ಮಗಳ ಮದುವೆ ಅದ್ದೂರಿಯಾಗಿ ಮಾಡಬೇಕು ಎಂಬುದು ಹೆತ್ತವರ ಕನಸು. ಅದೇ ಕಾರಣಕ್ಕೆ ಚಪ್ಪರ, ಅಡುಗೆ, ವಸ್ತ್ರದಷ್ಟೇ ಮಹತ್ವ ಲಗ್ನಪತ್ರಿಕೆಗೆ. ಎರಡು ಕುಟುಂಬಗಳ ಮಧ್ಯೆ ಸಂಬಂಧ ಬೆಸೆಯುವ ಹಾದಿಯಲ್ಲಿ ಸೇತುವೆಯ ಕಾರ್ಯ ಈ ಪತ್ರದ್ದು.
ನೂರಾರು ಮಂದಿಯ ಕನಸನ್ನು ನನಸು ಮಾಡುವ ಶುಭ ಮುಹೂರ್ತ ತಿಳಿಸುವ ಈ ಕಾಗದಕ್ಕೆ ಎಲ್ಲಾ ಧರ್ಮಗಳಲ್ಲೂ ಸಮಾನ ಸ್ಥಾನಮಾನವಿದೆ.
ಮದುವೆಗೆ ಮುಹೂರ್ತವೇನೋ ಇಟ್ಟಾಗಿದೆ, ಬಾಡಿಗೆಗೆ ಹಾಲ್ ಬುಕ್‌ಮಾಡಿಯೂ ಆಗಿದೆ. ಇನ್ನೂ ಆಮಂತ್ರಣ ಪತ್ರಿಕೆ ತಯಾರಾಗಿಲ್ಲ ಎಂಬ ಚಿಂತೆಯೇ, ಹಾಗಿದ್ದರೆ ಇಲ್ಲಿ ಬನ್ನಿ... ನಿಮ್ಮ ಮನಸ್ಸಿಗೆ ಒಪ್ಪುವ ಆಹ್ವಾನ ಪತ್ರಿಕೆಯ ವಿನ್ಯಾಸಗಳು ಇಲ್ಲಿ ಸಿಕ್ಕೇ ಸಿಗುತ್ತವೆ.
ಚಿಕ್ಕಪೇಟೆಯ ಈ ಒಂದು ಗಲ್ಲಿಯಲ್ಲಿ ನಿಂತರೆ ಯಾವ ಅಂಗಡಿ ಆಯ್ದುಕೊಳ್ಳುವುದು ಎಂಬ ಗೊಂದಲ ಮೂಡದಿರದು. ಯಾಕೆಂದರೆ ಅಲ್ಲಿ ಲಗ್ನಪತ್ರಿಕೆ ಮಾರುವ ಒಟ್ಟು ಅಂಗಡಿಗಳ ಸಂಖ್ಯೆ ಬರೋಬ್ಬರಿ 80.
`38 ವರ್ಷಗಳ ಹಿಂದೆ ರಾಜಸ್ತಾನದಿಂದ ಉದ್ಯೋಗ ಅರಸಿಕೊಂಡು ಬಂದಾಗ ಕೈಹಿಡಿದಿದ್ದು ಪೇಪರ್ ಉದ್ಯಮ. ಕಳೆದ ಇಪ್ಪತ್ತು ವರ್ಷಗಳಿಂದ ಅವುಗಳಿಗೆ ಬೇಡಿಕೆ ಕಡಿಮೆ. ಅದರ ಸಹ ಉತ್ಪನ್ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ಯಾಕೆ ಮಾರಬಾರದು ಎಂಬ ನಿರ್ಧರಿಸಿ ಅದರಂತೆ ದೆಹಲಿಯಿಂದ ಒಂದಷ್ಟು ವಿನ್ಯಾಸಗಳನ್ನು ತರಿಸಿದೆವು.
ಉತ್ತಮ ಪ್ರತಿಕ್ರಿಯೆ ಸಿಕ್ಕ ಕಾರಣದಿಂದ ಪೀಣ್ಯ ಸಮೀಪ ನಮ್ಮದೇ ಸಂಸ್ಥೆಯೊಂದನ್ನು ಸ್ಥಾಪಿಸಿ ಅಲ್ಲೂ ಆಮಂತ್ರಣ ಪತ್ರಿಕೆ ಉತ್ಪಾದನೆ ಆರಂಭಿಸಿದೆವು. ಅಲ್ಲಿ ಹೊಸ ವಿನ್ಯಾಸ ನೀಡುವ ಕಲಾವಿದರ ಚಿತ್ರಗಳ ಖರೀದಿಗೆ ಒಂದರಿಂದ ಮೂರು ಲಕ್ಷದವರೆಗೆ ಹಣ ನೀಡಬೇಕಾಗುತ್ತದೆ.
ಸೀಸನ್ ಸಮಯ ಅಂದರೆ ಶಿವರಾತ್ರಿಯಿಂದ ಶಾಲೆ ಆರಂಭಗೊಳ್ಳುವ ದಿನಗಳಲ್ಲಿ ಹತ್ತು ಸಾವಿರದಿಂದ 3ಲಕ್ಷದವರೆಗೆ ಕಾರ್ಡ್‌ಗಳು ಮಾರಾಟವಾಗಿದ್ದೂ ಇದೆ ಎನ್ನುತ್ತಾರೆ `ಎಂ.ಎಂ. ಕಾರ್ಡ್ ಪ್ಯಾಲೇಸ್~ ಮಾಲೀಕ ಸುರೇಶ್.
ಇದರಲ್ಲಿ ಪರ್ಸನಲ್, ಫ್ಯಾಮಿಲಿ, ವಿಐಪಿ ಕಾರ್ಡ್‌ಗಳಲ್ಲದೆ ಮೇಕ್ ಯುವರ್ ಡಿಸೈನ್ ಪ್ರಕಾರಗಳ ಕಾರ್ಡ್‌ಗಳು ಲಭ್ಯ. ಮೊದಲೆರಡು ವಿನ್ಯಾಸಗಳು ರೂ.2ರಿಂದ ಆರಂಭಗೊಂಡು 70ರವರೆಗೆ ಏರಿಕೆಯಾಗುವುದುಂಟು.
ಇನ್ನು ವಿಐಪಿ ಕಾರ್ಡ್‌ಗಳು ರೂ.200ರ ಆಸುಪಾಸಿನಲ್ಲಿರುತ್ತವೆ. ಮೇಕ್ ಯುವರ್ ಡಿಸೈನ್‌ನಲ್ಲಿ ನಿಮಗಿಷ್ಟವಾದ ವಿನ್ಯಾಸವನ್ನು ಮೊದಲೇ ಹೇಳಿ ಮಾಡಿಸಬಹುದು. ಕಳೆದ ವರ್ಷ ವಜ್ರದ ಸಣ್ಣ ಹರಳುಗಳನ್ನು ಕಾಗದದ ಮಧ್ಯೆ ಕೂರಿಸುವ ಮೂಲಕ 10,000 ರೂಪಾಯಿ ಬೆಲೆಯ ಪತ್ರಿಕೆ ತಯಾರಿಸಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಮೀನಾಕ್ಷಿ ಕಾರ್ಡ್ ಸೆಂಟರ್ ಮಾಲೀಕ ಸುರೇಂದ್ರ ಸಿಂಗ್.
ಹಿಂದೆಲ್ಲಾ ದೇವರ ಚಿತ್ರ ಇದ್ದ ಕಾರ್ಡ್‌ಗಳನ್ನೇ ಕೇಳಿಕೊಂಡು ಬರುತ್ತಿದ್ದರು. ಇಂದು ಆ ಗಮನ ಫ್ಯಾನ್ಸಿಯತ್ತ ಬದಲಾಗಿದೆ. ಅದರಲ್ಲೂ ಕರಕುಶಲ ಇಲ್ಲವೇ ಮೆಟ್ಯಾಲಿಕ್ ವಿನ್ಯಾಸಕ್ಕೆ ಹೆಚ್ಚು ಬೇಡಿಕೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಬಳಸುವ ಆಮಂತ್ರಣ ಪತ್ರಿಕೆ ಕೂಡ ಇಲ್ಲಿವೆ.
ಎಲ್ಲಾ ಸಮುದಾಯದವರಿಗೂ ಹಿಂದೂ ಸಂಪ್ರದಾಯದ ಗಣಪತಿ, ವೆಂಕಟರಮಣ, ಲಕ್ಷ್ಮೀ, ಸರಸ್ವತಿ ಚಿತ್ರಗಳಿಗೆ ಬೇಡಿಕೆ ಇದ್ದರೆ ಮುಸಲ್ಮಾನರ ಮೊಹರು ಇರುವ ಪತ್ರಗಳಿಗೂ ಅದರದ್ದೇ ಆದ ಬೇಡಿಕೆ ಇದೆ.
ಕ್ರಿಶ್ಚಿಯನ್ನರು ಯಾವುದೇ ಚಿತ್ರಗಳಿಲ್ಲದ ಖಾಲಿ ಪತ್ರಿಕೆ ಇಷ್ಟಪಡುವುದೇ ಹೆಚ್ಚು. ಆಯ್ಕೆಗೆ ಹೆಚ್ಚು ಅವಕಾಶ ಕೊಟ್ಟಾಗ ಮಾತ್ರ ಒಮ್ಮೆ ಬಂದ ಗ್ರಾಹಕ ಮತ್ತೊಮ್ಮೆ ಬರುತ್ತಾನೆ ಎಂದು ವಿವರಣೆ ನೀಡುತ್ತಾರೆ ಅವರು.
ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಈಗ ವ್ಯಾಪಾರ ಕಡಿಮೆ. ಆಗೆಲ್ಲ ಒಂದು ಮದುವೆಗೆ ಹುಡುಗನ ಕಡೆಯವರು ಐದುಸಾವಿರ ಲಗ್ನಪತ್ರಿಕೆ ಮುದ್ರಿಸಿದರೆ ಹುಡುಗಿ ಕಡೆಯವರು ನೂರು ಕಾಗದ ಹೆಚ್ಚೇ ಕೊಳ್ಳುತ್ತಿದ್ದರು.
ಈಗ ಎರಡೂ ಕಡೆಯವರು ಸೇರಿ ಹೆಚ್ಚೆಂದರೆ ಒಂದು ಸಾವಿರ ಕೊಂಡರೆ ಅದೇ ಹೆಚ್ಚು. ಇಂಟರ್ನೆಟ್, ಮೊಬೈಲ್ ಮೊದಲಾದ ತಂತ್ರಜ್ಞಾನದ ಹಾವಳಿ ಸಣ್ಣ ಉದ್ದಿಮೆದಾರರ ಮೇಲೂ ಹೇಗೆ ಪರಿಣಾಮ ಬೀರಿದೆ ನೋಡಿ ಎಂದು ವಿಷಾದಿಸುತ್ತಾರೆ.
ಅದರೊಂದಿಗೆ ಗ್ರೀಟಿಂಗ್‌ಕಾರ್ಡ್, ವಿಸಿಟಿಂಗ್ ಕಾರ್ಡ್, ಕ್ಯಾಲೆಂಡರ್, ಡೈರಿಗಳೂ ಇಲ್ಲಿ ಮಾರಾಟಕ್ಕಿವೆ. ನಮ್ಮ ಊರಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮಾಡಿಸೋಣವೆಂದರೆ ಅಲ್ಲಿ ಹೆಚ್ಚಿನ ಆಯ್ಕೆಗಳಿಲ್ಲ, ಮತ್ತು ಅದು ದುಬಾರಿ. ಇಲ್ಲಿ ಬಂದರೆ ಒಂದೇ ಸೂರಿನಡಿ ವಿವಿಧ ವಿನ್ಯಾಸದ ಕಾರ್ಡ್‌ಗಳನ್ನು ಆಯ್ಕೆ ಮಾಡಬಹುದು ಎಂಬುದು ಹುಬ್ಬಳ್ಳಿಯ ಮಹಾಂತೇಶ ಅವರ ಮಾತು.
ನಿಮ್ಮ ಮನೆಯಲ್ಲೂ ಮದುವೆ ತಯಾರಿ ನಡೆಯುತ್ತಿದ್ದರೆ, ಯಾವ ವಿನ್ಯಾಸದ ಆಮಂತ್ರಣ ಪತ್ರಿಕೆ ತಯಾರಿಸುವುದು ಎಂಬ ಚರ್ಚೆ ನಡೆಯುತ್ತಿದ್ದರೆ...ತಡ ಮಾಡಬೇಡಿ ಒಮ್ಮೆ ಚಿಕ್ಕಪೇಟೆಗೆ ಭೇಟಿ ನೀಡಿ...ಅಲ್ಲಿನ ಸಂಗ್ರಹ ನೋಡಿ ನಿಮಗೆ ಆಯ್ಕೆ ಗೊಂದಲ ಮೂಡಿದರೂ ಅಚ್ಚರಿಯಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.