
ಈಗಂತೂ ಬೆಂಗಳೂರಿನ ಬಸ್‌ಗಳಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣಿಸಲು ಸಾಕಷ್ಟು ಸಮಯವೇ ಬೇಕು. ಓದುವ ಹವ್ಯಾಸ ಇದ್ದವರಿಗೆ ಕೈಯಲ್ಲಿ ಪುಸ್ತಕ ಹಿಡಿದರೆ ಸುಲಭದಲ್ಲಿ ಹೊತ್ತು ಹೋಗುತ್ತದೆ (ಚಲಿಸುವ ವಾಹನದಲ್ಲಿ ಓದಿದರೆ ಕಣ್ಣಿಗೆ ಹಾನಿ ಎಂದು ಗೊತ್ತಿದ್ದರೂ ಸಮಯ ಕಳೆಯಲು ಏನಾದರೂ ಬೇಕೇಬೇಕಲ್ಲ). ಒಂದು ವೇಳೆ ಪುಸ್ತಕ ಇಲ್ಲದಿದ್ದರೆ ಹೇಗೆ? 
ಪ್ರಯಾಣದ ಅವಧಿಯಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಬೇಕು, ಉತ್ತಮ ಪುಸ್ತಕ ಓದಬೇಕು ಎನ್ನುವವರಿಗಾಗಿ ಬಿಎಂಟಿಸಿಯ ಬಸ್ಸೊಂದರಲ್ಲಿ ಗ್ರಂಥಾಲಯ ಇದೆ.
ಇದೇನಪ್ಪ ಎಂದು ಆಶ್ಚರ್ಯವಾಯಿತೆ? ಹೌದು!  ಪೀಣ್ಯ 2ನೇ ಹಂತದಿಂದ ಮೆಜೆಸ್ಟಿಕ್‌ಗೆ ಸಂಚರಿಸುವ ಬಿಎಂಟಿಸಿಯ ಪುಷ್ಪಕ್ ಪ್ಲಸ್ ಬಸ್  (ಕೆ 01ಎಫ್ ಎ 872) ನಲ್ಲಿದೆ ಈ ಉಚಿತ ಗ್ರಂಥಾಲಯ. ಇಷ್ಟೇ ಅಲ್ಲ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿವಿಧ ರಾಷ್ಟ್ರನಾಯಕರ ಛಾಯಾಚಿತ್ರಗಳು ಬಸ್ಸಿನ ಒಳ ಭಾಗದಲ್ಲಿ ರಾರಾಜಿಸುತ್ತಿವೆ. 
ಚಾಲಕ ಕುಳಿತುಕೊಳ್ಳುವ ಹಿಂಭಾಗದಲ್ಲಿ ಕಪಾಟೊಂದನ್ನು ಜೋಡಿಸಿ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಅಲ್ಲಿ ತ್ರಿವೇಣಿ, ಶಿಶುನಾಳ ಶರೀಫ, ತರಾಸು, ಕುವೆಂಪು, ದ.ರಾ.ಬೇಂದ್ರೆ ಮುಂತಾದ ಪ್ರಮುಖ ಸಾಹಿತಿಗಳ ಕವನ, ಕಾದಂಬರಿಗಳು, ಸಣ್ಣ ಕಥೆಗಳನ್ನು ಒಳಗೊಂಡ 350ಕ್ಕೂ ಹೆಚ್ಚಿನ ಗ್ರಂಥಗಳಿವೆ. ಜೊತೆಗೆ ಪ್ರತಿ ದಿನದ ಸುದ್ದಿ ಪತ್ರಿಕೆಗಳು ಓದಲು ಸಿಗುತ್ತವೆ. 
`ಪ್ರಯಾಣಿಕರಿಂದ ಗುರುತಿನ ಚೀಟಿಯನ್ನು ಪಡೆದು ಪುಸ್ತಕಗಳನ್ನು ಓದಲು ಕೊಡುತ್ತೇವೆ. ನಿತ್ಯ ಮಧ್ಯಾಹ್ನದ ವೇಳೆ ಸಂಚರಿಸುವ ಪ್ರಯಾಣಿಕರು ಹೆಚ್ಚಾಗಿ ಓದುತ್ತಾರೆ~ ಎನ್ನುತ್ತಾರೆ ಬಸ್ ಸಿಬ್ಬಂದಿ. 
ಈ ಬಸ್ ಚಾಲಕರಾಗಿದ್ದ ಶ್ರೀಕಾಂತ್ 2004ರಲ್ಲಿ ಇದರಲ್ಲಿ ಗ್ರಂಥಾಲಯ ಆರಂಭಿಸಿದರು. ಜೇಬಿನ ಸ್ವಂತ ದುಡ್ಡು ಹಾಕಿ 12 ಸಾವಿರ ರೂಪಾಯಿ ಮೊತ್ತದ ಪುಸ್ತಕಗಳನ್ನು ಖರೀದಿಸಿ ಇದರಲ್ಲಿಟ್ಟರು. ಪ್ರಯಾಣಿಕರಿಗಾಗಿ ಏನಾದರೂ ಉಪಯೋಗವಾಗುವ ಕೆಲಸ ಮಾಡಬೇಕೆಂಬ ಉದ್ದೇಶ ಅವರದಾಗಿತ್ತು.
 
ಇದಕ್ಕೆ ಸ್ಪಂದಿಸಿದ ಅನೇಕ ಪ್ರಯಾಣಿಕರು ತಾವೂ ಒಂದಿಷ್ಟು ಪುಸ್ತಕಗಳನ್ನು ದಾನ ಮಾಡಿದರು. ಅವರ ವರ್ಗಾವಣೆಯ ನಂತರ ಈ ಬಸ್‌ಗೆ ಚಾಲಕರಾಗಿ ಬಂದ ವೆಂಕಟೇಶ್ ಈಗ ನಿರ್ವಾಹಕರ ಸಹಕಾರದೊಡನೆ ಅಚ್ಚುಕಟ್ಟಾಗಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಈ ಬಸ್ಸಿನಲ್ಲಿ ಪೀಣ್ಯದಿಂದ ಮೆಜೆಸ್ಟಿಕ್‌ಗೆ ಪ್ರಯಾಣಿಸುವಾಗ ಸಮಯ ಕಳೆಯಲು ಪುಸ್ತಕ, ಪತ್ರಿಕೆಗಳು ನೆರವಾಗುತ್ತವೆ. ಇಂಥದೇ ಸೌಲಭ್ಯವನ್ನು ಬಿಎಂಟಿಸಿ ಇತರೆ ಬಸ್‌ಗಳಿಗೂ ಕಲ್ಪಿಸಿದರೆ ಸಾಹಿತ್ಯಾಸಕ್ತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಪ್ರಯಾಣಿಕ ನಾಗರಾಜ್.
ಈ ಬಸ್ಸನ್ನು ಆಗಾಗ ಸಾಂದರ್ಭಿಕ ಒಪ್ಪಂದದ ಮೇಲೆ ಮದುವೆ, ಪ್ರವಾಸಗಳಿಗೆ ಕಳಿಸುತ್ತಾರೆ. ಅಂಥ ಸಂದರ್ಭದಲ್ಲಿ ಗ್ರಂಥಾಲಯ ನಿರ್ವಹಣೆ ಕಷ್ಟ. ಹೀಗಾಗಿ ಇದನ್ನು ಹೊರಗೆ ಬಾಡಿಗೆಗೆ ಕಳಿಸುವ ಬದಲು ನಗರದಲ್ಲೇ ಬೇರೆ ರೂಟ್‌ಗೆ ಬಿಟ್ಟರೆ ಗ್ರಂಥಾಲಯದ ಉಪಯೋಗ ಹೆಚ್ಚು ಜನರಿಗೆ ಸಿಗುತ್ತದೆ. ಬಿಎಂಟಿಸಿ ಅಧಿಕಾರಿಗಳು ಮನಸ್ಸು ಮಾಡಬೇಕಷ್ಟೇ ಎನ್ನುತ್ತಾರೆ ಈ ಬಸ್‌ನಲ್ಲಿ ಹೆಚ್ಚಾಗಿ ಪ್ರಯಾಣಿಸುವ ವೈದೇಹಿ.
ಗ್ರಂಥಾಲಯದ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಈ ಬಸ್ಸಿನಲ್ಲಿದೆ. ಒಟ್ಟಾರೆ ಇದರಲ್ಲಿ ಪ್ರಯಾಣಿಸುವವರಿಗೆ ಜ್ಞಾನಾರ್ಜನೆಯ ಬೋನಸ್ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.