ADVERTISEMENT

ಯೋಗಾಕಾಂಕ್ಷಿಗಳಿಗೊಂದು ಪುಸ್ತಕ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
ಯೋಗಾಕಾಂಕ್ಷಿಗಳಿಗೊಂದು ಪುಸ್ತಕ
ಯೋಗಾಕಾಂಕ್ಷಿಗಳಿಗೊಂದು ಪುಸ್ತಕ   

ಜಗತ್ತು ಹೈಟೆಕ್ ಆಗುತ್ತಿದೆ. ಜನರೂ ಯಾಂತ್ರಿಕತೆಗೆ ಸ್ವಲ್ಪ ಸ್ವಲ್ಪವೇ ಒಗ್ಗಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಎದ್ದು ತಿಂಡಿ ತಿನ್ನುವುದಕ್ಕೂ ಪುರುಸೊತ್ತಿಲ್ಲದ ಪರಿಸ್ಥಿತಿ ಈಗಿನ ಜನರದ್ದು. ಎಲ್ಲಾ ಕೆಲಸವನ್ನೂ ಚಕಾಚಕ್ ಮಾಡಿ ಮುಗಿಸಿಬಿಡಬೇಕೆಂದು ಬಿಡುವೇ ಇಲ್ಲದಂತೆ ದುಡಿಯುವವರಿಗೂ ಕಡಿಮೆಯಿಲ್ಲ. ಆದರೆ ಮುಂದೆ ಸಾಗುವ ಭರದಲ್ಲಿ ತಮ್ಮ ಬಗ್ಗೆ, ತಮ್ಮ ಆರೋಗ್ಯದ ಕುರಿತು ಕಾಳಜಿ ಮಾಡಿಕೊಳ್ಳಲೂ ಮರೆಯುತ್ತಿರುವುದು ನಿಜಕ್ಕೂ ವಿಷಾದನೀಯ.

ಸಮಯದ ಅಭಾವದ ಪರಿಣಾಮ ಆರೋಗ್ಯ, ಸೌಂದರ್ಯದ ಮೇಲೂ ಬೀರುತ್ತೆ. ಅವಧಿಗೆ ಮುನ್ನವೇ ವಯಸ್ಸಿನ ಛಾಯೆ ದೇಹದಲ್ಲಿ ಮುಖದಲ್ಲಿ ಮೂಡುತ್ತದೆ. ಆದರೆ ಈ ಸಮಸ್ಯೆಗಳಿಗೆಂದು ಸುಲಭ ಮಾರ್ಗ ಹುಡುಕಿಕೊಳ್ಳುವ ಜನ ಮುಂದಿನ ಪರಿಣಾಮದ ಬಗ್ಗೆ ಯೋಚಿಸುವುದೇ ಇಲ್ಲ. ಸೌಂದರ್ಯ ಮತ್ತು ಆರೋಗ್ಯ ಹೆಚ್ಚಿಸಿಕೊಳ್ಳಲು ವಾರಕ್ಕೊಮ್ಮೆ ಪಾರ್ಲರ್ ಅಥವಾ ಆಸ್ಪತ್ರೆಗೆ ಹೋಗಿ ಬಂದರಾಯಿತು ಎನ್ನುವ ಮಾತು ಕೇಳಿಬರುತ್ತದೆ. ಆದರೆ ಇದು ಶಾಶ್ವತವಲ್ಲ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಯೋಗಿ ಅಶ್ವಿನಿ.

ಪಾರ್ಲರ್ ಅಥವಾ ಆಸ್ಪತ್ರೆಗೆ ಮೊರೆಹೋಗುವ ಬದಲು ದಿನದಲ್ಲಿ ಒಂದಿಷ್ಟು ಸಮಯ ಯೋಗಾಭ್ಯಾಸ ಮಾಡಿದರೆ ಮುಖದಲ್ಲಿ, ದೇಹದಲ್ಲಿ ಮೂಡುವ ವಯಸ್ಸಿನ ಛಾಯೆಯನ್ನು ತಡೆಯಬಹುದು ಎನ್ನುವುದನ್ನು ಇತ್ತೀಚೆಗೆ ತಮ್ಮ `ಸನಾತನ ಕ್ರಿಯಾ~ ಎಂಬ ಪುಸ್ತಕದ ಮೂಲಕ ತಿಳಿಸಿದ್ದಾರೆ. ಯೋಗ, ಧ್ಯಾನ ಮತ್ತು ಗಿಡಮೂಲಿಕೆಗಳೇ ಪುರಾತನ ಯುಗದಲ್ಲಿ ಋಷಿಮುನಿಗಳು ನೂರಾರು ಕಾಲ ಬಾಳಿ ಬದುಕುತ್ತಿದ್ದರ ಗುಟ್ಟು ಎನ್ನುತ್ತಾರೆ ಧ್ಯಾನ್ ಫೌಂಡೇಶನ್‌ನ ಯೋಗಗುರು ಯೋಗಿ ಅಶ್ವಿನಿ.

ಇಂದಿನ ಆಧುನಿಕ ಜೀವನ ಪದ್ಧತಿಯೇ ಬೇರೆ. ಎಲ್ಲಕ್ಕೂ ರಾಸಾಯನಿಕಗಳ ಮಿಶ್ರಣವಿರುತ್ತದೆ. ಬಳಸುವ ವಸ್ತುಗಳಿಂದ ಹಿಡಿದು ತಿನ್ನುವ ಆಹಾರದಲ್ಲೂ ರಾಸಾಯನಿಕ ಸೇರಿಕೊಂಡಿರುತ್ತದೆ. ಆದರೆ ಈ ರಾಸಾಯನಿಕಗಳು ತಕ್ಷಣಕ್ಕೆ ಪರಿಹಾರ ನೀಡಿದರೂ ನಂತರ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು; ನಮ್ಮ ಆರೋಗ್ಯ ಸೌಂದರ್ಯ ಹಸನಾಗುತ್ತದೆ ಎನ್ನುವುದನ್ನು ತಮ್ಮ 20 ವರ್ಷಗಳ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ತಮ್ಮ ಪುಸ್ತಕದ ಮೂಲಕ ದೀರ್ಘಕಾಲ ಬದುಕಲು ಅವಶ್ಯಕವಿರುವ ಯೋಗಾಭ್ಯಾಸ, ಆಯುರ್ವೇದ ಚಿಕಿತ್ಸೆ, ಸೌಂದರ್ಯ ವೃದ್ಧಿಗೆ ಆಹಾರಾಭ್ಯಾಸ ಮುಂತಾದುವುಗಳ ಬಗ್ಗೆ ಅತಿ ಸರಳವಾಗಿ ನಿರೂಪಿಸಿದ್ದಾರೆ.

ಮನುಷ್ಯನಿಗೆ ಕೆಲಸ ಹೆಚ್ಚಿದಷ್ಟೂ ಅನಗತ್ಯ ಒತ್ತಡಕ್ಕೊಳಗಾಗುತ್ತಾನೆ, ಅವಶ್ಯಕತೆಗಿಂತ ಹೆಚ್ಚು ದುಡಿಯುತ್ತಾನೆ, ಇದರಿಂದ ಆತನಿಗೆ ಒತ್ತಡ ಮಿತಿಮೀರಿ, ಯೋಚನಾಕ್ರಮ ಬದಲಾಗಿ ಮುಖದಲ್ಲಿ ಮತ್ತು ಆರೋಗ್ಯದಲ್ಲಿ ವಯಸ್ಸು ಹೆಚ್ಚಾಗುವುದು ಗೋಚರವಾಗುತ್ತದೆ. ಆದ್ದರಿಂದ ಅನಗತ್ಯ ಕೆಲಸ ಮಾಡದೆ, ಹೆಚ್ಚು ಮಾತನಾಡದೆ ಇರುವುದೇ ಒಳ್ಳೆಯದು. ದಿನದಲ್ಲಿ ಒಂದಿಷ್ಟು ಸಮಯದಲ್ಲಿ ಯೋಗಾಭ್ಯಾಸ ಮಾಡಿದರೆ ಆಯಸ್ಸನ್ನೂ ವೃದ್ಧಿಸಿಕೊಳ್ಳಬಹುದು, ನೈಸರ್ಗಿಕವಾಗಿಯೇ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎನ್ನುವುದು ಅವರ ಕಿವಿಮಾತು.

ಯೋಗ ಸಮಸ್ಯೆಯ ಮೂಲಕ್ಕೆ ಹೋಗಿ ಗುಣಪಡಿಸುತ್ತದೆ. ಯೋಗವನ್ನು ಅನುಸರಿಸಿದವರಿಗಷ್ಟೇ ಅದರ ಮಹತ್ವ ಅರಿಯಲು ಸಾಧ್ಯ. ಆದರೆ ಅನೇಕ ನಕಲಿ ಯೋಗಗುರುಗಳು ಯೋಗಾಭ್ಯಾಸದ ನಿಜವಾದ ಅರ್ಥವನ್ನು ಹಾಳುಮಾಡುತ್ತಿದ್ದಾರೆ. ಯೋಗವನ್ನು ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬೇಸರವೂ ಅಶ್ವಿನಿ ಅವರಿಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.