ADVERTISEMENT

ಮದುವೆಗೆ ಗೋರಂಟಿ ರಂಗು

ಸ್ಮಿತಾ ಶಿರೂರ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST
ಮದುವೆಗೆ ಗೋರಂಟಿ ರಂಗು
ಮದುವೆಗೆ ಗೋರಂಟಿ ರಂಗು   

ಮದುವೆಯ ಮಧುರ ನೆನಪುಗಳನ್ನು ಗಟ್ಟಿ ಮಾಡಲು ಮದರಂಗಿ ಇಲ್ಲದಿದ್ದರೆ ಹೇಗೆ? ಮದುವೆ ಸರಳವಾಗಿರಲಿ, ಭರ್ಜರಿಯಾಗಿರಲಿ ಮದರಂಗಿ ಮಾತ್ರ ಇದ್ದೇ ಇರಬೇಕು. ‘ನನ್ನ ಮದುವೆ ಹೀಗೇ ನಡೆಯಬೇಕು’ ಎಂದು ಕನಸು ಕಟ್ಟಿಕೊಳ್ಳುವ ಯುವತಿಯರು ಮದರಂಗಿ ವಿನ್ಯಾಸವನ್ನೂ ಮೊದಲೇ ಹುಡುಕಿಟ್ಟುಕೊಂಡಿರುತ್ತಾರೆ.

ಎರಡೂ ಕೈಗಳನ್ನು ಸೇರಿಸಿ ಹಿಡಿದಾಗ ಒಂದು ಚಿತ್ರ ಪೂರ್ಣಗೊಳ್ಳುವ ಸ್ವರೂಪದ ಚಿತ್ತಾರದ (ಸೀಕ್ವೆನ್ಸ್) ಟ್ರೆಂಡ್ ಈಗಲೂ ಮುಂದುವರಿದಿದೆ. ವಿನ್ಯಾಸಗಳಲ್ಲಿ ಹೂಗಳ ಆಯ್ಕೆಯಂತೂ ಲಾಗಾಯ್ತಿನಿಂದಲೂ ಜನಪ್ರಿಯ. ಆದರೆ ಈಗ ವಿವಾಹ ಶುಭಾಶಯಗಳೂ ಮದರಂಗಿ ವಿನ್ಯಾಸದಲ್ಲಿ ಮೂಡಿಸಬೇಕು ಎಂಬ ಬೇಡಿಕೆಯ ಜೊತೆಗೆ ಕೆಲವು ಸೃಜನಶೀಲರು ವಧು–ವರರ ಭಾವಚಿತ್ರಗಳನ್ನೂ ಮದರಂಗಿಯಲ್ಲಿ ಪಡಿಮೂಡಿಸುವ ಸ್ಟೈಲ್ ಆರಂಭಿಸಿದ್ದಾರೆ.

ಮದರಂಗಿಯ ಪರಿಮಳ ಕೆಲವರಿಗೆ ಇಷ್ಟವಾಗುವುದಿಲ್ಲ. ಅಂಥವರಿಗಾಗಿ ಸರಳ ಸುಂದರ ವಿನ್ಯಾಸಗಳು ಬಂದಿವೆ. ವಿವಾಹ ಮಹೋತ್ಸವಗಳಲ್ಲಿ ಸಂಬಂಧಿಕರಿಗೆ ಮದರಂಗಿ ಹಚ್ಚಲೆಂದೇ ಒಂದು ದಿನ ಅದ್ಧೂರಿ ಕಾರ್ಯಕ್ರಮ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಇದು ಪಾರಂಪರಿಕವಾಗಿ ಬೆಳೆದು ಬಂದಿದೆ. ಬಾಲಿವುಡ್ ಸಿನಿಮಾಗಳ ಪ್ರಭಾವದಿಂದ ಈ ಟ್ರೆಂಡ್ ಈಗ ನಮ್ಮ ರಾಜ್ಯದಲ್ಲೂ ಚಾಲ್ತಿಗೆ ಬಂದಿದೆ.

ADVERTISEMENT


ವಧುವಿಗೆ ಮದರಂಗಿ ಚಿತ್ತಾರ ಬಿಡಿಸುತ್ತಿರುವ ನಾಝ್‌

‘ವಿವಾಹದ ಮುಹೂರ್ತಕ್ಕೆ ಎರಡು ದಿನಗಳ ಮೊದಲು ಮದರಂಗಿಯ ಸಡಗರ. ವಧುವಿಗಾಗಿಯೇ ವಿಶೇಷ ರೀತಿಯ ಚಿತ್ತಾರಗಳು ಇವೆ. ಗಣೇಶ, ವರನು ವಧುವಿಗೆ ಕುಂಕುಮ ಇಡುವುದು, ಡೋಲು, ನಗಾರಿ ಸಾಲು ಇಂಥ ವಿನ್ಯಾಸಗಳು ಈಗ ಜನಪ್ರಿಯ. ನನ್ನ ಬಳಿ ಇರುವ ಕ್ಯಾಟಲಾಗ್‌ ತೋರಿಸಿ ಇಷ್ಟದ ವಿನ್ಯಾಸ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತೇನೆ. ಕೆಲವರು ಇಂಟರ್ನೆಟ್ ಜಾಲಾಡಿ ತಮ್ಮ ಇಷ್ಟದ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ’ ಎನ್ನುತ್ತಾರೆ ಮದರಂಗಿ ವಿನ್ಯಾಸಕಿ ನಾಝ್.

ಜನಪ್ರಿಯ ವಿನ್ಯಾಸಗಳು
ಕೈ ಅರ್ಧ ಭಾಗಕ್ಕಷ್ಟೇ ಮದರಂಗಿ ಹಾಕುವುದು, ದೊಡ್ಡ ಹೂಗಳು ಎದ್ದು ಕಾಣುವಂಥ ವಿನ್ಯಾಸ, ಬೆರಳುಗಳಿಗೆ ಮಾತ್ರ ವಿನ್ಯಾಸ, ಕೈಯನ್ನು ಬಳ್ಳಿಯಂತೆ ಆವರಿಸಿಕೊಳ್ಳುವ ವಿಧಾನ, ಕೈ ಹಿಂಭಾಗಕ್ಕೆ ಮಾತ್ರ ವಿನ್ಯಾಸ, ಮಂಡಲಗಳನ್ನು ರಚಿಸುವುದು, ಬೆರಳ ತುದಿಗಳಿಗೆ ಟೋಪಿಯ ವಿನ್ಯಾಸ, ಗಿಡದಲ್ಲಿ ಅರಳಿದ ಗುಲಾಬಿ ಹೂವುಗಳು, ಆಭರಣದಂಥ ವಿನ್ಯಾಸ, ಕೈಯಲ್ಲಿ ಒಂದೇ ಬಳ್ಳಿ ಇದ್ದರೂ ಕೈತುಂಬಾ ಇರುವಂತೆ ಕಾಣುವುದು ಇತ್ಯಾದಿ ವಿನ್ಯಾಸಗಳು ಈಗ ಜನಪ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.