ADVERTISEMENT

ಪೆನ್ಸಿಲ್‌ನಲ್ಲಿ ಅರಳಿದ ಶಿಲ್ಪಾಕೃತಿಗಳು

ಅಭಿಲಾಷ ಬಿ.ಸಿ.
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ಕನ್ನಡ ಸಂದೇಶದ ಪೆನ್ಸಿಲ್ ಕಲಾಕೃತಿ
ಕನ್ನಡ ಸಂದೇಶದ ಪೆನ್ಸಿಲ್ ಕಲಾಕೃತಿ   

ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಜನಮನ್ನಣೆ ಪಡೆದಿರುವ ಕಲೆಗಳು ನಿಧಾನವಾಗಿ ಭಾರತೀಯರ ಮನೆ, ಮನಗಳನ್ನೂ ಅಲಂಕರಿಸುತ್ತಿವೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿವೆ ಬಾಲಾಜಿ ಲೇಔಟ್‌ನ ನಿವಾಸಿ ಚೇತನ್ ಎಸ್‌.ಮೂರ್ತಿ ಅವರ ಅಪರೂಪದ ಪೆನ್ಸಿಲ್ ಶಿಲ್ಪಾಕೃತಿಗಳು.

ಯುರೋಪಿಯನ್‌ ರಾಷ್ಟ್ರಗಳಿಗೆ ಸೀಮಿತವಾಗಿರುವ ‘ಪೆನ್ಸಿಲ್ ಸ್ಕಲ್ಪ್‌ಲಿಂಗ್’ ಎಂಬ ಕಲೆಯನ್ನು ಚೇತನ್ ಮೈಗೂಡಿಸಿಕೊಂಡಿದ್ದಾರೆ. ಹಾಗೆಂದು ಮಾತ್ರಕ್ಕೆ ಸುಲಭವಾಗಿ ಕರಗತವಾಗಿ ಕಲೆ ಇದಲ್ಲ. ಅಪಾರ ತಾಳ್ಮೆ, ಅಮೂಲ್ಯ ಸಮಯವನ್ನು ಬೇಡುವ ಈ ಕಲೆಯಲ್ಲಿ ಅವರು ಪಳಗಿದ್ದು ಕ್ಲಾಸ್‌ರೂಂಗಳಲ್ಲಿಯೇ. ತರಗತಿಗಳ ಪಾಠ ಬೇಜಾರು ಎನಿಸಿದಾಗೆಲ್ಲಾ ಅವರು ಸಣ್ಣ ಚಾಕ್‌ಪೀಸ್‌ ತುಣುಕನ್ನು ಹಿಡಿದು ಬ್ಲೇಡ್‌ ಬಳಸಿ ಕೆತ್ತಲು ಆರಂಭಿಸಿದರು. ಎಸ್‌ಎಸ್‌ಎಲ್‌ಸಿವರೆಗೂ ಸೀಮೆಸುಣ್ಣಕ್ಕೆ ಸೀಮಿತವಾಗಿದ್ದ ಕಲೆ ನಂತರ ಪೆನ್ಸಿಲ್‌ಗೆ ಬಡ್ತಿ ಪಡೆದುಕೊಂಡಿತು.

ಸದ್ಯ ನಗರದ ‘ಎಸ್‌ಜೆಬಿಐಟಿ’ ಕಾಲೇಜಿನಲ್ಲಿ ತೃತೀಯ ವರ್ಷದ ಎಂಜಿನಿಯರಿಂಗ್ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಚೇತನ್‌ ಕಳೆದ 6 ವರ್ಷಗಳಿಂದ ನಿರಂತರವಾಗಿ ಪೆನ್ಸಿಲ್‌ ಶಿಲ್ಪಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಷ್ಯಾದ ಶ್ರೇಷ್ಠ ಪೆನ್ಸಿಲ್‌ ಶಿಲ್ಪಕಾರ ‘ಸಲಾವತ್ ಫಿದೈ’ ಅವರನ್ನು ತನ್ನ ಗುರು ಹಾಗೂ ಸ್ಫೂರ್ತಿ ಎಂದು ಪರಿಗಣಿಸಿರುವ ಚೇತನ್‌, ‘ಗೂಗಲ್‌’ ಗುರುವಿನ ಮುಖೇನ ಫಿದೈನ್ನು ಅನುಕರಿಸುತ್ತಿದ್ದಾರೆ.

ADVERTISEMENT

ಭಾರತದ ಮಟ್ಟಿಗೆ ಅಪರಿಚಿತವಾಗಿರುವ ಈ ಕಲೆಗೆ ಸಾಕಷ್ಟು ಸವಾಲುಗಳಿವೆ. ಅತ್ಯಂತ ಸೂಕ್ಷ್ಮ ವಸ್ತುವಿನಿಂದ ಅರಳುವ ಈ ಕಲಾಕೃತಿ ತಯಾರಿಸಲು ಅಪಾರ ತಾಳ್ಮೆ ಬೇಕು. ಏಕಾಗ್ರತೆ ಈ ಕಲೆಯ ಜೀವಾಳ. ಅದಕ್ಕಾಗಿಯೇ ನಿತ್ಯ ಯೋಗ ಧ್ಯಾನದ ಮೊರೆಹೋಗಿರುವ ಚೇತನ್, ಉಸಿರಾಟ ನಿಯಂತ್ರಣವನ್ನು ಸಹ ಕಲಿತಿದ್ದಾರೆ.

‘ಪೆನ್ಸಿಲ್‌ನ ಹೊರಭಾಗವನ್ನು ಕೆತ್ತಿ ತೆಳುವಾದ ‘ಲೆಡ್‌’ಗೆ ಆಕಾರವನ್ನು ನೀಡಬೇಕಾದ ಕಾರಣ, ಶಿಲ್ಪಾಕೃತಿ ರಚನೆಯ ಕೊನೆಯ ಹಂತದಲ್ಲಿ ಉಸಿರನ್ನು ಬಿಗಿಹಿಡಿಯಬೇಕು. ಸ್ವಲ್ಪ ಜೋರಾಗಿ ಉಸಿರಾಡಿದರೂ ಕಲಾಕೃತಿ ಮುರಿಯುವ ಸಾಧ್ಯತೆ ಇರುತ್ತದೆ’ ಎನ್ನುವುದು ಚೇತನ್ ಅನುಭವದ ಮಾತು. ಒಂದು ಶಿಲ್ಪಾಕೃತಿ ರಚನೆಗೆ ಕನಿಷ್ಠ 8 ರಿಂದ 12 ಗಂಟೆ ಬೇಕಾಗುತ್ತದೆ.

ಶಿಲ್ಪಾಕೃತಿ ರಚನೆಗೆ ‘ಡೀಟೈಲ್ ನೀಫ್‌’ (ಮೊನಚಾದ ಚಾಕು) ಮತ್ತು ಪೆನ್ಸಿಲ್‌ ಇದ್ದರೆ ಸಾಕು. ವಿದೇಶಗಳಲ್ಲಿ ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್) ಬಳಸುತ್ತಾರೆ.

ಚೇತನ್ ಈಗ ಬರಿಗಣ್ಣಿನಿಂದಲೇ ಶಿಲ್ಪಾಕೃತಿ ರಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ಷ್ಮದರ್ಶಕಗಳನ್ನು ಬಳಸಿ ಇನ್ನೂ ಸೂಕ್ಷ್ಮ ಶಿಲ್ಪಗಳನ್ನು ರಚಿಸುವ ಗುರಿ ಚೇತನ್‌ ಅವರದು.

‘ಕಲಾಕೃತಿಗಳನ್ನು ಕೆತ್ತುವಾಗ ಮರೆಯದೆ ಕೈಗವಸು ಧರಿಸಬೇಕು. ಇಲ್ಲವಾದಲ್ಲಿ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ’ ಎನ್ನುವುದು ಚೇತನ್ ಹೇಳುವ ಎಚ್ಚರಿಕೆ. ಸದ್ಯಕ್ಕೆ ‘ಹವ್ಯಾಸ’ ಎನ್ನುವ ಫೇಸ್‌ಬುಕ್‌ ಗ್ರೂಪ್‌ ಮೂಲಕ ತಮ್ಮ ಕಲಾಕೃತಿಗಳ ಪ್ರಚಾರವನ್ನು ಚೇತನ್ ಮಾಡುತ್ತಿದ್ದಾರೆ. ಇದೇ ಸಮೂಹದ ಸಹಭಾಗಿತ್ವದಲ್ಲಿ ಕಲೆಯ ಬಗ್ಗೆ  ಆಸಕ್ತಿ ಇರುವವರಿಗೆ ತರಬೇತಿಯನ್ನೂ ನೀಡುತ್ತಾರೆ.

ನೀರು ಸಂರಕ್ಷಿಸಿ ಎಂಬ ಸಂದೇಶ ಸಾರುವ ನಲ್ಲಿ, ಮುಳುಗುತ್ತಿರುವ ಟೈಟಾನಿಕ್ ಹಡಗು, ಕರ್ನಾಟಕ ರಾಜ್ಯೋತ್ಸವ, ಪ್ರೇಮಿಗಳ ದಿನ, ಮಹಿಳಾ ದಿನಾಚರಣೆ ಹೀಗೆ ವಿವಿಧ ದಿನಗಳಿಗೆ ಹೊಂದಿಕೆಯಾಗುವ ಶಿಲ್ಪಾಕೃತಿಗಳನ್ನು ಕೆತ್ತಿರುವ ಅವರಿಗೆ ಈ ಕಲೆಯಲ್ಲೇ ನೂತನವಾದುದನ್ನು ಸಾಧಿಸುವ ಹಂಬಲ.

ಪೆನ್ಸಿಲ್‌ ಶಿಲ್ಪಾಕೃತಿಗಳ ರಚನೆ ಎಷ್ಟು ಕಷ್ಟವೋ ಅಷ್ಟೇ ನಾಜೂಕಾಗಿ ಈ ಶಿಲ್ಪಾಕೃತಿಗಳನ್ನು ಕಾಪಿಡಬೇಕು. ಅದಕ್ಕೆಂದೇ ‘ಮೆಸೇಜ್ ಬಾಟೆಲ್‌’ಗಳಿವೆ. ಪಾರದರ್ಶಕವಾದ ಈ ಸೀಸಗಳಲ್ಲಿ ಶಿಲ್ಪಾಕೃತಿಗಳನ್ನು ಇಟ್ಟರೆ ಅವುಗಳ ಅಂದ ಇಮ್ಮಡಿಯಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪೆನ್ಸಿಲ್‌ ಕಲಾಕೃತಿಯೊಂದರ ಕನಿಷ್ಠ ಬೆಲೆ ₹40,000 ಇದೆ. ಭಾರತದಲ್ಲಿ ಸದ್ಯ ಉತ್ತಮ ಮಾರುಕಟ್ಟೆ ಇಲ್ಲ. ಹಾಗಾಗಿ ಚೇತನ್ ತಮ್ಮ ಆಪ್ತವಲಯಕ್ಕಷ್ಟೇ ಮಾರಾಟಮಾಡುತ್ತಿದ್ದಾರೆ.

ಚೇತನ್‌ ಸಂಪರ್ಕಕ್ಕೆ ಮೊ: 87623 57229, ಫೇಸ್‌ಬುಕ್‌: facebook.com/murthychetan

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.