ADVERTISEMENT

ಮನಸ್ಸು ರೇಸು

ಪಿಕ್ಚರ್ ಪ್ಯಾಲೆಸ್

​ಪ್ರಜಾವಾಣಿ ವಾರ್ತೆ
Published 18 ಮೇ 2014, 19:30 IST
Last Updated 18 ಮೇ 2014, 19:30 IST
ಚಿತ್ರಗಳು: ಸತೀಶ್‌ ಬಡಿಗೇರ್, ಪಿ.ರಂಜು, ಸವಿತಾ ಬಿ.ಆರ್.
ಚಿತ್ರಗಳು: ಸತೀಶ್‌ ಬಡಿಗೇರ್, ಪಿ.ರಂಜು, ಸವಿತಾ ಬಿ.ಆರ್.   

ಓಟ ಧಾವಂತದ ಬಿಂಬ. ಅದನ್ನು ನಗರ ಬದುಕಿನ ಸಂಕೇತ ಎನ್ನಲೂಬಹುದು. ಇಲ್ಲಿ ಅಡಿಗಡಿಗೆ ಗಡಿಗಳು, ಗುರಿಗಳು. ಬದುಕನ್ನೇ ‘ರೇಸು’ ಎಂದುಕೊಂಡವರು ಇಲ್ಲಿದ್ದಾರೆ. ನಿಮಿಷದ ಮೌಲ್ಯದಲ್ಲೂ ಎದ್ದುಕಾಣುವ ಅರ್ಥಶಾಸ್ತ್ರ. ನಿತ್ಯ ಮುಂಜಾನೆ ಓಡುತ್ತಾ ಮೀನಖಂಡಗಳ ಮಣಿಸುವ ಮನಗಳಲ್ಲಿ ಬೇರೆಯದೇ ‘ರೇಸು’. ಶಾಲೆಗಳಲ್ಲಿ ಅಂಕಗಳ ಹಿಂದೆ ಮಕ್ಕಳ ‘ರೇಸು’. ಕೆಲವರು ಇಲ್ಲಿ ಓಡುತ್ತಾ ಓಡುತ್ತಾ ದಣಿಯುತ್ತಾರೆ. ಇನ್ನು ಕೆಲವರು ಓಡಿ, ಸಾಕಾಗಿ ಮಣಿಯುತ್ತಾರೆ.

ದಣಿದವರಿಗೂ ಮಣಿದವರಿಗೂ ಇರುವುದು ಒಂದೇ ಸಾಮ್ಯತೆ– ಬದುಕು ಇನ್ನೂ ಮುಗಿದಿಲ್ಲ, ಮತ್ತೆ ಓಡಬೇಕು ಎನ್ನುವ ಪ್ರಜ್ಞೆ. ಬೆಂಗಳೂರಿನಲ್ಲಿ ಭಾನುವಾರ ಕಬ್ಬನ್‌ಪಾರ್ಕ್‌ನ ಬೆಳಗಿಗೆ ಹೊಸ ಮೆರುಗು. ಹಿಂದಿನ ದಿನ ರಾತ್ರಿ ಸುರಿದಿದ್ದ ಹದವಾದ ಮಳೆಯಿಂದ ಮಿಂದಿದ್ದ ಗರಿಕೆಗಳು ಹಸಿರು ನಗೆ ಉಕ್ಕಿಸುತ್ತಿದ್ದವು. ಸೂರ್ಯ ಇನ್ನೂ ಕಣ್ಣು ಬಿಡುವ ಮೊದಲೇ ಭದ್ರತಾ ಸಿಬ್ಬಂದಿ ಕಣ್ಣು ಹೊಸೆದುಕೊಂಡು ಆಗಿತ್ತು. ಪೊಲೀಸರು ಕೂಡ ಸಜ್ಜಾಗಿದ್ದರು.

‘ವಿಶ್ವ 10 ಕೆ’ ಓಟದ ಸ್ಪರ್ಧೆಗಾಗಿ ಕಾಲುಗಳನ್ನು ಅಣಿಮಾಡಿಕೊಂಡವರಲ್ಲಿ ಎಷ್ಟೊಂದು ಬಗೆ. ಕೀನ್ಯಾ, ಇಥಿಯೋಪಿಯಾ ಸ್ಪರ್ಧಿಗಳ ಮಿರಮಿರ ಮಿಂಚುವ ಕಪ್ಪು ದೇಹಗಳಲ್ಲಿ ದಾಖಲೆ ಮುರಿಯುವ, ಉತ್ತಮ ಪಡಿಸುವ ಹುರುಪು. ಗಾಲಿಕುರ್ಚಿಗಳಲ್ಲಿ ಕುಳಿತವರಲ್ಲೂ ನುಗ್ಗಿ ಸಾಗುವ ತವಕ. ರಸ್ತೆ ಬದಿಯಿಂದ ನಿಂತ ಮಳೆನೀರಿನ ಮೇಲೆ ಬೂಟುಕಾಲುಗಳನ್ನು ಊರಲು ಹಿಂದೇಟು ಹಾಕಿದವರ ನಡುವೆಯೇ, ಒಬ್ಬ ಅಜ್ಜ ಅದೇ ನೀರಿನಲ್ಲಿ ಸ್ಪರ್ಧೆಯ ಸಣ್ಣ ಅಲೆ ಮೂಡಿಸಿ ಹೊಸತೇ ಸಪ್ಪಳ ಮಾಡಿದರು.

ಬೂಟೇ ಇಲ್ಲದ ಹುಡುಗಿಯ ಪಾದಗಳು ಸಾಗಿದ್ದೂ ಅದೇ ನೀರಿನಲ್ಲಿ. ಕೆಲವರ ಗುರಿ ಎರಡು ಕಿಲೋಮೀಟರ್‌, ಕೆಲವರದ್ದು ಐದು, ವೃತ್ತಿಪರ ಸ್ಪರ್ಧಿಗಳಿಗೆ ಬರೋಬ್ಬರಿ ಹತ್ತು ಕಿಲೋಮೀಟರ್‌ ಗುರಿ. ಗೆದ್ದವರ ಕೊರಳಿಗೆ ಪದಕ. ಸೋತವರ ಮೀನಖಂಡಗಳಲ್ಲಿ ಆತ್ಮವಿಶ್ವಾಸದ ನಾಡಿ. ಓಟಕ್ಕೆ ಎಷ್ಟೊಂದು ಅರ್ಥ ಅಲ್ಲವೇ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.