ADVERTISEMENT

ಮಗ್ಗದಿಂದ ಮಂದಿಗೆ `ಪಟೋಲಾ' ಸೀರೆ

ರೋಹಿಣಿ ಮುಂಡಾಜೆ
Published 6 ಫೆಬ್ರುವರಿ 2013, 19:59 IST
Last Updated 6 ಫೆಬ್ರುವರಿ 2013, 19:59 IST
ಮಗ್ಗದಿಂದ ಮಂದಿಗೆ `ಪಟೋಲಾ' ಸೀರೆ
ಮಗ್ಗದಿಂದ ಮಂದಿಗೆ `ಪಟೋಲಾ' ಸೀರೆ   

ವಸ್ತ್ರೋದ್ಯಮ ಕ್ಷೇತ್ರದಲ್ಲಿ ಗುಜರಾತ್ ತನ್ನ ವೈಶಿಷ್ಟ್ಯ ಉಳಿಸಿಕೊಂಡಿದೆ. ಅಲ್ಲಿನ ಕುಶಲ ನೇಕಾರರ ಕೈಯಲ್ಲಿ ಅರಳುವ ಇಕ್ಕತ್ ನೇಯ್ಗೆಯನ್ನು ಈ ಆಧುನಿಕ ಯುಗದಲ್ಲೂ ಮೀರಿಸಲಾಗಿಲ್ಲ.

ಒಂಟಿ ಮತ್ತು ಜಂಟಿ ಇಕ್ಕತ್ ನೇಯ್ಗೆಯಿಂದ ರೂಪುಗೊಳ್ಳುವ ಪಟೋಲಾ ಸೀರೆಗಳು ಗುಜರಾತ್‌ನಲ್ಲಿ ಮದುವೆಗಳಿಗೆ ಸಾಂಪ್ರದಾಯಿಕ ಉಡುಗೆಯಾಗಿ ಮನ್ನಣೆ ಉಳಿಸಿಕೊಂಡಿವೆ. ಸಮಕಾಲೀನ ಜಗತ್ತಿಗೆ ತಕ್ಕುದಾಗಿ ಅಲ್ಲಿನ ನೇಕಾರರೂ ಬದಲಾಗಿದ್ದು, ಡಬಲ್ ಇಕ್ಕತ್, ಸಿಂಗಲ್ ಇಕ್ಕತ್ ಎಳೆಯ ನೇಯ್ಗೆಯ ವಿಶಿಷ್ಟ ಮತ್ತು ವಿಭಿನ್ನ ವಿನ್ಯಾಸದ ಸೀರೆಗಳು ಯುವಜನರಿಗೂ ಒಪ್ಪುವಂತೆ ಸಿದ್ಧಗೊಳ್ಳುತ್ತಿವೆ.

ವಸ್ತ್ರ ಪರಂಪರೆಗೆ ಹೊಸ ಭಾಷ್ಯ ಬರೆದ ಗುಜರಾತ್‌ನ ಇಂತಹ ಎಷ್ಟೋ ಗ್ರಾಮಗಳಲ್ಲಿ ಕಟಾರಿಯಾ ಕೂಡ ಒಂದು. ಈ ಗ್ರಾಮದ ಜನರಿಗೆ ಕೈಮಗ್ಗದ ಅನಿಯಮಿತ ಆದಾಯಕ್ಕಿಂತ ದಿನಗೂಲಿಯ ಕೃಷಿ ಕಾರ್ಮಿಕರಾಗಿ ಬಿಡುವುದೇ ಲೇಸು ಎಂದೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಆದರೆ ಧನಾಭಾಯಿ ಅವರ ಖಾದಿ ಮಗ್ಗ ಮಾತ್ರ ನೂಲುವುದನ್ನು ನಿಲ್ಲಿಸಿರಲಿಲ್ಲ. ಮಗ ನಾರ್ಸಿ ಭಾಯಿಗೆ ಅಪ್ಪನ ಕಸುಬಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಬೇಕು ಎಂಬ ಮಹತ್ವಾಕಾಂಕ್ಷೆ. ಅದಕ್ಕಾಗಿ ಜೋಧ್‌ಪುರದಲ್ಲಿ ಇಕ್ಕತ್ ಕಲೆಯನ್ನು ಕಲಿತು ತವರಿಗೆ ಮರಳಿದವರು ಪಟೋಲಾ ಸೀರೆ ನೇಯವ ಮಗ್ಗ ತೆರೆದರು.

ನಾರ್ಸಿ ಭಾಯಿ ಅವರ ಪಟೋಲಾ ಸೀರೆಗಳಿಗೆ ಈಗ ದೇಶದೆಲ್ಲೆಡೆ ಭಾರಿ ಬೇಡಿಕೆ. ಪ್ರಸ್ತುತ, ಬೆಂಗಳೂರಿಗೆ ಬಂದಿರುವ ನಾರ್ಸಿ ಅವರು `ಮೆಟ್ರೊ'ಗೆ ಪಟೋಲಾ ಯಾನವನ್ನು ವಿವರಿಸಿದ್ದಾರೆ...

ಏನಿದು ಪಟೋಲಾ ಸೀರೆ?
ಪಟೋಲಾ ಅಂದರೆ ನೇಯ್ಗೆಯ ಪ್ರಕಾರ. ಗುಜರಾತ್‌ನ ಪಾರಂಪರಿಕ ನೇಯ್ಗೆ ಇದು. ಇಡೀ ಸೀರೆಯನ್ನು ಕೈಯಲ್ಲೇ ನೇಯುವುದು ಮತ್ತು ಇಕ್ಕತ್ ಎಂಬ ಅತಿಸೂಕ್ಷ್ಮ ನೇಯ್ಗೆ ಸೀರೆಯಲ್ಲಿ ಪಡಿಮೂಡಿಸುವುದು ಇದರ ವೈಶಿಷ್ಟ್ಯ.

ಇದು ನಿಮ್ಮ ಕುಲಕಸುಬೇ?
ಇಲ್ಲ. ನಮ್ಮಪ್ಪ ಖಾದಿ ಮಗ್ಗ ಇಟ್ಟುಕೊಂಡಿದ್ದರು. ಅದರಿಂದ ಬರುವ ಲಾಭ ಅಷ್ಟಕ್ಕಷ್ಟೇ. ಆಗ ನಾನು ವಿಭಿನ್ನವಾಗಿ ಏನನ್ನಾದರೂ ಮಾಡುವ ಯೋಜನೆ ಹಾಕಿ ಪಟೋಲಾ ಸೀರೆ ತಯಾರಿಯ ತರಬೇತಿ ಪಡೆದು ನಮ್ಮೂರು, ಕಟಾರಿಯಾದಲ್ಲಿ ಒಂದು ಮಗ್ಗದೊಂದಿಗೆ ಶುರು ಮಾಡಿದೆ. 20 ವರ್ಷಗಳಾದವು.

ಸೀರೆ ದುಬಾರಿ ಎನಿಸುತ್ತದೆ. ಏನಂತೀರಾ?
ಖಂಡಿತಾ ದುಬಾರಿಯಲ್ಲ. ಇದು ಸಂಪೂರ್ಣವಾಗಿ ಕೈಯಲ್ಲೇ ತಯಾರಾಗುವುದರಿಂದ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. `ಟೈ, ಡೈ ಅಂಡ್ ವೆಫ್ಟ್'ನಿಂದಾಗಿ ಪಟೋಲಾ ವಿನ್ಯಾಸಗಳು ಮೂಡಿಬರುತ್ತವೆ. ಒಂದು ಸೀರೆ ತಯಾರಾಗಲು 20 ದಿನ ಬೇಕು! ಹಾಗಾಗಿ ಗುಣಮಟ್ಟದ ದೃಷ್ಟಿಯಿಂದ ದುಬಾರಿ ಅಲ್ಲ. (ಸೀರೆಗಳು ರೂ 7,900, ದುಪಟ್ಟಾಗಳ ಬೆಲೆ 2600 ರೂಪಾಯಿಯಿಂದ ಆರಂಭ).

ಕಟಾರಿಯಾ ಗ್ರಾಮದಲ್ಲಿ ಈಗ ಪರಿಸ್ಥಿತಿ ಹೇಗಿದೆ?
ಜೀವನಶೈಲಿ ಮತ್ತು ಆರ್ಥಿಕ ಮಟ್ಟದಲ್ಲಿ ಗಣನೀಯ ಬದಲಾವಣೆಯಾಗಿದೆ. ಒಂದು ಮಗ್ಗದಿಂದ ಶುರು ಮಾಡಿದ್ದ ನಾವು ನಮ್ಮ ಕುಟುಂಬದವರು ಮಾತ್ರ ಇದರಲ್ಲಿ ತೊಡಗಿಸಿಕೊಂಡಿದ್ದೆವು. ಈಗ ನಮ್ಮಲ್ಲಿ 100 ಮಗ್ಗಗಳಿವೆ. ಕೆಲಸಗಾರರ ಸಂಖ್ಯೆಯೂ ಹೆಚ್ಚಾಗಿದೆ.

ವಿನ್ಯಾಸ, ಡೈಯಿಂಗ್, ವೆಫ್ಟಿಂಗ್‌ನ್ನು ಹೇಗೆ ನಿರ್ವಹಿಸುತ್ತೀರಿ?
ಮಗ್ಗ ಮಾಡುವಲ್ಲಿಂದ ಹಿಡಿದು ಪ್ರತಿ ಹಂತವನ್ನೂ ಬೇರೆ ಬೇರೆ ವ್ಯಕ್ತಿಗಳು ನಿರ್ವಹಿಸುತ್ತಾರೆ. ಮೊದಲು ಇವನ್ನು ಕೈಯಲ್ಲಿ ಚಿತ್ರ ಬಿಡಿಸಿ ಆಯಾ ವಿಭಾಗಕ್ಕೆ ಕೊಡುತ್ತೇವೆ. ಡೈಯಿಂಗ್ ಮಾಡುವವರೂ ಕೈಯಲ್ಲೇ ಮಾಡುತ್ತಾರೆ. ನೈಸರ್ಗಿಕ ಬಣ್ಣಗಳಾದ್ದರಿಂದ ಯಾವುದೇ ಹಾನಿಯಾಗುವುದಿಲ್ಲ.

ಪಟೋಲಾ ರೇಷ್ಮೆಗಷ್ಟೇ ಸೀಮಿತವೇ?
ನಾವು ಈಗೀಗ ಹತ್ತಿಯಿಂದಲೂ ಪಟೋಲಾ ಸೀರೆ, ದುಪಟ್ಟಾ ಮಾಡುತ್ತೇವೆ. ಬೇರೆ ಬೇರೆ ವಿನ್ಯಾಸಗಳಲ್ಲಿ ಅವೂ ಸಿಗುತ್ತವೆ. ಬೇಡಿಕೆಗೆ ಅನುಗುಣವಾಗಿ ಅವನ್ನು ಸಿದ್ಧಪಡಿಸಿ ಗ್ರಾಹಕರಿಗೆ ಪೂರೈಸುತ್ತೇವೆ.

ನಿಮ್ಮ ಕುಟುಂಬ ಮತ್ತು ಗ್ರಾಮದ ಮಕ್ಕಳು ಈ ಉದ್ಯಮಕ್ಕಷ್ಟೇ ಸೀಮಿತವಾಗಿದ್ದಾರಾ?
ಇಲ್ಲ. ನಮ್ಮ ಮನೆ ಮಕ್ಕಳೂ ಸೇರಿದಂತೆ ಕಟಾರಿಯಾದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಹೋಗ್ತಾರೆ. ಸಂಜೆಯಿಂದ ರಾತ್ರಿವರೆಗೂ ಮಗ್ಗಗಳಲ್ಲಿ ದುಡಿಯುತ್ತಾರೆ. ಓದಿನೊಂದಿಗೆ ಸಂಪಾದನೆಯೂ ಆಗುತ್ತದೆ. ಮಾತ್ರವಲ್ಲ, ನಮ್ಮ ಗ್ರಾಮದಿಂದ ಹೊರ ಊರುಗಳಿಗೆ ಕೆಲಸ ಅರಸಿ ಹೋಗಿದ್ದವರೂ ಈಗ ನಮ್ಮ ಮಗ್ಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಈ ಪ್ರದರ್ಶನ ಮಾರಾಟದ ಬಗ್ಗೆ ನಿಮ್ಮ ನಿರೀಕ್ಷೆಯೇನು?
ಮೇಖ್ರಿ ವೃತ್ತದ ಬಳಿ ನಡೆದಿದ್ದ `ದಸ್ತಕರ್' ಮೇಳಕ್ಕೆ ಈ ಹಿಂದೆ ಬಂದಿದ್ದಾಗ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು.ಈ ಬಾರಿಯೂ ಅಂತಹುದೇ ಸ್ಪಂದನ ಸಿಗುವ ವಿಶ್ವಾಸವಿದೆ.

ಅಂದಹಾಗೆ, ಪಟೋಲಾ ಸೀರೆಯ ಈ ಪ್ರದರ್ಶನ ಮಾರಾಟ ಫೆ. 7ರಿಂದ 10ರವರೆಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಮುಂಭಾಗದಲ್ಲಿರುವ ಬಸವ ಅಂಬರದಲ್ಲಿ ನಡೆಯಲಿದೆ. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7. ಸಂಪರ್ಕಕ್ಕೆ: 2656 1940/6546 1856.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.