ADVERTISEMENT

ಪ್ರೀತಿ ದುಬಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ನನ್ನ ಪ್ರೀತಿ, ಮಮತೆ ನೇರವಾಗಿ ಹೃದಯದಿಂದ,
ಮಾತುಗಳಲ್ಲಿ ಅಲ್ಲ,
ನನ್ನ ಕೋಪ-ತಾಪ ಮಾತುಗಳಲ್ಲಿ ಮಾತ್ರ,
ಹೃದಯದಿಂದಲ್ಲ...

ಪ್ರೀತಿ ಎಂದರೆ ಕೊಡು-ತಗೋ ಅಲ್ಲ,
ಬರೀ ಒಲವಿನ ಮಾತುಕತೆಯು ಅಲ್ಲ,
ಪ್ರೀತಿ ಎಂದರೆ ಪರಸ್ಪರ ಅರಿಯುವುದು,
ನೆಮ್ಮದಿಯಿಂದ ದೀರ್ಘಕಾಲ ಬಾಳುವುದು...

ಹದಿಹರೆಯದ ಯುವಕರಲ್ಲಿ ಸಂಚಲನ ಮೂಡಿಸುವ ದಿನ ಪ್ರೇಮಿಗಳ ದಿನ. ಒಂದು ವರ್ಷದಿಂದ ತನ್ನ ನಲ್ಮೆಯ ಪ್ರೇಮಿ/ ಪ್ರೇಯಸಿಗೆ ತನ್ನ ಮನದಾಳದ ಭಾವನೆಯನ್ನು ತಿಳಿಸಲು ಕಾತುರದಿಂದ ಈ ದಿನಕ್ಕಾಗಿ ಎಷ್ಟೋ ಹದಿ ಹರೆಯದ ಯುವಜನರು ಕಾಯುತ್ತಿರುತ್ತಾರೆ.

ಪ್ರೇಮಿಗಳ ದಿನದ  ಹಿನ್ನೆಲೆಯಲ್ಲಿ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹೃದಯದಾಕಾರದ ಚಾಕೊಲೇಟ್, ಕೇಕ್, ಕೆಂಗುಲಾಬಿ  ಖರೀದಿ ಬಿರುಸಿನಿಂದ ನಡೆಯುತ್ತಿದೆ. ಎಂ.ಜಿ. ಮತ್ತು ಬ್ರಿಗೆಡ್ ರಸ್ತೆಗಳಲ್ಲೂ ಯುವಜನರನ್ನು ಸೆಳೆಯಲು ಹೃದಯದಾಕಾರದ ಚಾಕೊಲೇಟ್, ಕೇಕ್, ದಿಂಬು, ಗೊಂಬೆಗಳ ಮಾರಾಟ ಬಿರುಸಾಗಿದೆ.

ಕೆಂಪು ಗುಲಾಬಿ ಬೆಲೆ ಹೆಚ್ಚಳ

`ಈ ಬಾರಿ ಮಾರುಕಟ್ಟೆಗೆ ಹಲವು ಬಗೆಯ ವಿಶಿಷ್ಟ ರೂಪದ ಗುಲಾಬಿಗಳಿಂದ ಮಾಡಿದ ಹೃದಯದಾಕಾರದ ಹೂಗುಚ್ಛಗಳು ಬಂದಿವೆ. ಸುಮಾರು ಸಾವಿರ ಗುಲಾಬಿಗಳಿಂದ ಮಾಡಿದ ಹೃದಯದಾಕಾರದ ಹೂಗುಚ್ಛ ಈ ಬಾರಿಯ ವಿಶೇಷ. ಈ ಬಾರಿ 400 ಹೂಗುಚ್ಛಗಳನ್ನು ಈಗಾಗಲೇ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ .
 
ಕನಿಷ್ಠ 20 ರೂಪಾಯಿಂದ ಗರಿಷ್ಠ 5,000 ರೂಪಾಯಿ ಮೌಲ್ಯದ ಗುಲಾಬಿ ಹೂಗುಚ್ಛಗಳು ಅಂಗಡಿಗಳಲ್ಲಿ ದೊರೆಯಲಿದೆ~ ಎನ್ನುತ್ತಾರೆ ಬ್ರಿಗೇಡ್ ರಸ್ತೆಯ ಹೂವಿನ ವ್ಯಾಪಾರಿ ಅರುಣ್.

`ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಗುಲಾಬಿ ಹೂವಿನ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಮಂಗಳವಾರ ಪ್ರೇಮಿಗಳ ದಿನವಿದ್ದು ಇಲ್ಲಿಯವರೆಗೆ ಮಾರಾಟ ಸರಿಯಾಗಿ ನಡೆದಿಲ್ಲ, ಹಿಂದಿನ ವರ್ಷ ನಾವು ಹೂಡಿದ್ದ ಬಂಡವಾಳ ಬೇಗ ವಾಪಸ್ ಬಂದಿತ್ತು. ಆದರೆ ಈ ಬಾರಿ ಅದು ಕಷ್ಟ ಎನಿಸುತ್ತದೆ~ ಎಂಬುದು ಇದೇ ರಸ್ತೆಯ ಹೂವಿನ ವ್ಯಾಪಾರಿ ಸಂತೋಷ ಅವರ ಅಭಿಪ್ರಾಯ.

ಚಾಕೊಲೇಟ್, ಕೇಕ್ ಬೆಲೆ ಗಗನಕ್ಕೆ..

ಈ ಬಾರಿ ಪ್ರೇಮಿಗಳ ದಿನದ ಪ್ರಯುಕ್ತ ಚಾಕೊಲೇಟ್ ಬೆಲೆ ಗಗನಕ್ಕೇರಿದೆ. ಮುಖ್ಯವಾಗಿ ಹೃದಯ ಆಕಾರದ ಒಂದು ಚಾಕೊಲೇಟ್ ಬೆಲೆ 150ರಿಂದ 600ರೂ.ವರೆಗೆ ಇದೆ.

ಕೇಕ್‌ಗಳು ಕೂಡ ವಿವಿಧ ಬೆಲೆಗಳಲ್ಲಿ, ಮುಖ್ಯವಾಗಿ 200ರಿಂದ 2000 ಸಾವಿರ ರೂಪಾಯಿವರೆಗೆ ಸಿಗಲಿದೆ ಎನ್ನುತ್ತಾರೆ ಸ್ವೀಟ್ ಚಾರಿಟೀಸ್ ಉದ್ಯೋಗಿ ನೀಲಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.