ADVERTISEMENT

ಮಕ್ಕಳ ಜ್ಞಾನವೃದ್ಧಿಗೆ ಸೈನ್ಸ್ ಉತ್ಸವ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2011, 19:30 IST
Last Updated 24 ಆಗಸ್ಟ್ 2011, 19:30 IST
ಮಕ್ಕಳ ಜ್ಞಾನವೃದ್ಧಿಗೆ ಸೈನ್ಸ್ ಉತ್ಸವ
ಮಕ್ಕಳ ಜ್ಞಾನವೃದ್ಧಿಗೆ ಸೈನ್ಸ್ ಉತ್ಸವ   

ಮನೋ ವಿಕಾಸಕ್ಕೆ ಪೂರಕವಾದ ಜ್ಞಾನ ಮತ್ತು ವಿಜ್ಞಾನ ಚಟುವಟಿಕೆಗಳ ಮೂಲಕ ಮಕ್ಕಳನ್ನು ನೈಜ ಜಗತ್ತಿಗೆ ಕೊಂಡೊಯ್ಯುವ, ವಿಜ್ಞಾನದ ಸಾಧನೆಗಳನ್ನು ಮನಮುಟ್ಟುವಂತೆ ತಿಳಿಸಿಕೊಡುವ ಸೃಜನಶೀಲ ಶಿಬಿರವೇ `ಸೈನ್ಸ್ ಉತ್ಸವ; ಜ್ಞಾನದ ಮೆರವಣಿಗೆ~.

ವಿಜ್ಞಾನವನ್ನು ನಮ್ಮ ದಿನ ನಿತ್ಯದ ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಪ್ರಯೋಗಾತ್ಮಕ ಮತ್ತು ಅನ್ವೇಷಣಾ ಆಧಾರಿತ ವಿಧಾನದ ಮೂಲಕ ಮುಗ್ಧ ಮಗುವಿಗೆ ಮುದವಾಗುವಂತೆ ಕಲಿಸಿಕೊಡುವುದು, ಜತೆಜತೆಗೇ ಅವರ ಬದುಕಿಗೆ ಬೇಕಾದ ಶಿಸ್ತು, ನಡೆ ನುಡಿ, ನಮ್ಮ ಸಂಸ್ಕೃತಿಯನ್ನು ತಿಳಿಸುವುದು ಇದರ ಉದ್ದೇಶ.

ವಿಜ್ಞಾನವೆಂದರೆ ಒಮ್ಮೆ ಯಾರೋ ಕಂಡುಕೊಂಡ ಸತ್ಯವನ್ನು ಒಪ್ಪುವುದಲ್ಲ, ಅದು ಬದಲಾಗದ ನಂಬಿಕೆಯಲ್ಲ. ನಿರಂತರವಾಗಿ ಪರಿಷ್ಕಾರಗೊಳ್ಳುವ ಮತ್ತು ಮರು ಅವಿಷ್ಕಾರ ಪಡೆಯುವ ಜೀವಂತ ಚಿಂತನೆಯ ಫಲ. ವಾಸ್ತವದಲ್ಲಿ ಅದು ನಿರಂತರ ಹುಡುಕಾಟ. ಸುತ್ತಲಿನ ಜಗತ್ತಿನ ವಿಸ್ಮಯಗಳನ್ನು ಕಂಡು ಬೆರಗಾಗಿ, ಏಕೆ ಹೀಗಿದೆ ಎಂದು ಪ್ರಶ್ನಿಸುತ್ತಾ ಜ್ಞಾನದ ಬೆಳಕಿನತ್ತ ಸಾಗುವುದೇ ವೈಜ್ಞಾನಿಕ ಚಿಂತನೆ.

ಶಶಾಂಕ್ ಕರ್ಣಂ ಹಾಗೂ ಹರ್ಷ ಎಂಬ ಯುವಕರು ಹುಟ್ಟುಹಾಕಿದ ಮತ್ತು ಈಗ ಸುಪ್ರೀತ್ ಹೆಗಲು ನೀಡಿರುವ `ವಿಜ್ಞಾನ ಉತ್ಸವ~ ಸಂಘಟನೆಗೆ ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಹೆಸರು ಮಾಡಿದ ಪ್ರೊ. ರೂಪಾ ರಾವ್, ಎಚ್.ಆರ್. ರಾಮಕೃಷ್ಣ ರಾವ್, ಪ್ರೊ  ಕೆ.ಎಸ್.ನಟರಾಜ್, ಎಂ.ಆರ್. ನಾಗರಾಜು ಮುಂತಾದವರ ಮಾರ್ಗದರ್ಶನ, ಭಾರತೀಯ ವಿದ್ಯಾಭವನ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತಗಳಂತಹ ಸಂಸ್ಥೆಗಳ ಬೆಂಬಲವಿದೆ.

`ಸೈನ್ಸ್ ಉತ್ಸವ~ದ ವತಿಯಿಂದ ಬಸವೇಶ್ವರ ನಗರ ಹಾವನೂರು ವೃತ್ತದ `ಬ್ರೈನ್ ವೇವ್~ ಮತ್ತು ಎನ್ ಆರ್ ಕಾಲೋನಿಯ ಸೃಷ್ಟಿ ಕಲಾಲಯಂನಲ್ಲಿ ಈಚೆಗೆ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಇಲ್ಲಿ ವಿಜ್ಞಾನದ ಅರಿವು ಮತ್ತು ಅದನ್ನು ದೈನಂದಿನ ಆಗು ಹೋಗುಗಳಿಗೆ ಅಳವಡಿಸುವ ಬಗೆಯನ್ನು ಮನ ರಂಜಿಸುವ ಚಟುವಟಿಕೆಗಳ ಸಹಾಯದಿಂದ ಮಕ್ಕಳಿಗೆ ತಿಳಿಸಿಕೊಡಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ತಮ್ಮ ಪ್ರಶ್ನೆಗೆ, ಕುತೂಹಲಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು.

ಈ ಸಂಸ್ಥೆ ಕುರಿತ ಮಾಹಿತಿಗೆ: ಸುಪ್ರೀತ್ ಕಿತ್ತನಕೆರೆ (99006 16417), ಶಶಾಂಕ್ ಕರ್ಣಂ (99453 13269).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.