ADVERTISEMENT

ಮನೋಹರ ಸಂಗೀತ ಸುಧೆ

ಶಾರದಾಸುತ
Published 14 ಫೆಬ್ರುವರಿ 2011, 19:30 IST
Last Updated 14 ಫೆಬ್ರುವರಿ 2011, 19:30 IST

ಕಲಾರಾಧನೆ  ಮತ್ತು ಕಲಾಪೋಷಣೆಯನ್ನೇ ತಮ್ಮ  ಸರ್ವಸ್ವವನ್ನಾಗಿಸಿಕೊಂಡಿರುವ ಕೆಲವೇ  ಸಂಗೀತ ಸಂಸ್ಥೆಗಳಲ್ಲಿ, ಸುಮಾರು ಐವತ್ತು  ವರ್ಷಗಳಿಗೂ ಹೆಚ್ಚು ಕಾಲದಿಂದ ಕಲಾಸೇವೆ  ಸಲ್ಲಿಸುತ್ತಿರುವ ಶ್ರೀರಾಮ ಲಲಿತ ಕಲಾಮಂದಿರ ಮುಂಚೂಣಿಯಲ್ಲಿದೆ.

ಈ ಸಂವತ್ಸರದ ವಾರ್ಷಿಕೋತ್ಸವ ಬೆಂಗಳೂರು ಗಾಯನ ಸಮಾಜದಲ್ಲಿ ಸುಮಾರು ಎಂಟು ದಿನಗಳ ಕಾಲ ಜಿ.ವಿ. ಕೃಷ್ಣಪ್ರಸಾದ್ ಮತ್ತು ಸಂಗಡಿಗರ ಪರಿಶ್ರಮದಿಂದ ಬಹಳ ವಿಜೃಂಭಣೆಯಿಂದ ಜರುಗಿತು.

ರಾಗ ಸುಧಾರಸ ಮಾಂತ್ರಿಕ
ಪ್ರತಿಭೆ  ಮತ್ತು ಸಾಧನೆಗಳ ಪ್ರತೀಕವೇ ವಿದ್ವಾನ್ ಟಿ.ಎಂ.ಕೃಷ್ಣ. ತ್ಯಾಗರಾಜರ  ಹುಸೇನಿರಾಗದ ‘ರಾಮ ನಿನ್ನೆ ನಮ್ಮಿ  ನಾನುರಾ’ ಎಂಬ ಕೃತಿಯಿಂದ ಕಾರ್ಯಕ್ರಮಕ್ಕೆ  ನಾಂದಿ ಹಾಕಿ, ತಮ್ಮ ಸ್ವರ  ಕಲ್ಪನೆಯಲ್ಲಿ ರಾಗದ ಸಂಪೂರ್ಣ ವಿಸ್ತೀರ್ಣತೆಯನ್ನು ಗೋಚರಗೊಳಿಸಿದರು. ಆರೋಹ ಮತ್ತು ಅವರೋಹಗಳಲ್ಲಿ ಬಹಳಷ್ಟು ದಾಟುಗಳಿದ್ದು, ಚತುಶೃತಿ ಮತ್ತು ಶುದ್ಧ ದೈವತ ಸ್ವರಗಳ ಬಳಕೆಯಿದ್ದರೂ ಬಹಳ ಲೀಲಾಜಾಲವಾಗಿ ನಿರೂಪಿಸಿದರು.

ಘನ್ನ ಪಂಚರದಲ್ಲಿ  ಮೂರನೆ ಕೃತಿಯಾದ ಆರಭಿ ರಾಗದ  ಸಾಧಿಂಚನೆ ಕೃತಿಯ ಕಾಲ ಪ್ರಮಾಣ, ಚರಣಗಳ ಸ್ವರ ಮತ್ತು ಸಾಹಿತ್ಯವನ್ನು ಪಿಟೀಲು ಮತ್ತು ಗಾಯನ ಕ್ರಮಕ್ಕೆ ವಿಂಗಡಿಸಿದ ಬಗೆ ಎಲ್ಲರನ್ನು ತನ್ನೆಡೆ ಸೆಳೆಯಿತು. ಶ್ಯಾಮಾಶಾಸ್ತ್ರಿಗಳ ಧನ್ಯಾಸಿರಾಗದ ಮೀನಲೋಚನಿ ಕೃತಿಯನ್ನು ಆಯ್ದುಕೊಂಡು, ಕೃತಿಯ ಭಾವಕ್ಕೆ ಅನುಗುಣವಾಗಿ ಕೀಳು ಕಾಲದಲ್ಲೆ ಹಾಡಿಕೊಂಡು ಬಂದ ನೆರವಲ್ ರೀತಿ ಬಹಳ ಭಾವ ಪೂರ್ಣವಾಗಿತ್ತು.

ಕಾರ್ಯಕ್ರಮದ  ಮುಖ್ಯ ವಸ್ತುವಾಗಿ ತ್ಯಾಗರಾಜರ ಆಂಧೋಳಿಕ ರಾಗದ ‘ರಾಗ ಸುಧಾರಸ’ ಎಂಬ ಬಹಳ ಪ್ರಸಿದ್ಧ ಕೃತಿಯನ್ನು ಆಯ್ದುಕೊಂಡರು. ಅಂದಿನ ಮತ್ತೊಂದು  ವಿಶೇಷ ಬಹಳ ಪುರಾತನ ಚತೂರ್  ರಾಗಮಾಲಿಕೆ ಪಲ್ಲವಿ ಶಂಕರಾಭರಣ. ನೈ ಅಳೈ ತೋಡಿವಾಡಿ ಕಲ್ಯಾಣಿ ದರ್ಬಾರಕ್ ಎಂಬ ಪಲ್ಲವಿಯನ್ನು ಆಯ್ದು, ಅದಕ್ಕೆ ಹಾಡಿದ ಆಲಾಪನಾ ಮತ್ತು ತಾನ ಕ್ರಮಗಳು, ಕೊರಪು ಮಾಡಿಕೊಂಡು ಬಂದ ರೀತಿ ರಾಗದ ಸ್ಪಷ್ಟತೆ, ನಾಲ್ಕು ರಾಗಗಳೂ ಬರುವ ಹಾಗೆ ಇದ್ದ ಮುಕ್ತಾಯ, ತ್ರಿಸ್ಥಾಯಿಯಲ್ಲೂ ಸುಲಲಿತವಾಗಿ ನುಡಿಯುವ ಇವರ ಶಾರೀರದಲ್ಲಿ ವಿಸ್ಮಯವಾಗಿ ಮೂಡಿ ಬಂದಿತು.

ವಿದುಷಿ ಚಾರುಲತಾ ರಾಮಾನುಜಂ, ವಿದ್ವಾನ್ ಅರ್ಜುನ್ ಕುಮಾರ್, ವಿದ್ವಾನ್ ಗುರು ಪ್ರಸನ್ನ ಕಾರ್ಯಕ್ರಮಕ್ಕೆ ಮತ್ತಷ್ಟು ಒತ್ತಾಸೆಯನ್ನು ನೀಡಿದರು. ಬೆಹಾಗ್ ರಾಗದ ಪದ ಮತ್ತು ಮುಖಾರಿ ಜಾವಳಿಯೊಂದಿಗೆ ಮುಕ್ತಾಯ ಹಾಡಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.