ADVERTISEMENT

ಮಾಧುರ್ಯದ ಮರುಸೃಷ್ಟಿ

ಸುರೇಖಾ ಹೆಗಡೆ
Published 28 ಫೆಬ್ರುವರಿ 2013, 19:59 IST
Last Updated 28 ಫೆಬ್ರುವರಿ 2013, 19:59 IST
`ಮೆಲೊಡಿ ರೀ ಕ್ರಿಯೇಷನ್ಸ್' ತಂಡದ ರೂವಾರಿಗಳಾದ ಕೆ.ಸಿ.ರಮೇಶ್ ಹಾಗೂ ಚಂದ್ರಿಕಾ ಗುರುರಾಜ್
`ಮೆಲೊಡಿ ರೀ ಕ್ರಿಯೇಷನ್ಸ್' ತಂಡದ ರೂವಾರಿಗಳಾದ ಕೆ.ಸಿ.ರಮೇಶ್ ಹಾಗೂ ಚಂದ್ರಿಕಾ ಗುರುರಾಜ್   

ಆಗಷ್ಟೇ ಮನೆಮನೆಯಲ್ಲಿ ಟೀವಿಗಳ ದನಿ ಏರತೊಡಗಿತ್ತು. ಸಿನಿಮಾಗಳ ಭರಾಟೆ ಹೊಸ ಕ್ರಾಂತಿಗೆ ನಾಂದಿ ಹಾಡಿತ್ತು. ಸಂಪ್ರದಾಯಸ್ಥ ಕುಟುಂಬಗಳು ಟೀವಿಯ ದೃಶ್ಯ, ಹಾಡುಗಳನ್ನು ನೋಡಿ `ಶಿವಶಿವಾ' ಎಂದು ಕಣ್ಣು ಕಿವಿ ಮುಚ್ಚಿಕೊಂಡರೆ ಹದಿಹರೆಯದ ಮನಸ್ಸುಗಳಿಗೆ ರೋಮಾಂಚನ, ಪುಳಕ... ಬಾಯಲ್ಲಿ ಅದೇ ಸಿನಿಮಾ ಹಾಡುಗಳ ಗುನುಗಾಟ.

ಕನ್ನಡ, ಹಿಂದಿ ಹೀಗೆ ವಿವಿಧ ಭಾಷೆಗಳಲ್ಲಿ ಮೂಡಿದ ಸಿನಿಮಾ ಹಾಡುಗಳು ಹುಟ್ಟುಹಾಕಿದ್ದು ಆರ್ಕೆಸ್ಟ್ರಾಗಳನ್ನು. ಮುಖೇಶ್, ಕಿಶೋರ್ ಕುಮಾರ್, ಎಸ್‌ಪಿಬಿ, ಪಿ.ಬಿ. ಶ್ರೀನಿವಾಸ್ ಮುಂತಾದ ಸಂಗೀತಗಾರರ ದನಿಯನ್ನು ಅನುಕರಿಸಿ ಹಾಡುತ್ತಾ ಬೆಂಗಳೂರಿಗರಿಗೆ ಸಂಗೀತ ರಸದೌತಣ ನೀಡುವ ಆಸೆಯೊಂದಿಗೆ 20 ವರ್ಷಗಳ ಹಿಂದೆ ಆರ್ಕೆಸ್ಟ್ರಾವೊಂದು ಹುಟ್ಟಿಕೊಂಡಿತು.ಅದೇ `ಮೆಲೊಡಿ ರೀ ಕ್ರಿಯೇಶನ್ಸ್'.

ಮೊದಲಿನಿಂದಲೂ ಹಾಡಿನ ಗೀಳಿಗೆ ಅಂಟಿಕೊಂಡಿದ್ದ ಕೆ.ಸಿ. ರಮೇಶ್ ಅವರ ಕನಸಿನ ಕೂಸು ಇದು. ಹಿನ್ನೆಲೆ ಗಾಯಕಿ ಚಂದ್ರಿಕಾ ಗುರುರಾಜ್ ಅವರೊಂದಿಗೆ ಸೇರಿ ತಂಡ ಕಟ್ಟಿಯೂ (1993) ಆಯಿತು.

`ಮೆಲೊಡಿ ರೀ ಕ್ರಿಯೇಷನ್ಸ್' ತಂಡದಲ್ಲಿ ಸಂಗೀತದ ವಿವಿಧ ಪ್ರಕಾರಗಳಲ್ಲಿ ತರಬೇತಿ ಪಡೆದ ಅತಿಥಿ ಕಲಾವಿದರೂ ಇದ್ದಾರೆ. ಇನ್ನು ಕೆಲವರು ಹವ್ಯಾಸಿ ಕಲಾವಿದರು. ಕಾರ್ಯಕ್ರಮದ ರೂಪರೇಷೆ ಜೊತೆಗೆ ಕಲಾವಿದರ ಅನುಕೂಲ ನೋಡಿಕೊಂಡು ಕಾರ್ಯಕ್ರಮ ಸೆಟ್ಟೇರುತ್ತದೆ.

ಅದೂ ಅತ್ಯಂತ ಸರಳವಾಗಿ. ರಂಗ ಸಜ್ಜಿಕೆಯ ವಿಷಯದಲ್ಲಿ ಸರಳತೆ ತೋರುವ ಇವರದ್ದು ಹಾಡು ಬಯಸುವ ಮಾಧುರ್ಯ ನೀಡುವಲ್ಲಿ ಮಾತ್ರ ಎತ್ತಿದ ಕೈ.ಬೆಂಗಳೂರಿನಾದ್ಯಂತ ಇರುವ ಪಾರ್ಕ್‌ಗಳಲ್ಲೇ ಇವರ ಗಾಯನ ಕಾರ್ಯಕ್ರಮಗಳು ನಡೆಯುತ್ತವೆ.

ADVERTISEMENT

ಕನ್ನಡ ಹಾಗೂ ಹಿಂದಿ ಚಿತ್ರರಂಗಗಳು ಮಹತ್ವದ ಘಟ್ಟ ದಾಟಿದ ಸಂದರ್ಭಗಳಲ್ಲಿ (ಅರವತ್ತೆರಡರ ಸಂಭ್ರಮ, ಅಮೃತವರ್ಷ ಇತ್ಯಾದಿ ವರ್ಷಗಳನ್ನು ಪೂರೈಸಿದಾಗ) ಇವರು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ಅಂಥ ಕಾರ್ಯಕ್ರಮಗಳನ್ನು ಶ್ರೇಷ್ಠ ಗಾಯಕರಿಗೆ, ಕವಿತೆಗಳಿಗೆ, ಕಲಾವಿದರಿಗೆ ಸಮರ್ಪಿಸುತ್ತಾರೆ. `ತುಂಬಿತು ಮನವಾ ತಂದಿತು ಸುಖವಾ', `ಹೇಮಂತ ಗಾನ', `ನಾಗೇಂದ್ರ ರಾವ್ ನೆನಪು', ಮಧುರ ಗೀತೆಗಳ ಕಾರ್ಯಕ್ರಮ `ಬಾ ಬೇಗ ಚಂದಮಾಮ', ಕನ್ನಡ ಚಿತ್ರ ಅಮೃತ ವರ್ಷಾಚರಣೆಗೆ `ಹಾಡು ಹಂಬಲ', ಹೆಸರಾಂತ ಕವಿಗಳ ಕವಿತಾ ಗಾಯನ `ಎಂಥಾ ಮರುಳಯ್ಯಾ ಇದು...', `ಚಿತ್ರ ಮಧುರ', `ನೀಂದ್ ನಾ ಮ್ುಕೊ ಆಯೆ', ಗುರುದತ್ ನೆನಪು `ಬಿಛ್‌ಡೆ ಸಭಿ ಬಾರಿ ಬಾರಿ', `ಮುಖೇಶ್ ಕಮ್ಸ ಅಲೈವ್', ನೌಶಾದ್ ಅವರ ನೆನಪಿಗಾಗಿ `ಮೇರಾ ಸಲಾಂ ಲೇಜಾ' ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ನೀಡಿ ಸಂಗೀತ ಪ್ರೀತಿ ಮೆರೆದಿದೆ ತಂಡ.

`ಚಿಕ್ಕಂದಿನಿಂದಲೂ ಸಂಗೀತದ ಬೆನ್ನುಹತ್ತಿದವನು ನಾನು. ಆದರೆ 1970ರ ಸುಮಾರಿಗೆ ಆರ್ಕೆಸ್ಟ್ರಾಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದವು. ಹಾಡುಗಳ ಗುಂಗಿನಲ್ಲೇ ಬೆಳೆದ ನನಗೆ ಆರ್ಕೆಸ್ಟ್ರಾ ಮೂಲಕವೇ ಮತ್ತೆ ಜನರಿಗೆ ಸಂಗೀತದೌತಣ ನೀಡುವ ಮನಸ್ಸಾಗಿ ಗಾಯಕಿ ಚಂದ್ರಿಕಾ ಗುರುರಾಜ್ ಜೊತೆಗೂಡಿ ತಂಡ ಕಟ್ಟಿದೆ. ನಂತರ ತಂಡಕ್ಕೆ ರಂಗನಾಥ್, ನಂದಿನಿ ರಂಗನಾಥ್, ಶ್ರೀದೇವಿ, ಚಾಂದನಿ, ನಾಗಚಂದ್ರಿಕಾ ಭಟ್, ಸುನೀತಾ, ಅರವಿಂದ, ಡಾ. ಸಲೀಂ, ಬದ್ರಿ ಪ್ರಸಾದ್, ಕಮಲೇಶ್ (ಆರ್ಟ್ ಎಡ್ವೈಸರ್) ಮುಂತಾದ ಕಲಾವಿದರು ಕಳೆಕಟ್ಟಿದರು.

ಕನ್ನಡ ಗೀತೆಗಳಷ್ಟೇ ಹಿಂದಿ ಹಾಡುಗಳ ಬಗ್ಗೆ ನಮಗೆ ಅಭಿಮಾನವಿತ್ತು. ಹೀಗಾಗಿ ನಮ್ಮ ಕಾರ್ಯಕ್ರಮಗಳನ್ನು ಸಂದರ್ಭಕ್ಕೆ ತಕ್ಕಂತೆ ಆಯೋಜಿಸುತ್ತಿದ್ದೆವು. ದೇಶಭಕ್ತಿ ಗೀತೆಗಳ `ನಮೋ ಭಾರತಿ' ಕಾರ್ಯಕ್ರಮವನ್ನು ಎಷ್ಟು ನೀಡಿದ್ದೇವೋ ಲೆಕ್ಕವಿಲ್ಲ' ಎನ್ನುತ್ತಾರೆ ರಮೇಶ್.

`ಆಗಿನ ಕಾಲದಲ್ಲಿ ಈಗಿನಷ್ಟು ಮನರಂಜನೆಗೆ ಅವಕಾಶವಿರಲಿಲ್ಲ. ಆರ್ಕೆಸ್ಟ್ರಾ ಎಂದರೆ ಗಿಜಿಗುಡುವಷ್ಟು ಜನ ಇರುತ್ತಿದ್ದರು. ಜನರ ಸ್ಪಂದನೆಗೆ ನಮ್ಮ ಕಾರ್ಯಕ್ರಮ ಹಿರಿದಾಗುತ್ತಾ ಹೋಯಿತು.

ಹಣಕಾಸಿನ ತೊಂದರೆ ಬಹುವಾಗಿ ಕಾಡಿದೆ, ಈಗಲೂ ಇದೆಯೆನ್ನಿ. ಆದರೆ ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗಬಾರದೆಂದು ನಿರಂತರ ಅಭ್ಯಾಸದಲ್ಲಿ ತೊಡಗಿದ್ದೇವೆ. ಆಗ ಮದುವೆ, ಸಮಾರಂಭಗಳಲ್ಲಿ ಆರ್ಕೆಸ್ಟ್ರಾಗಳನ್ನು ಆಯೋಜಿಸುವ ಪರಿಪಾಠವಿತ್ತು. ನಮ್ಮ ಆರ್ಕೆಸ್ಟ್ರಾಗೆ ಸಿಕ್ಕಿದ ಬೆಂಬಲವೂ ಆಶಾದಾಯಕವಾಗಿತ್ತು.

ಹಳೆ ಹಾಡುಗಳು ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರ ನೆನಪನ್ನು ಹಸಿರಾಗಿರಿಸಲು ನಾವು ದೊಡ್ಡ ಪ್ರಮಾಣದಲ್ಲೇ ಕಾರ್ಯಕ್ರಮ ಆಯೋಜಿಸುತ್ತಿದ್ದೆವು. ಸಿನಿಮಾ ರಂಗದ ಹಿರಿಯ ಕಲಾವಿದರಿಗೆ ಸನ್ಮಾನ ಮಾಡುವುದು ನಮ್ಮ ಕಾರ್ಯಕ್ರಮದ ವಿಶೇಷ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಿಟ್ಟರೆ ಸಿನಿಮಾದ ಕಾಲಘಟ್ಟದ ಸಂಭ್ರಮಾಚರಣೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತೆ ಯಾರೂ ಮಾಡಿರಲಿಕ್ಕಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆರ್ಕೆಸ್ಟ್ರಾಗಳನ್ನು ಉತ್ತೇಜಿಸುವವರು ಕಡಿಮೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ಬೆಂಬಲವಿಲ್ಲ. ಆರ್ಕೆಸ್ಟ್ರಾ ಎಂಬ ಪದ ಅವರಿಗೆ ನಿಕೃಷ್ಟವಾಗಿ ಕಾಣುತ್ತಿದೆಯೇನೊ' ಎಂದು ನೋವು ಹಂಚಿಕೊಂಡರು ರಮೇಶ್.

`ಇತ್ತೀಚೆಗಷ್ಟೇ ಅರವತ್ತೆರಡರ ನೆನಪು ಕಾರ್ಯಕ್ರಮ ಮಾಡಿದೆವು. ಸುಮಾರು 50 ವರ್ಷಗಳ ಹಿಂದೆ ಆರ್ಕೆಸ್ಟ್ರಾಗಳು ಹೇಗೆ ಕಾರ್ಯಕ್ರಮ ನೀಡುತ್ತಿತ್ತೋ ಅದೇ ಧಾಟಿಯಲ್ಲಿ ಕಾರ್ಯಕ್ರಮ ನೀಡಿದೆವು. ಸಾಧಾರಣ ವೇದಿಕೆ. ಬೆಳಕಿನ ಝಗಮಗವಿರಲಿಲ್ಲ.

ಹೀಗಿದ್ದೂ ಇಂದಿಗೆ ಆರ್ಕೆಸ್ಟ್ರಾಗೆ ಕಿವಿಗೊಡುವ ಮನಸ್ಸುಗಳು ಇವೆ ಎಂಬ ಸಮಾಧಾನ ಕಾರ್ಯಕ್ರಮದಿಂದ ಸಿಕ್ಕಿತು' ಎಂದು ಆನಂದದಿಂದ ನುಡಿದರು ಗಾಯಕ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.