ADVERTISEMENT

ಮಹಿಳಾ ದಿನದ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST
ಮಹಿಳಾ ದಿನದ ವೈವಿಧ್ಯ
ಮಹಿಳಾ ದಿನದ ವೈವಿಧ್ಯ   

ಸಿಜಿಐ ಇಂಡಿಯಾ
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿ ಸಿಜಿಐ ಇಂಡಿಯಾ 100ನೇ ಮಹಿಳಾ ದಿನಾಚರಣೆ ಅಂಗವಾಗಿ ತನ್ನ ನೌಕರರಿಗೆ ವಿಶೇಷ ಕಾರ್ಯಕ್ರಮ ಏರ್ಪಡಿಸಿತ್ತು.

ದೇಶದ ವೈವಿಧ್ಯಮಯ ಸಂಸ್ಕೃತಿ, ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ, ಲಿಂಗ ಸಂವೇದನೆ ಇತ್ಯಾದಿ ಧ್ಯೇಯ ಇಟ್ಟುಕೊಂಡು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಣಿಪಾಲ್ ಕೌಂಟಿ ರಿಸಾರ್ಟ್ಸ್‌ನಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಖ್ಯಾತ ಪಾಪ್ ಗಾಯಕಿ ಉಷಾ ಉತ್ತಪ್ಪ, ನಾಸ್ಕಾಂ ಪ್ರತಿನಿಧಿ ಗೀತಾ ಕಣ್ಣನ್, ಅವತಾರ್ ಕೆರಿಯರ್ ಕ್ರಿಯೇಟರ್ಸ್‌ನ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ಸೌಂದರ್ಯ ರಾಜೇಶ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ಯಶೋಗಾಥೆ ಹಂಚಿಕೊಂಡು ಮಹಿಳೆಯರ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸಿಜಿಐ ಇಂಡಿಯಾದ 500ಕ್ಕೂ ಹೆಚ್ಚು ನೌಕರರು ಸೇರಿದ್ದರು. ಉಷಾ ಉತ್ತಪ್ಪ ಹಾಡಿ ರಂಜಿಸಿದರು. ನಂತರದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು.

ಅಗರವಾಲ್ ಸಮೂಹ
ಡಾ. ಅಗರವಾಲ್ ಆಸ್ಪತ್ರೆ ಮತ್ತು ಜೀನ್ ಸಂಶೋಧನಾ ಪ್ರತಿಷ್ಠಾನ ಹೆಣ್ಣು ಮಗುವಿನ ದಿನ’ ಆಚರಿಸುವ ಮೂಲಕ ಮಹಿಳಾ ದಿನಾಚರಣೆ ಆಚರಿಸಿತು. ಕನ್ನಡ ಚಿತ್ರನಟಿ ತಾರಾ ಮತ್ತು ಮಲಯಾಳಂ ಚಿತ್ರನಟಿ ಮಮತಾ ಮೋಹನ್‌ದಾಸ್ ಬಡ ಹೆಣ್ಣುಮಕ್ಕಳ ಜತೆ ದಿನ ಕಳೆಯುವ ಮೂಲಕ ಅವರ ಸಂಭ್ರಮ ಹೆಚ್ಚಿಸಿದರು. ಕ್ರಿಕೆಟ್ ಪಟು ರಾಬಿನ್ ಉತ್ತಪ್ಪ ಆಗಮಿಸಿದ್ದು ಮಕ್ಕಳ ಖುಷಿ ಹೆಚ್ಚಿಸಿತು. ಶಾಂತಿನಗರ ಶಾಸಕ ಹ್ಯಾರಿಸ್ ಹಾಜರಿದ್ದರು.

ಸಾಧಕಿಯರಿಗೆ ಸನ್ಮಾನ
ಲಯನೆಸ್ ಕೌನ್ಸಿಲ್ 324 ಡಿ6 ಜಿಲ್ಲೆ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಗೌರವಿಸುವ ಮೂಲಕ ಅಂತರ್ರಾಷ್ಟ್ರೀಯ ಮಹಿಳಾ ದಿನ ಆಚರಿಸಿತು. ಲಯನೆಸ್ ಡಿಸ್ಟ್ರಿಕ್ಟ್ ಅಧ್ಯಕ್ಷ ಪ್ರೊ. ಪಿ. ಸದಾಶಿವ, ಸಹಾಯಕ ಅಧ್ಯಕ್ಷರಾದ ವೀಣಾ ಬಂಗೇರ, ಕೌನ್ಸಿಲ್ ಕಾರ್ಯದರ್ಶಿ ಅನಿತಾ ರವಿಕುಮಾರ್, ಕೌನ್ಸಿಲ್ ಖಜಾಂಚಿ ವಿಜಯಲಕ್ಷ್ಮಿ ಆನಂದ್ ಮತ್ತು ಡಾ.ಆರತಿ ಸಾಧಕರನ್ನು ಸನ್ಮಾನಿಸಿದರು.

ಬಿಎಂಟಿಸಿ ಬಸ್ ಚಾಲಕಿ ರಾಧಾ, ಕಂಡಕ್ಟರ್ ಪ್ರೇಮಾ, ಪೈಲಟ್ ವಿನಿತಾ ಮರಿಯಪ್ಪ, ನರ್ಸ್ ಲೀನಾ, ಅಂಚೆ ಅಕ್ಕ ಶಕುಂತಲಾ, ಕ್ರೀಡಾಪಟು ಕಮಲಾ, ಪರ್ವತಾರೋಹಿ ವಸುಮತಿ, ಪೊಲೀಸ್ ಇಲಾಖೆಯ ಪ್ರೇಮಾವತಿ, ಕಾನೂನು ಇಲಾಖೆಯ ಗೀತಾ ಕೃಷ್ಣಮೂರ್ತಿ, ಮನೋವಿಕಾಸ ಕೇಂದ್ರದ ಮುಖ್ಯ ಶಿಕ್ಷಕಿ ಕೀರ್ತಿವತಿ, ಅಂಧ ಶಿಕ್ಷಕಿ ಡಾ. ಸಂಗೀತಾ ಸನ್ಮಾನಕ್ಕೆ ಪಾತ್ರರಾದರು.ಆ ದಿನ ಮೂವರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ವಿಶೇಷ ಮಗುವಿಗೆ ಧನ ಸಹಾಯ ನೀಡಲಾಯಿತು.

ಲಯನೆಸ್ ಕೌನ್ಸಿಲ್
ಲಯನೆಸ್ ಕೌನ್ಸಿಲ್ 324 ಡಿ1 ಆಶ್ರಯದಲ್ಲಿ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರ್ಲ್ಡ್ ಕಲ್ಚರ್‌ನಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆದವು.  ರಾಮಯ್ಯ ಆಸ್ಪತ್ರೆ ಡಾ. ವೀಣಾ ವಿದ್ಯಾಶಂಕರ್ ದೇಹದಾನದ ಬಗ್ಗೆ ವಿವರಿಸಿದರು.
ಕಂಡಕ್ಟರ್ ಭುವನ, ಪೋಸ್ಟ್ ವುಮನ್ ಲೀಲಾ,  ಕ್ರೀಡಾಪಟು ಪ್ರಮೀಳಾ ಅಯ್ಯಪ್ಪ, ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕುಸುಮಾ ಭಟ್, 25 ವರುಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಮನೆಯಲ್ಲಿ ಕಾಂಡಿಮೆಂಟ್ಸ್ ತಯಾರಿಕೆ ಘಟಕ ತೆರೆದು 20 ಮಹಿಳೆಯರಿಗೆ ನೌಕರಿ ಕೊಟ್ಟಿರುವ ಸುಧಾಮಣಿ ಅವರನ್ನು ಗೌರವಿಸಲಾಯಿತು.

ಬಿಡುವಿಲ್ಲದ ವೈದ್ಯ ವೃತ್ತಿಯ ನಡುವೆ 50 ಉಭಯಲಿಂಗಿಗಳಿಗೆ ಆಶ್ರಯ ನೀಡಿ ಬದುಕಲು ಸೂಕ್ತ ಕೆಲಸ ಕಲಿಸುತ್ತಿರುವ ಡಾ. ನಾಗೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.  ಉಭಯಲಿಂಗಿಗಳ ಯೋಗಕ್ಷೇಮಕ್ಕಾಗಿ 50 ಸೀರೆ, 10 ಸಾವಿರ ರೂಪಾಯಿ ನಗದು ನೀಡಲಾಯಿತು.
ಲಯನ್ ಜಿಲ್ಲಾ ಗವರ್ನರ್ ಡಾ. ಪಿ ಆರ್ ಎಸ್ ಚೇತನ್, ಸುಜಾತಾ ಚೇತನ್, ಲಯನೆಸ್ ಸವಿತಾ ನಾಗೇಶ್, ಆರ್.ವಿ. ಗಣೇಶ್, ನಾಗರತ್ನ ಮಂಜುನಾಥ್, ಚಂದ್ರಕಲಾ ವಿಜಯಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.