತ್ತು. ಇದರಿಂದ ಮತ್ತೊಮ್ಮೆ ಆ ಪದ ಬಳಸಲು ಆತ ಹಿಂಜರಿಯುತ್ತಿದ್ದನೋ ಏನೋ. ಕನಿಷ್ಠ ಪಕ್ಷ ಅಮ್ಮನಾದರೂ ಹಾಗೆಲ್ಲಾ ಹೇಳಬಾರದು ಎಂದು ಬುದ್ಧಿ ಮಾತು ಹೇಳಬಹುದಿತ್ತು. ಆದರೆ ತಾಯಿ ಮಗನ ಬೈಗುಳಕ್ಕೆ ಮುಸಿನಕ್ಕು ಆತನನ್ನು ಬೆಂಬಲಿಸಿದ್ದು, ಆ ಹುಡುಗಿಯ ಸಿಟ್ಟನ್ನು ಇಮ್ಮಡಿಗೊಳಿಸಿತ್ತು. ಇದೇ ಘಟನೆ ಬಸ್ಸಲ್ಲಿ ನಡೆದಿದ್ದರೆ ಜನರೆಲ್ಲಾ ಆಕೆಯ ಬೆಂಬಲಕ್ಕೆ ನಿಲ್ಲುತ್ತಿದ್ದರು ಎಂದೂ ಅನೇಕ ಸಲ ಅನಿಸುವುದುಂಟು.

ಈ ಘಟನೆ ನಡೆದು ಹಲವು ದಿನಗಳೇ ಕಳೆದರೂ ಆಕೆಯ ಸಿಟ್ಟು, ಆಕ್ರೋಶ ಕಣ್ಣಿಗೆ ಕಟ್ಟುತ್ತದೆ. 'ಸ್ಲಂ' ಒಂದು ಕೀಳು ಬೈಗುಳವಾಗಿ ಬದಲಾದದ್ದು ಈ ಸಮಾಜದ ಅನಾಗರಿಕ ಪ್ರಜ್ಞೆಗೆ, ಸತ್ತಿರುವ ಮನುಷ್ಯತ್ವಕ್ಕೆ ಸಾಕ್ಷಿಯೆಂದೇ ಆಗಾಗ ಮನಸಿಗೆ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.