ADVERTISEMENT

ಪ್ರನಾಳ ಶಿಶುಗಳ ಹರ್ಷ

ಹೇಮಾ ವೆಂಕಟ್
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ನಗರದ ಕ್ಯಾಪಿಟಲ್‌ ಹೊಟೇಲ್‌ ಸಭಾಂಗಣ ಪುಟ್ಟಮಕ್ಕಳ ನಗು, ಅಳು, ಕಿರುಚಾಟದಿಂದ ತುಂಬಿಹೋಗಿತ್ತು. ಜೊತೆಗೆ ಮಕ್ಕಳ, ಹೆತ್ತವರ ಸಂಭ್ರಮವೂ ಮನೆಮಾಡಿತ್ತು. ಅವರ ಸಂಭ್ರಮಕ್ಕೆ ಕಾರಣರಾದ ತಂಡದ ಸದಸ್ಯರೂ ಸಂಭ್ರಮದಿಂದ ಓಡಾಡುತ್ತಿದ್ದರು. ಇದು ನಗರದ ಗುಣಶೀಲ ಐವಿಎಫ್ ಸೆಂಟರ್‌ನ 25ನೇ ವರ್ಷಾಚರಣೆಗಾಗಿ ಹಮ್ಮಿಕೊಂಡಿದ್ದ ಪುಟ್ಟ ಕಾರ್ಯಕ್ರಮ.

ಇಷ್ಟೇ ಆದರೆ ಅದರಲ್ಲೇನೂ ವಿಶೇಷವೆನಿಸದು. ಆದರೆ ದಕ್ಷಿಣ ಭಾರತದ ಮೊದಲ ಪ್ರನಾಳ ಶಿಶು ಜನಿಸಿದ ಆಸ್ಪತ್ರೆ ಎಂಬುದು ಅದರ ಹೆಚ್ಚುಗಾರಿಕೆ. ಅಲ್ಲಿಂದೀಚೆ 6000ಕ್ಕೂ ಹೆಚ್ಚು ಪ್ರನಾಳ ಶಿಶುಗಳು ಇಲ್ಲಿ ಜನಿಸಿವೆ. ಹೀಗೆ ಇಲ್ಲಿ ಜನ್ಮ ಪಡೆದ ಎರಡು ಮೂರು ವರ್ಷದೊಳಗಿನ ಹತ್ತಾರು ಮಕ್ಕಳು, ಮಕ್ಕಳ ಹೆತ್ತವರು, ಅಜ್ಜ–ಅಜ್ಜಿ ಅಲ್ಲಿ ನೆರೆದಿದ್ದರು.

‘ಆಸ್ಪತ್ರೆಯ ಸಾಧನೆ ನಿಮ್ಮ ಮುಂದಿದೆ’ ಎಂದಷ್ಟೇ ಹೇಳಿ ಚುಟುಕಾಗಿ ಸಂಭ್ರಮ ಹಂಚಿಕೊಂಡರು ತಜ್ಞ ವೈದ್ಯರು. ಇಪ್ಪತ್ತೈದು ವರ್ಷಗಳ ಹಿಂದೆ ಡಾ. ಸುಲೋಚನಾ ಗುಣಶೀಲ ಅವರ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಹಾಸ್ಪಿಟಲ್‌ನ ಭಾಗವಾಗಿ ಐವಿಎಫ್‌ (ಇನ್‌ವಿಟ್ರೋ ಫರ್ಟಿಲೈಸೇಷನ್) ಸೆಂಟರ್, ಪ್ರನಾಳ ಶಿಶು ಕೇಂದ್ರ ಆರಂಭಗೊಂಡಿತ್ತು. ಮೊದಲ ಪ್ರನಾಳ ಶಿಶು ಹೆಣ್ಣುಮಗುವಾಗಿತ್ತು. ಆಕೆಗೀಗ 25 ವರ್ಷ. ಆಕೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಡಾ. ಸುಲೋಚನಾ ಅವರ ನಿಧನಾನಂತರ ಆಸ್ಪತ್ರೆಯ ಜವಾಬ್ದಾರಿ ನಿರ್ವಹಿಸುತ್ತಿರುವವರು ಅವರ ಪುತ್ರಿ ಡಾ.ದೇವಿಕಾ ಗುಣಶೀಲ ಮತ್ತು ಅವರ ಪತಿ ಡಾ.ರಾಜಶೇಖರ ನಾಯಕ್.

‘ಗುಣಶೀಲ ಆಸ್ಪತ್ರೆ ಈಗ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ಶೇ 52ರಷ್ಟು ಬಂಜೆತನ ನಿವಾರಣೆಯಾಗಿದೆ. ಮೂರು, ನಾಲ್ಕನೇ ಪ್ರಯತ್ನದಲ್ಲಿ ಮಕ್ಕಳನ್ನು ಪಡೆದ ಕೆಲವರಿದ್ದಾರೆ. ಆಸ್ಪತ್ರೆ 25 ವರ್ಷ ಪೂರೈಸಿದ ನೆನಪಿನಲ್ಲಿ 25 ಬಡ ದಂಪತಿಗೆ ಉಚಿತವಾಗಿ ಐವಿಎಫ್‌ ಚಿಕಿತ್ಸೆ ನೀಡಲಾಗುವುದು’ ಎಂದು ಡಾ. ದೇವಿಕಾ ಹೇಳಿದರು.

ಪೋಷಕರ ಹರ್ಷ
ಮಕ್ಕಳಿಲ್ಲ ಎಂದು ಹತ್ತಾರು ವರ್ಷ ಕೊರಗಿದ ಅನೇಕರು ಗುಣಶೀಲ ಆಸ್ಪತ್ರೆಯ ಚಿಕಿತ್ಸೆಯಿಂದ ಮಕ್ಕಳ ಭಾಗ್ಯ ಪಡೆದಿದ್ದಾರೆ. ಅಜ್ಜಿ–ಅಜ್ಜಂದಿರು ಈಗಷ್ಟೇ ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಸುಖ ಕಾಣುತ್ತಿದ್ದಾರೆ. ಅವರ ಮುಖದಲ್ಲಿ ಅಪರಿಮಿತ ಖುಷಿ ಎದ್ದು ಕಾಣುತ್ತಿತ್ತು. ಟೆಲಿಕಾಂ ಇಲಾಖೆಯ ನಿವೃತ್ತ ಎಂಜಿನಿಯರ್‌ ಕಪ್ಪಣ್ಣ ಮತ್ತು ಮಲ್ಲಿಕಾಂಬಾ ದಂಪತಿ ಮೊಮ್ಮಗನನ್ನು ಒಂದು ಕ್ಷಣವೂ ನೆಲಕ್ಕಿಳಿಸದೇ ಮುದ್ದಾಡುತ್ತಿದ್ದರು.

ಆರು ತಿಂಗಳ ಮುದ್ದಾದ ಅವಳಿ ಹೆಣ್ಣು ಮಕ್ಕಳ ತಾಯಿ ಸ್ಫೂರ್ತಿ ಪ್ರಸನ್ನ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕಾರ್ಯಕ್ರಮಕ್ಕೆ ಬಂದು ತಮ್ಮ ಅನಿಸಿಕೆ ಹಂಚಿಕೊಂಡರು. ಐ.ಟಿ. ಉದ್ಯೋಗಿ ಪ್ರಸನ್ನ ಅವರ ಕೈ ಹಿಡಿದು ಏಳು ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಗುಣಶೀಲದಲ್ಲಿ ಮೊದಲ ಪ್ರಯತ್ನದಲ್ಲಿಯೇ, ಎರಡು ಮಕ್ಕಳನ್ನು ಪಡೆದ ಸಂಭ್ರಮ ಅವರ ಮುಖದಲ್ಲಿತ್ತು.

ಚಿಕ್ಕಬಾಣಾವರದ ಮಮತಾ ಮತ್ತು ಸ್ವಾಮಿ ಅವರಿಗೆ ಎಂಟು ವರ್ಷದ ನಂತರ ಅವಳಿ ಗಂಡು ಮಕ್ಕಳನ್ನು ಹೆತ್ತ ಸಂಭ್ರಮ. ತರುಣ್ ಮತ್ತು ತನಿಷ್‌ಗೆ ಈಗ ಒಂದು ವರ್ಷ ಹತ್ತು ತಿಂಗಳು. ಅವರ ತುಂಟಾಟದಿಂದ ಕಾರ್ಯಕ್ರಮದ ವೇದಿಕೆ ಕಳೆಗಟ್ಟಿತ್ತು.ಎರಡು ವರ್ಷ ಐದು ತಿಂಗಳ ನೇಹಾ, ಅಪ್ಪ–ಅಮ್ಮನನ್ನು ಮರೆತು ಪೆನ್ನು ಹಿಡಿದು ಪುಸ್ತಕದ ತುಂಬಾ ಗೀಚುತ್ತಿದ್ದಳು. ಪಕ್ಕದಲ್ಲಿ ಬಂದ ಆಕೆಗಿಂತ ದೊಡ್ಡ ಹುಡುಗನನ್ನು ‘ಪಾಪು ಬಂತು ಎಂದು ಹತ್ತಿರ ಹೋಗಿ ಮುತ್ತಿಡುತ್ತಿದ್ದಳು. ಹತ್ತು ವರ್ಷದ ನಂತರ ಹುಟ್ಟಿದ ಮಗಳು ಅಕ್ಕಪಕ್ಕದವರ ಮೂದಲಿಕೆಗೆ ಉತ್ತರವಾಗಿದ್ದಾಳೆ’ ಎನ್ನುತ್ತಾ ಆಕೆಯ ಅಪ್ಪ ನಿಟ್ಟುಸಿರುಬಿಟ್ಟರು.

ADVERTISEMENT

ಇಳಿವಯಸ್ಸಿನಲ್ಲಿ ಖುಷಿಯ ದಿನ
ಮಗನಿಗೆ ಮದುವೆಯಾಗಿ ಏಳು ವರ್ಷವಾದರೂ ಮಕ್ಕಳಾಗಿರಲಿಲ್ಲ. ಮಗನಿಗೆ ಚಿಕ್ಕವನಿದ್ದಾಗ ಮೂತ್ರಕೋಶದ ತೊಂದರೆಗೆ ಸರ್ಜರಿಯಾಗಿತ್ತು. ಇದೇ ಕಾರಣದಿಂದ ಸ್ವಲ್ಪ ತೊಂದರೆಯಾಗಿದೆ ಎಂಬ ಅನುಮಾನ ನಮ್ಮಲ್ಲಿ ಇದ್ದೇ ಇತ್ತು. ಗುಣಶೀಲದಲ್ಲಿ ಪ್ರನಾಳ ಶಿಶು ಚಿಕಿತ್ಸೆ ಪಡೆಯುವ ಬಗ್ಗೆ ನಾನೇ ಮಗನಿಗೆ ಸಲಹೆ ನೀಡಿದ್ದೆ.

ಈಗ 19 ತಿಂಗಳ ಮೊಮ್ಮಗ ಋಕ್ವಿತ್‌ ನಮ್ಮೆಲ್ಲ ನೋವು ದೂರ ಮಾಡಿದ್ದಾನೆ. ಎಲ್ಲರೂ ಮೂರು ವರ್ಷದ ಮಗು ಎಂದು ತಿಳಿದಿದ್ದಾರೆ. ಅಷ್ಟು ಮಾತು, ಆಟ, ತುಂಟಾಟ ಅವನದು. ಆರೋಗ್ಯವಂತ ಮತ್ತು ಬುದ್ಧಿವಂತ ಮಗು. ಇವನ ಜೊತೆಗಿದ್ದರೆ ಸಮಯ ಕಳೆಯುವುದೇ ತಿಳಿಯದು.
–ಕಪ್ಪಣ್ಣ, ನಿವೃತ್ತ ಎಂಜಿನಿಯರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.