ADVERTISEMENT

ಬೆಳ್ಳಂದೂರು: ಒಂದು ಕೆರೆ, ಹಲವು ಅರ್ಥಗಳು

ಹರಿಣಿ ನಾಗೇಂದ್ರ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಬೆಂಗಳೂರಿನ ಅತಿ ದೊಡ್ಡ ಕೆರೆ ಬೆಳ್ಳಂದೂರು ಇತ್ತೀಚೆಗೆ ಕೆಟ್ಟ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಮಲಿನಗೊಂಡು, ನೊರೆ ಕಾರುತ್ತಿರುವ ಕೆಟ್ಟ ಕೆರೆ ಎಂಬ ಹಣೆಪಟ್ಟಿ ಅದಕ್ಕೆ ಅಂಟಿರುವುದು ದುರಂತ. ಅದರ ಶ್ರೀಮಂತ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ನೆನಪಿಸಿಕೊಳ್ಳಲು ಇದು ಸುಸಮಯ. ಆ ಕೆರೆಗೂ ಸ್ಥಳೀಯರಿಗೂ ನಗರಕ್ಕೂ ಇದ್ದ ನಂಟು ಕೂಡ ತುಂಬಾ ಮುಖ್ಯವಾದುದು.

ಕೆರೆಯ ಮೂಲದ ಕುರಿತು ವೈವಿಧ್ಯಮಯ ಪ್ರತೀತಿಗಳಿವೆ. ಸ್ಥಳೀಯ ದುಗ್ಗಲಮ್ಮ ದೇವಸ್ಥಾನದಲ್ಲಿ ಪೂಜೆ ಮಾಡುವ ಮಹಿಳೆಯ ಪ್ರಕಾರ ಕೆರೆಯ ಭೂಮಿ ಮೊದಲು ಬಾಳೆತೋಟದ ಜಾಗವಾಗಿತ್ತು. ದುಗ್ಗಲಮ್ಮ ದೇವಿಯು ವೇಷ ಮರೆಸಿಕೊಂಡು ಬಂದು, ತೋಟದ ಮಾಲೀಕನಲ್ಲಿ ಒಂದಿಷ್ಟು ಬಾಳೆಎಲೆಗಳು ಹಾಗೂ ಹಣ್ಣುಗಳನ್ನು ಕೊಡುವಂತೆ ಕೇಳಿಕೊಂಡಳು. ಆ ಮಾಲೀಕ ಕೊಡಲಿಲ್ಲ. ಕೋಪದಿಂದ ದುಗ್ಗಲಮ್ಮ ಜೋರು ಮಳೆ ಸುರಿಸಿದಳು. ಕೆಲವು ದಿನಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ತೋಟ ಮುಳುಗಿ, ಆ ಜಾಗ ಕೆರೆಯಾಗಿಬಿಟ್ಟಿತು.

ಸುತ್ತಮುತ್ತಲ ಒಂಬತ್ತು ಹಳ್ಳಿಗಳ ಜನರಿಗೆ ಅಲ್ಲೊಂದು ದೈವದ ಕಲ್ಲು ಕಂಡಮೇಲಷ್ಟೆ ಮಳೆ ನಿಂತಿದ್ದು. ಆ ದೈವದ ಕಲ್ಲೇ ದುಗ್ಗಲಮ್ಮನ ಸಂಕೇತ. ಅದನ್ನು ಅಂದಿನಿಂದ ಜನ ದುಗ್ಗಲಮ್ಮ ಎಂದೇ ಪೂಜಿಸುತ್ತಾ ಬಂದಿದ್ದಾರೆ. ಇನ್ನೊಂದು ಪ್ರತೀತಿ ಹೇಳುವುದೇ ಬೇರೆ: ವೃದ್ಧೆಯೊಬ್ಬಳು ಬಾಯಾರಿ ದಣಿದು ಈ ಪ್ರದೇಶಕ್ಕೆ ಬಂದಾಗ, ಕರುಣೆಯಿಂದ ಒಬ್ಬ ಕುಡಿಯಲು ನೀರು ಕೊಟ್ಟ. ಅದಕ್ಕೆ ಪ್ರತಿಯಾಗಿ ಆ ವೃದ್ಧೆ ಭೂಮಿಯ ಒಂದಿಷ್ಟು ಭಾಗವನ್ನು ಎಂದಿಗೂ ಬತ್ತದಂಥ ಕೆರೆಯಾಗಿ ಮಾರ್ಪಡಿಸಿದಳು. ಇವತ್ತು ಬೆಳ್ಳಂದೂರು ಕೆರೆ ವರ್ಷವಿಡೀ ತುಂಬಿಯೇ ಇರುತ್ತದೆ. ಆದರೆ, ನೀರಿನ ಬದಲು ಅಲ್ಲಿ ತುಂಬಿರುವುದು ಕೈಗಾರಿಕೆಗಳ ಹಾಗೂ ಮನೆಗಳ ತ್ಯಾಜ್ಯದ ಮಿಶ್ರಣಗಳು.

ಹತ್ತೊಂಬತ್ತು ಕೆರೆಗಳು ಕೋಡಿ ಬಿದ್ದರೆ ಆ ನೀರು ಬೆಳ್ಳಂದೂರು ಕೆರೆ ಸೇರುತ್ತದೆ. ಕೆರೆ ಮಲಿನಗೊಳ್ಳತೊಡಗಿದ್ದು 1970ರ ದಶಕದಿಂದ. ಕೆರೆ ದಂಡೆಗೆ ಹೊಂದಿಕೊಂಡ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ಕಾಲಘಟ್ಟ ಅದು. ಕ್ರಮೇಣ ಆ ಪ್ರದೇಶದ ಸುತ್ತಮುತ್ತ ವರ್ತುಲ ರಸ್ತೆ ನಿರ್ಮಾಣವಾಗಿ, ನಗರೀಕರಣ ವ್ಯಾಪಕವಾಗಿ ಆಯಿತು. ಕೆರೆಯ ಜೊತೆ ಸಾಮಾಜಿಕ, ಸಾಂಸ್ಕೃತಿಕ ನಂಟು ಇಲ್ಲದ ಹೊರಗಿನವರೂ ಇಲ್ಲಿ ಬಂದು ನೆಲೆಸತೊಡಗಿದರು.

ಒಂದಾನೊಂದು ಕಾಲದಲ್ಲಿ ಕೃಷಿ, ದನಗಳಿಗೆ ನೀರು ಸೇರಿದಂತೆ ದಿನನಿತ್ಯದ ಅಗತ್ಯಗಳಿಗೆ ಈ ಕೆರೆಯನ್ನೇ ಅವಲಂಬಿಸಿದ್ದವರು, ಕೆರೆಯಲ್ಲಿ ಮೀನು ಹಿಡಿಯುತ್ತಿದ್ದವರು ಅನೇಕರು. ವಲಸೆ ಬರುವವರ ಸಂಖ್ಯೆ ಹೆಚ್ಚಾದದ್ದೇ ತೊಂದರೆ ಶುರುವಾಯಿತು. ಕೆರೆ ಬಳಿ ದೊಡ್ಡ ಮೀನಿನ ಮಾರುಕಟ್ಟೆ ಇತ್ತು ಎಂದು ಕೆಂಪಾಪುರದ ಮೀನುಗಾರ ನೆನಪಿಸಿಕೊಳ್ಳುತ್ತಾರೆ. ನೂರಾರು ಕೆ.ಜಿ. ಮೀನುಗಳನ್ನು ಕೆರೆಯಲ್ಲಿ ಹಿಡಿದು, ನಗರದ ಹಲವು ಬಡಾವಣೆಗಳಿಗೆ ಸಾಗಿಸಿ ಮಾರಾಟ ಮಾಡುವ ಕಾಲವೂ ಇತ್ತಂತೆ. ಕೃಷಿ ಹಾಗೂ ಮೀನುಗಾರಿಕೆ ಇಲ್ಲಿ ನಿಂತುಹೋಗಿದೆ. ದನಗಳಿಗೆ ಕೆರೆ ಬಯಲು ಈಗ ದೊಡ್ಡ ಹುಲ್ಲುಗಾವಲಾಗಿಯೂ ಉಳಿದಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ದನ ಮೇಯುತ್ತವೆಯಷ್ಟೆ. ಈಗಲೂ ಇಲ್ಲಿ ಜೊಂಡನ್ನು ಬೆಳೆದು, ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ, ರಾಂಪುರ ಮತ್ತಿತರ ಹಳ್ಳಿಗಳಿಗೆ ಸಾಗಿಸುತ್ತಾರೆ. ಆ ಪ್ರದೇಶಗಳ ಪ್ರಾಣಿಗಳಿಗೆ ಮೇವು ಬೆಳೆಯಲು ನೀರಿನ ಸತ್ವ ಇರುವ ನೆಲ ಇಲ್ಲದಾಗಿರುವುದೇ ಇದಕ್ಕೆ ಕಾರಣ.

ಜೀವನಕ್ಕೆ ಕೆರೆಯನ್ನು ಅಲವಂಬಿಸಿದವರ ಸಂಖ್ಯೆ ಕಡಿಮೆಯಾದಂತೆ, ಅದರ ಜೊತೆಗೆ ಇದ್ದ ಸಾಂಸ್ಕೃತಿಕ ಸಂಬಂಧವೂ ಸಡಿಲವಾಗಿದೆ. ದುಗ್ಗಲಮ್ಮ ದೇವಸ್ಥಾನದಲ್ಲಿ ಪೂಜೆ ಮಾಡುವ ಮಹಿಳೆ ಹಿಂದೆ ಆಯೋಜಿಸುತ್ತಿದ್ದ ಜಾತ್ರೆಯ ವೈಭವವನ್ನು ನೆನಪಿಸುತ್ತಾರೆ. ಅಕ್ಕಿ, ಭತ್ತದಲ್ಲಿ ಮಾಡಿದ ದೀಪದ ಕಲಶವೇ 30–40 ಕೆ.ಜಿ. ಇರುತ್ತಿತ್ತಂತೆ. ಬಿದಿರಿನಿಂದ ಮಾಡಿದ ತೆಪ್ಪದ ಮೇಲೆ ಆ ದೀಪದ ಕಲಶವನ್ನು ತೇಲಿ ಬಿಡುತ್ತಿದ್ದರಂತೆ. ಈ ಆಚರಣೆಯನ್ನು ಬಿಟ್ಟು ಸುಮಾರು ಮೂರು ದಶಕಗಳೇ ಕಳೆದಿವೆ. ದುಗ್ಗಲಮ್ಮ ಹಾಗೂ ಅದರ ಸುತ್ತ ಇರುವ ಸಣ್ಣಪುಟ್ಟ ದೇವರ ಮೂರ್ತಿಗಳು ಈ ಕೆರೆಗೂ ಸ್ಥಳೀಯರಿಗೂ ಇದ್ದ ಗಟ್ಟಿ ನಂಟಿಗೆ ಸಾಕ್ಷಿಗಳಂತೆ ಉಳಿದುಕೊಂಡಿವೆ.

ಬೆಳ್ಳಂದೂರು ಕೆರೆಯ ಮೂಲಕ ಕುರಿತಂತೆ ಇರುವ ಐತಿಹ್ಯಗಳು, ಈ ಕೆರೆಯನ್ನು ಆಶ್ರಯಿಸಿದ್ದು ಬದುಕು ಮತ್ತು ಇವೆಲ್ಲವೂ ಒಟ್ಟಾಗಿ ಕೆರೆಯೊಂದಿಗೆ ಬೆಸೆದಿದ್ದ ಸಾಂಸ್ಕೃತಿಕ ಸಂಬಂಧಗಳೆಲ್ಲವೂ ಬೆಂಗಳೂರಿನ ನಗರೀಕರಣದ ಗದ್ದಲಲ್ಲಿ ಕಾಣದಾಗುತ್ತಿವೆ. ನಾವೆಲ್ಲ ನಮ್ಮ ಬಾಲ್ಯದ ಕಾಡುವಿಕೆಗಳನ್ನು ಈಗಲೂ ನೆನಪಿಟ್ಟುಕೊಂಡಿರುವಂತೆ ಬೆಳ್ಳಂದೂರು ಕೆರೆಯ ವೈಭವದ ನೆನಪುಗಳು ಇಲ್ಲಿನ ಹಳೆಯ ನಿವಾಸಿಗಳ ಮನಸ್ಸಿನಲ್ಲಿ ಇನ್ನೂ ಉಳಿದುಕೊಂಡಿವೆ.

ಈ ನೆನಪುಗಳನ್ನು ನಮ್ಮ ಪ್ರಜ್ಞೆಯ ಭಾಗವಾಗಿಸಿಕೊಂಡು ಕೆರೆಯ ಪುನರುಜ್ಜೀವನದ ಕೆಲಸಕ್ಕೆ ಮುಂದಾಗಬೇಕಿದೆ. 21ನೇ ಶತಮಾನದ ಬೆಂಗಳೂರಿನಲ್ಲಿ ಈ ದೊಡ್ಡ ಕೆರೆಯ ಪಾತ್ರವನ್ನು ಮರು ಶೋಧಿಸಿ ಅದರ ಸಾಂಸ್ಕೃತಿಕ, ಆರ್ಥಿಕ, ಪಾರಿಸರಿಕ ಹಾಗೂ ಆಧ್ಯಾತ್ಮಿಕ ವೈಭವವನ್ನು ಮತ್ತೆ ನಮ್ಮ ಬದುಕಿಗೆ ಬೆಸೆಯಬೇಕಿದೆ.

ಪೂರಕ ಮಾಹಿತಿ: ಸೀಮಾ ಮುಂಡೋಳಿ, ಹಿತ ಉನ್ನಿಕೃಷ್ಣನ್, ಬಿ. ಮಂಜುನಾಥ

(ಸೀಮಾ ಮುಂಡೋಳಿ ಹಾಗೂ ಹರಿಣಿ ನಾಗೇಂದ್ರ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ, ಹಿತ ಉಣ್ಣಿಕೃಷ್ಣನ್ ಹಾಗೂ ಬಿ. ಮಂಜುನಾಥ ಅಶೋಕ ಟ್ರಸ್ಟ್ ಪರಿಸರ ಸಂಶೋಧನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. )

ನಾಳೆ: ಜೀವವೈವಿಧ್ಯದ ತಾಣ ಸ್ಯಾಂಕಿ ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.