ADVERTISEMENT

ಯಶಸ್ವಿ ರಂಗ ಪ್ರಯೋಗೋತ್ಸವ

ಎಂ.ವಿ.ನೆಗಳೂರ
Published 4 ಜನವರಿ 2013, 19:59 IST
Last Updated 4 ಜನವರಿ 2013, 19:59 IST

ಆಧುನೀಕರಣದ ಅವಸ್ಥೆಯಲ್ಲಿಯೂ ಸಾಂಸ್ಕೃತಿಕ ನೆಲೆಯಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಿಸಲು ಸಾಧ್ಯ ಎಂಬುದನ್ನು ಮನಗಂಡ ನೆಲಮಂಗಲದ ರಂಗಕರ್ಮಿ ಸಿ.ಸಿದ್ದರಾಜು, ರಂಗಾಸಕ್ತ ಗೆಳೆಯರೊಂದಿಗೆ 1995ರಲ್ಲಿ ರಂಗ ಶಿಕ್ಷಣದ ಕೇಂದ್ರ ಸ್ಥಾಪಿಸಿ ಚಿಂತನಶೀಲ ನಾಟಕಗಳ ನಿರಂತರ ಪ್ರಯೋಗದೊಂದಿಗೆ ಪ್ರತಿ ವರ್ಷ ನಾಟಕೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ.

ರಂಗ ಶಿಕ್ಷಣ ಕೇಂದ್ರದ 18ನೇ ವಾರ್ಷಿಕೋತ್ಸವದ ಪ್ರಯುಕ್ತ ಡಾ.ಕೆ. ರಾಮಕೃಷ್ಣಯ್ಯ ಅವರ ನಿರ್ದೇಶನದಲ್ಲಿ, `ಯುದ್ಧ ಭಾರತ' (ರಚನೆ: ದಿವಾಕರ ಹೆಗಡೆ) ಹಾಗೂ ರಂಗ ಶಿಕ್ಷಣ ಕೇಂದ್ರದ ಸಕ್ರಿಯ ಕಲಾವಿದೆ ಎಂ.ಪುಷ್ಪಲತಾ ನಿರ್ದೇಶನದ `ನಮ್ಮ ನಿಮ್ಮಳಗೊಬ್ಬ' (ರಚನೆ: ರಾಜೇಂದ್ರ ಕಾರಂತ) ನಾಟಕ ಇತ್ತೀಚೆಗೆ ನೆಲಮಂಗಲದ ಚಿಕ್ಕೆಲ್ಲಪ್ಪ ಸಮುದಾಯ ಭವನದಲ್ಲಿ ಪ್ರದರ್ಶನಗೊಂಡವು.

`ಯುದ್ಧ ಭಾರತ' ವಿಭಿನ್ನ ಶೈಲಿಯಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಗಾಂಧಾರಿ ಪಾತ್ರದಲ್ಲಿ ಪುಷ್ಪಲತಾ ಪಾತ್ರಕ್ಕೆ ಜೀವ ತುಂಬಿದರು. ತನ್ನ ಬಣ್ಣದ ಕನಸುಗಳು ಕಮರಿದರೂ ಪತಿಯ ಪರಾಕ್ರಮದಲ್ಲಿ ಆನಂದ ಅನುಭವಿಸುವ ಪರಿ ಹೃದಯಂಗಮಯ ವಾಗಿತ್ತು. ಧ್ರುತರಾಷ್ಟ್ರನಾಗಿ ನವೀನ್, ಕೃಷ್ಣನಾಗಿ ವಿನಯ್ ಮನೋಜ್ಞವಾಗಿ ಅಭಿನಯಿಸಿದರು. ಯಥೋಚಿತವಾದ ರಂಗ ಪರಿಕರ, ಬೆಳಕು, ಹಿನ್ನೆಲೆ ಸಂಗೀತ, ವಿಶೇಷವಾಗಿ ಕೃಷ್ಣನ ವಸ್ತ್ರವಿನ್ಯಾಸ ನಿರ್ದೇಶಕರ ಸೃಜನಶೀಲತೆಯ ಪ್ರತೀಕವಾಗಿದ್ದವು. ಎಲ್ಲವನ್ನೂ ಕಳೆದುಕೊಂಡ ಧರ್ಮರಾಯ, `ನಾವು ಯುದ್ಧ ಗೆದ್ದೆವೆ ಕೃಷ್ಣ?' ಎಂದು ಪ್ರಶ್ನಿಸುವುದು ನಾಟಕದ ಅಂತರಾಳವಾಗಿದೆ.

ಎರಡನೇ ದಿನ ಪ್ರದರ್ಶನಗೊಂಡದ್ದು `ನಮ್ಮ ನಿಮ್ಮಳಗೊಬ್ಬ' ನಾಟಕ. ಆಂಗ್ಲ ಮೂಲದ ಕನ್ನಡ ರೂಪಾಂತರದ ಪತ್ತೇದಾರಿ ನಾಟಕ ರಚನಾ ಕೌಶಲದಿಂದ ಗಮನ ಸೆಳೆಯಿತು.

ಅನೈತಿಕ ಸಂಬಂಧ ಸಹಿಸದವರ, ಅವಮಾನ ತಾಳದವರ ಆತ್ಮಹತ್ಯೆಯಿಂದ ಹುಚ್ಚರಾಗುವ ಸನ್ನಿವೇಶಗಳು ಪರಿಣಾಮಕಾರಿಯಾಗಿ ಮೂಡಿಬಂದವು. ಮಂಗಳೂರಿನ ಪ್ರಾದೇಶಿಕ ಹಿನ್ನೆಲೆಯ ಘಟನಾವಳಿಗಳು, ಭಾಷೆ, ಜೀವನಶೈಲಿಯ ನೈಜ ಚಿತ್ರಣಗಳಿಂದ ಹಿಡಿದಿಟ್ಟವು.

ಕಾಳಿಂಗ ಹೊಳ್ಳನ ಪಾತ್ರಧಾರಿ ಗಣಪತಿ ಗೌಡ, ಮರೀಶ (ಮುರಳಿ) ಮತ್ತು ಹರ್ಷನ ಪಾತ್ರಧಾರಿ ಅನಿಲ್ ಕುಮಾರ ಸಹಜಾಭಿನಯದಿಂದ ಗಮನ ಸೆಳೆದರು. ಎಲ್ಲ ಪಾತ್ರಧಾರಿಗಳು ಬೆಂಗಳೂರಿನವರೇ ಆಗಿದ್ದರೂ ಮಂಗಳೂರಿನವರಂತೆ ಮಾತನಾಡಿದ್ದು ವಿಶೇಷ. ಸೂಕ್ತ ರಂಗಸಜ್ಜಿಕೆ ನಿರ್ಮಿಸಿದ ಗಣಪತಿ ಗೌಡ, ಬೆಳಕಿನ ಅಗತ್ಯ ಪೂರೈಸಿದ ಶಿವಣ್ಣ, ವಸ್ತ್ರ ವಿನ್ಯಾಸ ಮಾಡಿದ ಪುಷ್ಪಲತಾ ಅಭಿನಂದನಾರ್ಹರು.

ಸುದೀರ್ಘ ಕಾಲ ನಾಟಕ ಗುರುವಾಗಿ ಸೇವೆ ಸಲ್ಲಿಸಿದ ಪ್ರೊ.ಕೆ.ಆರ್. ಸುಧೀಂದ್ರ ಶರ್ಮ ಅವರನ್ನು ನಾಟಕದ ಪ್ರಾರಂಭದಲ್ಲಿ ಸನ್ಮಾನಿಸಲಾಯಿತು. ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಹಾಗೂ ರಂಗಕರ್ಮಿ ಸಿ. ಸಿದ್ದರಾಜು ಅವರ ಶ್ರಮ ನಾಟಕಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.