ADVERTISEMENT

ಮೆಟ್ಟಲಂಥ ಮೆಟ್ಟು, ಆರೋಗ್ಯಕ್ಕೆ ಪೆಟ್ಟು

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST
ಮೆಟ್ಟಲಂಥ ಮೆಟ್ಟು, ಆರೋಗ್ಯಕ್ಕೆ ಪೆಟ್ಟು
ಮೆಟ್ಟಲಂಥ ಮೆಟ್ಟು, ಆರೋಗ್ಯಕ್ಕೆ ಪೆಟ್ಟು   

ಮದುವೆಗೆಂದು ತಯಾರಾಗಿದ್ದಳು ಆ ತಾಯಿ. ತುಟಿರಂಗು, ಮಿಂಚಿನುಡುಗೆ, ಆ ಉಡುಗೆಗೆ ತಕ್ಕಂತೆ, ಏರೆತ್ತರದ ಚಪ್ಪಲಿ (ಹೈಹೀಲ್ಸ್‌). ಇನ್ನೇನು ಮಗುವನೆತ್ತಿಕೊಂಡು ಹೆಜ್ಜೆ ಹಾಕಿದ್ದಳಷ್ಟೆ!, ಬಾಲ್ಕನಿಯಿಂದಾಚೆ ಕಾಣುವ ಮಿನುಗು ದೀಪಗಳನ್ನು ಕಣ್ಣರಳಿಸಿ ನೋಡುತ್ತಿತ್ತು ಮಗು. ಹೀಲ್ಸ್‌ನ ಮೇಲಿದ್ದ ಅಮ್ಮನಿಗೆ ಅದೇನಾಯಿತೋ... ಜಾರಿದಳು. ಮಡಿಲೊಳಗಿದ್ದ ಮಗುವೂ ಬಾಲ್ಕನಿಯಿಂದಾಚೆ ಜಾರಿತು. ಏನಾಯಿತು ಎಂದು ಗೊತ್ತಾಗುವಷ್ಟರಲ್ಲಿ ಆರು ತಿಂಗಳ ಮಗು ಮೊಹಮ್ಮದ್‌ ಮೊದಲ ಮಹಡಿಯ ಬಾಲ್ಕನಿಗೆ ಹೋಗಿ ಅಪ್ಪಳಿಸಿತ್ತು.

ಮುಂಬೈನಲ್ಲಿ ಈ ಘಟನೆ ಜರುಗಿ ಮೂರು ದಿನಗಳಾದವಷ್ಟೆ. ಕಾಲು ಜಾರಲು, ಸಮತೋಲನ ತಪ್ಪಲು ಕಾರಣ ಹೈ ಹೀಲ್ಸ್‌ ಚಪ್ಪಲಿ. ಫೆಮಿದಾ ಶೇಖ್‌ ಎಂಬ 23ರ ತಾಯಿ ತನ್ನ ಮಗುವನ್ನು ಕಳೆದುಕೊಂಡಿದ್ದು ಈ ಕಾರಣಕ್ಕೆ.

ಏರೆತ್ತರದ ಚಪ್ಪಲಿ ಅಥವಾ ಹೈ ಹೀಲ್ಸ್‌ ಅನಾರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತು. ಆದರೂ ಮಾರುಕಟ್ಟೆಯಲ್ಲೇನೂ ಇದರ ಭರಾಟೆ ಕಡಿಮೆಯಾಗಿಲ್ಲ. ಹೆಂಗಳೆಯರಿಗೂ ಇವುಗಳ ಒಲವು ಕಡಿಮೆಯಾಗಿಲ್ಲ. ಕಾರಣಗಳೇನು?

ADVERTISEMENT

ಹೀಲ್ಸ್‌ ತೊಟ್ಟರೆ ಎತ್ತರದ ನಿಲುವು ನಮ್ಮದಾಗುತ್ತದೆ. ಅದೊಂಥರ ಆತ್ಮವಿಶ್ವಾಸ ಮೂಡಿಸುತ್ತದೆ. ಕೇವಲ ಫ್ಯಾಷನ್‌ಗಾಗಿ ಮಾತ್ರವಲ್ಲ ಈ ವಿಶ್ವಾಸದಕ್ಕಾಗಿಯೂ ಹೈಹಿಲ್ಸ್‌ ತೊಡಲು ಹೆಣ್ಮಕ್ಕಳು ಹಾತೊರೆಯುತ್ತಾರೆ ಎನ್ನುತ್ತಾರೆ ಕ್ರೈಸ್ಟ್‌ ಕಾಲೇಜಿನ ವಿದ್ಯಾರ್ಥಿನಿ ಪೂಜಿತಾ ಕವಲಗಿ.

ಎತ್ತರದ ನಿಲುವಿಗೆ ಪೆನ್ಸಲ್‌ನಂಥ ಹೀಲ್ಸ್‌ಗಳೇ ಬೇಕೆ? ವಿಡ್ಜೆಟ್ಸ್‌ಗಳಾಗಲಿ, ಫ್ಲ್ಯಾಟ್‌ ಹೀಲ್‌ಗಳಾಗಲೀ ಆಗುವುದಿಲ್ಲವೇ? ಸಾಮಾನ್ಯವಾಗಿ ಏರೆತ್ತರದ ಚಪ್ಪಲಿಗಳನ್ನು ಧರಿಸುವವರು ಆರಂಭಿಕ ಅಭ್ಯಾಸಕ್ಕೆ ಫ್ಲ್ಯಾಟ್‌ ಹೀಲುಗಳಿರುವುದಕ್ಕೆ ಆದ್ಯತೆ ನೀಡುತ್ತಾರೆ. ಆದರೆ ತುಂಡುಡುಗೆ ಧರಿಸುವವರು, ಟೋರ್ನ್‌ ಜೀನ್ಸ್‌ ಧರಿಸುವವರಿಗೆ ಈ ಕುದುರೆ ನಡಿಗೆಯಂತೆ ಕಾಣುವ ಚೂಪನೆಯ ಹೀಲ್ಸ್‌ ಧರಿಸಿದರೆನೆ ಸಮಾಧಾನ. ಅವು ಅವರನ್ನು ಅಂದಗಾಣಿಸುತ್ತವೆ ಎಂಬ ಭ್ರಮೆಯೊಂದು ಇದೆ.

ಇಷ್ಟಕ್ಕೂ ಹೀಲ್ಸ್‌ ಹಾಕುವುದರಿಂದ ನಮ್ಮ ದೈಹಿಕ ಬದಲಾವಣೆಗಳೇನಾಗುತ್ತವೆ ಗೊತ್ತೆ? ನಮ್ಮ ನಿಲುವು ನೇರವಾಗಿರುವುದಿಲ್ಲ. ಮುಂಭಾರ ಹೆಚ್ಚಾಗುತ್ತದೆ. ಇಡೀ ದೇಹದ ಭಾರ ಮುಂಗಾಲಿನ ಮೇಲೆ ಬೀಳುತ್ತವೆ. ಪಾದದ ಬೆರಳುಗಳು ಇಡೀ ದೇಹದ ಭಾರವನ್ನು ಹೊರುವಂತಾಗುತ್ತವೆ. ನಮ್ಮ ನಿಲುವಿನ ಸಮತೋಲನವನ್ನು ಕಾಪಾಡುವ ಹಿಮ್ಮಡಿ, ಮತ್ತು ಹಿಂಗಾಲುಗಳು ಏರು ಮುಖದಲ್ಲಿದ್ದು, ಪಾದ ಇಳಿಜಾರಿನಲ್ಲಿರುತ್ತದೆ. ಇಡೀ ಒತ್ತಡ ಪಾದದ ಮೇಲೆ ಬೀಳುತ್ತದೆ. ಮೊಣಕಾಲಿಗೂ ಅದರ ಭಾರ ವರ್ಗಾವಣೆಯಾಗುತ್ತದೆ.

ವೈದ್ಯರಂತೂ ಹೈ ಹೀಲ್ಸ್‌ ಧರಿಸುವ ಅಗತ್ಯವೇ ಇಲ್ಲವೆಂದು ಹೇಳುತ್ತಾರೆ. ಪಾದದ ಆರೋಗ್ಯಕ್ಕೆ ಮಾತ್ರವಲ್ಲ, ಮೊಣಕಾಲು, ಬೆನ್ನಿನ ಆರೋಗ್ಯಕ್ಕೂ ಇವು ಸಲ್ಲವೆಂದು ಹೇಳುತ್ತಾರೆ. ಹೀಲ್ಸ್‌ ಹಾಕುವುದು ಅನಿವಾರ್ಯವಿದ್ದರೆ ಒಂದಿಂಚಿನ ಎತ್ತರವಿರುವುದನ್ನು ಆಯ್ಕೆ ಮಾಡಿಕೊಳ್ಳಿ. ಅದೂ ತೀರ ದೂರದವರೆಗೆ ನಡೆಯಲು ಸರಿಯಾಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

ಎಲ್ಲ ತಿಳಿದಿದ್ದೂ, ನಮ್ಮ ಹೆಜ್ಜೆಗಳನ್ನು ನಾವೇ ಭೂಮಿಯ ಮೇಲೆ ಊರದಿದ್ದಲ್ಲಿ ದೂರುವುದು ಯಾರನ್ನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.