ADVERTISEMENT

ಬದುಕು@90.4

ರೋಹಿಣಿ ಮುಂಡಾಜೆ
Published 2 ಜನವರಿ 2012, 5:55 IST
Last Updated 2 ಜನವರಿ 2012, 5:55 IST

 `ಹಾಯ್... ಹಲೋ... ನಮಸ್ತೇ... ನಾನು ನಿಮ್ಮ ಲವ್ಲಿ ಗರ್ಲ್ ಪ್ರಿಯಾಂಕಾ...~
ಅರೆ... ನಿಮಗೆ ಇಷ್ಟ್ರಲ್ಲೇ ಗೊತ್ತಾಗೋಯ್ತಾ? ಈ ಲವ್ಲಿ ಗರ್ಲ್ ಪ್ರಿಯಾಂಕಾ ಯಾರು ಮತ್ತು ಎಲ್ಲಿಂದ ಮಾತಾಡ್ತಿದ್ದಾಳೆ ಅಂತ? ಪ್ರಿಯಾಂಕಾಳೇ ಹೇಳುತ್ತಿದ್ದಾಳೆ ಕೇಳಿ... `ಇದು ನಿಮ್ಮ ನೆಚ್ಚಿನ ಸಮುದಾಯ ಬಾನುಲಿ- ರೇಡಿಯೊ ಆ್ಯಕ್ಟಿವ್ 90.4 ಮೆಗಾಹರ್ಟ್ಸ್...~

ಈ ಬಾನುಲಿ ಕೇಂದ್ರದ ಪ್ರಿಯ ಕೇಳುಗರು ನೀವಾಗಿದ್ದರೆ ಈ ಹುಡುಗಿ ನಡೆಸಿಕೊಡುವ `ಯಾರಿವರು~, `ನವಜೀವನ~, `ದಯಾನಂದನಗರ~ ಮತ್ತಿತರ ಕಾರ್ಯಕ್ರಮದ ಸ್ಪಷ್ಟ ಚಿತ್ರಣ ಸಿಕ್ಕಿರುತ್ತದೆ. ಇಲ್ಲಿವರೆಗೂ ಈ `ಕಮ್ಯೂನಿಟಿ ರೇಡಿಯೊ 90.4 ಮೆಗಾಹರ್ಟ್ಸ್~ ಹೆಸರನ್ನು ಕೇಳಿರದ ಬಾನುಲಿಪ್ರಿಯರಿಗೆ ಹೊಸದೊಂದು ಜಗತ್ತೇ ತೆರೆದುಕೊಳ್ಳುವುದೂ ಸುಳ್ಳಲ್ಲ.

ಸಮುದಾಯ ಬಾನುಲಿಯ ಮೂಲ ಉದ್ದೇಶವೇ ಸಮಾಜದ ಮುಖ್ಯವಾಹಿನಿಯ ನಾಗರಿಕರಿಗೂ, ಅವರ ದೃಷ್ಟಿಯಲ್ಲಿ ಅಸ್ಪೃಶ್ಯರೆನಿಸಿಕೊಂಡಿರುವ ಜನಸಮೂಹಗಳಿಗೂ ನಡುವೆ ಸಂಪರ್ಕಸೇತುವಾಗುವುದು. ಕಂಡವರ ಬಾಯಲ್ಲಿ `ಛೀ... ಥೂ...~ ಅನ್ನಿಸಿಕೊಂಡು, ಅಂಧಕಾರವೇ ತಮ್ಮ ಬಾಳು ಅಂದುಕೊಂಡು ಮೂಕಯಾತನೆ ಅನುಭವಿಸುತ್ತಿರುವ ಈ ಎರಡನೇ ವರ್ಗದ ಧ್ವನಿಯಾಗುವ  ಕಮ್ಯೂನಿಟಿ ರೇಡಿಯೊ 90.4 ಮೆಗಾಹರ್ಟ್ಸ್‌ನ ಕನಸು ಅದಾಗಲೇ ಸಾಕಾರಗೊಂಡಿದೆಯೆನ್ನಿ.

ಹಾಗಿದ್ದರೆ ಏನಿದು ಕಮ್ಯೂನಿಟಿ ರೇಡಿಯೊ? ಅದರ ಕರ್ಮಭೂಮಿಯಲ್ಲಿ `ನಾಗರಿಕ ಸಮಾಜ~ದೊಂದಿಗೆ ಮುಖಾಮುಖಿಯಾಗುವ ಮಂದಿಯಾದರೂ ಯಾರು?

ಸಲಿಂಗಕಾಮಿ ಪುರುಷರು ಹಾಗೂ ಮಹಿಳೆಯರು, ಸುಮಂಗಲಿಯರು, ಲಿಂಗ ಪರಿವರ್ತಿತ ಮಂದಿ (ಎಲ್‌ಜಿಬಿಟಿ), ದೈಹಿಕ ಅಸಮರ್ಥರು, ಆಟೋ ಚಾಲಕರು, ಹಿರಿಯ ನಾಗರಿಕರು, ಜಾಡಮಾಲಿಗಳು, ಲೈಂಗಿಕ ಕಾರ್ಯಕರ್ತರು, ಎಚ್‌ಐವಿ ಸೋಂಕಿತ ಮಂದಿ... ಹೀಗೆ ವಾಣಿಜ್ಯಿಕ ಉದ್ದೇಶದೊಂದಿಗೇ ಹುಟ್ಟಿ ಬೆಳೆಯುವ ಬಾನುಲಿ ಕೇಂದ್ರಗಳು ಆದ್ಯತೆ ಕೊಡಲಾಗದ ಜನಸಮೂಹವೇ ರೇಡಿಯೋ ಆ್ಯಕ್ಟಿವ್‌ನ ಆಧಾರಸ್ತಂಭಗಳು!

ಸಿಲಿಕಾನ್ ಸಿಟಿಯಲ್ಲಂತೂ ಆರ್‌ಜೆಗಳೆಂದರೆ ಬಾಲಿವುಡ್ ತಾರೆಯರಿಗೂ ಕಡಿಮೆಯಿಲ್ಲದಷ್ಟು ಬೇಡಿಕೆ, ಕ್ರೇಜ್. ಅವರದು ಅಕ್ಷರಶಃ ಸೆಲೆಬ್ರಿಟಿ ವರ್ಚಸ್ಸು. ಕನ್ನಡವನ್ನು ತೇಲಿಸುತ್ತಾ, ಹಾರಿಸುತ್ತಾ, ತಿರುಚುತ್ತಾ ಇಂಗ್ಲಿಷ್, ಹಿಂದಿ ಶೈಲಿಯಲ್ಲಿ ಉಲಿದರೆಂದರೆ ತಮ್ಮದೇ ಛಾಪು ಒತ್ತಿದರೆಂದೇ ಅರ್ಥ.

ಒಂದೊಂದು ಪದಕ್ಕೂ ಅಗತ್ಯವಿದ್ದೋ ಇಲ್ಲದೆಯೋ ಒತ್ತಕ್ಷರಗಳು ಹೆಚ್ಚುತ್ತಾ ಹೋಗುತ್ತವೆ ಇಲ್ಲವೇ ಒತ್ತಕ್ಷರಗಳು ಇರಲೇಬಾರದು ಎಂಬ ಕನ್ನಡದ ಆಧುನೀಕರಣದ ಸೂತ್ರಧಾರರೋ ಎಂಬಂತೆ ಅಕ್ಷರಗಳನ್ನು ಜಾರಿಸುತ್ತಾ ಮಾತನಾಡುವ ಆರ್‌ಜೆಗಳಿಗೆ ಆರ್‌ಜೆಗಳೇ ಸಾಟಿ. ಇದು, ನುರಿತ ಆರ್‌ಜೆಗಳ ಮಾತಾಯ್ತು ಅಂತೀರಾ?

ಊಹೂಂ... 90.4 ಮೆಗಾಹರ್ಟ್ಸ್‌ನಲ್ಲಿನ ಯಾವುದೇ ಕಾರ್ಯಕ್ರಮಕ್ಕೆ ಕಿವಿಯಾನಿಸಿ... ಮೇಲಿನ ಆರ್‌ಜೆಗಳಿಗೆ ಸೆಡ್ಡು ಹೊಡೆಯದಿದ್ದರೆ ಹೇಳಿ! ಹಾಗಂತ ಇವರೆಲ್ಲ ಯಾವುದೋ ಎಫ್‌ಎಂನಲ್ಲೋ, ಕಾರ್ಯಕ್ರಮ ನಿರೂಪಕರಾಗಿಯೋ, ಉದ್ಯಮಶೀಲರಾಗಿಯೋ ಹೆಸರು ಮಾಡಿದ್ದ ಅನುಭವಿಗಳಲ್ಲ. ಬದಲಾಗಿ, ತನ್ನ  `ಟಾರ್ಗೆಟ್ ಆಡಿಯನ್ಸ್~ ಯಾರಿದ್ದಾರೋ, ಆ ಜನಸಮೂಹದಿಂದಲೇ ಈ ಆರ್‌ಜೆಗಳನ್ನು ಹೆಕ್ಕಿ ತಂದಿದೆ ರೇಡಿಯೋ ಆ್ಯಕ್ಟಿವ್! ಅಂತಲೇ, ಅದು ಸಮುದಾಯ ಬಾನುಲಿ!

ಹಲವಾರು ಸಾಮುದಾಯಿಕ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಜೈನ್ ಸಮೂಹ ಸಂಸ್ಥೆಗಳ ಕನಸಿನ ಕೂಸು `ರೇಡಿಯೊ ಆ್ಯಕ್ಟಿವ್~. 2007ರ ಜೂನ್ ನಲ್ಲಿ ಕಾರ್ಯಾರಂಭ ಮಾಡಿದಾಗ ಈ ಪರಿ ಯಶಸ್ಸಿ ಕಲ್ಪನೆಯೂ ಅವರ ಮುಂದಿರಲಿಲ್ಲ. ಆದರೆ, ನಿರ್ಲಕ್ಷಿತ ಜನಸಮೂಹದ ಬದುಕಿನ ಅನಾವರಣವಾಗಬೇಕು, ಅದಕ್ಕೊಂದು ವೇದಿಕೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಷ್ಟೇ ಇತ್ತು. ಆದರೆ ಹಿಂತಿರುಗಿ ನೋಡಿದಾಗ!? ಜೈ ಹೋ...

ರೇಡಿಯೊ ಆ್ಯಕ್ಟಿವ್ 90.4 ಮೆಗಾಹರ್ಟ್ಸ್‌ನ ವೈಶಿಷ್ಟ್ಯಗಳು ಇಲ್ಲಿಗೇ ಮುಗಿಯುವುದಿಲ್ಲ. ಬಾನುಲಿ ಕ್ಷೇತ್ರದ ಕಲ್ಪನೆಗೂ ನಿಲುಕದ ಆರ್‌ಜೆಗಳನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಅದರದು. `ನಿಮ್ಮ ಲವ್ಲಿ ಗರ್ಲ್...~ ಎಂದು ಮೋಹಕ ಕಂಠದಲ್ಲಿ ನಿಮ್ಮನ್ನು ಸೆಳೆಯುವ ಇದೇ ಪ್ರಿಯಾಂಕಾ, 2007ರವರೆಗೂ ಕಾಲಿಟ್ಟ ಕ್ಷೇತ್ರ ಹೂವಿನ ಹಾದಿಯದಾಗಿರಲಿಲ್ಲ.

ಬರಿಯ ಮುಳ್ಳು! ಇಂದು? ಸುಪರಿಚಿತ ಮತ್ತು ಗೌರವಾನ್ವಿತ ಆರ್‌ಜೆ! ಅವಳಂತೆಯೇ ಮುಂಚೂಣಿ ಆರ್‌ಜೆಗಳಾಗಿ ಮಿಂಚುತ್ತಿರ‌್ದುವ ನಗೀನಾ, ವಿಮಲಾ, ಮುಂತಾದ ಹತ್ತಾರು ಮಂದಿ ತುತ್ತಿನ ಚೀಲ ತುಂಬಿಸಲು ಒಂದೊಂದು ಕ್ಷೇತ್ರಕ್ಕೆ ಶರಣೆಂದಿದ್ದರು. ಆರ್‌ಜೆ  ಶಿವಕುಮಾರ್, ಆಟೋ ಚಾಲಕರ ಕಣ್ಮಣಿ. ಸ್ವತಃ ಆಟೋ ಚಾಲಕನಾಗಿದ್ದ ಅವರು ತಮ್ಮ ಸಹವರ್ತಿಗಳಿಗೆ ಇಂದು ರೋಲ್‌ಮಾಡೆಲ್.

ರೇಡಿಯೋ ಆ್ಯಕ್ಟಿವ್ 90.4 ಪರಿಚಯಿಸಿದ ಮತ್ತೊಬ್ಬ ಮಹತ್ವಾಕಾಂಕ್ಷಿ ಆರ್‌ಜೆ ಜಯದೇವ್. ಅಂಧತ್ವ ಶಾಪವಲ್ಲ, ನಮ್ಮಲ್ಲಿ ಛಲವಿದ್ದರೆ ಯಾವುದೇ ಅಂಗವೈಕಲ್ಯವೂ ನಮ್ಮ ಚೇತನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುತ್ತಾರೆ. ಅವರೊಳಗಿನ ದೃಷ್ಟಿಯು ತಮ್ಮಂತಹ ಲಕ್ಷಾಂತರ ಮಂದಿಯ ಬಾಳಿಗೆ ಕೈಮರ!

`ಎದೆ ತುಂಬ ನೋವುಗಳ ಹೊತ್ತವರ ಅಂಗಳಕೆ
ಮೈ ತುಂಬ ನೋವುಗಳ ಉಂಡವರ ಬಾಗಿಲಿಗೆ
ಪಲ್ಲವಿಸು ಬಾ ವಸಂತ...~

ಎಂದು ಕವಿಯೊಬ್ಬರು ವಸಂತನನ್ನು ಆಹ್ವಾನಿಸುತ್ತಾರೆ. ರೇಡಿಯೊ ಆ್ಯಕ್ಟಿವ್ 90.4 ಮೆಗಾಹರ್ಟ್ಸ್ ಕೂಡ, ಹಾಗೆ ನೋವುಂಡವರ ಬಾಳ ವಸಂತದ ರೂಪಕದಂತೆ ಭಾಸವಾಗುತ್ತದೆ. ಅದು ಆಯ್ದುಕೊಳ್ಳುವ ವಸ್ತು, ಪ್ರಸ್ತುತಪಡಿಸುವ ಶೈಲಿ, ತಲುಪಬೇಕೆಂದಿರುವ ಹೃದಯಗಳು... ಒಬ್ಬೊಬ್ಬರ ಒಳದೃಷ್ಟಿಗಳನ್ನೂ ತೆರೆಸುವಲ್ಲಿ ಮತ್ತೆ ಮತ್ತೆ ಸಫಲವಾಗಲಿ. ಏನಂತೀರಾ? ಅಂದಹಾಗೆ, ನೀವಾಗಲೇ 90.4 ಮೆಗಾಹರ್ಟ್ಸ್‌ಗೆ ಕಿವಿಯಾನಿಸಿಬಿಟ್ಟಿರಾ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.