ADVERTISEMENT

ಬಹುಮುಖಿ ಕಲಾವಿದೆ ಅನಿತಾ

ಸುರೇಖಾ ಹೆಗಡೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಬಹುಮುಖಿ ಕಲಾವಿದೆ ಅನಿತಾ
ಬಹುಮುಖಿ ಕಲಾವಿದೆ ಅನಿತಾ   

ಒಮ್ಮೆ ಕಲೆಯ ಮೋಡಿಗೊಳಗಾದರೆ ಅದರಿಂದ ಹೊರಬರುವುದು ಕಷ್ಟ. ಪ್ರತಿ ಕ್ಷಣವೂ ಇನ್ನೊಂದು, ಹೊಸತೊಂದು ಕಲಿಯುವ ಹಂಬಲ ಉಂಟಾಗುತ್ತದೆ. ಅದೇ ಹಂಬಲದಲ್ಲಿ ಚಿಕ್ಕಸಂದ್ರ ನಿವಾಸಿ ಎಂ. ಅನಿತಾ ಆಚಾರ್ಯ 20ಕ್ಕೂ ಹೆಚ್ಚು ಬಗೆಯ ಕಲೆಯನ್ನು ಒಲಿಸಿಕೊಂಡಿದ್ದಾರೆ.

ಚಿಕ್ಕಂದಿನಿಂದಲೂ ಅವರದ್ದು ಕ್ರಿಯಾಶೀಲ ಮನಸ್ಸು. ಕಲೆಯ ಬಗೆಗೆ ವಿಶೇಷ ಒಲವು. ಚಿಕ್ಕಪುಟ್ಟ ವಸ್ತು ಕಂಡರೂ ಅದಕ್ಕೆ ಕಲೆಯ ಆಯಾಮ ನೀಡುವುದು ಹೇಗೆ ಎಂದೇ ಅವರ ಮನಸ್ಸು ಯೋಚಿಸುತ್ತಿತ್ತು. ಪೆನ್ನಿನ ರಿಫಿಲ್ಲು, ಕಿತ್ತುಹೋದ ಅಂಗಿಯ ಬಟನ್‌ ಕಂಡರೂ ಏನು ಮಾಡುವುದು ಎಂದು ಅವರ ಕ್ರಿಯಾಶೀಲ ಮನಸ್ಸು ಚಿಂತಿಸುತ್ತಿತ್ತು. ಹೀಗಾಗಿ ಅವರು ವಿಜಯನಗರದಲ್ಲಿ ಕೃತಕ ಬೊನ್ಸಾಯ್‌ ಗಿಡ ನಿರ್ಮಿಸುವ ಕಲೆ, ಗುಜರಾತಿ ಬೀಡ್‌ ಆಭರಣ ಮಾಡುವ ಕಲೆಯನ್ನು ಕಲಿತರು. ಅಲ್ಲದೆ ಟೆರ್ರಾಕೋಟಾ ಆಭರಣ ಕಲೆಯನ್ನೂ ಸಿದ್ಧಿಸಿಕೊಂಡರು.

ಸದ್ಯ ಕೃತಕ ಬೊನ್ಸಾಯ್ ಗಿಡ ರಚಿಸುವುದು, ಸ್ಟಾಕಿಂಗ್‌ ಫ್ಲವರ್‌ ಮೇಕಿಂಗ್‌, ಟೆರ್ರಾಕೋಟಾ ಆಭರಣ, ಸಾಸ್‌ಪೆಸ್ಸೊ (sospesso), ಡೆಕೊಪೇಜ್‌, ಪೇಪರ್‌ ನೇಯ್ಗೆ, ಕ್ವಿಲ್ಲಿಂಗ್‌, ಥಾಯ್‌ ಕ್ಲೇ ಫ್ಲವರ್‌ ಮೇಕಿಂಗ್‌, ಬಗೆಬಗೆ ಶೈಲಿಯ ಪೇಂಟಿಂಗ್‌ ಅವರಿಗೆ ತಿಳಿದಿದೆ. ಜೂಲಾ ವೈಯರ್‌ನಿಂದ ಬಗೆಬಗೆಯ ಅಲಂಕಾರಿಕ ಹಾಗೂ ಉಪಯೋಗಿ ವಸ್ತುಗಳನ್ನು ರಚಿಸುವುದು ಇವರಿಗೆ ಗೊತ್ತು.

ADVERTISEMENT

ಅಲ್ಲದೆ ವಿವಿಧ ವಿನ್ಯಾಸದಲ್ಲಿ ಕುಚ್ಚು ಹಾಕುವುದು, ಎಂಬ್ರಾಯ್ಡರಿ ಮಾಡುವುದು ತಿಳಿದಿದೆ. ಕ್ಯಾಲಿಗ್ರಫಿ ಕಲೆಯನ್ನೂ ಅವರು ಸಿದ್ಧಿಸಿಕೊಂಡಿದ್ದಾರೆ. ಅಕ್ರಲಿಕ್‌ ರಂಗೋಲಿ, ಕ್ಯಾಂಡಲ್‌ ಮೇಕಿಂಗ್‌, ಸಾಫ್ಟ್‌ ಟಾಯ್ಸ್‌ ರಚನೆಯನ್ನೂ ಅವರು ಮಾಡುತ್ತಾರೆ.

ಹೀಗೆ ವಿಭಿನ್ನ ಕಲಾಕೃತಿಗಳನ್ನು ರಚಿಸಿ ಖುಷಿ ಪಡುವ ಅನಿತಾ ಅವರು ತ್ಯಾಜ್ಯ ವಸ್ತುಗಳನ್ನು ತಮ್ಮ ಕಲಾದಾರಿಯಲ್ಲಿ ಬಳಸಿಕೊಳ್ಳುತ್ತಾರೆ. ಬಳಸಿದ ಬಾಟಲ್‌, ಪತ್ರಿಕೆ, ಪ್ಲಾಸ್ಟಿಕ್‌ ಲೋಟ ಎಲ್ಲವೂ ಅವರ ಕ್ರಿಯಾಶೀಲ ಮನಸ್ಸಿನಲ್ಲಿ ಕಲೆಯಾಗಿ ಅರಳುತ್ತವೆ.

‘ನಮ್ಮದು ಬ್ಯುಸಿನೆಸ್‌ ಕುಟುಂಬ. ಡಿಪ್ಲೊಮಾ ಇನ್‌ ಐಟಿ ಮಾಡಿದ್ದೇನೆ. ಹೆಣ್ಣುಮಕ್ಕಳು ಕೆಲಸಕ್ಕೆ ಹೋಗುವುದು ಬೇಡ ಎಂಬುದು ಅಪ್ಪನ ಕಟ್ಟಪ್ಪಣೆ. ಹೀಗಾಗಿ ಚಿಕ್ಕಂದಿನಿಂದಲೂ ಬೆಳೆಸಿಕೊಂಡಿದ್ದ ಕರಕುಶಲ ಕಲೆಯೆಡೆಗೆ ಮನಸ್ಸು ಹೊರಳಿಸಿದೆ’  ಎನ್ನುವ ಅನಿತಾ ಮಲ್ಲೇಶ್ವರದಲ್ಲಿ ಆಭರಣ ಮಳಿಗೆಯನ್ನೂ ನಡೆಸುತ್ತಿದ್ದರು.

ಕಲೆಯ ಕೆಲವು ಪಟ್ಟುಗಳನ್ನಷ್ಟೇ ಕಲಿತಿದ್ದ ಅವರು ವಿವಿಧ ಬಗೆಯ ಆಭರಣ ರಚನೆ, ವಿಭಿನ್ನ ಕಲೆಯನ್ನು ಸ್ವಪ್ರಯತ್ನದಿಂದ ಕಲಿತುಕೊಂಡರು.  ಕಲೆಯ ವಿಭಿನ್ನತೆಯನ್ನು ಸ್ಫುರಿಸುವ ವಿಶೇಷ ವಸ್ತುಗಳನ್ನು ಕಂಡಾಗ ಅವರ ಮನಸ್ಸು ಹಾತೊರೆಯುತ್ತಿತ್ತು.

ತಾನೂ ಅಂಥದ್ದೇ ವಸ್ತುವೊಂದನ್ನು ತಯಾರಿಸಿ ಮನಸ್ಸಿಗೆ ಸಮಾಧಾನ ಹೇಳುತ್ತಿದ್ದರು.  ಅಂದಹಾಗೆ ಅನೇಕ ಆಸಕ್ತ ಮಹಿಳೆಯರಿಗೆ ಜಾಲಹಳ್ಳಿ ಕ್ರಾಸ್‌ ಬಳಿ ಕೆಲವು ತರಗತಿಗಳನ್ನೂ ಉಚಿತವಾಗಿ ಅವರು ಹೇಳಿಕೊಟ್ಟಿದ್ದಾರೆ. ಅನೇಕ ಬೇಸಿಗೆ ಶಿಬಿರಗಳಲ್ಲೂ ಕಲಾಬೋಧನೆ ಮಾಡಿದ್ದಾರೆ.

ಆಸಕ್ತರಿಗೆ ಕಲೆಯನ್ನು ಪಸರಿಸುವುದರ ಜೊತೆಗೆ ಸ್ನೇಹಿತರಿಗೆ, ಸಂಬಂಧಿಕರಿಗೆ ಅನಿತಾ ತಾವು ಕಲಿತ ಕಲೆಯಿಂದಲೇ ವಿಶೇಷ ಕಲಾಕೃತಿ ರಚಿಸಿ ಉಡುಗೊರೆಯಾಗಿ ನೀಡುವ ಪರಿಪಾಠವನ್ನೂ ಹಾಕಿಕೊಂಡಿದ್ದಾರೆ. ಪ್ರಾರಂಭದಲ್ಲಿ ಖಾಲಿ ಬಾಟಲಿ ಸಿಕ್ಕರೆ ಪೇಂಟಿಂಗ್‌ ಮಾಡಿ ಖುಷಿ ಪಡುತ್ತಿದ್ದರು.

ಆದರೆ ಈಗ ಅದರ ಮೇಲೆ ಥ್ರೆಡ್‌ವರ್ಕ್‌, ಡೆಕೊಪೇಂಟಿಂಗ್‌ ಶೈಲಿಯನ್ನೂ ಪ್ರಯತ್ನಿಸುತ್ತಾರೆ. ಅದನ್ನೇ ವಾಸ್‌ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಮರದ ಚೂರು ಸಿಕ್ಕರೆ ಅದಕ್ಕೂ ಕಲಾಸ್ಪರ್ಶ ಅವರಿಂದ ದೊರೆಯುತ್ತದೆ. ಪ್ಲಾಸ್ಟಿಕ್‌ ಬಾಟಲಿಯನ್ನು ಕತ್ತರಿಸಿ ಹೂವಿನಾಕಾರ ನೀಡುವುದು, ಅದನ್ನೇ ಕ್ಯಾಂಡಲ್‌ ಹೋಲ್ಡರ್‌ ರೀತಿಯಲ್ಲಿ ಬಳಸಿಕೊಳ್ಳುವುದು ಎಂದರೆ ಅವರಿಗೆ ಇಷ್ಟ.

ಪ್ರತಿಯೊಂದೂ ಅಗತ್ಯ ವಸ್ತುವನ್ನು ನೂರಾರು ಸಾವಿರಾರು ರೂಪಾಯಿ ನೀಡಿ ಕೊಂಡುಕೊಳ್ಳುವುದಕ್ಕಿಂತ ನಮ್ಮ ಪ್ರಯತ್ನದಲ್ಲರಳಿದ ವಸ್ತುಗಳ ಮೇಲೆ ವಿಶೇಷ ಒಲವು ಇರುತ್ತದೆ. ಮನಸ್ಸಿಗೆ ತೃಪ್ತ ಭಾವವೂ ಸಿಗುತ್ತದೆ ಎನ್ನುವುದು ಅವರ ಅನಿಸಿಕೆ.
ಫೇಸ್‌ಬುಕ್‌ ಕೊಂಡಿ: facebook.com/manucraftin
ಸಂಪರ್ಕಕ್ಕೆ: 80881 85527

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.