ಅಲ್ಲಿ ಎಲ್ಲೆಲ್ಲೂ ತಿಂಡಿ ತಿನಿಸುಗಳ ಘಮಲು. ಕಿಕ್ಕಿರಿದ ಜನ, ಉತ್ಸಾಹಿ ಬಾಣಸಿಗರ ಭರಾಟೆ ಅಡುಗೆ. ಬಗೆ ಬಗೆ ಆಹಾರಗಳ ಫೋಟೊ ಕ್ಲಿಕ್ಕಿಸುತ್ತಿದ್ದ ಜನರು. ಇವೆಲ್ಲಾ ಕಂಡುಬಂದಿದ್ದು ಮಂತ್ರಿ ಸ್ಕ್ವೇರ್ ಮಾಲ್‌ನಲ್ಲಿ.
ಮಂತ್ರಿ ಮಾಲ್ ತನ್ನ ಎರಡನೇ ವರ್ಷವನ್ನು ಪೂರೈಸಿದ ಸಂಭ್ರಮದಲ್ಲಿತ್ತು. ಇದರ ಜ್ಞಾಪಕಾರ್ಥವಾಗಿ ತಿಂಗಳಿಡೀ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಜನರ ಮನಮೆಚ್ಚಿದ್ದು ಕುಕಿಂಗ್ ಕಾರ್ನಿವಲ್.
ಬೆಂಗಳೂರಿಗರ ಅಚ್ಚುಮೆಚ್ಚಿನ ಶಾಪಿಂಗ್ ತಾಣವಾಗಿರುವ ಮಂತ್ರಿ ಮಾಲ್‌ನಲ್ಲಿ ಮಾರ್ಚ್ 15 ರಿಂದ ಹಬ್ಬದ ವಾತಾವರಣ. `ಫಂಡಾ ಅಂಡ್ ಗೋ~ ಎಂದು ತನ್ನ ಎರಡನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಒಂದೊಂದು ವಾರವನ್ನೂ ಒಂದೊಂದು ವಿಶೇಷ ರೀತಿ ಆಚರಿಸುತ್ತಿದೆ.
ಮಾರ್ಚ್ 15ರಿಂದ 25ರವರೆಗೆ ನಡೆದ `ಮೇಕ್ ಓವರ್ ವೀಕ್~ನಲ್ಲಿ ಓರಿಯಲ್, ರೆವ್ಲಾನ್, ಕಾಂಬರ‌್ಮ, ಲ್ಯಾಕ್ಮೆ ಈ ಬ್ರ್ಯಾಂಡ್‌ಗಳೆಲ್ಲವೂ ಮಂತ್ರಿ ಮಾಲ್‌ನಲ್ಲಿ ಸಾರ್ವಜನಿಕರಿಗೆ ಸೌಂದರ್ಯ ಸ್ಪರ್ಧೆ ಏರ್ಪಡಿಸುವುದರೊಂದಿಗೆ ಸೌಂದರ್ಯ ಸಲಹೆಗಳನ್ನೂ ನೀಡಿದವು. `ದಿ ಪ್ರೆಸ್ಟೀಜ್ ಮೆನ್ ಸ್ಟೋರ್~ ಪುರುಷರಿಗೆಂದೇ ವಿಶೇಷವಾದ ಸೌಂದರ್ಯ ಸಲಹೆಗಳನ್ನು ನೀಡಿತು.
ಹುಟ್ಟುಹಬ್ಬದ ಆಚರಣೆಯ ಎರಡನೇ ವಾರ ನಡೆದಿದ್ದು `ಕುಕಿಂಗ್ ಕಾರ್ನಿವಲ್~ ಅರ್ಥಾತ್ ಅಡುಗೆ ಹಬ್ಬ. ಮಾರ್ಚ್ 26ರಿಂದ 29ರವರೆಗೆ ನಡೆದ ಈ ಹಬ್ಬದಲ್ಲಿ ವಿಶೇಷ ಬಗೆಯ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ, ಮನರಂಜನಾತ್ಮಕ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿತ್ತು.
ಗ್ರೇಟ್ ಕಬಾಬ್ ಫ್ಯಾಕ್ಟರಿ, ಮೆಡರಿಯನ್ ಟ್ರಯಲ್, ಗಂಗೋತ್ರಿ, ಬ್ಲಿಸ್ ರೆಸ್ಟೋರೆಂಟ್‌ಗಳಿಂದ ಬಂದ ಬಾಣಸಿಗರು ತಮ್ಮ ಕೈಚಳಕ ಪ್ರದರ್ಶಿಸಿದರು. ನಾಲ್ಕು ದಿನಗಳ ಈ ಕುಕ್ಕಿಂಗ್ ಕಾರ್ನಿವಲ್‌ನಲ್ಲಿ ಒಂದೊಂದು ದಿನವೂ ಒಂದೊಂದು ರೆಸ್ಟೋರೆಂಟ್‌ಗಳ ವಿಶೇಷವಾದ ಅಡುಗೆಗಳ ಪ್ರಾತ್ಯಕ್ಷಿಕೆ ನಡೆದವು.
ಅಲ್ಲಿಗೆ ಭೇಟಿ ನೀಡಿದವರಿಗೆ ಕೇಕ್ ಐಸಿಂಗ್, ಸಾಲ್ಸಾ ಇನ್ನೂ ಹಲವು ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸುವ ವಿಧಾನವನ್ನು ಹೇಳಿಕೊಡುವುದರೊಂದಿಗೆ ರುಚಿ ನೋಡಲೂ ಅವಕಾಶ ನೀಡಲಾಗಿತ್ತು.
ಜೊತೆಗೆ ಇದ್ದ `ಫನ್ ಫುಡೀ~ ಗೇಮ್ಸನಲ್ಲಂತೂ ಜನರು ಉತ್ಸಾಹದಿಂದ ಭಾಗವಹಿಸಿ ಮನರಂಜನೆ ಜೊತೆ ತಿಂಡಿ ರುಚಿಯನ್ನೂ ಸವಿದರು. 28ರಂದು ನಡೆದ ಬ್ಲಿಸ್‌ನ ಚಾಕೊಲೇಟ್ ಕಾರ್ನಿವಲ್‌ನಲ್ಲಂತೂ ಚಾಕೊಲೇಟ್ ಪ್ರಿಯ ಮಕ್ಕಳೇ ಹೆಚ್ಚು ಸಂಖ್ಯೆಯಲ್ಲಿದ್ದರು.
ವಿವಿಧ ಬಗೆಯ ಚಾಕೊಲೇಟ್‌ಗಳನ್ನು ಒಂದೇ ನಿಮಿಷದಲ್ಲಿ ಚಕಾಚಕ್ ಮಾಡಿ ಮುಗಿಸುತ್ತಿದ್ದ ಬಾಣಸಿಗರನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಮಕ್ಕಳಿಗಂತೂ ಇದು ಚಾಕೊಲೇಟ್ ಹಬ್ಬ. ಅಷ್ಟೇ ಅಲ್ಲ, ರುಚಿಕರ ಅಡುಗೆ ಮನೆಯ ಟಿಪ್‌ಗಳನ್ನೂ ಬಾಣಸಿಗರು ಜನರೊಂದಿಗೆ ಹಂಚಿಕೊಂಡರು.
ಮಂತ್ರಿ ಮಾಲ್ ಯಶಸ್ವಿಯಾಗಿ 2 ವರ್ಷ ಪೂರೈಸಿರುವುದು ಸಂತಸ ತಂದಿದೆ. ಕುಕ್ಕಿಂಗ್ ಕಾರ್ನಿವಲ್‌ನಲ್ಲಿ ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ನೋಡಿ ಸಂತೋಷವಾಗಿದೆ. ಜನರಿಗೆ ವಿಭಿನ್ನವಾದ ಅನುಭವ ನೀಡಲೆಂದೇ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು ಮಂತ್ರಿ ಸ್ಕ್ವೇರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋನತ್ ಯಾಚ್.
ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಇದೇ ಏಪ್ರಿಲ್ 2ರಿಂದ 5ರವರೆಗೆ `ಸ್ಪೆಷಲ್ ಫನ್ ಗೇಮಿಂಗ್ ವೀಕ್~ ಹಮ್ಮಿಕೊಂಡಿದೆ. ಸ್ನೇಕ್ ಅಂಡ್ ಲ್ಯಾಡರ್, ಲೂಡೊ, ಟ್ವಿಸ್ಟರ್ ಇಂತಹ ಮನರಂಜನಾತ್ಮಕ ಆಟಗಳು ಮಕ್ಕಳ ಸೆಳೆಯಲು ಲಭ್ಯ. ಗ್ಯಾಡ್ಜೆಟ್ ಪ್ರೇಮಿಗಳಿಗೆಂದು ಏಪ್ರಿಲ್ 9ರಿಂದ 15ರವರೆಗೆ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ವೀಕ್ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ರಿಯಾಯಿತಿಯೂ ಉಂಟು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.