ADVERTISEMENT

ಭವಿಷ್ಯದ ಬೆಳಕು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಭವಿಷ್ಯದ ಬೆಳಕು
ಭವಿಷ್ಯದ ಬೆಳಕು   

ತಿಳಿ ಗುಲಾಬಿ ಬಣ್ಣದ ಸೀರೆ ತೊಟ್ಟಿದ್ದ ವಿದ್ಯಾರ್ಥಿನಿಯರ ಮೊಗದಲ್ಲಿ ಖುಷಿಯ ಹೊಳಪು. ಕಪ್ಪು ಕೋಟು- ಪ್ಯಾಂಟ್, ಬಿಳಿ ಅಂಗಿ ಹಾಕಿದ್ದ ಹುಡುಗರ ನಡಿಗೆಯಲ್ಲಿ ಪುಟಿಯುವ ಜೀವನೋತ್ಸಾಹ.
 
ಕೈಯಲ್ಲಿ ಮೇಣದಬತ್ತಿ ಹಿಡಿದು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಕಾಲೇಜಿನ ಆವರಣದ ತುಂಬೆಲ್ಲಾ ಬೆಳಕು ಚೆಲ್ಲಾಡಿತು. ವಿದ್ಯಾರ್ಥಿಗಳ ಕಣ್ಣಲ್ಲಿ ಆ ಬೆಳಕೇ ಭವಿಷ್ಯದ ಕನಸುಗಳ ಪ್ರತಿಫಲನದಂತೆ ಕಂಡಿದ್ದು.

ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ನಗರದ ಸಿ.ಎಂ.ಆರ್. ನ್ಯಾಷನಲ್ ಪಿಯು ಕಾಲೇಜಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭ. ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳೆಲ್ಲರೂ ಭಾಗವಹಿಸಿದ್ದರು.
 
ಪ್ರಾಂಶುಪಾಲರಾದ ನಂದಿನಿ ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇ. ವೆಂಕಟಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು `ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದಲ್ಲಿ ಲಭ್ಯವಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು~ ಎಂದರು.

ಕಾಲೇಜಿನ ವಿಜ್ಞಾನ ವಿಭಾಗದ ವರ್ಷದ ಅತ್ಯುತ್ತಮ ವಿದ್ಯಾರ್ಥಿ ರವೀಂದರ್ ಸಿಂಗ್ ಹಾಗೂ ವಾಣಿಜ್ಯ ವಿಭಾಗದ ಅತ್ಯುತ್ತಮ ವಿದ್ಯಾರ್ಥಿನಿ ಮೆಲ್ಲಿಸಾ ಹೆಪ್ಸಿಬಾ ಗೋಝರ್‌ಗೆ ಪ್ರಶಸ್ತಿ ನೀಡಿದರು.

ಡಾ. ಸಬಿತಾ ರಾಮಮೂರ್ತಿ, ಸಂಸ್ಥೆಯ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ಹಾಗೂ ಕಾರ್ಯದರ್ಶಿ ಕೆ.ಸಿ.ಜಗನ್ನಾಥರೆಡ್ಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾಲೇಜಿನ ಅವಿಸ್ಮರಣೀಯ ದಿನಗಳನ್ನು ಮೆಲುಕು ಹಾಕಿದರು.

ಬೀಳ್ಕೊಡುಗೆ ವೇಳೆ ಪರಸ್ಪರ ಹಚ್ಚಿಕೊಂಡಿದ್ದ ವಿದ್ಯಾರ್ಥಿಗಳಲ್ಲಿ ದೂರವಾಗಬೇಕಾದ ಅನಿವಾರ್ಯತೆಯ ಕುರಿತು ಬೇಸರವಿತ್ತು. ಕೊನೆಯಲ್ಲಿ ವಿದ್ಯಾರ್ಥಿಗಳ ಸಾಧನೆಯ ಸಾರವನ್ನು ಪರದೆಯ ಮೇಲೆ ತೋರಿಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.