ADVERTISEMENT

ಮೊಬೈಲ್‌ನಲ್ಲಿ ಓಡಿಬಂದ ‘ಚಂದಮಾಮ’

ಮೋಹನ ಬಿ.ಎಂ.
Published 13 ನವೆಂಬರ್ 2018, 20:00 IST
Last Updated 13 ನವೆಂಬರ್ 2018, 20:00 IST
.
.   

ರಾತ್ರಿ ವೇಳೆ ರಚ್ಚೆ ಹಿಡಿದ ಎರಡು ವರ್ಷದ ಮಗುವಿಗೆ ತಾಯಿಯು, ತಿಳಿನೀಲಿ ಆಕಾಶದಲ್ಲಿ ಕಾಣುತ್ತಿದ್ದ ಚಂದ್ರನನ್ನು ತೋರಿಸಿ ಸಮಾಧಾನ ಪಡಿಸಲು ಮುಂದಾದಳು. ಮಗು ಮತ್ತೂ ಹಠ ಮಾಡತೊಡಗಿತು. ತಕ್ಷಣ, ಮೊಬೈಲ್ ಫೋನಿನಲ್ಲಿ ಚಿಣ್ಣರ ಪದ್ಯಗಳನ್ನು ಹಾಕಿ ತೋರಿಸಿದಳು, ಆಗ ಅಳುತ್ತಿದ್ದ ಮಗುವಿನ ಮುಖದಲ್ಲಿ ಮುಗುಳು ನಗೆ ಮನೆ ಮಾಡಿತು. ಹಠ ನಿಲ್ಲಿಸಿ ತುತ್ತಿಗೆ ಬಾಯಿ ತೆರೆಯಿತು...

ಹೌದು, ಇಂದು ಮಕ್ಕಳಿಗೆ ಮೊಬೈಲ್‌ ಫೋನ್‌ಗಳಲ್ಲಿ ಚಂದ ಮಾಮನನ್ನು ತೋರಿಸಿ ಸಮಾಧಾನಪಡಿಸಬೇಕಿದೆ. ಮಕ್ಕಳ ಆಸಕ್ತಿ ಹಾಗೂ ಮಾರುಕಟ್ಟೆ ನಾಡಿಮಿಡಿತ ಬಲ್ಲ ಹಲವಾರು ಕಂಪನಿಗಳು ವೆಬ್ ಸೀರಿಸ್, ರೈಮ್‌ಗಳ (ಮಕ್ಕಳ ಪದ್ಯ) ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಲೇ ಇವೆ.

ಮಕ್ಕಳಲ್ಲಿ ಗೂಗಲ್‌ ಬಳಕೆ ಹೆಚ್ಚಾಗಿದೆ. ಹಾಗಾಗಿ ಇಂದು ‘ಗೂಗಲ್’ ಮಕ್ಕಳ ನಿಜವಾದ ಗುರುವಾಗಿದೆ. ಈ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಆನ್‌ಲೈನ್‌ನಲ್ಲಿ ವಿಶೇಷ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.ಅಂತಹ ಆ್ಯಪ್‌ಗಳ ಬಗ್ಗೆ ನೋಡೋಣ.

ADVERTISEMENT

ಕಿಡ್ಸ್ ಎಬಿಸಿ ಫೋನಿಕ್ಸ್ ಲೈಟ್: ಮೊಬೈಲ್‌ನಲ್ಲಿ ಎಬಿಸಿಡಿ ಅಕ್ಷರಮಾಲೆಯನ್ನು ಕಲಿಯಬಯಸುವ ಮಕ್ಕಳಿಗಾಗಿಯೇ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಗ್ರಾಫಿಕ್ ಮೂಲಕ ಇಲ್ಲಿ ಅಕ್ಷರ ಮಾಲೆ ಇರುವುದರಿಂದ, ಮಕ್ಕಳನ್ನು ಆಕರ್ಷಿಸುತ್ತದೆ.

ಕಿಡ್ಸ್‌ಝೂ ಎನಿಮಲ್ ಸೌಂಡ್ಸ್ ಆ್ಯಂಡ್ ಫೋಟೋಸ್: ಮಕ್ಕಳಿಗೆ ಪ್ರಾಣಿಗಳು, ಕೀಟಗಳ ಬಗ್ಗೆ ತಿಳವಳಿಕೆ ನೀಡುವುದಕ್ಕಾಗಿ ಈ ಆ್ಯಪ್‌ ಬಳಸಲಾಗುತ್ತದೆ. ಈ ಆ್ಯಪ್‌ನಲ್ಲಿ ಪ್ರಾಣಿಗಳು, ಕೀಟಗಳ ಹೆಸರುಗಳು, ಚಿತ್ರಗಳಷ್ಟೇ ಅಲ್ಲ ಅವುಗಳ ಹೆಸರನ್ನು ಹೇಗೆ ಉಚ್ಛರಿಸಬೇಕು, ಅವು ಹೇಗೆ ಸದ್ದು ಮಾಡುತ್ತವೆ ಎಂಬ ಮಾಹಿತಿಯೂ ಇರುತ್ತದೆ. ಮಕ್ಕಳಿಗೆ ಪ್ರಾಣಿಗಳ ಹೆಸರು ಗುರುತಿಸುವಲ್ಲಿ ತುಂಬಾ ಸಹಾಯಕಾರಿಯಾಗುತ್ತದೆ.

ಕಿಡ್ಸ್ ಪೇಯಿಂಟ್: ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಅಭಿವೃದ್ಧಿಪಡಿಸಲು ಸೂಕ್ತವಾದ ಆ್ಯಪ್‌ ಇದಾಗಿದೆ. ಇದರಿಂದ ಚಿತ್ರಗಳನ್ನು ಬಿಡಿಸುವುದಷ್ಟೇ ಅಲ್ಲ, ಮಕ್ಕಳು ಮೊಬೈಲ್‌ನಲ್ಲಿ ಸೆರೆಹಿಡಿದ ಚಿತ್ರಕ್ಕೆ ಅಲಂಕಾರ ಮಾಡಲೂ ಸಾಧ್ಯವಿದೆ. ಮೊಬೈಲ್‌ ಪ್ಲೇಸ್ಟೋರ್‌ನಲ್ಲಿ ಇದನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಮೆಮೊರಿ ಆಫ್ ಕಿಡ್ಸ್: ಇದು ಮಕ್ಕಳ ಮನರಂಜನೆ ಮತ್ತು ಕಲಿಕೆಗೆ ಪ್ರೋತ್ಸಾಹಿಸುವುದರೊಂದಿಗೆ ಅವರ ಮೆದುಳನ್ನು ಇನ್ನೂ ಚುರುಕುಗೊಳಿಸುತ್ತದೆ. ಇದು ಬಹುತೇಕರು ಕಂಪ್ಯೂಟರ್‌ಗಳಲ್ಲಿ ರಮ್ಮಿ ಆಡುವ ರೀತಿಯಲ್ಲಿರುತ್ತದೆ. ಈ ಆಟ ಮಕ್ಕಳ ಬುದ್ಧಿ ಚುರುಕಾಗಲು ನೆರವಾಗುತ್ತದೆ.

ಇನ್ಫೋಬೆಲ್ಸ್: ಈ ಆ್ಯಪ್‌ನಲ್ಲಿ ಅನಿಮೇಷನ್‌ ಚಿತ್ರಗಳಿರುವ ಮಕ್ಕಳ ಹಾಡು ಹಾಗೂ ಕಥೆಗಳನ್ನು ನೋಡಬಹುದು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಲಭ್ಯವಿದೆ. ಒಂದೂವರೆ ವರ್ಷದ ಮಕ್ಕಳಿಂದ ಐದು ವರ್ಷದವರೆಗಿನ ಮಕ್ಕಳನ್ನು ಸೆಳೆಯುತ್ತಿರುವ ಆ್ಯಪ್‌ ಇದಾಗಿದೆ.

ಜಂಗಲ್‌ ಬುಕ್‌: ಮಕ್ಕಳ ಮೆಚ್ಚಿನ ಜಂಗಲ್‌ಬುಕ್‌ ಸಿನಿಮಾ ವೆಬ್ ಸೀರಿಸ್‌ ಆಗಿ ಬಂದಿದೆ. ಪವರ್‌ ಕಿಡ್ಸ್‌ ಟಿವಿಯವರು ವಾರಕ್ಕೆ ಎರಡು ಎಪಿಸೋಡ್‌ನಂತೆ ಪ್ರಸಾರ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.

ಟಾಪ್‌ ಆಗಿದೆ ಟಾಕಿಂಗ್ ಟಾಮ್: ಮಕ್ಕಳನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸಿ ಮನರಂಜನೆ ತರುವ ಟಾಕಿಂಗ್ ಟಾಮ್ ಆ್ಯ‍ಪ್‌ಅನ್ನು ಬಹುತೇಕ ಮಕ್ಕಳು ಬಳಸುತ್ತಾರೆ. ಸದಾ ನಕ್ಕು ನಗಿಸುವಲ್ಲಿ ಈ ಆ್ಯಪ್ ಯಶಸ್ವಿಯಾಗುತ್ತಿದೆ. ನಾವು ಏನು ಹೇಳುತ್ತೇವೆಯೋ ಅದನ್ನೆಲ್ಲ ಯಥಾವತ್ತಾಗಿ ಬೆಕ್ಕಿನ ಧ್ವನಿಯಲ್ಲಿ ಪುನರಾವರ್ತಿಸುವುದು ಈ ಆ್ಯಪ್‌ನ ವಿಶೇಷ.

ಅಲ್ಲದೆ, ಸ್ಮಾರ್ಟ್‌ಫೋನ್ ಸ್ಕ್ರೀನ್‌ನಲ್ಲಿ ಮೂಡುವ ಬೆಕ್ಕನ್ನು ಮುಟ್ಟಿದಾಗ ಮಕ್ಕಳಂತೆ ಕೂಗುವ, ವ್ಯಂಗ್ಯ ಹಾಗೂ ಮಂಗಾಟದ ಚೇಷ್ಟೆಗಳು ಮಕ್ಕಳನ್ನು ಮಾತ್ರವಲ್ಲದೇ ಎಂಥವರನ್ನೂ ರಂಜಿಸುತ್ತದೆ. ಹಾಗಾಗಿ, ರೈಮ್‌ ಕೇಳುವ ಮಕ್ಕಳು ಹೆಚ್ಚು ಟಾಕಿಂಗ್‌ ಟಾಮ್‌ನೊಂದಿಗೂ ಆಟವಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.