ADVERTISEMENT

ಬಣ್ಣ ಕಟ್ಟುವವರ ಪಡಿಪಾಟಲು

ಡಿ.ಎಂ.ಕುರ್ಕೆ ಪ್ರಶಾಂತ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST
ಬಣ್ಣ ಕಟ್ಟುವವರ ಪಡಿಪಾಟಲು
ಬಣ್ಣ ಕಟ್ಟುವವರ ಪಡಿಪಾಟಲು   

ಯುಗಾದಿ ಮುಗಿದು ನಾಲ್ಕು ವಾರ ಕಳೆದಿಲ್ಲ. ಹಬ್ಬಕ್ಕೆ ಗಂಡ ಕೊಡಿಸಿದ ಹಸಿರು ಸೀರೆ ತನ್ನ ಮೈ ಬಣ್ಣ ಕಳಚುತ್ತಿದೆ. `ಮನೆಯವರು ಕೊಡ್ಸಿದ್ದು, ಚೆನ್ನಾಗಿದೆ ಅಲ್ವಾ?~ ಎಂದು ನಾಲ್ಕು ಬೀದಿಯ ಗೆಳತಿಯರಿಗೆ ಸೀರೆ ಸಂತಸ ಹಂಚುವ ಹುಮ್ಮಸ್ಸು ಅವಳಲ್ಲಿ ಉಳಿದಿಲ್ಲ! `ಥೂ ಎಂಥ ಸೀರೆ ತಂದ್ರಿ. ನೀರಿಗೆ ಹಾಕಿದ್ರೆ ಬಣ್ಣವೆಲ್ಲ ಬಿಡುತ್ತೆ, ಯಾರು ಹಾಕಿದ್ರೋ ಈ ಸೀರೆಗೆ ಬಣ್ಣಾನ...~ ಎಂದು ಗಂಡನ ಜತೆಗೆ ಬಣ್ಣಗಾರನನ್ನೂ ಶಪಿಸಿದ್ದಾಳೆ.

`ವಾಹ್! ನಿನ್ನ ಸೆಲೆಕ್ಷನ್ ಸೂಪರ್. ನೀನೇನು ಸೀರೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿದ್ಯಾ? ನೀನು ಈ ಕೆಂಗುಲಾಬಿ ಬಣ್ಣದ ಸೀರೆ ಕೊಡ್ಸಿ ಐದಾರು ವರ್ಷವಾಯಿತು. ಗುಲಗಂಜಿಯಷ್ಟೂ ಬಣ್ಣಾ ಹೋಗಿಲ್ಲ. ರಂಗು ಕಳೆದ್ಕೊಂಡಿಲ್ಲ.

ಯಾವ ಕೈಗಳು ಈ ಸೀರೆಗೆ ಬಣ್ಣ ಹಾಕಿದ್ವೋ?~ ಇನ್ನೊಬ್ಬಳು ತನ್ನ ಗಂಡನಿಗೆ ಶಬ್ಬಾಸ್‌ಗಿರಿ ಕೊಟ್ಟಿದ್ದಾಳೆ.ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ, ಸೀರೆಯ ಬಗ್ಗೆ ಮಹಿಳೆಯರಿಗೆ ತಮ್ಮದೇ ಆದ ಕಾಳಜಿ, ಬಯಕೆಗಳಿರುತ್ತವೆ.
 
ತನ್ನ ಸೌಂದರ್ಯಕ್ಕೆ ಮೆರುಗು ನೀಡುವ ಸೀರೆಯ ವಿಷಯದಲ್ಲಿ ಮಹಿಳೆಯರು ರಾಜಿ ಮಾಡಿಕೊಳ್ಳುವುದು ತುಸು ಕಷ್ಟ. ತಮ್ಮ ಮೈ ಬಣ್ಣಕ್ಕೆ ತಕ್ಕಂತೆ, ಹಬ್ಬದ ಸಂಭ್ರಮಕ್ಕೆ ತಳುಕು ಹಾಕಿ, ಕೈ ಬಳೆಗಳಿಗೆ ಹೊಂದುವಂತೆ ಇಂತಹದ್ದೇ ಬಣ್ಣದ ಸೀರೆ ತೊಡಬೇಕು ಎಂದು ಆಸೆ ಪಡುವ ಮನಸ್ಸುಗಳು ಕಡಿಮೆಯೇನಿಲ್ಲ.

ಆದರೆ ಇದೇ ಸೀರೆಗಳಿಗೆ ರಂಗುರಂಗಾಗಿ ಬಣ್ಣ ಕಟ್ಟುವ ಕೈಗಳು ಮಾತ್ರ, ತಮ್ಮ ಬದುಕನ್ನು ಇದೇ ಬಣ್ಣದೊಳಗೆಯೇ ಕರಗಿಸಿಕೊಳ್ಳುತ್ತಿವೆ.ಶೆಟ್ಟರ ಸೀರೆ ಅಂಗಡಿಯೂ ಸೇರಿ ತಮಿಳುನಾಡು, ಆಂಧ್ರ ಮತ್ತಿತ್ತರ ಹೊರ ರಾಜ್ಯಗಳ ಸೀರೆ ಅಂಗಡಿಗಳಲ್ಲಿ ಮೈ ಹರಡಿ ಕುಳಿತ ಸೀರೆಗಳು ಬಣ್ಣ ಪಡೆಯುವುದು ನಗರದ ರಾಜಾಜಿನಗರದ ಕೈಗಾರಿಕಾ ಪ್ರದೇಶ, ಚಿಕ್ಕಪೇಟೆಯ ಗಲ್ಲಿಗಳು, ಚಾಮರಾಜ ಪೇಟೆ, ಶಾಂತಿನಗರ, ವಿಲ್ಸನ್ ಗಾರ್ಡ್‌ನ್, ಕಾಮಾಕ್ಷಿ ಪಾಳ್ಯ, ಸುಧಾಮನಗರ, ಶ್ರೀರಾಂಪುರಗಳಲ್ಲಿರುವ ಬಟ್ಟೆಗೆ ಬಣ್ಣ ಹಾಕುವ (ಕ್ಲಾತ್ ಡೈ) ಕಾರ್ಖಾನೆಗಳಲ್ಲಿ.

ಈ ಸಣ್ಣ ಕೈಗಾರಿಕೆಗಳಲ್ಲಿ ಬಣ್ಣ ಹಾಕುವ ಕೆಲಸದಲ್ಲಿ ತೊಡಗಿ ಜೀವನಕ್ಕೆ ದಾರಿ ಮಾಡಿಕೊಂಡಿರುವ ಅನೇಕರಿದ್ದಾರೆ. ಮೂಲತಃ ಪಟಗಾರ, ನೀಲಗಾರ, ಮಡ್ಡಿಗಾರ ಸಮುದಾಯಗಳು ಬಟ್ಟೆಗೆ ಬಣ್ಣ ಹಾಕುವುದನ್ನು ತಮ್ಮ ಮೂಲ ವೃತ್ತಿಯನ್ನಾಗಿಸಿಕೊಂಡಿವೆ. ಇವರಲ್ಲಿ ಕೆಲವರು ಮಗ್ಗಗಳನ್ನು ಹೊಂದಿದ್ದು ನೇಯ್ಗೆ ಕಾರ್ಯವನ್ನೂ ಮಾಡುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾತಿ ಸಂಬಂಧಿ ವೃತ್ತಿಯಲ್ಲಿ ಮಾರ್ಪಾಡುಗಳಾಗಿವೆ. ಬಣ್ಣಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿರುವವರಿಗೆ ಆದ್ಯತೆ ದೊರೆಯುತ್ತಿದೆ. ಈ ಬಣ್ಣ ಕಟ್ಟುವ ನೈಪುಣ್ಯ ಹೊಂದಿರುವವರನ್ನು `ಕಲರ್ ಮಾಸ್ಟರ್ಸ್‌~ ಎಂದು ಕರೆಯಲಾಗುತ್ತದೆ.

ರಾಸಾಯನಿಕದೊಳಗಿನ ಬದುಕು
ರೇಷ್ಮೆ ನೂಲನ್ನು 80 ಸೆಂಟಿಗ್ರೇಡ್ ಬಿಸಿ ನೀರಿನಲ್ಲಿ ಕುದಿಸಲಾಗುತ್ತದೆ. ನಂತರ ದೊಡ್ಡ ಕಡಾಯಿಯಲ್ಲಿ ರಾಸಾಯನಿಕಯಕ್ತ ಬಣ್ಣದ ನೀರಿನೊಂದಿಗೆ ಸೇರಿಸಿ ಕಲಕಲಾಗುತ್ತದೆ. ಬಣ್ಣದಲ್ಲಿ ಅದ್ದಿದ ನೂಲು ಚೆನ್ನಾಗಿ ಒಣಗಿದ ನಂತರ ಸೀರೆ ನೇಯ್ಗೆಗೆ ಸಿದ್ಧವಾಗುತ್ತದೆ. ನೂಲಿಗೆ ಬಣ್ಣ ಅದ್ದುವ ಸಂದರ್ಭದಲ್ಲಿ ತುಸು ಎಚ್ಚರ ತಪ್ಪಿದರೂ ಕಷ್ಟ. ಒಡಲ ಹಸಿವು ನೆನೆಯುತ್ತಲೇ ಬಣ್ಣದ ಘಾಟಿಗೆ ಒಗ್ಗಿಕೊಂಡು ನೂಲಿಗೆ `ಕಲರ್ ಮಾಸ್ಟರ್ಸ್‌~ಗಳು ಬಣ್ಣ ಹಾಕಬೇಕು.

`ಬಣ್ಣ ಕಟ್ಟುವ ಕೆಲಸ ಕಲಿತು ಬಹಳ ವರ್ಷ ಆಯಿತು. ದುಡಿಮೆಗೆ ಮೋಸವಿಲ್ಲ. ಚೆನ್ನಾಗಿಯೇ ಗಳಿಸಬಹುದು~ ಎನ್ನುವ ನಗರದ ಕ್ಲಾತ್ ಡೈನ ಕಲ್ಲರ್ ಮಾಸ್ಟರ್ ಶ್ರೀನಿವಾಸ್, ಜತೆಗೆ ಆರೋಗ್ಯದ ಗುಟ್ಟನ್ನೂ ಬಿಚ್ಚುತ್ತಾರೆ.

ಬಣ್ಣ ಕಟ್ಟಲು ಸೋಡಾ ಆ್ಯಶ್, ನ್ಯೂಟ್ರಾಲ್ ಸೋಪು, ಪಿನೋಕಾಲ್ ಸೇರಿದಂತೆ ವಿವಿಧ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸುಮಾರು 50ಕ್ಕೂ ಹೆಚ್ಚು ರೀತಿಯ ಬಣ್ಣಗಳು ಇವೆ. ಬಣ್ಣ ಕಟ್ಟಿದ ನೀರನ್ನು ಮೋರಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕವೂ ಇದೆ. ತಮಿಳುನಾಡಿನ ಸೇಲಂ ಮತ್ತಿತರ ಭಾಗಗಳಲ್ಲಿ ಬಣ್ಣ ಕಟ್ಟುವ ಕೈಗಾರಿಕೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಕಾರ್ಖಾನೆ ಚಟುವಟಿಕೆಯನ್ನು ನಿಷೇಧಿಸಿದ ನಿದರ್ಶನಗಳಿವೆ.

`ಬಣ್ಣ ಕಟ್ಟಿದ ನಂತರ ಉಳಿದ ರಾಸಾಯನಿಕಗಳಿರುವ ನೀರನ್ನು ಸಂಸ್ಕರಣೆಗೆ ಒಳಪಡಿಸುವಂತೆ ಸೂಚಿಸಿದ್ದರು. ಆದರೆ ನಮ್ಮಲ್ಲಿ ಈ ರೀತಿಯ ಯಾವುದೇ ಸಂಸ್ಕರಣೆಗಳು ಆಗುತ್ತಿಲ್ಲ. ಬಣ್ಣದ ನೀರನ್ನು ಚರಂಡಿಗೆ ಬಿಡಲಾಗುತ್ತದೆ. ರಾಸಾಯನಿಕಯುಕ್ತ ಬಣ್ಣದ ಜತೆಯಲ್ಲಿ ನಿತ್ಯ ಕೆಲಸ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ನಿಜ.

ಆದರೆ ನಮ್ಮ ಹೊಟ್ಟೆಪಾಡು ತುಂಬಬೇಕಲ್ಲ ಸಾರ್~ ಎಂದು ಪ್ರಶ್ನಿಸುತ್ತಾರೆ.ಬಣ್ಣ ಪಡೆವ ಸೀರೆಗಳು ನಗುತ್ತವೆ; ಅವನ್ನು ನೋಡಿ ನೀರೆಯರೂ. ಆದರೆ, ಬಣ್ಣ ಕಟ್ಟಿದ ಕೈಗಳು ಮಾತ್ರ ಸುಖವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.