ADVERTISEMENT

ಫಲಿತಾಂಶದ ಗೀಟು ಕಾಲೇಜುಗಳ ಗೇಟು!

ಇ.ಎಸ್.ಸುಧೀಂದ್ರ ಪ್ರಸಾದ್
Published 12 ಮೇ 2014, 19:30 IST
Last Updated 12 ಮೇ 2014, 19:30 IST
ಮಲ್ಲೇಶ್ವರದ ಎಂಇಎಸ್‌ ಕಾಲೇಜಿನ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳು
ಮಲ್ಲೇಶ್ವರದ ಎಂಇಎಸ್‌ ಕಾಲೇಜಿನ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳು   

ವಿದ್ಯಾರ್ಥಿ ಜೀವನದ ಎರಡು ಮಹತ್ವದ ಘಟ್ಟಗಳೆಂದರೆ ಎಸ್ಸೆಸ್ಸೆಲ್ಸಿ, ಪಿಯುಸಿ. ಪಿಯುಸಿ ಫಲಿತಾಂಶ ಬಂದು ವಾರ ಮುಗಿಯುವುದರೊಳಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿದೆ. ಸೋಮವಾರ ಮಧ್ಯಾಹ್ನ ಫಲಿತಾಂಶ ಬಂದ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ಎದುರು ಪಿಯುಸಿ ಕಾಲೇಜು ಸೇರಲು ಅರ್ಜಿಗಾಗಿ ವಿದ್ಯಾರ್ಥಿಗಳ ಹಾಗೂ ಪೋಷಕರ ದಂಡು ಜಮಾಯಿಸಿತ್ತು.

ಬೆಂಗಳೂರಿನಲ್ಲಿ ಸಾಕಷ್ಟು ಪದವಿ ಪೂರ್ವ ಕಾಲೇಜುಗಳಿವೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕೆಲವು ಪ್ರತಿಷ್ಠಿತ ಕಾಲೇಜುಗಳ ಮೇಲೆಯೇ ಕಣ್ಣಿಡುತ್ತಾರೆ. ಇಂಥ ಪ್ರತಿಷ್ಠಿತ ಸಂಸ್ಥೆಗಳ ಪಟ್ಟಿಗೆ ಹೊಸ ಕಾಲೇಜುಗಳು ವರ್ಷ ವರ್ಷವೂ ಸೇರ್ಪಡೆಯಾಗುತ್ತಿದ್ದರೂ, ಕೆಲವು ಹಳೆಯ ಕಾಲೇಜುಗಳಿಗೆ ಮುಗಿಬೀಳುವವರ ಸಂಖ್ಯೆ ಮಾತ್ರ ಕರಗಿಲ್ಲ.

ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ಎಂಇಎಸ್‌ ಕಾಲೇಜಿನಲ್ಲಿ ಪದವಿ ಕಾಲೇಜಿಗೆ ಸೇರಲು ಅರ್ಜಿಗಾಗಿ ವಿದ್ಯಾರ್ಥಿಗಳ ದೊಡ್ಡ ಸಾಲು ನಿಂತಿತ್ತು. ಮತ್ತೊಂದೆಡೆ ಮಧ್ಯಾಹ್ನ 12.30ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ತಕ್ಷಣವೇ ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಆ ಕಾಲೇಜಿಗೆ ಎಡತಾಕತೊಡಗಿದರು.  ರಾಜಾಜಿನಗರದ ಎಸ್‌. ನಿಜಲಿಂಗಪ್ಪ ಕಾಲೇಜು, ನಾಗರಬಾವಿಯ ಕೆಎಲ್‌ಇ ಸ್ವತಂತ್ರ ಕಾಲೇಜು, ವಿಜಯ, ಜೈನ್‌ ಕಾಲೇಜುಗಳಲ್ಲಿ ಅರ್ಜಿ ಆಕಾಂಕ್ಷಿಗಳ ಭರಾಟೆ ಇತ್ತು.

ದ್ವಿತೀಯ ಪಿಯುಸಿ ಫಲಿತಾಂಶ ಮುಂಚೆಯೇ ಬಂದಿದ್ದರಿಂದ ಬಹಳಷ್ಟು ಕಾಲೇಜುಗಳು ತಮ್ಮಲ್ಲಿ ವ್ಯಾಸಂಗ ಮಾಡಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಭಾವಚಿತ್ರದೊಂದಿಗೆ ತಮ್ಮ ಸಾಧನೆಯ ಫ್ಲೆಕ್ಸ್‌ಗಳನ್ನು ಕಾಲೇಜಿನ ಮುಂಭಾಗದಲ್ಲಿ ತೂಗುಹಾಕಿದ್ದವು. ಕೆಲವು ಕಾಲೇಜುಗಳು ಮೊದಲೇ ಅರ್ಜಿ ನೀಡಲು ಆರಂಭಿಸಿದ್ದರೂ, ಬಹುತೇಕ ಕಾಲೇಜುಗಳು ಇಂದಿನಿಂದ ಅರ್ಜಿ ನೀಡುವುದಾಗಿ ತಿಳಿಸಿದ್ದವು.

ಶೇ 94ರಷ್ಟು ಅಂಕಗಳಿಸಿದ್ದ ಮಗಳಿಗಾಗಿ ಪಿಯುಸಿ ಪ್ರವೇಶ ಪಡೆಯಲು ಬಂದಿದ್ದ ನಾಗರಾಜ್‌ ಅವರ ಮೊಗದಲ್ಲಿ ಸಂತಸದ ಹೊನಲಿತ್ತು. ನಂದಿನಿ ಬೂತ್‌ ಹೊಂದಿರುವ ಹಾಗೂ ರೇಸ್‌ಕೋರ್ಸ್‌ನಲ್ಲಿ ದುಡಿಯುತ್ತಿರುವ ನಾಗರಾಜ್‌ ಅವರಿಗೆ ತಮ್ಮ ಮಗಳು ಎಂಇಎಸ್‌ ಕಾಲೇಜಿನಲ್ಲಿ ಓದಬೇಕೆಂಬ ಆಸೆಯಂತೆ. ‘ನನ್ನ ಸಂಬಂಧಿಗಳ ಮಕ್ಕಳು ಇಲ್ಲಿಯೇ ಪಿಯುಸಿ ಮುಗಿಸಿದ್ದಾರೆ. ಬಹಳ ವರ್ಷಗಳಿಂದ ಎಂಇಎಸ್‌ ಕಾಲೇಜು ಪ್ರಸಿದ್ಧಿ ಪಡೆದಿದೆ. ಇಲ್ಲಿ ಓದುವ ಮಕ್ಕಳು ಹೆಚ್ಚು ಅಂಕ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆಂಬ ನಂಬಿಕೆ.

ಹೀಗಾಗಿ ನನ್ನ ಮಗಳಿಗೂ ವಿಜ್ಞಾನ ವಿಷಯದಲ್ಲಿ ಪಿಯುಸಿ ಕೊಡಿಸಬೇಕೆಂಬ ಆಸೆ ಇದೆ. ಅದಕ್ಕಾಗಿ ಅರ್ಜಿ ಹಾಕಲು ಬಂದಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ಪ್ರತಿಷ್ಠಿತ ಕಾಲೇಜುಗಳ ಶೇ 90ರ ಮೋಹ
ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೇ ಸೀಟು ನೀಡಿ, ಅವರನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ‘ಮಹದಾಸೆ’ ಹೊಂದಿರುವ ಕಾಲೇಜುಗಳು ತಮ್ಮಲ್ಲಿ ಪಿಯುಸಿಗೆ ದಾಖಲಾಗುವ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿಯಲ್ಲಿ ಗಳಿಸಿದ ಕನಿಷ್ಠ ಅಂಕ ಎಷ್ಟಿರಬೇಕು ಎನ್ನುವ ಮಿತಿಯನ್ನು ನಿಗದಿಪಡಿಸಿವೆ.

ಅಂಕ ಎಷ್ಟು ಎಂದು ಕೇಳಿಯೇ ಅರ್ಜಿ ನೀಡುವ ಕಾಲೇಜುಗಳ ಸಂಖ್ಯೆ ದೊಡ್ಡದಿದೆ. ನಾಗರಬಾವಿ ಬಿಡಿಎ ವಾಣಿಜ್ಯ ಸಂಕೀರ್ಣದ ಬಳಿ ಇರುವ ಕೆಎಲ್‌ಇ ಸ್ವತಂತ್ರ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಮಾತ್ರ ವಿಜ್ಞಾನ ವಿಷಯಕ್ಕೆ ಅರ್ಜಿ ಹಾಕಬಹುದು.

ವಾಣಿಜ್ಯ ವಿಷಯಗಳನ್ನು ಆರಿಸಿಕೊಂಡು ಪಿಯುಸಿ ಸೇರಬಯಸುವವರು ಎಸ್ಸೆಸ್ಸೆಲ್ಸಿಯಲ್ಲಿ
ಶೇ 70ಕ್ಕೂ ಅಧಿಕ ಅಂಕ ಗಳಿಸಿರಬಬೇಕಾದದ್ದು ಕಡ್ಡಾಯ ಎಂದು ಅಲ್ಲಿನ ಕಚೇರಿ ಸಹಾಯಕರು ತಿಳಿಸಿದರು. ಎಂಇಎಸ್‌ ಹಾಗೂ ಎಸ್‌.ನಿಜಲಿಂಗಪ್ ಕಾಲೇಜಿನಲ್ಲೂ ಶೇ 90ಕ್ಕೂ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ.

ಪಿಯುಸಿ ಜತೆಗೆ ಸಾಮಾನ್ಯ ಪರೀಕ್ಷೆಯ ಪ್ಯಾಕೇಜ್
ಪಿಯುಸಿ ವಿಜ್ಞಾನ ವಿಷಯಕ್ಕೆ ದಾಖಲು ಮಾಡಿಕೊಳ್ಳುವುದರ ಜತೆಗೆ ಆಯಾ ವಿದ್ಯಾರ್ಥಿಯ ಆಸಕ್ತಿಗೆ ತಕ್ಕಂತೆ ಸಿಇಟಿ, ಐಐಟಿ ಹಾಗೂ ವೈದ್ಯಕೀಯ ಶಿಕ್ಷಣದ ತರಬೇತಿಗೂ ದಾಖಲು ಮಾಡಿಕೊಳ್ಳುವ ಹೊಸ ಪದ್ಧತಿಗಳನ್ನು ಹೊಸ ಕಾಲೇಜುಗಳು ‘ಪ್ಯಾಕೇಜ್‌’ ರೂಪದಲ್ಲಿ ಕೊಡುತ್ತಿವೆ. ಹೀಗಾಗಿ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಪಿಯುಸಿ ನಂತರದ ತಮ್ಮ ಭವಿಷ್ಯವನ್ನು ಈಗಲೇ ನಿರ್ಧರಿಸುವುದು ಅಗತ್ಯ.

‘ಬೆಳಂದೂರು, ಜೆ.ಪಿ. ನಗರ, ಆರ್‌.ಟಿ. ನಗರ, ಸಿ.ವಿ. ರಾಮನ್‌ ನಗರ ಸೇರಿದಂತೆ ನಗರದಲ್ಲಿ 13 ಪಿಯು ಕಾಲೇಜುಗಳನ್ನು ಹೊಂದಿದ್ದೇವೆ. ಪಿಯುಸಿ ಶಿಕ್ಷಣದ ಜತೆಗೆ ಐಐಟಿ, ಸಿಇಟಿ ಹಾಗೂ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯ ತಯಾರಿಯನ್ನು ಮೊದಲ ಪಿಯುಸಿಯಿಂದಲೇ ಆರಂಭಿಸಿದ್ದೇವೆ.

ಸ್ಪರ್ಧಾತ್ಮಕ ಯುಗ ಇದಾಗಿರುವುದರಿಂದ ಬೇರುಮಟ್ಟದಿಂದಲೇ ವಿದ್ಯಾರ್ಥಿಗಳನ್ನು ಪಳಗಿಸಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ನಾರಾಯಣ ಪಿಯು ಕಾಲೇಜಿನ ಎಜಿಎಂ ಎ.ಮುರಳಿ ಪ್ರಸನ್ನ ಹೇಳುತ್ತಾರೆ.

‘ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಿಯುಸಿ ಪ್ರವೇಶಾತಿಗೆ ಬೇಡಿಕೆ ಹೆಚ್ಚಿದೆ. ಮೊದಲ ದಿನದ ಪ್ರತಿಕ್ರಿಯೆ ಉತ್ತಮವಾಗಿದೆ. ನಮ್ಮ ಕಾಲೇಜನ್ನೇ ಅಪೇಕ್ಷೆಪಟ್ಟು ದಾಖಲಾಗುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉಪನ್ಯಾಸಕರಿಗೆ ತರಬೇತಿ ನೀಡಲಾಗಿದೆ.

ಈ ತಿಂಗಳ 17ರವರೆಗೆ ಅರ್ಜಿ ನೀಡಲಾಗುವುದು. 21ರ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸುತ್ತೇವೆ’ ಎಂದು ಶ್ರೀ ಭಗವಾನ್‌ ಮಹಾವೀರ್‌ ಜೈನ್‌ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಟಿ. ವೆಂಕಟೇಶ್‌ ತಿಳಿಸಿದರು. 

ಸೂಪರ್‌ 30 ಪರಿಕಲ್ಪನೆ
ಕೆಎಲ್‌ಇ ಶಿಕ್ಷಣ ಸಂಸ್ಥೆ ತನ್ನ ಪಿಯುಸಿ ಕಾಲೇಜುಗಳಲ್ಲಿ ‘ಸೂಪರ್‌ 30’ ಎಂಬ ಹೊಸ ಬಗೆಯ ಪರಿಕಲ್ಪನೆಯನ್ನು ಈ ಬಾರಿಯಿಂದ ಅನುಷ್ಠಾನಕ್ಕೆ ತಂದಿದೆ. ಇದರ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ‘ಎಸ್ಸೆಸೆಲ್ಸಿಯಲ್ಲಿ ಶೇ 96ಕ್ಕಿಂತ ಅಧಿಕ ಅಂಕ ಗಳಿಸಿ ಪಿಯುಸಿಗೆ ದಾಖಲಾಗುವ 30 ವಿದ್ಯಾರ್ಥಿಗಳಿಗೆ ವಾರ್ಷಿಕ ಕೇವಲ ₨10 ಬೋಧನಾ ಶುಲ್ಕವನ್ನು ಪಡೆಯುವ ಹೊಸ ಪದ್ಧತಿಯನ್ನು ಆರಂಭಿಸಿದ್ದೇವೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಈ ಪದ್ಧತಿ ಅನುಷ್ಠಾನಕ್ಕೆ ಬರಲಿದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಅಂಕವನ್ನು ಯಾರೇ ಗಳಿಸಲಿ, ಅವರಿಂದ ನಾವು ಕೇವಲ ₨10 ಮಾತ್ರ ಪಡೆಯುತ್ತೇವೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ನಾಳಿನ ಉತ್ತಮ ಸಮಾಜಕ್ಕೆ ನೀಡುವುದು ಹಾಗೂ ಉಪನ್ಯಾಸಕರ ಮೇಲಿನ ಒತ್ತಡವನ್ನು ತಗ್ಗಿಸುವುದು ನಮ್ಮ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT