ADVERTISEMENT

ಭಾವನೆಗಳ ಮುಖಾಮುಖಿ!

ಸಾಕ್ಷಿ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಅನುಭೂತಿ! ಎಂಥ ಚಂದದ ಪದ ಅಲ್ಲವೇ? ಈ ಪದದಲ್ಲೇ ಒಂದು ಅನುಭೂತಿ ಅಡಗಿದಂತಿದೆ! ಸುದೇಶ್ ಶೆಟ್ಟಿ ಅವರ ಬ್ಲಾಗ್ ಹೆಸರು ಕೂಡ `ಅನುಭೂತಿ~ (sudhesh-anubhuthi.blogspot.in).
 
`ಭಾವನೆಗಳ ವಿನಿಮಯ~ ಎನ್ನುವುದು ತಮ್ಮ ಬ್ಲಾಗ್ ಕುರಿತ ಅವರ ಬಣ್ಣನೆ. ಏನಿದು ಭಾವಾಲಾಪ? ಇಲ್ಲಿನ ವಿನಿಮಯ ಯಾವ ಬಗೆಯದು? ಎನ್ನುವುದನ್ನು ಒಂದು ಉದಾಹರಣೆಯ ಮೂಲಕವೇ ತಿಳಿಯಬಹುದೇನೋ?

“ಮುಂಬಯಿಗೆ ಹೋದ ಹೊಸದರಲ್ಲಿ ಆಶ್ಚರ್ಯ ಆಗುತ್ತಿದ್ದುದು ಅಲ್ಲಿರುವ ಪಾರಿವಾಳಗಳ ಸಂಖ್ಯೆ ಕಂಡು. ಅಲ್ಲಿ ಎಲ್ಲಿ ನೋಡಿದರೂ ಪಾರಿವಾಳ. ನಮ್ಮೂರಲ್ಲಿ ಎಲ್ಲಿ ನೋಡಿದರೂ ಕಾಗೆಗಳು ಕಾಣಿಸುವ ಹಾಗೆ. ಊರಿನಿಂದ ಮುಂಬಯಿಯಲ್ಲಿ ಒಂದು ವಾರ ಇರಲು ಬಂದ ನನ್ನ ಅಕ್ಕ ಕೂಡ ಪ್ರತಿದಿನ ಹೇಳುತ್ತಿದ್ದಳು- `ಎಂತ ಮಾರಾಯ.

ಇಲ್ಲಿ ಬಂದಾಗಿನಿಂದ ಕಾಗೆಗಳೇ ಕಾಣಿಸಲು ಸಿಗುತ್ತಿಲ್ಲ. ಊರಲ್ಲಿದ್ದರೆ ಕಾಗೆಗಳನ್ನು ಓಡಿಸಿ ಸಾಕಾಗುತ್ತಿತ್ತು. ಇಲ್ಲಿ ಬರೇ ಬಾರೆ ಪಾರಿವಾಳಗಳೇ ಕಾಣಿಸುತ್ತವೆ~ ಎಂದು ಕಾಗೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು.

ಒಂದು ದಿನ ಮನೆ ಗುಡಿಸುವಾಗ ನೋಡುತ್ತೇನೆ, ನಮ್ಮ ಬಾಲ್ಕನಿಯಲ್ಲಿ ಕಸ ಕಡ್ಡಿಗಳನ್ನು ಹೇರಿಕೊಂಡು ಒಂದು ಪಾರಿವಾಳ ಗೂಡು ಕಟ್ಟಲು ಶುರು ಮಾಡಿದೆ. ನನ್ನ ರೂಮಿಯನ್ನು ಕರೆದು ತೋರಿಸಿದೆ. `ನೋಡು ನಮ್ಮ ಮನೆಗೆ ಹೊಸ ಅತಿಥಿಗಳು ಬಂದಿವೆ~. ಅವನು ಗೂಡಿನ ಸಮೇತ ಪಾರಿವಾಳವನ್ನು ಓಡಿಸೋಣ ಅಂದಾಗ ನಾನು, `ಪಾಪ ಇರಲಿ ಬಿಡು~ ಎಂದು ಬಾಯಿ ಮುಚ್ಚಿಸಿದೆ.

ಆಮೇಲೆ ಒಂದೆರಡು ದಿನದಲ್ಲಿ ಗೂಡು ಕಟ್ಟಿ ಮುಗಿಸಿತು ಪಾರಿವಾಳ. ಅಷ್ಟರಲ್ಲಿ ನಾವಿಬ್ಬರೂ ರಜೆಗೆ ಊರಿಗೆ ಹೊರಟಿದ್ದೆವು. ರಜೆ ಮುಗಿಸಿ ಬಂದ ದಿನ ನನ್ನ ರೂಮಿ ಹೋಗಿ ನೋಡುತ್ತಾನೆ, ಬಾಲ್ಕನಿಯಲ್ಲಿದ್ದ ಗೂಡಿನಲ್ಲಿ ಪಾರಿವಾಳಗಳ ಮೊಟ್ಟೆ ಇವೆ. ಅದರ ಮೇಲೆ ಕಾವು ಕೊಡಲು ಕೂತಿದ್ದ ಪಾರಿವಾಳ ನಮ್ಮನ್ನು ನೋಡಿ ಹಾರಿ ಹೋಗಿ ಸ್ವಲ್ಪ ದೂರ ಕೂತಿತು.

`ಇವನ್ನು ಹೀಗೇ ಬಿಟ್ಟರೆ ಆಗುವುದಿಲ್ಲ ಮಾರಾಯ. ಆಮೇಲೆ ಮನೆಯ ಓನರ್ ಬಯ್ಯುವುದು ನಮ್ಮನ್ನೇ. ಈ ಮೊಟ್ಟೆಗಳನ್ನು ಇವತ್ತೇ ಬಿಸಾಡಿ ಬಿಡಬೇಕು~ ನನ್ನ ರೂಮಿ ಅಂದ.

`ಪಾಪ... ಒಂದು ಹಕ್ಕಿಯ ಸಂಸಾರ ನಾಶ ಮಾಡಿದ ಹಾಗಾಗುತ್ತದೆ. ಅದೆಷ್ಟು ಪ್ರೀತಿಯಿಂದ ಕಾವು ಕೊಡುತ್ತಾ ಇದೆ. ಮೊಟ್ಟೆ ಬಿಸಾಡುವುದು ಪಾಪ~ ಅಂತ ನಾನು ಎಮೋಷನಲ್ ಬ್ಲಾಕ್‌ಮೇಲ್ ಮಾಡಿದೆ...”.

ಸುದೇಶ್ ಅವರ ಪಾರಿವಾಳದ ಕಥನ ಮತ್ತೂ ಮುಂದುವರೆಯುತ್ತದೆ. ಅದನ್ನು ಬ್ಲಾಗಿನಲ್ಲೇ ಓದಿ: ಅಂದಹಾಗೆ, ಈ ಬರಹದಲ್ಲಿ ಇರಬಹುದಾದ ಇಣುಕುಗಳ ಗಮನಿಸಿದಿರಾ? ಹಳ್ಳಿ ಮತ್ತು ನಗರಗಳಲ್ಲಿ ಒಂದೊಂದು ಕಾಲೂರಿದ ಮನಸ್ಸುಗಳ ತಹತಹ, ನಗರದ ಗೌಜಿನ ನಡುವೆಯೂ ಇನ್ನೂ ಉಳಿದಿರುವ ಹಕ್ಕಿಗೀತ, ಸಹಬಾಳುವೆಯ ಸಣ್ಣದೊಂದು ನೀತಿಪಾಠ- ಇದೆಲ್ಲವೂ ಒಂದು ಕಥನದ ಚೌಕಟ್ಟಿನಲ್ಲಿ ಸುದೇಶ್ ಚೆನ್ನಾಗಿ ಪೋಣಿಸಿದ್ದಾರೆ. ಹೌದು, ಸುದೇಶ್ ಮನಸ್ಸು ಮಾಡಿದರೆ ಚೆನ್ನಾಗಿ ಬರೆಯಬಲ್ಲರು ಎನ್ನುವುದಕ್ಕೆ ಈ ಬರಹ ಒಳ್ಳೆಯ ಉದಾಹರಣೆಯಂತಿದೆ.

ಕಥೆಯಲ್ಲಿ ಸುದೇಶ್‌ರ ಪರಿಶ್ರಮ ಹೇಗೋ ಏನೋ, `ಅವರು ಕಾದಂಬರಿಕಾರರೂ ಹೌದಂತೆ~ ಎನ್ನುವುದಕ್ಕೆ ಬ್ಲಾಗಿನಲ್ಲೇ ದಾಖಲೆಗಳಿವೆ. ಅವರ `ನೀ ಬರುವ ಹಾದಿಯಲಿ...~ ಕಾದಂಬರಿ ಧಾರಾವಾಹಿ ರೂಪದಲ್ಲಿ ಬ್ಲಾಗಿನ ಪುಟಗಳಲ್ಲಿದೆ. ಹೆಚ್ಚೂಕಮ್ಮಿ ಎರಡು ವರ್ಷ ಕಾಲ ಬ್ಲಾಗಿನಲ್ಲಿ ಮೂಡಿದ ಈ ಹಾದಿ- `ಹೆಜ್ಜೆ ಮೂಡದ ಹಾದಿ~ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. 

ಸುದೇಶ್ ಇರುವುದು ಬೆಂಗಳೂರಿನಲ್ಲಿ. ನಿಮ್ಮ ಪರಿಚಯ ಮಾಡಿಕೊಳ್ಳಿ ಅಂದರೆ, `ನಾನು ಪಕ್ಕದ್ಮನೆ ಹುಡುಗ~ ಎನ್ನುತ್ತಾರೆ. ಪಕ್ಕದ್ಮನೆ ಹುಡುಗಿಯ ಕಥೆ ಬೇರೆ, ಹುಡುಗರ ಬಗ್ಗೆ ಹೆಚ್ಚು ಹೇಳೋದೇನಿದೆ... ಆದರೆ, ಈ ಹುಡುಗನ ಕೆಲವು ಹವ್ಯಾಸಗಳು ಕುತೂಹಲಕರವಾಗಿವೆ. ಕಾದಂಬರಿ ಬರೆಯುತ್ತಾರೆ. ಭಾಷೆಗಳನ್ನು ಕಲಿಯುವುದರಲ್ಲಿ ಆಸಕ್ತಿ ಇದೆಯಂತೆ. ಊರು ಸುತ್ತೋದು, ಪುಸ್ತಕ ಓದೋದು ಇದ್ದೇ ಇದೆ.

ಊರು ಸುತ್ತುವ ಮಾತು ಬಂತಲ್ಲ, `ಅನುಭೂತಿ~ ಕಟ್ಟಿನಲ್ಲಿ ಅಲೆಮಾರಿ ಬರಹಗಳೂ ಇವೆ. ನೋಡಿದ ಊರುಗಳ ಜೊತೆಗೆ ಬೆಂಗಳೂರಿನ, ಮುಂಬಯಿಯ ಬದುಕಿನ ತುಣುಕುಗಳನ್ನು ಸುದೇಶ್ ಕಾಣಿಸಿದ್ದಾರೆ. ಸಿನಿಮಾಗಳ ಬಗ್ಗೆ, ಸಮಾಜದ ಬಗ್ಗೆ ಟಿಪ್ಪಣಿಗಳ ದಾಖಲಿಸಿದ್ದಾರೆ. ಕನ್ನಡ ಸಿನಿಮಾ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಲೇ ಡಬ್ಬಿಂಗ್ ಬೇಕು ಎಂದು ಮೋಟುಗೋಡೆ ಮೇಲೆ ದೀಪ ಉರಿಸುತ್ತಾರೆ.

ಎಲ್ಲ ಬ್ಲಾಗಿಗರಂತೆ ಅವರು ಕೂಡ ತಮ್ಮ ಬಾಲ್ಯದ ನೆನಪುಗಳನ್ನು ಬೇರೆ ಬೇರೆ ಬರಹಗಳಲ್ಲಿ ನೇವರಿಸಿದ್ದಾರೆ. ಆ ಬರಹಗಳಲ್ಲಿ ಆತ್ಮಕಥನದ ತುಣುಕುಗಳೂ ಇವೆ.
ಈ ಬ್ಲಾಗಿನ ಎಲ್ಲ ಬರಹಗಳಲ್ಲಿ, ಓದುಗರಿಗೆ ಭಿನ್ನ ಓದಿನ `ಅನುಭೂತಿ~ ನೀಡುವ ಹಂಬಲ ಎದ್ದುಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.