ADVERTISEMENT

ಭಾವಜೀವಿಗಳ ಬಣ್ಣದ ನಂಟು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2013, 19:59 IST
Last Updated 8 ಫೆಬ್ರುವರಿ 2013, 19:59 IST
ಭಾವಜೀವಿಗಳ ಬಣ್ಣದ ನಂಟು
ಭಾವಜೀವಿಗಳ ಬಣ್ಣದ ನಂಟು   

ಚಿತ್ರಕಲಾ ಪರಿಷತ್‌ನಲ್ಲಿ ಗೀತಾಂಜಲಿ ಬಾಳಿಗಾ, ಶ್ಯಾಮಲಾ ಗುರುಪ್ರಸಾದ್, ಸುಜಾತಾ ಪವಾರ್ ಅವರ ರಂಗುರಂಗಿನ ಚಿತ್ರಗಳು ನೋಡುಗರನ್ನು ಆಕರ್ಷಿಸಲು ಸಜ್ಜಾಗಿವೆ. ಯಾವುದೇ ಕಲಾ ತರಗತಿಗೆ ಹೋಗಿ ಕಲಿಯದೆ ತಮ್ಮ ಮನಸ್ಸಿನಲ್ಲಿ ಮೂಡಿದ ರೇಖೆಗಳಿಗೆ ಇಲ್ಲಿ ಜೀವ ತುಂಬಿದ್ದಾರೆ. ತಮ್ಮ ಕಲಾಪಯಣದ ಅನುಭವವನ್ನು ಅವರು ಹಂಚಿಕೊಂಡಿದ್ದು ಹೀಗೆ ...

`ಕಲೆಗೆ ನಾನು ಆಯ್ಕೆ ಮಾಡಿಕೊಂಡಿದ್ದು ಮಹಿಳೆಯನ್ನು. ಹೆಣ್ಣು ಭಾವನೆಗಳ ಕಣಜ. ಅವಳಲ್ಲಿ ಪ್ರೇಮ, ಪ್ರೀತಿಯ ಭಾವಗಳು ತುಂಬಿರುತ್ತವೆ. ಕುಂಚ ಹಿಡಿದು ಹೆಣ್ಣಿನ ಚಿತ್ರ ಬಿಡಿಸಲು ಶುರು ಮಾಡಿದರೆ ನನಗೆ ಜಗವೇ ಮರೆತುಹೋದಂತೆ ಆಗುತ್ತದೆ. ಪ್ರಕೃತಿಯ ಒಂದು ಚಿತ್ರ ಬಿಡಿಸಿದರೂ ಅಲ್ಲಿ ನನಗೆ ಹೆಣ್ಣು ಕಾಣಿಸುತ್ತಾಳೆ.  ಹೆಣ್ಣು ಕರುಣಾಮೂರ್ತಿ, ಮಮತಾಮಯಿ.

ಚಿತ್ರ ಮೂಡಿಸಬೇಕು ಎಂಬ ಕನಸಿತ್ತು ಬಾಲ್ಯದಿಂದಲೂ. ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಕನಸು ಮುದುರಿತು. ಮದುವೆ, ಗಂಡ, ಮಕ್ಕಳು ಇದೇ ಬದುಕಾಯಿತು. ಬಿಡುವೇ ಸಿಗುತ್ತಿರಲಿಲ್ಲ. ಈಗ ಅವೆಲ್ಲದರ ಮಧ್ಯೆ ಬಿಡುವು ಮಾಡಿಕೊಂಡು ಕುಂಚ ಕೈಗೆತ್ತಿಕೊಂಡಿದ್ದೇನೆ. ಹಾಗಂತ ಕಲೆ ನನ್ನ ಹವ್ಯಾಸ ಅಲ್ಲ. ಇದು ನನ್ನ ಅಸ್ಮಿತೆಯನ್ನು ಕಂಡುಕೊಳ್ಳುವುದಕ್ಕೆ ಮಾಡುತ್ತಿರುವುದು.

ADVERTISEMENT

ಇದು ನನ್ನ 7ನೇ ಪ್ರದರ್ಶನ. ಆದರೂ ಮೊದಲ ಪ್ರದರ್ಶನ ಕೊಡುವಾಗ ಸಿಗುತ್ತಿದ್ದ ಅನುಭವವೇ ರೋಮಾಂಚನ. ನಾನು ಯಾವುದೇ ತರಗತಿಗಳಿಗೆ ಹೋಗಿ ಕಲಿತುಕೊಂಡಿಲ್ಲ. ನನ್ನ ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಕುಂಚ ರೂಪ ನೀಡುತ್ತದೆ. ಕಲೆ ಎಂಬುವುದು ಅನುಭವದ ಮೂಲಕ ಹೊರಬರಬೇಕು ಆಗ ಅದಕ್ಕೆ ಬೆಲೆ.

ಆಕ್ರಿಲಿಕ್ ನಾನು ಬಳಸುವ ಮಾಧ್ಯಮ. ಈಗ ಪೆನ್‌ನಲ್ಲಿ ಸ್ಕೆಚ್ ಮಾಡುತ್ತಿದ್ದೇನೆ. ತುಂಬಾ ಕಷ್ಟ. ಒಂದು ಸಲ ತಪ್ಪಾದರೆ ಇಡೀ ಚಿತ್ರವೇ ಹಾಳು. ಎಷ್ಟೋ ಸಲ ಇದು ನನ್ನಿಂದ ಆಗಲ್ಲ ಎಂದು ಬೇಸರಗೊಂಡಿದ್ದು ಇದೆ. ಆದರೆ ಮತ್ತೆ ಮರಳಿ ಗೂಡಿಗೆ ಎಂಬಂತೆ ಕಲೆ ನನ್ನನ್ನು ಸೆಳೆಯುತ್ತದೆ.'

ಮೊದಲ ಪ್ರದರ್ಶನದ ಸಂಭ್ರಮದಲ್ಲಿದ್ದ ಗೀತಾಂಜಲಿ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟಿದ್ದು ಹೀಗೆ: `ಕಲೆ ನನಗಿಷ್ಟ ಎಂದು ಚಿಕ್ಕವಳಿದ್ದಾಗ ಹೇಳಿದಾಗ ಮನೆಯಲ್ಲಿ ಬೆಂಬಲ ಸಿಗಲಿಲ್ಲ. ಯಾಕೆಂದರೆ ಕಲೆ ಬಗ್ಗೆ ಅಷ್ಟಾಗಿ ಯಾರೂ ತಿಳಿದಿರಲಿಲ್ಲ. ನನ್ನ ಮನಸ್ಸು ಮಾತ್ರ ಬಣ್ಣ, ಕುಂಚದ ಸುತ್ತ ಸುತ್ತಾಡುತ್ತಲೇ ಇತ್ತು.

ಮನಸ್ಸಿನ ಆಲೋಚನೆಗಳನ್ನು ಕುಂಚದಲ್ಲಿ ಅದ್ದಿ ಕ್ಯಾನ್ವಾಸ್ ಮೇಲೆ ಬಿಡಿಸಲು ಶುರು ಮಾಡಿದೆ. ನನಗೆ ಗೊತ್ತಿಲ್ಲದೆಯೇ ಕಲೆ ನನ್ನೊಳಗೆ ನೀರಾಗಿ ಹರಿಯಲು ಶುರುವಾಯಿತು. ಬಯಕೆಯನ್ನು ತುಂಬಾ ದಿನ ಹತ್ತಿಕ್ಕಲು ಆಗಲ್ಲ. ಯಾವುದೇ ತರಗತಿಗೂ ಹೋಗದೇ ನನ್ನ ಆಲೋಚನೆಗಳಿಗೆ ರೆಕ್ಕೆ ಮೂಡಿಸಲು ಶುರುಮಾಡಿದೆ. ಮನೆಯಿಂದಲೂ ಬೆಂಬಲ ಸಿಕ್ಕಿತು.

ಪ್ರಕೃತಿ ನಾನು ತೆಗೆದುಕೊಂಡ ವಿಷಯ. ಒಂದು ಚಿತ್ರ ಕ್ಯಾನ್ವಾಸ್ ಮೇಲೆ ಮೂಡಿಸುವ ಮೊದಲು ನಾನು ನನ್ನ ಸುತ್ತಮುತ್ತ ಇರುವ ಪರಿಸರವನ್ನು ನೋಡುತ್ತೇನೆ. ಹರಿಯುವ ನೀರು, ಬೀಸುವ ಗಾಳಿ, ಹಕ್ಕಿಗಳ ಚಿಲಿಪಿಲಿ ನನ್ನಲ್ಲಿ ಜೀವನೋತ್ಸಾಹವನ್ನು ಮೂಡಿಸುತ್ತದೆ.

ನಾನು ಬಿಡಿಸುವ ಚಿತ್ರಕ್ಕೆ ಮನೆಯಿಂದಲೂ ಈಗ ಬೆಂಬಲ ಸಿಕ್ಕಿದೆ. ಆಯಿಲ್ ಪೇಂಟಿಂಗ್, ವಾಟರ್ ಕಲರ್ ನಾನು ಬಳಸುವ ಮಾಧ್ಯಮ. ಅನೇಕ ಚಿತ್ರಕಲಾ ಪ್ರದರ್ಶನಕ್ಕೆ ಹೋಗುತ್ತೇನೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಬರುತ್ತೇನೆ.' ಇವರ ಚಿತ್ರಪ್ರದರ್ಶನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರದವರೆಗೆ ನಡೆಯಲಿದೆ. ಸಮಯ ಬೆಳಿಗ್ಗೆ 10ರಿಂದ ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.