ADVERTISEMENT

ಮಾಡೆಲಿಂಗ್ ಮನಸು, ನಟಿಯಾಗುವ ಕನಸು

ಅಭಿಲಾಷ ಬಿ.ಸಿ.
Published 5 ಏಪ್ರಿಲ್ 2018, 5:19 IST
Last Updated 5 ಏಪ್ರಿಲ್ 2018, 5:19 IST
ದೀಪಾಲಿ
ದೀಪಾಲಿ   

‘ಮುಖವೇ ಮನಸಿನ ಕನ್ನಡಿ’ ಎಂದು ಮುದ್ದಾಗಿ ನುಡಿಯುವ ದೀಪಾಲಿ ಭಟ್‌ ಮೂಲತಃ ಗುಜರಾತಿನವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಇವರೀಗ ಅಚ್ಚ ಕನ್ನಡತಿಯಾಗಿದ್ದಾರೆ. ನರ್ಸರಿಯಲ್ಲಿ ಕಲಿಯುತ್ತಿದ್ದಾಗೊಮ್ಮೆ ನಡೆದ ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ಬಂದಿದ್ದ ನಟ ವಿಷ್ಣವರ್ಧನ್‌ ಅವರಿಂದ ಪ್ರಶಸ್ತಿ ಪಡೆದುಕೊಂಡಿದ್ದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಯಿತು ಎನ್ನುತ್ತಾರೆ.

ಎಸ್‌ಎಸ್‌ಎಲ್‌ಸಿ ಪೂರೈಸುವ ಮುನ್ನವೇ ಹಿಪ್‌ಆಪ್‌, ಸಮಕಾಲೀನ, ಬಾಲಿವುಡ್, ಕಥಕ್‌ ನೃತ್ಯಗಳನ್ನು ಕಲಿತಿದ್ದ ನೃತ್ಯ ಪ್ರವೀಣೆಗೆ ಮಾಡೆಲಿಂಗ್ ಗೀಳು ಹತ್ತಿದ್ದು ಕಾಲೇಜು ಮೆಟ್ಟಿಲು ಹತ್ತಿದ ಬಳಿಕವಷ್ಟೆ. 17ನೇ ವಯಸ್ಸಿನಲ್ಲಿ ಮೊದಲ ಫೋಟೊಶೂಟ್‌ ಮಾಡಿಸಿಕೊಂಡ ದೀಪಾ, ಇದೇ ಕ್ಷೇತ್ರದಲ್ಲಿ ತಲ್ಲೀನರಾಗಿದ್ದಾರೆ. ಜೈನ್ ಕಾಲೇಜು ಹಾಗೂ ಜ್ಯೋತಿ ನಿವಾಸ ಕಾಲೇಜುಗಳಲ್ಲಿ 40ಕ್ಕೂ ಹೆಚ್ಚು ಫ್ಯಾಷನ್ ಷೋಗಳಲ್ಲಿ ಹೆಜ್ಜೆಹಾಕಿದ್ದ ಅವರು ರ‍್ಯಾಂಪ್‌ ನಡಿಗೆಯ ತರಬೇತಿಯನ್ನು ನೀಡಿದ್ದಾರೆ.

‘ಮಿಸ್ ಕರ್ನಾಟಕ 2016’ ಕಿರೀಟವನ್ನು ಮುಡಿಗೇರಿಸಿಕೊಂಡ ಅವರು ‘ಮಿಸ್‌ ಸೌತ್ ಇಂಡಿಯಾ ಕ್ವೀನ್‌ 2016’ ಗರಿಯ ಜೊತೆಗೆ ‘ಮಿಸ್‌ ಬಾಡಿ ಬ್ಯೂಟಿಫುಲ್’ ಎಂಬ ಸೈಬ್‌ಟೈಟಲ್‌ನ್ನು ಪಡೆದುಕೊಂಡಿದ್ದಾರೆ. ‘ಸೌತ್ ಇಂಡಿಯಾ ಕ್ವೀನ್ ಸ್ಪರ್ಧೆ ನನಗೆ ಬಹಳ ವಿಶೇಷ ಎನ್ನುವ ದೀಪಾ ಇದರಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ಇದರಿಂದ ಬರುವ ಹಣವನ್ನು ಅಂಧ, ಅನಾಥ ಮಕ್ಕಳ ಸಹಾಯಕ್ಕೆ ವಿನಿಯೋಗಿಸಲಾಗುತ್ತದೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ.

ADVERTISEMENT

‘ಸುದರ್ಶನ ಸಿಲ್ಕ್‌’ನ ಸೀರೆಗಳನ್ನು ತೊಟ್ಟು ಪೋಟೊಗೆ ಪೋಸುನೀಡಿರುವ ಈ ಸುಂದರಿ ನಟ ಜಯರಾಮ್‌ ಕಾರ್ತಿಕ್‌ ಹಾಗೂ ಅಕುಲ್ ಬಾಲಾಜಿ ಜೊತೆಗೂ ರ‍್ಯಾಂಪ್‌ಮೇಲೆ ಹೆಜ್ಜೆಹಾಕಿರುವ ಕ್ಷಣಗಳನ್ನು ಸ್ಮರಿಸುತ್ತಾರೆ.

ಸದ್ಯ ಥಾಯ್ಲೆಂಡ್‌ನ ‘ರೂ ಎಂಡ್‌ ಸ್ಪಾ’ ಸೌಂದರ್ಯ ವರ್ಧಕ ಕಂಪೆನಿ, ‘ವಾಧಿ ವಿಜ್ಞಾನ’ ಕಂಪನಿಗಳ ರಾಯಭಾರಿಯಾಗಿದ್ದಾರೆ. ‘ಕ್ರಿಸೆಲ್‌ ಇವೆಂಟೋರ್‌’  ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯಲ್ಲಿ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಷ್ಟೇ ಯಶಸ್ವಿ ರೂಪದರ್ಶಿಯಾಗಿದ್ದರೂ, ನಿತ್ಯದ ಬದಲಾವಣೆಗೆ, ಸ್ಪರ್ಧೆಗೆ ಒಡ್ಡಿಕೊಳ್ಳಲೇಬೇಕು. ರೂಪದರ್ಶಿಯಾದವರು ಒಂದು ಘಟಕದಂತೆ ಕಾರ್ಯ ನಿರ್ವಹಿಸಬೇಕು. ಕೆಲವೊಮ್ಮೆ ಆರೋಗ್ಯ ಸರಿ ಇಲ್ಲ ಎಂದರೂ ಅನಿವಾರ್ಯವಾಗಿ ಕೃತಕ ನಗೆಯೊಂದಿಗೆ ಹೆಜ್ಜೆ ಹಾಕಲೇಬೇಕು. ರೂಪದರ್ಶಿಯರಿಗೆ ವಸ್ತ್ರದ ಆಯ್ಕೆಯ ಸ್ವಾತಂತ್ರ್ಯ ಇರುವುದಿಲ್ಲ. ಯಾವುದೇ ಬಟ್ಟೆಯಾದರೂ, ರ‍್ಯಾಂಪ್‌ಮೇಲೆ ಅದನ್ನು ಸುಂದರವಾಗಿ ಪ್ರದರ್ಶಿಸುವುದಷ್ಟೇ ನಮ್ಮ ಜವಾಬ್ದಾರಿಯಾಗಿರುತ್ತದೆ ಎನ್ನುತ್ತಾರೆ ಮಾಡೆಲಿಂಗ್ ಕ್ಷೇತ್ರದ ಸವಾಲುಗಳನ್ನು ವಿವರಿಸುತ್ತಾರೆ.

ರ‍್ಯಾಂಪ್‌ಮೇಲೆ ನಡೆಯುವಾಗ ಎತ್ತರ ತುಂಬಾ ಮುಖ್ಯ, ಹೈ ಹೀಲ್ಡ್‌ ಚಪ್ಪಲಿ ಧರಿಸಲೇಬೇಕು, ನೇರ ದೃಷ್ಟಿಯೊಂದಿಗೆ, ಗಲ್ಲ ಮತ್ತು ಭುಜವನ್ನು ಬಗ್ಗಿಸದೇ ನಡೆಯಬೇಕು. ಇದೆಲ್ಲ ಒಮ್ಮೆಗೆ ಬರುವುದಲ್ಲ. ಅವಿರತ ಅಭ್ಯಾಸ ಮುಖ್ಯ. ನಾನು ಇಂದಿಗೂ ಎಷ್ಟೇ ಕೆಲಸದ ಒತ್ತಡವಿದ್ದರೂ ನಿತ್ಯ ಒಂದು ಗಂಟೆ ಕನ್ನಡಿ ಮುಂದೆ ಹೀಲ್ಡ್‌ ಚಪ್ಪಲಿ ಧರಿಸಿ ನಡೆಯುವುದನ್ನು ಮರೆಯುವುದಿಲ್ಲ ಎನ್ನುವುದು ಅವರ ಯಶಸ್ವಿ ನಡಿಗೆಯ ಹಿಂದಿರುವ ಗುಟ್ಟು.

‘ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸುವಂತೆ ಆಫರ್ ಬಂದಿದೆ. ಆದರೆ ಪಾತ್ರಗಳು ಇಷ್ಟವಾಗದ ಕಾರಣ ಒಪ್ಪಿಕೊಳ್ಳಲಿಲ್ಲ. ನಾಯಕನ ಸುತ್ತ ತಿರುಗುವ ಕಥೆಯಲ್ಲಿ ನಟಿಸಲು ಇಷ್ಟವಿಲ್ಲ. ‘ನೋ ಒನ್ ಕಿಲ್ಡ್‌ ಜಸ್ಸಿಕಾ’ ಚಿತ್ರದಲ್ಲಿ ರಾಣಿ ಮುಖರ್ಜಿ ನಟಿಸಿದಂಥ ಪಾತ್ರಗಳಲ್ಲಿ ನಟಿಸುವ ಹಂಬಲವಿದೆ. ಮಹಿಳಾ ಸಬಲೀಕರಣ ಚಿತ್ರಗಳು ನನ್ನ ಮೊದಲ ಆಯ್ಕೆ’ ಎನ್ನುತ್ತಾರೆ ದೀಪಾ.

ಪ್ರತಿನಿತ್ಯ ಬೆಳಿಗ್ಗೆ ಪ್ರಾಣಾಯಾಮ, ಧ್ಯಾನ ಮಾಡುವುದನ್ನು ಮರೆಯದ ದೀಪಾ, ಸದಾ ಬಿಸಿನೀರನ್ನೇ ಕುಡಿಯುತ್ತಾರೆ. ಸಂಜೆ ಯೋಗ ಮಾಡುವುದನ್ನು ಮರೆಯುವುದಿಲ್ಲ. ಇಷ್ಟವಾದ ಆಹಾರವನ್ನೆಲ್ಲಾ ತಿನ್ನುತ್ತಾರೆ. ಅದಕ್ಕೆ ತಕ್ಕಂತೆ ವ್ಯಾಯಾಮ ಕೂಡಾ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.