ADVERTISEMENT

ಬಾಲ್ಯದ ನುಡಿಚಿತ್ರ...

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 19:30 IST
Last Updated 14 ಫೆಬ್ರುವರಿ 2011, 19:30 IST

ಬಾಲ್ಯವೆಂದರೆ ಹಾಗೇ. ಅದೊಂದು ಮರೆಯಲಾರದ ನುಡಿಚಿತ್ರ. ಮಾಂತ್ರಿಕ ವಾಸ್ತವತೆಯ ಜಗತ್ತು. ಅಮ್ಮ ಹೇಳುವ ಕಥೆಯಲ್ಲಿ ಬರುವ ರಾಕ್ಷಸರು, ದೇವತೆಗಳು. ಅಜ್ಜ ಹೇಳುವ ಕಥೆಯಲ್ಲಿ ಯಕ್ಷಿಣಿಯರು, ಅಡಗೂಲಜ್ಜಿಯರು, ಕೀಲು ಕುದುರೆ ಮೇಲೆ ಹಾರಿಹೋಗಿ ರಾಜಕುಮಾರಿ ಪಾರು ಮಾಡುವ ನಾಯಕ.

ಊರಿಗೆ ಆಗಾಗ್ಗೆ ಬರುವ ಸೈಕಲ್ ಸರ್ಕಸ್, ದೊಂಬರಾಟ... ಯಕ್ಷಗಾನ, ಭೂತದ ಕೋಲ, ಮೊಹರಂನ ಹುಲಿವೇಷ, ಕಂಬಳ, ಕೋಳಿ ಅಂಕ... ಎಲ್ಲವೂ ವರ್ಣಮಯ ಜಗತ್ತು. ಅವರೇ ನಮ್ಮ ಹೀರೊಗಳು. ವಿಲನ್‌ಗಳು. ಬಾಲ್ಯ ಕಳೆದು ಮುಂದೆ ಸಾಗಿದಂತೆ ಈ ಪಾತ್ರಗಳೆಲ್ಲ ಆಕರ್ಷಣೆ ಕಳೆದುಕೊಳ್ಳುತ್ತವೆ. ಹೊಟ್ಟೆಪಾಡಿಗಾಗಿ ಮಾಡುವ ಕಸರತ್ತಿನಂತೆ ಕಾಣುತ್ತದೆ. ಕಲಾವಿದ ಕೆ. ಪ್ರಭಾಕರ್ ಆ ಚೇತೋಹಾರಿ ನೆನಪುಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಿದ್ದಾರೆ.

ಪ್ರಸ್ತುತ ನಗರದಲ್ಲಿ ನಡೆಯುತ್ತಿರುವ ‘ಮೆಮೊಯರ್- ಬಾಲ್ಯದ ನೆನಪು’ ಸರಣಿಯಲ್ಲಿ ಮೀನು ಮಾರುವ ಗೋಪಣ್ಣ, ಹುಲಿ ವೇಷದ ನಾಗಣ್ಣ, ಗುಮ್ಟಿ ಬಾರಿಸುವ ಗಂಗಣ್ಣ ಅವರ ಕುಂಚದ ಕಲಾಕೃತಿಗಳಾಗಿದ್ದಾರೆ. ಕರಾವಳಿ, ಮಲೆನಾಡಿನಲ್ಲಿ ಕಳೆದ ಬಾಲ್ಯದ ಪ್ರಭಾವ ಪ್ರಭಾಕರ್ ಕಲಾಕೃತಿಗಳಲ್ಲಿ ಅಚ್ಚೊತ್ತಿದಂತೆ ಮೂಡಿಬಂದಿದೆ. ಬಹುತೇಕ ಎಲ್ಲ ಕಲಾಕೃತಿಗಳಲ್ಲೂ ದಟ್ಟ ವರ್ಣಗಳನ್ನು ಬಳಸಿದ್ದು, ರಂಗು, ರಂಗಿನ ಬಾಲ್ಯವನ್ನು ನೆನಪಿಸಲು ಈ ಬಣ್ಣಗಳು ಪೂರಕವಾಗಿವೆ.

ಮೂಲತಃ ಶಿವಮೊಗ್ಗ ಜಿಲ್ಲೆ ಕೋಡೂರಿನವರಾದ ಪ್ರಭಾಕರ್ 18 ವರ್ಷದವರಿದ್ದಾಗಲೇ ಭಾರತೀಯ ವಾಯುಸೇನೆಗೆ ಸೇರಿದ್ದರು. 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ರಾಜ್ಯ ಸಚಿವಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಚಿಕ್ಕವರಿದ್ದಾಗಲೇ ಹತ್ತಿದ್ದ ಕುಂಚ, ಬಣ್ಣಗಳ ಹುಚ್ಚು ಈಗ ಅವರ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.

ಯಾವುದೇ ಕಲಾ ಶಾಲೆಗೆ ಹೋಗದೇ ಕುಂಚ ಪಳಗಿಸಿಕೊಂಡಿರುವ ಇವರ 5ನೇ ಏಕವ್ಯಕ್ತಿ ಪ್ರದರ್ಶನ ಇದು. ಶುಕ್ರವಾರ ಪ್ರದರ್ಶನ ಮುಕ್ತಾಯ.

ಸ್ಥಳ: ರೆನೈಸಾನ್ಸ್ ಗ್ಯಾಲರಿ, 104, ವೆಸ್ಟ್‌ಮಿನಸ್ಟರ್, 13, ಕನ್ನಿಂಗ್‌ಹ್ಯಾಮ್ ರಸ್ತೆ.  ಬೆಳಿಗ್ಗೆ 11ರಿಂದ ಸಂಜೆ 7.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.