ADVERTISEMENT

ಬದುಕಿನ ಲೆಕ್ಕ... ಪಕ್ಕಾ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST
ಬದುಕಿನ ಲೆಕ್ಕ... ಪಕ್ಕಾ!
ಬದುಕಿನ ಲೆಕ್ಕ... ಪಕ್ಕಾ!   

`ನಾನೂ ಅಷ್ಟೇ... ಎಲ್ಲರಂತೆ ಧಾರಾಳವಾಗಿ ಹಣ ಖರ್ಚು ಮಾಡುತ್ತಿದ್ದೆ. ವಾರದ ಕೊನೆಯಲ್ಲಿ ಅನಿವಾರ್ಯವಾಗಿ ಇತರರ ಬಳಿ ಸಾಲಕ್ಕಾಗಿ ಕೈಯೊಡ್ಡಿ ನಿಲ್ಲುತ್ತಿದ್ದೆ. ಕೈತುಂಬಾ ದುಡಿಯುತ್ತಿದ್ದರೂ ಖರ್ಚಿಗೆ ಸಾಲುತ್ತಿರಲಿಲ್ಲ.

ಹಣ ಎಲ್ಲಿ ಖರ್ಚಾಯಿತು ಎಂಬುದೂ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ವಾರ್ಷಿಕ ಮೀಟಿಂಗ್ ಒಂದರಲ್ಲಿ ಖರ್ಚು ವೆಚ್ಚದ ಪಟ್ಟಿ ಓದುತ್ತಿದ್ದಾಗ ನಾನೂ ಹೀಗೆ ಯಾಕೆ ಮಾಡಬಾರದು ಎಂಬ ಯೋಚನೆ ಹೊಳೆಯಿತು.

ಅಂದಿನಿಂದಲೇ, ಅಂದರೆ 1979ರಿಂದಲೇ ಖರ್ಚು ಮಾಡಿದ ಪ್ರತಿ ಪೈಸೆಯನ್ನೂ ಪುಸ್ತಕದಲ್ಲಿ ನಮೂದಿಸುತ್ತಾ ಬಂದೆ. ಮುಂದಿನ ತಿಂಗಳು ಆ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಅದೆಷ್ಟೋ ಖರ್ಚುಗಳು ಅನಗತ್ಯ ಎನಿಸುತ್ತಿದ್ದವು. ಅದನ್ನು ಕಡಿಮೆ ಮಾಡಿ ಆ ಮೊತ್ತವನ್ನು ಒಂದಷ್ಟು ಮಂದಿಗೆ ಕೈಲಾದ ಸಹಾಯ ಮಾಡಲು ಬಳಸಿಕೊಂಡೆ. ಆಗ ಸಿಗುತ್ತಿದ್ದ ಆತ್ಮತೃಪ್ತಿಯೇ ಬೇರೆ.~

ಹೀಗೆ ಹೇಳುವ ಪದ್ಮನಾಭನ್ ಅಯ್ಯರ್ ಅವರಿಗೆ ಈಗ 63 ವರ್ಷ. ಚೆನ್ನೈ ಬಿಟ್ಟು ಉದ್ಯಾನನಗರಿಗೆ ಬಂದದ್ದು ಆರು ವರ್ಷಗಳ ಹಿಂದೆ. 33 ವರ್ಷಗಳಲ್ಲಿ ಅವರು ಬಳಸಿದ್ದು 200 ಪುಟಗಳ ಐದು ಪುಸ್ತಕ. ಆ ಪುಸ್ತಕಗಳಲ್ಲಿ ಅಡಕವಾದ ಲೆಕ್ಕದ ಪ್ರಕಾರ ಅಂದಿನಿಂದ ಇಂದಿನವರೆಗೆ ಅವರು ಮಾಡಿರುವ ಖರ್ಚು 3.87 ಕೋಟಿ ರೂಪಾಯಿ.

ಆರಂಭದ ಪುಸ್ತಕಗಳು ಜೀರ್ಣಾವಸ್ಥೆ ತಲುಪಿದ್ದರೂ ಅವುಗಳಲ್ಲಿ ಅಕ್ಷರಗಳು ಮಾತ್ರ ಇನ್ನೂ ಸ್ಪಷ್ಟವಾಗಿವೆ. ಅಕ್ಕಿ, ಬೇಳೆ ಕೊಳ್ಳಲು ಖರ್ಚು ಮಾಡಿದ 1 ಪೈಸೆ, 3 ಪೈಸೆಯ ಲೆಕ್ಕಾಚಾರಗಳು ಗತಕಾಲದ ನೆನಪನ್ನು ಬಿಚ್ಚಿಡುತ್ತವೆ. ವರ್ಷದ ಕೊನೆಗೆ ಖರ್ಚುಗಳನ್ನು ಒಟ್ಟು ಸೇರಿಸಿ ಪೈ ಚಾರ್ಟ್ ಮಾಡುತ್ತಾರೆ. ಅವುಗಳಲ್ಲಿ ಅರ್ಧಭಾಗವನ್ನು ಮನೆಯ ಖರ್ಚು ಹಾಗೂ ಆಹಾರ ಪದಾರ್ಥಗಳಿಗೆ ಹಾಕಿದ ಹಣ ಆಕ್ರಮಿಸಿರುತ್ತವೆ.

`ನಾನು ಪುಸ್ತಕವನ್ನು ಮೈಕ್ರೋಸಾಫ್ಟ್ ಎಕ್ಸೆಲ್ ರೀತಿಯಲ್ಲಿ ವಿಭಜನೆ ಮಾಡಿಕೊಂಡೆ. ಮನೆ, ಮಕ್ಕಳು, ಪ್ರಯಾಣ, ಆಹಾರ, ಶಿಕ್ಷಣ, ಆರೋಗ್ಯ, ತರಕಾರಿ ಹೀಗೆ ವಿಂಗಡಿಸಿಕೊಂಡು ಆಯಾ ದಿನದ ಖರ್ಚನ್ನು ನಮೂದಿಸುತ್ತಿದ್ದೆ. ವಿದ್ಯುತ್ ಬಿಲ್ಲನ್ನು ಮನೆ ಖರ್ಚಿಗೆ ಸೇರಿದರೆ, ಹಾಲಿನ ಲೆಕ್ಕ ಆಹಾರ ಪದಾರ್ಥಗಳ ಪಟ್ಟಿಯಲ್ಲಿರುತ್ತಿತ್ತು. ಮಡದಿಯೂ ಉದ್ಯೋಗಕ್ಕೆ ಹೋಗುತ್ತಿದ್ದರಿಂದ ಆಕೆಯೂ ಪ್ರತಿನಿತ್ಯದ ಖರ್ಚಿನ ವರದಿ ಒಪ್ಪಿಸುತ್ತಿದ್ದಳು. 

ಭಾರತೀಯರಿಗೆ ಶೋಕಿ ಹೆಚ್ಚು. ಮನೆಯಲ್ಲಿ ಇಬ್ಬರಿದ್ದರೆ ಅವರಿಗೆ ಮೂರು ಕಾರು ಬೇಕು. ತಿಂಗಳ ಕೊನೆಗೆ ಸಿಗುವ ಆರಂಕಿ ಸಂಬಳದಲ್ಲಿ ಉಳಿತಾಯ ಮಾಡುವ ಕಾಳಜಿ ಅವರಿಗಿಲ್ಲ. ಚೀನಾದಲ್ಲಿ ಎಷ್ಟೇ ಶ್ರೀಮಂತನಾದರೂ ಸೈಕಲ್‌ನಲ್ಲೇ ಓಡಾಡುತ್ತಾನೆ. ಅದು ನಮ್ಮವರಿಗೆ ಪಾಠವಾಗಬೇಕು. ಹೀಗೆ ಬರೆದಿಡುವ ಮೂಲಕವಾದರೂ ಅನಗತ್ಯ ಖರ್ಚಿಗೆ ಕಡಿವಾಣ ಹಾಕಬಹುದು. ಉಳಿತಾಯ ಮಾಡುವ ಯೋಜನೆ ಹಾಕಿಕೊಂಡವರು ಈ ಪದ್ಧತಿ ಅನುಸರಿಸುವುದು ಒಳಿತು~ ಅಂತಾರೆ ಪದ್ಮನಾಭನ್.

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಪದ್ಮನಾಭನ್ ಅವರಿಗೆ ಪೇಂಟಿಂಗ್, ಅಂಗೈ ಮೇಲಿನ ಗೆರೆಗಳನ್ನು ನೋಡಿ ಭವಿಷ್ಯ ಹೇಳುವುದು, ಕಸೂತಿ ಕಲೆಯ ಹವ್ಯಾಸಗಳೂ ಇವೆ. ಪ್ರತಿಯೊಂದಕ್ಕೂ ಲೆಕ್ಕ ಬರೆಯುವ ಕೆಲಸ ಕಿರಿಕಿರಿಯಲ್ಲವೇ, ಸಮಯ ವ್ಯರ್ಥವಾಗುವುದಿಲ್ಲವೇ, ಇದರಿಂದ ಏನು  ಸಾಧಿಸಿದಂತಾಗುತ್ತದೆ ಎಂದು ಬಹುತೇಕರು ಅವರನ್ನು ಪ್ರಶ್ನಿಸಿದ್ದಿದೆ.

`ಹಳೆಯ ಲೆಕ್ಕಗಳನ್ನು ನೋಡುವಾಗ ಸಿಗುವ ಖುಷಿಯೇ ಬೇರೆ~ ಎನ್ನುವ ಪದ್ಮನಾಭನ್‌ಗೆ ತಮ್ಮ ಈ ಹವ್ಯಾಸವನ್ನು ದಾಖಲೆ ಪುಸ್ತಕಕ್ಕೆ ಸೇರಿಸುವ ಬಯಕೆಯೇನೂ ಇಲ್ಲ. ಬದುಕಿರುವವರೆಗೂ ಲೆಕ್ಕ ಬರೆಯುತ್ತಲೇ ಇರಬೇಕೆಂಬುದು ಅವರ ಇಷ್ಟವಷ್ಟೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT