ADVERTISEMENT

ಬಾಗಿಲಿಲ್ಲದ ವಿಶಿಷ್ಟ ಹೋಟೆಲ್

ರಸಾಸ್ವಾದ

ಸತೀಶ ಬೆಳ್ಳಕ್ಕಿ
Published 24 ಮಾರ್ಚ್ 2014, 19:30 IST
Last Updated 24 ಮಾರ್ಚ್ 2014, 19:30 IST
ಬಾಗಿಲಿಲ್ಲದ ವಿಶಿಷ್ಟ ಹೋಟೆಲ್
ಬಾಗಿಲಿಲ್ಲದ ವಿಶಿಷ್ಟ ಹೋಟೆಲ್   

ಡಬಲ್‌ ಟ್ರೀ ಬೈ ಹಿಲ್ಟನ್‌ ಈಗ ನಗರಕ್ಕೂ ಕಾಲಿರಿಸಿದೆ. ಐಷಾರಾಮಿತನದಿಂದ ಗಮನಸೆಳೆಯುವ ಈ ಹೋಟೆಲ್‌ನಲ್ಲಿ ಅಚ್ಚುಕಟ್ಟಾದ ಒಂದು ರೆಸ್ಟೋರೆಂಟ್‌ ಇದೆ. ಹೆಸರು ಏಷ್ಯಾ ಅಲೈವ್‌. ಈ ರೆಸ್ಟೋರಾದಲ್ಲಿ ಗ್ರಾಹಕರು ಪ್ರಪಂಚದ ಎಲ್ಲ ಬಗೆಯ ಖಾದ್ಯಗಳ ರುಚಿ ನೋಡಬಹುದು. ಆದರೆ, ಇಲ್ಲಿ ಸಿಕ್ಕುವ ಡಬ್ಬಲ್‌ ಟ್ರೀ ಕುಕ್ಕಿಸ್‌ ಹಾಗೂ ಕಾಂಬೋಡಿಯನ್‌ ಫಿಶ್‌ ರುಚಿಯನ್ನು ಮಾತ್ರ ಮಿಸ್‌್ ಮಾಡದೇ ಸವಿಯಬೇಕು. ಹಾಗಿವೆ, ಅವುಗಳ ರುಚಿ.

ಡಬಲ್‌ ಟ್ರೀ ತಲುಪಿದಾಗ ಅಲ್ಲಿನ ವ್ಯವಸ್ಥಾಪಕ ವಿಶಾಲ್‌ದೀಪ್‌ ಎದುರುಗೊಂಡರು. ಕುಶಲೋಪರಿ ವಿಚಾರಿಸಿದ ನಂತರ ಅವರು ಹೋಟೆಲ್‌ ವಿಶೇಷತೆ ವಿವರಿಸಲು ಮುಂದಾದರು. ‘ಬೆಂಗಳೂರಿಗೆ ಮೊದಲ ಬಾರಿಗೆ ಕಾಲಿಟ್ಟಿರುವ ಡಬಲ್‌ ಟ್ರೀನಲ್ಲಿ ಹಲವು ವಿಶೇಷತೆಗಳಿವೆ.

ಐಷಾರಾಮಿ ಕೊಠಡಿಗಳನ್ನು ಕಡಿಮೆ ಬೆಲೆಗೆ ಒದಗಿಸುವುದು ಒಂದು ಅಗ್ಗಳಿಕೆಯಾದರೆ, ಅದಕ್ಕೆ ಪೂರಕವಾಗಿ ಎಲ್ಲ ಬಗೆಯ ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ನಮ್ಮ ಮತ್ತೊಂದು ಹಿರಿಮೆ. ನಮ್ಮ ಹೋಟೆಲ್‌ನಲ್ಲಿ ಎಂಟು –ಹತ್ತು ದಿನ ತಂಗುವ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಕೊಡುತ್ತಿದ್ದೇವೆ’ ಎಂದರು. ಹೀಗೆ ಅವರು ವಿವರಣೆ ನೀಡುವಷ್ಟರಲ್ಲಿ ರೆಸ್ಟೋರೆಂಟ್‌ ತಲುಪಿದ್ದೆವು. ಆನಂತರ ಅವರ ಮಾತು ಏಷ್ಯನ್‌ ಅಲೈವ್‌ ರೆಸ್ಟೋರೆಂಟ್‌ನತ್ತ ಹೊರಳಿತು. ಕುಳಿತುಕೊಳ್ಳುವಂತೆ ಸೂಚಿಸಿದ ಅವರು ತಂಪು ಪಾನೀಯಕ್ಕೆ ಆರ್ಡರ್‌ ಮಾಡಿದರು.

ಬಾಗಿಲ ಹಂಗಿಲ್ಲ...
ಆರಾಮವಾಗಿ ಕುಳಿತು ರೆಸ್ಟೋರೆಂಟ್‌ ವೀಕ್ಷಿಸುತ್ತಿದ್ದಾಗ ಒಂದು ಸಂಗತಿ ಅಚ್ಚರಿ ಮೂಡಿಸಿತು. ಆ ರೆಸ್ಟೋರೆಂಟ್‌ಗೆ ಪ್ರವೇಶದ್ವಾರದಲ್ಲಿ ಬಾಗಿಲೇ ಇರಲಿಲ್ಲ. ಹೋಟೆಲ್‌ನ ಲಾಂಜ್‌ಗೆ ಹೊಂದಿಕೊಂಡಂತೆ ಟೇಬಲ್‌ಗಳನ್ನು ಜೋಡಿಸಿಡಲಾಗಿತ್ತು.

ಏಕೆ ಹೀಗೆ ಎಂಬ ಪ್ರಶ್ನೆಗೆ ವಿಶಾಲ್‌ದೀಪ್‌ ಉತ್ತರಿಸಿದ್ದು ಹೀಗೆ: ‘ಹೌದು ಏಷ್ಯಾ ಅಲೈವ್‌ಗೆ ಉದ್ದೇಶಪೂರ್ವಕವಾಗಿಯೇ ‘ದ್ವಾರ ಬಾಗಿಲು’ ಇರಿಸಿಲ್ಲ. ಹೋಟೆಲ್‌ನ ಲಾಂಜ್‌ ಮತ್ತು ರೆಸ್ಟೋರೆಂಟ್‌ನ ಒಳಾಂಗಣ ಎರಡನ್ನೂ ಹೊಂದಿಕೊಂಡಂತೆ ವಿನ್ಯಾಸಗೊಳಿಸಲಾಗಿದೆ. ಲಾಂಜ್‌ನಲ್ಲಿ ಕುಳಿತ ಗ್ರಾಹಕರು ಊಟ ಮಾಡುವುದನ್ನು ಲೈವ್‌ ಆಗಿ ಕಣ್ತುಂಬಿಕೊಳ್ಳಬಹುದು. ಹಾಗೆಯೇ, ಅದನ್ನು ನೋಡಿ ತಿನ್ನುವ ಆಸೆಯಾದವರೂ ಕುಳಿತಲ್ಲಿಂದಲೇ ಆರ್ಡರ್‌ ಮಾಡಬಹುದು. ಏಷ್ಯಾ ಅಲೈವ್‌ ಮಲ್ಟಿಕ್ಯುಸಿನ್‌ ರೆಸ್ಟೋರೆಂಟ್‌. ಇಲ್ಲಿ ಭಾರತೀಯ ಖಾದ್ಯಗಳ ಜತೆಗೆ ಚೀನಾ, ಥಾಯ್ಲೆಂಡ್‌, ಸಿಂಗಪುರ, ಹಾಂಗ್‌ಕಾಂಗ್‌ ಹಾಗೂ ಪಶ್ಚಿಮ ದೇಶಗಳ ಖಾದ್ಯಗಳೆಲ್ಲವೂ ಸಿಗುತ್ತವೆ’.

ಆಮೇಲೆ ಅವರು ಏಷ್ಯಾ ಅಲೈವ್‌ನಲ್ಲಿ ಸಿಗುವ ವಿಶೇಷ ಖಾದ್ಯಗಳ ಬಗ್ಗೆ ಹೇಳತೊಡಗಿದರು. ‘ನಮ್ಮಲ್ಲಿ ಸೂಪ್‌, ಸಾಲಡ್‌, ಸ್ಟಾರ್ಟರ್ಸ್‌, ಮುಖ್ಯ ಮೆನು ಹಾಗೂ ಡೆಸರ್ಟ್‌ ಒಳಗೊಂಡ ಫೈವ್‌ ಕೋರ್ಸ್‌ ಮೆನು ಇದೆ. ಪ್ರತಿಯೊಂದು ವಿಭಾಗದಲ್ಲಿ ಗ್ರಾಹಕರಿಗೆ ವಿಪುಲ ಆಯ್ಕೆಗಳನ್ನು ಒದಗಿಸಿದ್ದೇವೆ. ಪ್ರಪಂಚದ ಎಲ್ಲ ದೇಶಗಳ ಜನರೂ ನಮ್ಮ ಗ್ರಾಹಕರ ಪಟ್ಟಿಯಲ್ಲಿ ಇರುವುದರಿಂದ ಅವರಿಗೆ ಇಷ್ಟವಾಗುವ ಎಲ್ಲ ಖಾದ್ಯಗಳೂ ನಮ್ಮ ಮೆನುವಿನಲ್ಲಿ ಸ್ಥಾನ ಪಡೆದಿವೆ. ಸೀ ಫುಡ್‌, ಚಿಕನ್‌, ಮಟನ್‌, ಪೋರ್ಕ್‌ ಹೀಗೆ ಮಾಂಸಾಹಾರದಲ್ಲಿ ಎಲ್ಲ ಖಾದ್ಯಗಳು ಸಿಗುತ್ತವೆ. ಹಾಗೆಯೇ, ಸಸ್ಯಾಹಾರದಲ್ಲೂ ಅನೇಕ ಆಯ್ಕೆಗಳನ್ನು ಒದಗಿಸಿದ್ದೇವೆ. ಉಳಿದಂತೆ, ಬಫೆಯ ಆಯ್ಕೆಯೂ ಗ್ರಾಹಕರಿಗೆ ಲಭ್ಯವಿದೆ. ಬಫೆಯ ಬೆಲೆ ₨650 (ಸಸ್ಯಾಹಾರ), ₨750 (ಮಾಂಸಾಹಾರ). ಇಲ್ಲಿನ ಮತ್ತೊಂದು ವಿಶೇಷವೆಂದರೆ, ಮಕ್ಕಳಿಗಾಗಿಯೇ ವಿಶೇಷ ಮೆನು ಪರಿಚಯಿಸಿದ್ದೇವೆ’ ಎಂದರು ಅವರು.

ಊಟಕ್ಕೆ ಕಿಕ್‌ ಸಿಕ್ಕಾಗ...
ಖಾದ್ಯಗಳ ವಿಶೇಷತೆಯನ್ನು ವಿವರಿಸಿದ ನಂತರ ಅವರು ಊಟ ಸವಿಯಲು ಅವಕಾಶ ಮಾಡಿಕೊಟ್ಟರು. ಯಾವುದನ್ನು ಆರ್ಡರ್‌

ಮಾಡಬೇಕು ಎಂಬ ಗೊಂದಲಕ್ಕೆ ಅವಕಾಶ ಮಾಡಿಕೊಡದೇ ಅವರೇ ತಮ್ಮ ರೆಸ್ಟೋರೆಂಟ್‌ನ ವಿಶೇಷ ಖಾದ್ಯಗಳು ಹಾಗೂ ಸೂಪ್‌ ಆರ್ಡರ್‌ ಮಾಡಿದರು. ಮೊದಲಿಗೆ ನಾನ್‌ವೆಜ್‌ ಸೂಪ್‌ ಬಂತು. ಸಿಗಡಿ, ಶುಂಠಿ ಪರಿಮಳವಿದ್ದ ಸೂಪ್‌ ರುಚಿ ಒಗರೊಗರಾಗಿ ಚೆನ್ನಾಗಿತ್ತು.

ಆಮೇಲೆ, ಆಲೂವಿನಿಂದ ತಯಾರಿಸಿದ ವಡಾ, ಮಟನ್‌ ಬಂತು. ಎಣ್ಣೆಯಲ್ಲಿ ಕರಿದು, ಹದವಾಗಿ ಖಾರಪುಡಿ ಉದುರಿಸಿದ್ದ ಆ ಖಾದ್ಯ ಊಟಕ್ಕೆ ಒಳ್ಳೆ ‘ಕಿಕ್’ ನೀಡಿತು. ಅದನ್ನು ತಿಂದು ಕರಿದ ಮಾಂಸವನ್ನು ರುಚಿ ನೋಡಿದ್ದಾಯಿತು. ಮಾಂಸದ ತುಣುಕುಗಳು ಹಸಿರು ಮೆಣಸಿನ ಚಟ್ನಿಗೆ ಒಳ್ಳೆ ಸಾಥ್‌ ನೀಡಿತು. ಆಮೇಲೆ, ಚಿಕನ್‌ ಸ್ಟಿಕ್‌ ಹಾಗೂ ಪೋರ್ಕ್‌ ಫ್ರೈ ತಂದಿಟ್ಟು ರುಚಿ ನೋಡಲು ತಿಳಿಸಿದರು. ಎಲ್ಲ ಖಾದ್ಯಗಳ ರುಚಿಯೂ ಅಚ್ಚುಕಟ್ಟಾಗಿತ್ತು. ಸ್ಟಾರ್ಟರ್ಸ್‌ಗಳೇ ಹೊಟ್ಟೆ ತುಂಬಿಸಿದ ಅನುಭವ ನೀಡಿದ್ದರಿಂದ ಮುಖ್ಯ ಮೆನುವಿನಲ್ಲಿ ಸಿಂಗಪುರದ ಚಿಕನ್‌ ನೂಡಲ್ಸ್‌ ಹಾಗೂ ಮೊಸರನ್ನ ತಿಂದು ಊಟ ಸಂಪನ್ನಗೊಳಿಸಿದ್ದಾಯಿತು. ಕೊನೆಯಲ್ಲಿ ಡೆಸರ್ಟ್‌ ಎಂದು ಡಬ್ಬಲ್‌ ಟ್ರೀ ವಿದ್‌ ಚಾಕೊಲೆಟ್‌ ಐಸ್‌ಕ್ರೀಂ ಸವಿಯಲು ಕೊಟ್ಟರು. ಇದೇ ಈ ಹೋಟೆಲ್‌ನ ವಿಶೇಷಗಳಲ್ಲೊಂದು.

ರುಚಿ ಮತ್ತು ಗುಣಮಟ್ಟದ ಆಹಾರವನ್ನು ನ್ಯಾಯಯುತ ಬೆಲೆಯಲ್ಲಿ ಒದಗಿಸುವುದು ಏಷ್ಯಾ ಅಲೈವ್‌ನ ವಿಶೇಷತೆ. ಖಾದ್ಯಗಳಲ್ಲಿ ಬಹುಬಗೆಯ ಆಯ್ಕೆ ಒದಗಿಸಿರುವ ಈ ರೆಸ್ಟೋರೆಂಟ್‌ಗೆ ಒಮ್ಮೆ ಭೇಟಿ ನೀಡಬಹುದು.

ಸ್ಥಳ: ಏಷ್ಯಾ ಅಲೈವ್‌, ಇಬ್ಬಲೂರು ಗೇಟ್‌, ಸರ್ಜಾಪುರ ರಸ್ತೆ ಜಂಕ್ಷನ್‌. ಟೇಬಲ್‌ ಕಾಯ್ದಿರಿಸಲು: 6767 6565, 6765 6567.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.