ADVERTISEMENT

ಬೆಂಗಳೂರು ಏರ್‌ಪೋರ್ಟ್‌ ಹಬ್ಬ

ಹೇಮಾ ವೆಂಕಟ್
Published 24 ಮೇ 2018, 19:30 IST
Last Updated 24 ಮೇ 2018, 19:30 IST
‘ಕಾಲ್ಪನಿಕ್‌ ಥಿಯರಿ’ ಬ್ಯಾಂಡ್‌ ತಂಡ
‘ಕಾಲ್ಪನಿಕ್‌ ಥಿಯರಿ’ ಬ್ಯಾಂಡ್‌ ತಂಡ   

ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿ ಆಗಲೇ ಹತ್ತು ವರ್ಷ ತುಂಬಿದೆ. ಸದಾ ಗಿಜಿಗುಡುವ ನಿಲ್ದಾಣದಲ್ಲಿ ಕೆಲಸ ಮಾಡುತ್ತ ಹತ್ತು ವರ್ಷ ಕಳೆದ ಸಿಬ್ಬಂದಿಗೆ ಮಾತ್ರ ಈ ದಿನವನ್ನು ಸ್ಮರಣೀಯವಾಗಿಸುವ ಹಂಬಲ.

ವಿಮಾನದ ಹಾರಾಟದ ಸದ್ದಿನ ನಡುವೆ ಸಂಗೀತದ ಇಂಪನ್ನು ಹರಡಲು ಏರ್‌ಪೋರ್ಟ್‌ ಸಜ್ಜಾಗಿದೆ. ಏರ್‌ಪೋರ್ಟ್‌ನ ಹತ್ತನೆಯ ವರ್ಷಾಚರಣೆಯ ಪ್ರಯುಕ್ತ  ಮೇ 26ರಂದು ‘ಹಜ್‌ ಟರ್ಮಿನಲ್‌’ನಲ್ಲಿ ‘ಬೆಂಗಳೂರು ಏರ್‌ಪೋರ್ಟ್‌ ಹಬ್ಬ’ ಆಯೋಜಿಸಲಾಗಿದೆ. ಮಧ್ಯಾಹ್ನ 2ಗಂಟೆಯಿಂದ ರಾತ್ರಿ 11.30ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಹಬ್ಬದ ಸಂಭ್ರಮ ಹೆಚ್ಚಿಸಲು ವೈವಿಧ್ಯಮಯ ಆಹಾರ ಮಳಿಗೆಗಳು ಇರುತ್ತವೆ. ಫ್ಲೀ ಮಾರ್ಕೆಟ್‌ನಲ್ಲಿ ಶಾಪಿಂಗ್‌ ಮಾಡಬಹುದು, ಕಾರ್ಯಕ್ರಮಕ್ಕೆ ಬರುವ ಮಕ್ಕಳಿಗೆಂದೇ ಕಿಡ್ಸ್‌ ಜೋನ್‌ನಲ್ಲಿ ವಿವಿಧ ಆಟದ ವ್ಯವಸ್ಥೆಯೂ ಇರಲಿದೆ. ಚಿಲ್‌ ಏರಿಯಾ, ಬಾರ್‌ ಕೂಡಾ ಇರಲಿದೆ!

ADVERTISEMENT

ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳುವ ಮನರಂಜನಾ ಕಾರ್ಯಕ್ರಮದ ಮೂರು ವೇದಿಕೆಗಳಲ್ಲಿ ಖ್ಯಾತ ಗಾಯಕ ಶಾನ್‌, ಪ್ರಸಿದ್ಧ ಡಿಜೆ ಜಸ್ಮೀತ್, ‘ಕಾಲ್ಪನಿಕ್ ಥಿಯರಿ’ ರಾಕ್‌ ಬ್ಯಾಂಡ್‌ ತಂಡ, ಜಂಬೆ ಕಲೆಕ್ಟಿವ್, ಗಾಯಕ ಮತ್ತು ಗೀತರಚನಕಾರ ಲಾಯ್ಸಮ್‌, ಬೆಂಗಳೂರು ಮೂಲದ ಗಾಯಕ ಸಾಗರ್‌ ಶಾಸ್ತ್ರಿ, ಲ್ಯಾಟಿನ್‌ ಪಾಪ್ ಬ್ಯಾಂಡ್‌ ‘ಆರ್ಟೆಸನಾಟೊ ಪಲ್ಸೊ’, ಮನ್ನತ್ ಬ್ಯಾಂಡ್‌, ರಾಕ್‌ಬ್ಯಾಂಡ್‌ ‘ಆತ್ಮಾ’, ಗಾಯಕಿ ಸೌಂದರ್ಯ ಅವರು ಸಂಗೀತ ಸುಧೆ ಹರಿಸಲಿದ್ದಾರೆ.

ವಿಮಾನ ನಿಲ್ದಾಣದ ಸಿಬ್ಬಂದಿಯೂ ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ನಗರದ ಜನ ಈ ವಾರಾಂತ್ಯವನ್ನು ಇನ್ನಷ್ಟು ಸಂಗೀತಮಯವಾಗಿ ಕಳೆಯುವುದಕ್ಕೆ ಏರ್‌ಪೋರ್ಟ್‌ ಕಡೆ ಹೋಗಬಹುದು. ಈ ಬಾರಿ ಅಲ್ಲಿ ಲೋಹದ ಹಕ್ಕಿಗಳ ಕಲರವವನ್ನು ಮೀರಿಸುವ ಸಂಗೀತ ಝರಿ ಹರಿಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.