ADVERTISEMENT

ಪರವಶಗೊಳಿಸಿದ ನೃತ್ಯ ಪ್ರಸ್ತುತಿ

ಡಾ.ಎಂ.ಸೂರ್ಯ ಪ್ರಸಾದ್
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST
ಗಾಯತ್ರಿ ಶ್ರೀರಾಮ್
ಗಾಯತ್ರಿ ಶ್ರೀರಾಮ್   

ಡಾ. ಆರ್.ವಿ.ರಾಘವೇಂದ್ರ ಅವರ ನೇತೃತ್ವದ `ಅನನ್ಯ' ಸಂಸ್ಥೆಯ ಆಶ್ರಯದಲ್ಲಿ ಎರಡು ದಿವಸಗಳ `ನೃತ್ಯ ನೀರಾಜನ-4' ನೃತ್ಯೋತ್ಸವವನ್ನು ಮಲ್ಲೇಶ್ವರದ ಸೇವಾಸದನದಲ್ಲಿ ಏರ್ಪಡಿಸಲಾಗಿತ್ತು. ಕೊನೆಯ ದಿನ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದ ಗುರು ಸತ್ಯನಾರಾಯಣರಾಜು ಅವರಿಗೆ `ಅನನ್ಯ' ಪುರಸ್ಕಾರ ನೀಡಿ ಗೌರವಿಸಲಾಯಿತು. 

ಮೇಲ್ಮಟ್ಟದ ಸಮೂಹ ಸಂಯೋಜನೆಗಳು
ನೃತ್ಯೋತ್ಸವದ ಆರಂಭಿಕ ನೃತ್ಯ ಕಾರ್ಯಕ್ರಮವನ್ನು ಗುರು ಸತ್ಯನಾರಾಯಣರಾಜು ಅವರ ಶಿಷ್ಯರು ನೆರವೇರಿಸಿದರು. `ಚತುರ್ ಗಾಮಿನಿ'  ಎಂಬ ಹೆಸರಿನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಅವರ ನಾಲ್ವರು ಶಿಷ್ಯೆಯರಾದ ಅದಿತಿ ಸದಾಶಿವ, ಗೌರಿ ಸಾಗರ್, ಪೃಥ್ವಿ ಶರ್ಮ ಮತ್ತು ಅಂಜು ನಾಯರ್ ಮತ್ತೊಮ್ಮೆ ತಮ್ಮ ಗುರುಗಳಿಗೆ ಹೆಮ್ಮೆ ಉಂಟುಮಾಡುವ ರೀತಿಯಲ್ಲಿ ಸರಸ್ವತಿಯನ್ನು ಕುರಿತಾದ ಕೃತಿಯನ್ನು (ಸಾರಮತಿ ಸರಸ್ವತಿ ವಾಣಿ) ಪ್ರಸ್ತುತ ಪಡಿಸಿದರು. `ಸರಸ್ವತಿ ನಮಸ್ತುಭ್ಯಂ' ಶ್ಲೋಕದ ಮುನ್ನುಡಿಯೊಂದಿಗೆ ವಿದ್ಯಾಧಿದೇವತೆಯ ವಿವಿಧ ರೂಪಗಳು ಮತ್ತು ಗುಣಗಳನ್ನು ಕಣ್ಣಿಗೆ ಕಟ್ಟುವಂತಹ ಪ್ರತಿಮಾ ವಿಲಾಸದಲ್ಲಿ ತೆರೆದಿಟ್ಟರು.

ಒಟ್ಟೊಟ್ಟಾಗಿ ಅವರು ಮೂಡಿಸಿದ ಭಂಗಿಗಳು ಕಲಾತ್ಮಕವಾಗಿದ್ದವು. ಹದಿಹರಯದ ಶಿಶಿರ್ ಕೃಷ್ಣನಾಗಿ, ನಿಖಿತ, ಪೃಥ್ವಿ ಮತ್ತು ಅಂಜು ಗೋಪಿಕೆಯರಾಗಿ ಚಿತ್ರಿಸಿದ ಕೃಷ್ಣ ಅಷ್ಟೋತ್ತರ ಶತನಾಮಾವಳಿಯನ್ನು ವರ್ಣ ರೂಪದಲ್ಲಿ ಸಾದರ ಪಡಿಸುತ್ತಿರುವುದು ನೃತ್ಯ ಪ್ರೇಮಿಗಳಿಂದ ಮನ್ನಣೆಗೆ ಪಾತ್ರವಾಗಿರುವಂತಹುದು. `ಗೋಪಗೋಪೀಶ್ವರೋ' (ರೀತಿಗೌಳ) ಎಂದು ಆರಂಭವಾಗುವ ರಚನೆಯನ್ನು ಆಕರ್ಷಕ ನೃತ್ತ, ನೃತ್ಯ ಮತ್ತು ಅಭಿನಯಗಳಿಂದ ಸಮೃದ್ಧಗೊಳಿಸಲಾಗಿತ್ತು. ಕೃಷ್ಣನ ಹೆಸರುಗಳಿಗೆ ತಕ್ಕಂತೆ ಅದರ ಕಥಾ ಭಾಗವನ್ನು ಅಭಿನಯಿಸಿದರು.

ಕುಶಲ ನರ್ತಕಿ
ಕುಶಲ ಭರತನಾಟ್ಯ ನರ್ತಕಿ ಅನುರಾಧಾ ವಿಕ್ರಾಂತ್ ಅವರ ಪ್ರದರ್ಶನ ಚೇತನಾಪೂರ್ಣವೂ ಓಜಸ್ಸಿನೊಂದಿಗೂ ಕೂಡಿ ರಂಜಿಸಿತು. ನೃತ್ತ ಮತ್ತು ನೃತ್ಯ ಹಾಗೂ ಭಾವ ವಾಹಕ ಅಭಿನಯದಿಂದ ಅವರ ನೃತ್ಯವು ಮನ ಗೆದ್ದಿತು. ಅವರ ಮುಖಿಜಗಳು ಮತ್ತು ಬೊಗಸೆ ಕಣ್ಣುಗಳು ಸಾರ್ಥಕವಾಗಿ ಚಲಿಸಿ ನೋಡುಗರನ್ನು ಸೆಳೆದವು. ಅವರು ವೇದಿಕೆಯನ್ನು ರೋಚಕ ಜಾಮಿತಿ ಮಾದರಿಗಳಿಂದ ತುಂಬಿದರು. ಕೃಷ್ಣನ ವಿಷಯ ವಸ್ತುವಿನ ರಾಗಮಾಲಿಕೆಯ ಕನ್ನಡ ವರ್ಣ( ನೀಲ ಮೇಘ ಶಾಮ)ವನ್ನು ಅವಲಂಬಿಸಿ ವಿರಹೋತ್ಕಂಠಿತ ನಾಯಕಿ ಹಾವ-ಭಾವಗಳನ್ನು ಬಿಡಿಸುವುದರಲ್ಲಿ ನರ್ತಕಿಯು ತಮ್ಮ ಸಿದ್ಧಹಸ್ತತೆಯನ್ನು ಪ್ರಕಟಗೊಳಿಸಿದರು. ತಾನದ ಹಿನ್ನೆಲೆಯಲ್ಲಿ ಅವರು ನೆರವೇರಿಸಿದ ನೃತ್ತ ಭಾಗ ರಂಜಿಸಿತು. ಸೂರ್ಯನಾರಾಯಣರಾವ್(ನಟುವಾಂಗ), ಬಾಲಸುಬ್ರಹ್ಮಣ್ಯಶರ್ಮ (ಗಾಯನ), ನರಸಿಂಹಮೂರ್ತಿ (ಕೊಳಲು) ಮತ್ತು ಗುರುಮೂರ್ತಿ (ಮೃದಂಗ) ಸಾಥ್ ನೀಡಿದರು.

ಚೊಚ್ಚಲ ಯಾಗ್ಯಸೇನಿ ನೃತ್ಯರೂಪಕ
ಮಹಾಭಾರತದ ಪ್ರಧಾನ ಪಾತ್ರಗಳಲ್ಲೊಂದಾದ ದ್ರೌಪದಿಯನ್ನು ಕುರಿತಾಗಿ ಬಹುಮಾಧ್ಯಮಗಳು ಮತ್ತು ಬಹುಪ್ರಕಾರಗಳಲ್ಲಿ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ. ಯಾಗ್ಯಸೇನಿ ಎಂಬುದು ಅವಳ ಮತ್ತೊಂದು ಹೆಸರು. ಸಿಂಗಪೂರ್ ನಿವಾಸಿ ಯುವ ಉತ್ಸಾಹಿ ನರ್ತಕಿ ಗಾಯತ್ರಿ ಶ್ರಿರಾಮ್ ದ್ರೌಪದಿಯ ಪಾತ್ರವನ್ನು ಪ್ರಧಾನವಾಗಿರಿಸಿ ನೃತ್ಯ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು. ಗುರು ಮೀನಲ್ ಪ್ರಭು (ಈ ಬಾರಿಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ವಿಜೇತರು; ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ಜಯರಾಮ್ (ಕೊಳಲು) ಮತ್ತು ಗುರುಮೂರ್ತಿ (ಮೃದಂಗ) ಸಹಕಾರದೊಂದಿಗೆ ಗಾಯತ್ರಿ ಅವರು ದ್ರೌಪದಿಯ ಕಥೆ-ವ್ಯಥೆಗಳನ್ನು ಪ್ರಭಾವಕಾರಿ ಯಾಗಿ ದೃಶ್ಯೀಕರಿಸಿದರು. ಕೃಷ್ಣನೊಡನೆ ಸಂವಾದ.

ಅವಳ ಭಾವನೆಗಳು, ತನ್ನ ಪತಿ ಪಂಚಪಾಂಡವರ ಗುಣ-ನಡತೆ ಹೇಳುವ ತನ್ನ ಉತ್ಕೃಷ್ಟ ಅಭಿನಯದ ಮೂಲಕ ತೋರುವ ನರ್ತಕಿಯ ಪ್ರತಿಭೆ-ಪರಿಣತಿಗಳು ಗಮನ ಸೆಳೆದವು.    ಅಗ್ನಿಜತಿಯೊಂದಿಗೆ ಪ್ರಾರಂಭಿಸಿ ಪವನ್‌ವರ್ಮ ಅವರ ಸಾನೆಟ್‌ಗಳನ್ನು ಉಪಯೋಗಿಸಿ ಅವರ ಏಕವ್ಯಕ್ತಿ ನೃತ್ಯ ರೂಪಕ ಕೃಷ್ಣ ಮತ್ತು ಯಾಗ್ಯಸೇನಿಯರಿಗೆ ಸಮರ್ಪಿತವಾದ ಮಂಗಳದ ಸಮಾಪ್ತಿಯನ್ನು ಹೊಂದಿತು.

ಮಿಂಚಿದ ನುರಿತ ನರ್ತಕ
ಅನನ್ಯ ಪುರಸ್ಕಾರವನ್ನು ಸ್ವೀಕರಿಸಿದ ನಂತರ ಭರತನಾಟ್ಯ ಕಲಾವಿದ ಗುರು ಸತ್ಯನಾರಾಯಣರಾಜು ಅವರ ಕಾರ್ಯಕ್ರಮದೊಂದಿಗೆ `ನೃತ್ಯ ನೀರಾಜನ-4'ಕ್ಕೆ ತೆರೆ ಬಿದ್ದಿತು. ಅವರ ಖಚಿತ ನೃತ್ಯ ರೇಖೆಗಳು, ಪಾತ್ರಗಳ ಚಿತ್ರ ಕಲ್ಪನೆ, ಪ್ರಸಂಗಗಳ ಸುಂದರ ಸ್ಫುರಣ, ಲಯ ಸಿದ್ಧಿಯ ನೃತ್ತ ಹಾಗೂ ಅದನ್ನು ಪ್ರತಿಬಿಂಬಿಸಿದ ಅಂಗ-ಉಪಾಂಗಗಳ ಸುಭಗ ಚಲನೆಗಳಿಂದ ಅಂದಿನ ಅವರ ಪ್ರಧಾನ ಆಯ್ಕೆಯಾಗಿದ್ದ ಅಷ್ಟರಾಗಮಾಲಿಕಾ ವರ್ಣ (ಸಾಮಿ ನಿನ್ನೆಕೋರಿ) ಮೆಚ್ಚುವಂತಾಯಿತು.

ADVERTISEMENT

ಅನೇಕ ರಸ ಸ್ಥಾನಗಳಿಗೆ ಆಗರವಾಗಿದ್ದ ಭದ್ರಾಚಲ ರಾಮದಾಸರ ಕೃತಿ `ಈ ತೀರುಗ' ವಿಷಯ-ಸೂತ್ರವನ್ನು ಅನುಸರಿಸಿ ಅಂಬಿಗ ಗುಹ, ಗಜೇಂದ್ರ ಮೋಕ್ಷ, ಶಬರೀ ಪ್ರಸಂಗ, ಕೃತಿಕಾರ ರಾಮದಾಸರ ಜೀವನ ವೃತ್ತದ ಪ್ರಮುಖ ಘಟನೆಗಳ ವರ್ಣನೆಗಳು ಶ್ರೇಷ್ಠ ಮಟ್ಟದ್ದಾಗಿದ್ದವು. ರಾಜು ಅವರ ಸೃಜನಕ್ರಿಯೆಯ ಪ್ರತಿರೂಪದಂತಿದ್ದ ಪ್ರದರ್ಶನದಲ್ಲಿ ಶಕುಂತಲಾ ಪ್ರಭಾತ್ (ನಟುವಾಂಗ), ಕಾರ್ತಿಕ್ ಹೆಬ್ಬಾರ್ (ಗಾಯನ), ನರಸಿಂಹಮೂರ್ತಿ (ಕೊಳಲು) ಮತ್ತು ಲಿಂಗರಾಜು (ಮೃದಂಗ) ಅವರ ಸಂಗೀತ ಸಹಕಾರ ಭಾವ ಮತ್ತು ರಸ ಪರಿಪೋಷಣೆಗೆ ಪೂರಕವಾಗಿತ್ತು. ಸೊಗಸಾದ ರತಿಪತಿಪ್ರಿಯ ರಾಗದ ತಿಲ್ಲಾನವನ್ನು ಮಂಡಿಸುವಾಗ ಪುರುಷ ನರ್ತನದ ಬೆಡಗು ಬೆಳಗಿತು. ಅದರಲ್ಲಿ ತುಂಬಿದ್ದ ರೇಚಿಕಗಳು, ಅಡವು ತೀರ್ಮಾನಗಳು ವಿಶೇಷ ಮುದ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.