ADVERTISEMENT

ಬಾಲಿವುಡ್ ಯೋಗಗುರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST
ಬಾಲಿವುಡ್ ಯೋಗಗುರು
ಬಾಲಿವುಡ್ ಯೋಗಗುರು   

 ಕಣ್ಣಲ್ಲಿರುವ ಆತ್ಮವಿಶ್ವಾಸದ ಮಿಂಚು ಎದುರಿಗಿದ್ದವರನ್ನು ಸೆಳೆದು ಬಿಡುವಂತಿತ್ತು. ಸಣ್ಣಗೆ ಹೊಟ್ಟೆ ಬಂದಿದ್ದರೂ ತೋಳುಗಳು ಬಿಗಿಯಾಗಿದ್ದವು. ಹಣೆಮೇಲೆ ಬೆವರ ಸಾಲು. ಶಾಂತ ಮುಖಭಾವ ಹೊತ್ತು ಮಂದಹಾಸ ಬೀರುತ್ತಾ ಮಾತಿಗಿಳಿದರು ಭರತ್ ಠಾಕೂರ್.

ನೋಡಿದ ಕೂಡಲೇ ಜಿಮ್‌ಗೆ ಹೋಗಿ ಬೆವರಿಳಿಸಿ ಬಂದಂತೆ ಅವರು ಕಾಣುತ್ತಿದ್ದರು. ಆದರೆ ಅದು ಯೋಗದಿಂದ ಸದೃಢಗೊಂಡ ಶರೀರ. ತಮಗೆ ಯೋಗ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಹೇಳುವ ಅವರು 150 ಯೋಗ ಕೇಂದ್ರಗಳ ಮಾಲೀಕ. ಇನ್ನು ಒಂದು ವರ್ಷದೊಳಗೆ 500 ಯೋಗಕೇಂದ್ರಗಳನ್ನು ತೆರೆಯಬೇಕೆಂಬುದು ಮಹತ್ವಾಕಾಂಕ್ಷೆ.

ಯಾವುದೇ ರೀತಿಯ ಔಪಚಾರಿಕ ಶಿಕ್ಷಣ ಪಡೆಯದೆ ನಾಲ್ಕನೇ ವಯಸ್ಸಿಗೇ ಮನೆಬಿಟ್ಟು, ಗುರು ಸುಖದೇವ್ ಬ್ರಹ್ಮಚಾರಿ ಅವರ ಜತೆ ಹಿಮಾಲಯಕ್ಕೆ ಪಯಣ ಬೆಳೆಸಿದವರು ಭರತ್. ನಂತರ ಗುರುವಿನ ಮಾರ್ಗದರ್ಶನದಂತೆ ಯೋಗ ಪ್ರಚಾರಕ್ಕೆ ಸಜ್ಜಾದರು. ನಂತರ ನಟಿ ಭೂಮಿಕಾ ಚಾವ್ಲಾರನ್ನು ಮದುವೆಯಾದರು.

ಮತ್ತೆ ಓದುವ ಹವ್ಯಾಸ ಬೆಳೆಸಿಕೊಂಡು ವಿಜ್ಞಾನ ವಿಷಯ ಆಯ್ಕೆಮಾಡಿಕೊಂಡರು. ಪಿಎಚ್.ಡಿ. ಕೂಡ ಮುಗಿಸಿದರು. ಇಂದು ದೇಶದ ಬಹುತೇಕ ಕಡೆ ಯೋಗ ಕೇಂದ್ರ ಆರಂಭಿಸಿದ್ದು, ಒಂದು ಲಕ್ಷದಷ್ಟು ತರಬೇತುದಾರರು ಅವರ ಜೊತೆ ಇದ್ದಾರೆ. ಹಳ್ಳಿಹಳ್ಳಿಗೂ ಹೋಗಿ ಯೋಗ ಪ್ರಸಾರ ಮಾಡಬೇಕೆಂಬುದು ಅವರ ಹೆಬ್ಬಯಕೆ.

ಮುಂಬೈನಲ್ಲಿರುವ ಇವರ ಯೋಗ ಕೇಂದ್ರಕ್ಕೆ ಬಾಲಿವುಡ್ ಬೆಡಗಿಯರ ದಂಡೇ ಮುತ್ತಿಗೆ ಹಾಕುತ್ತದೆಯಂತೆ. ಬಳುಕುವ ಲತೆಯಂತಿದ್ದ ದೇಹವನ್ನು ಮತ್ತಷ್ಟೂ ಕರಗಿಸಿ ಜೀರೋ ಸೈಜ್‌ಗೆ ಇಳಿಸಿದ ಕರೀನಾ  ಕಪೂರ್ ಕೂಡ ಇವರ ಯೋಗಕೇಂದ್ರಕ್ಕೆ ನಿತ್ಯ ಭೇಟಿ ನೀಡುತ್ತಾರಂತೆ. ಸೈಫ್ ಅಲಿಖಾನ್, ಸಲ್ಮಾನ್‌ಖಾನ್ ಅನುಷ್ಕಾ ಶೆಟ್ಟಿ ಹೀಗೆ ಎಲ್ಲರೂ ಇವರು ಹೇಳಿಕೊಡುವ ಯೋಗದಲ್ಲಿ ಆಸಕ್ತರಂತೆ.

ಮನಸ್ಸು ಸರಿಯಿದ್ದರೆ ಚೆನ್ನಾಗಿ ಊಟ ಸೇರುತ್ತದೆ, ಕಣ್ತುಂಬ ನಿದ್ದೆ ಮಾಡಬಹುದು. ಇನ್ನೊಬ್ಬರ ಜತೆ ಮಾತನಾಡುವಾಗಲೂ ಖುಷಿ ಹಂಚಬಹುದು. ಇದೆಲ್ಲ ಯೋಗದಿಂದ ಸಾಧ್ಯವೆಂಬುದು ಅವರ ಮಾತಿನ ಲಹರಿ.

`ಯೋಗ ಮಾಡಿದರೆ ಮುಖದಲ್ಲಿ ಒಂದು ರೀತಿಯ ಸೌಮ್ಯ ಭಾವ ಮೂಡುತ್ತದೆ. ಕಣ್ಣಲ್ಲಿ ಚೈತನ್ಯದ ಮಿಂಚು ಹರಿಯುತ್ತದೆ. ಇದೆಲ್ಲ ಜಿಮ್‌ನಿಂದ ಸಾಧ್ಯವಿಲ್ಲ. ಯೋಗದಿಂದ ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮ ಸಿಗುತ್ತದೆ~ ಎಂದು ಹೇಳುವ ಇವರಿಗೆ ಇನ್ಫೋಸಿಸ್ ಮಾಲೀಕ ನಾರಾಯಣಮೂರ್ತಿ ಸ್ಫೂರ್ತಿಯಂತೆ.

ದಿನಕ್ಕೆ ಒಂದು ಗಂಟೆ ಯೋಗ ಮಾಡಿದರೆ ಸಾಕು ಮನಸ್ಸು ಕೂಡ ಶಾಂತವಾಗಿರುತ್ತದೆ. ಸಮಸ್ಯೆಗಳ ಸುಳಿಯಿಂದ ನಿಧಾನವಾಗಿ ನಮ್ಮನ್ನು ನಾವು ಬಿಡಿಸಿಕೊಳ್ಳಬಹುದು. ಇಂದಿನ ಯುವಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳುತ್ತಾರೆ ಭರತ್.

ಇವರ ಯೋಗ ಕೇಂದ್ರದಲ್ಲಿ ಎಂಜಿನಿಯರ್, ಡಾಕ್ಟರ್‌ಗಳೂ ಇದ್ದಾರೆ. ಒಂದು ಸಾಫ್ಟ್‌ವೇರ್ ಕಂಪೆನಿ ಕೊಡುವುದಕ್ಕಿಂತ ಹೆಚ್ಚಿನ ಸಂಬಳ ಕೊಟ್ಟು ತರಬೇತುದಾರರನ್ನು ಇಟ್ಟುಕೊಂಡಿದ್ದಾರೆ. ಯೋಗಾಸಕ್ತರಿಗೆ ಸರಿಯಾಗಿ ಹೇಳಿಕೊಡುವವರು ಬೇಕು ಎಂಬ ಉಮೇದೇ ಇದಕ್ಕೆ ಕಾರಣ.

ಒಂದೇ ಸಲ ಸಣ್ಣಗಾಗಬೇಕು ಎಂದರೆ ಆಗಲ್ಲ. ಯಾವುದಕ್ಕೂ ಪ್ರಯತ್ನ ಬೇಕು. ಯೋಗದಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ಕೇವಲ ಮರಕ್ಕೆ ನೀರು ಹಾಕುವುದರಿಂದ ಪ್ರಯೋಜನವಿಲ್ಲ. ಗಿಡಕ್ಕೆ ನೀರು ಹಾಕಿ ಪೋಷಿಸಿದರೆ ಮಾತ್ರ ಒಳ್ಳೆಯ ಫಲ ಸಿಗುತ್ತದೆ ಎಂದು ತತ್ವ ಹೇಳುತ್ತಾರೆ.
ಯೋಗಾಸಕ್ತರು ಇಲ್ಲಿ ಲಾಗಿನ್ ಆಗಬಹುದು. www.artisticyoga.com
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.