ADVERTISEMENT

ಮೊಬೈಲ್ ತಂದಿತ್ತ ಚಾಲಕ

ಕೆ.ಚಕ್ರವರ್ತಿ ಬಸವನಗುಡಿ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ರಾತ್ರಿ 10 ಗಂಟೆಯಾಗಿತ್ತು. ಮನೆಗೆ ತಲುಪುವ ಗಡಿಬಿಡಿಯಲ್ಲಿ ಆಟೊ ಹತ್ತಿದ್ದೆ. ಚಾಲಕ 250 ರೂ. ಕೊಡಲೇಬೇಕು ಎಂದು ಪಟ್ಟು ಹಿಡಿದಾಗ ಏನು ಮಾಡಬೇಕು ಎಂದು ತೋಚದಾಗಿತ್ತು. ನನ್ನ ಬಳಿ ಅಷ್ಟೊಂದು ದುಡ್ಡು ಇರಲಿಲ್ಲ. `ಚಿಕ್ಕವನು ಇಷ್ಟೊಂದು ಹಣ ಕೀಳಬಾರದು ಎನ್ನೋದು ತಿಳಿಯಲ್ಲವೆ' ಎಂದು ಗೊಣಗಿಕೊಳ್ಳುತ್ತಾ ಮನೆ ಮುಂದೆ ನಿಲ್ಲಿಸಿ ದುಡ್ಡು ತಂದುಕೊಟ್ಟು ದೊಡ್ಡ ನಮಸ್ಕಾರ ಹಾಕಿ ಕಳುಹಿಸಿಕೊಟ್ಟೆ.

ಅಂದಿನಿಂದ ಅಟೊ ಚಾಲಕರನ್ನು ಕಂಡರೆ ಮೈ ಉರಿಯುತ್ತಿತ್ತು. ಆದರೆ ದುಡ್ಡು ಕೀಳುವವರ ಮಧ್ಯೆ ಬೆಂಗಳೂರಿನಲ್ಲಿ ನಿಷ್ಠಾವಂತರೂ ಇರುತ್ತಾರೆ ಎಂದು ಒಪ್ಪಿಕೊಳ್ಳುವುದಕ್ಕೆ ಮತ್ತೆರಡೇ ದಿನಗಳು ಸಾಕಾದವು.ಸಿ.ಎ ಫರ್ಮ್ ಒಂದರಲ್ಲಿ ನಾನು ಕೆಲಸಕ್ಕೆ ಸೇರಿಕೊಂಡಿದ್ದೆ. ಬಾಸ್ ಮೃದು ಮನಸ್ಸಿನವರಾದರೂ ಕೆಲಸದೊತ್ತಡದಲ್ಲಿ ರೇಗುತ್ತಲೇ ಇರುತ್ತಿದ್ದರು. ಎಷ್ಟೇ ಕೆಲಸ ಮಾಡಿದರೂ ಅವರಿಗೆ ತೃಪ್ತಿಯೇ ಆಗುತ್ತಿರಲಿಲ್ಲ. ಇವುಗಳ ಜೊತೆಯಲ್ಲಿ ಪ್ರತಿದಿನ ಕಚೇರಿಯ ಬಾಗಿಲು ತೆಗೆದು ಹಾಕುವ ಸೆಕ್ಯುರಿಟಿ ಗಾರ್ಡ್ ಕೆಲಸವನ್ನೂ ನಮಗೇ ವಹಿಸಿದ್ದರು.

ಆ ದಿನ ಬ್ಯಾಂಕ್‌ನಲ್ಲಿ ಆಡಿಟಿಂಗ್ ಇದ್ದ ಕಾರಣ ಕಚೇರಿಗೆ ಅವರು ಬೇಗ ಬಂದರು. ಬೇಗ ಹೊರಡಿ ಎನ್ನುತ್ತಾ ಜೇಬಿಗೆ ಕೈ ಹಾಕಿದರು. ಮೊಬೈಲ್ ಇರಲೇ ಇಲ್ಲ. ಆಗಷ್ಟೇ ಹೊಸ ಮೊಬೈಲ್ ಖರೀದಿಸಿದ್ದ ಅವರ ಸಂಪರ್ಕ ಸಂಖ್ಯೆಗಳೆಲ್ಲಾ ಇದ್ದಿದ್ದು ಅದರಲ್ಲೇ. ಎಲ್ಲಿ ಬಿಟ್ಟೆ ಎಂಬುದೂ ಅವರಿಗೆ ನೆನಪಿರಲಿಲ್ಲ. ಬರುತ್ತಲೇ ಕಣ್ಣು ಬಿಡುತ್ತಾ, ಹೆದರಿಸುತ್ತಿದ್ದ ಅವರ ಕಂಗಳಲ್ಲಿ ಅಸಹಾಯಕತೆ ಹಾಗೂ ಕಣ್ಣೀರು!

ಅರ್ಧ ಗಂಟೆ ಬಳಿಕ ಯಾರೋ ಬಾಗಿಲಿಗೆ ಬಂದು ಕರೆದರು. ಯಾರು ಎಂದು ಕೇಳಿದಾಗ `ನನ್ನ ಆಟೋದಲ್ಲಿ ಮೊಬೈಲ್ ಒಂದು ರಿಂಗಣಿಸುತ್ತಿತ್ತು. ಕಾಲ್ ರಿಸೀವ್ ಮಾಡಿ ಮಾತಾಡಿದೆ. ಇವರ ಹೆಸರು ಮತ್ತು ಇಲ್ಲಿಯ ಅಡ್ರೆಸ್ ಹೇಳಿದರು. ಅವರ ಮೊಬೈಲೇ ಇರಬಹುದು ಎಂದು ತಂದೆ' ಎಂದು ಉತ್ತರಿಸಿದ.
ಗರಬಡಿದಂತೆ ಕುಳಿತಿದ್ದ ನಮ್ಮ ಸರ್ ಪಟ್ಟನೆ ಬಂದು ಆತನಿಗೆ ಸಾವಿರ ಬಾರಿ ಧನ್ಯವಾದ ಅರ್ಪಿಸಿದರು. ಆಟೊ ಇಳಿಯುವಾಗ 5 ರೂಪಾಯಿಗೆ ಚೌಕಾಸಿ ಮಾಡಿದ್ದ ಅವರು ಆಟೊ ಚಾಲಕನಿಗೆ 500 ರೂ ಕೊಟ್ಟು ಕಳುಹಿಸುವಾಗ ಸರ್ ಮುಖದಲ್ಲಿ ಕೃತಜ್ಞತಾ ಭಾವ ಜಿನುಗುತ್ತಿತ್ತು. ನಾವೂ ಬೆರಗು ಗಣ್ಣಿನಿಂದ ನೋಡುತ್ತಾ ನಿಂತಿದ್ದೆವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.