ADVERTISEMENT

ರಂಗಭೂಮಿ ಬೆಸೆದ ಪ್ರೀತಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಸವಿತಾ, ಪರಮ್
ಸವಿತಾ, ಪರಮ್   

ವೇದಿಕೆಯಲ್ಲಿಯೇ ಪ್ರೇಮ ನಿವೇದನೆ

ನಾನು ರಾಜ್‌ಗುರು ಕಾಲೇಜಿನಿಂದ ಪರಿಚಿತರು. ಕಾಲೇಜು ಮುಗಿದ ನಂತರ ಇಬ್ಬರ ನಡುವೆ ಸಂಪರ್ಕವಿರಲಿಲ್ಲ. ಡಿಗ್ರಿ ಮುಗಿದು ಎರಡು ವರ್ಷಗಳ ನಂತರ ‘ಚೋರ ಚರಣ ದಾಸ’ ನಾಟಕದಲ್ಲಿ ನಟಿಸಲು ಮೈಸೂರಿಗೆ ಹೋಗಿದ್ದಾಗ ಅಲ್ಲಿ ಅವರು ಪುನಃ ಸಿಕ್ಕರು. ಅಲ್ಲಿ ನಮ್ಮಿಬ್ಬರ ಮರುಪರಿಚಯ ಆಯಿತು. ಅವರು ‘ಸಾತ್ವಿಕ’ ರಂಗತಂಡದಲ್ಲಿ ನಟಿಸುವಂತೆ ಕೇಳಿಕೊಂಡರು. ‘ಬದುಕು ಜಟಕ ಬಂಡಿ’ ನಾಟಕದಲ್ಲಿ ನಾವಿಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದೆವು.
ಅದರಲ್ಲಿ ನನ್ನದು ವೇಶ್ಯೆಯ ಪಾತ್ರ. ಅವರು ನನಗೆ ಪ್ರೇಮನಿವೇದನೆ ಮಾಡುವ ಒಂದು ಸನ್ನಿವೇಶ ಕೊನೆಯಲ್ಲಿ ಬರುತ್ತದೆ. ‘ನಾನು ನಿನ್ನನ್ನು ತುಂಬಾ ಇಷ್ಟ ಪಡುತ್ತಿದ್ದೇನೆ. ಮದುವೆ ಆದರೆ ನಿನ್ನನ್ನೇ ಆಗುವುದು’ ತುಂಬಾ ಗಂಭೀರವಾಗಿ ಹೇಳಿದರು. ಆದರೆ ಅಲ್ಲಿ ಹೇಳಬೇಕಾದ ಸಂಭಾಷಣೆಯೇ ಬೇರೆ. ಆಗಲೇ ಇವರು ನನ್ನನ್ನು ಪ್ರೀತಿಸುತ್ತಿರುವ ವಿಷಯ ತಿಳಿಯಿತು. ಹೀಗೆ ಒಟ್ಟಿಗೆ ಹಲವು ನಾಟಕಗಳಲ್ಲಿ ಅಭಿನಯಿಸಿದೆವು. ನಂತರ ನಾನು ಅವರ ಪ್ರೀತಿಯನ್ನು ಒಪ್ಪಿಕೊಂಡೆ. ರಾಜ್‌ಗುರು ನನ್ನ ಮನೆಯವರ ಬಳಿ ವಿಷಯ ಹೇಳಿದರು.


ನಯನಾ, ರಾಜ್‌ಗುರು

ಮನೆಯವರಿಗೆ ರಾಜ್‌ಗುರು  ಮೊದಲೇ ಗೊತ್ತಿದ್ದ ಕಾರಣ ಎಲ್ಲರೂ ಖುಷಿಯಿಂದಲೇ ಒಪ್ಪಿಕೊಂಡರು. ನಾಲ್ಕು ವರ್ಷದ ಹಿಂದೆ ‘ಮಂತ್ರಮಾಂಗಲ್ಯ’ ಆದೆವು. ಇಬ್ಬರೂ ಸೇರಿ ಸಾತ್ವಿಕ, ರಂಗಪಯಣ ತಂಡ ನಡೆಸುತ್ತಿದ್ದೇವೆ. ಬಹುಶಃ ಇವರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದರೆ ನಾನು ಈ ಮಟ್ಟಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಸಾದ್ಯವಾಗುತ್ತಿರಲಿಲ್ಲ.
ನಯನಾ ಸೂಡ
***

ADVERTISEMENT

ಸಮಾನ ಆಸಕ್ತಿ ಮೂಡಿಸಿತು ಪ್ರೀತಿ
ಬಿಜಾಪುರ ನನ್ನ ಸ್ವಂತ ಊರು. ನಾಟಕದಲ್ಲಿ ಆಸಕ್ತಿ ಇದ್ದ ಕಾರಣಕ್ಕೆ ಬೆಂಗಳೂರಿಗೆ ಬಂದು, ಸಮಷ್ಟಿ ತಂಡವನ್ನು ಸೇರಿಕೊಂಡೆ. ಪರಮ್‌ ಅವರನ್ನು ಮೊದಲ ಬಾರಿಗೆ ನೋಡಿದ್ದು ಅಲ್ಲಿಯೇ. ಆದರೆ ಇಬ್ಬರು ಮಾತನಾಡಿರಲಿಲ್ಲ. ಸ್ವಲ್ಪ ದಿನಗಳ ನಂತರ ನಾನು ಸಾಮೇಹಳ್ಳಿಯ ರಂಗಶಾಲೆಗೆ ಸೇರಿಕೊಂಡೆ. ಆಗ ನಾಟಕ ಪ್ರದರ್ಶನ ನೀಡಲು ಬೆಂಗಳೂರು ಎನ್‌ಎಸ್‌ಡಿ ಗೆ ಬಂದಿದ್ದೆ. ಅಲ್ಲಿ ಪರಮ್‌ ಕೂಡ ಇದ್ದರು. ಅವರೇ ಬಂದು ನನ್ನ ಹತ್ತಿರ ಮಾತನಾಡಿಸಿದರು. ಫೋನ್‌ ನಂಬರ್‌ ಬದಲಾಯಿಸಿಕೊಂಡೆವು. ಇಬ್ಬರಿಗೂ ಸಾಹಿತ್ಯದ ಬಗ್ಗೆ ಒಲವಿತ್ತು. ನಾವಿಬ್ಬರು ಓದಿದ ಪುಸ್ತಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಸಮಷ್ಟಿ ತಂಡದ ವತಿಯಿಂದ ತಿಂಗಳಿಗೊಮ್ಮೆ ಸಾಹಿತ್ಯ ಸಂಜೆ ನಡೆಸುತ್ತಾರೆ. ಅಲ್ಲಿಯೂ ಇಬ್ಬರ ಭೇಟಿಯಾಗುತ್ತಿತ್ತು. ಇಬ್ಬರೂ ಒಟ್ಟಿಗೆ ‘ಚಿರ ಕುಮಾರ ಸಭೆ’ ನಾಟಕ ಮಾಡಿದೆವು. ರಿಹರ್ಸಲ್‌ ಮಾಡುವಾಗ ಅವರು ಪ್ರತಿದಿನ ಮನೆಗೆ ಬಿಡಲು ಬರುತ್ತಿದ್ದರು. ಹೀಗೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತು. ಎರಡೂವರೆ ವರ್ಷಗಳ ಹಿಂದೆ ಮದುವೆಯೂ ಆದೆವು. ಈಗ ಇಬ್ಬರೂ ಮೊದಲಿಗಿಂತಲೂ ಹೆಚ್ಚಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇವೆ.
ಸವಿತಾ
**

ಕಾರ್ಯಾಗಾರದಲ್ಲಿ ಹುಟ್ಟಿದ ಪ್ರೀತಿ

ಬೆಂಗಳೂರು ಎನ್‌ಎಸ್‌ಡಿ ಕಾರ್ಯಾಗಾರದಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ಪ್ರಸನ್ನ ಸಾಗರ್‌ ನಿರ್ದೇಶಕರಾಗಿದ್ದರು. ಅವರು ಪೋಸ್ಟರ್‌ ವಿನ್ಯಾಸ ಹೇಳಿಕೊಡುತ್ತಿದ್ದರು. ಪಿ. ಲಂಕೇಶ್‌ ಅವರ ಅವ್ವ ಕವಿತೆಯ ಮೇಲೆ ಪೋಸ್ಟರ್‌ ತಯಾರಿ ಮಾಡಬೇಕಿತ್ತು. ಅದರಲ್ಲಿ ಅವ್ವನ ಬಗೆಗಿನ ಅನುಭವಗಳನ್ನು ಬರೆಯಬೇಕಿತ್ತು. ನಾನು ಎಷ್ಟೇ ಅನುಭವ ಬರೆದು, ವಿನ್ಯಾಸ ಮಾಡಿದರೂ, ‘ಇದು ಸರಿಯಲ್ಲ, ಅದು ಸರಿಯಿಲ್ಲ’ ಎನ್ನುತ್ತಿದ್ದರು. ಕೊನೆಕೊನೆಗೆ ತುಂಬಾ ಭಾವನಾತ್ಮಕವಾಗಿ ಬರೆಯಲು ಪ್ರಾರಂಭಿಸಿದೆ. ಹದಿನೈದು ದಿನಗಳಲ್ಲಿ ಕಾರ್ಯಗಾರ ಮುಗಿಯಿತು. ಆದರೆ ಅವರಿಗೆ ಈ ವೇಳೆ ನನ್ನ ಮೇಲೆ ಪ್ರೀತಿ ಮೂಡಿತ್ತು. ಈ ವಿಷಯವನ್ನು ಅವರು ನನ್ನ ಬಳಿ ಹೇಳಿದರು. ನಾನು ಒಪ್ಪಿದೆ. ಇದೇ ವೇಳೆ ಇಬ್ಬರ ಮನೆಯಲ್ಲಿಯೂ ಮದುವೆಗೆ ಒತ್ತಡ ಮಾಡುತ್ತಿದ್ದರು. ಮನೆಯವರಿಗೂ ವಿಷಯ ತಿಳಿಸಿದೆವು. ಎಲ್ಲರೂ ಒಪ್ಪಿದರು. ಐದು ವರ್ಷಗಳ ಹಿಂದೆ ಮದುವೆಯಾದೆವು.
- ಅಕ್ಷತಾ


ಅಕ್ಷತಾ, ಪ್ರಸನ್ನ
***

‘ಸೊಸೆ ಅಂದ್ರೆ ಹೀಗಿರಬೇಕು’

ನಾವಿಬ್ಬರೂ ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಅಷ್ಟಾಗಿ ಪರಿಚಯವಿರಲಿಲ್ಲ. ಸಾಹಿತ್ಯ, ನಾಟಕದ ಬಗ್ಗೆ ಇಬ್ಬರಿಗೂ ಅಭಿರುಚಿಯಿತ್ತು. ಒಮ್ಮೆ ನಾಟಕವನ್ನು ನೋಡಲು ಹೋಗಿದ್ದೆ. ಆಗ ವೆಂಕಟೇಶ್‌ ನನ್ನನ್ನು ನೋಡಿದ್ದರು. ಆದರೆ ಆಗ ಅವರು ಮಾತನಾಡಿಸಿರಲಿಲ್ಲ. ಒಮ್ಮೆ ನಾನು ಬೀದಿನಾಟಕ ಮಾಡಿದ್ದನ್ನು ಅವರು ನೋಡಿದ್ರು. ನನಗೂ ರಂಗಭೂಮಿಯಲ್ಲಿ ಆಸಕ್ತಿ ಇರುವುದನ್ನು ವೆಂಕಟೇಶ್ ಗಮನಿಸಿದ್ದರು. ಬಹುಶಃ ಅವರು ಆಗಲೇ ಅಂದುಕೊಂಡಿದ್ದರೋ ಏನೋ ಇವಳು ನನಗೆ ತಕ್ಕ ಸಂಗಾತಿ ಎಂದು. ಆದರೆ, ಆಗ ಅವರು ನನ್ನ ಬಳಿ ಏನೂ ಹೇಳಿಕೊಂಡಿರಲಿಲ್ಲ. ಯಥಾ ಪ್ರಕಾರ ಬ್ಯಾಂಕ್ ಕೆಲಸದಲ್ಲಿ ಮುಳುಗಿದ್ದೆವು.

ಹೀಗೆ ಒಂದು ದಿನ ಮಧ್ಯಾಹ್ನ ಊಟದ ಸಮಯದಲ್ಲಿ ವೆಂಕಟೇಶ್ ಎಸ್‌.ಎಲ್. ಭೈರಪ್ಪ ಅವರ ‘ಧರ್ಮಶ್ರೀ’ ಕಾದಂಬರಿ ಓದುತ್ತಿದ್ದರು. ಅದನ್ನು ನೋಡಿ ನಾನು ಅವರಿಂದ ಆ ಕಾದಂಬರಿ ಓದಲು ಪಡೆದಿದ್ದೆ. ಈ ಮಧ್ಯೆ ಹೇಗೋ ಏನೋ ಆ ಪುಸ್ತಕ ಕಳೆದುಹೋಯಿತು. ಪುಸ್ತಕ ಕೇಳುವ ನೆಪದಲ್ಲಿ ವೆಂಕಟೇಶ್ ಆಗಾಗ್ಗೆ ಮಾತನಾಡಿಸುತ್ತಿದ್ದರು. ನಾನು ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಲುತ್ತಿದ್ದೆ. ಆದರೆ, ಮಾತುಕತೆ ಮುಂದುವರಿದಿತ್ತು.


ವೆಂಕಟೇಶ್‌, ಶೋಭಾ

ಈ ಮಧ್ಯೆ ‘ಧನ್ವಂತರಿ ಚಿಕಿತ್ಸೆ’ ಅನ್ನೋ ಬೀದಿನಾಟಕದಲ್ಲಿ ನಾನು ಅಭಿನಯಿಸಿದ್ದೆ. ಆ ನಾಟಕ ನೋಡಲು ವೆಂಕಟೇಶ್ ತಮ್ಮ ತಾಯಿ ಜತೆ ಬಂದಿದ್ದರು. ನಾಟಕ ನೋಡಿದ ನನ್ನತ್ತೆ ‘ಹುಡುಗಿ ಎಂದರೆ ಹೀಗಿರಬೇಕು’ ಅಂದಿದ್ದರಂತೆ. ನನ್ನನ್ನು ಒಳಗೊಳಗೇ ಇಷ್ಟಪಟ್ಟಿದ್ದ ವೆಂಕಟೇಶ್‌ಗೆ ಇದರಿಂದ ತುಂಬಾ ಖುಷಿಯಾಗಿತ್ತು. ಆದರೆ, ಪ್ರಪೋಸ್ ಮಾಡಲು ಅವರಿಗೆ ಧೈರ್ಯ ಬಾರದೇ ಸುಮ್ಮನಾಗಿದ್ದರು. ನಿತ್ಯವೂ ಬ್ಯಾಂಕಿನಲ್ಲಿ ಮಾತುಕತೆಯಿಂದ ಇಬ್ಬರೂ ಹತ್ತಿರವಾದೆವು. ಕೊನೆಗೊಂದು ದಿನ ನಾನೇ ಅವರಲ್ಲಿ ಪ್ರೇಮ ನಿವೇದನೆ ಮಾಡಿಕೊಂಡೆ. ವೆಂಕಟೇಶ್ ಖುಷಿಯಿಂದ ‘ನನ್ನ ಮನಸಿನಲ್ಲಿ ಇರುವುದು ನಿನಗೆ ಹೇಗೆ ತಿಳಿಯಿತು’ ಎಂದ್ರು.  ಈಗ ನಮ್ಮ ದಾಂಪತ್ಯಕ್ಕೆ ನಲವತ್ತೊಂದು ವರ್ಷ. ಅಂದು ನಮ್ಮತ್ತೆ ನಾಟಕದಲ್ಲಿ ನೋಡಿ ನನ್ನನ್ನು ಹೊಗಳದಿದ್ದರೆ ಬಹುಶಃ ನನಗೂ ಪ್ರಪೋಸ್ ಮಾಡುವ ಧೈರ್ಯ ಬರುತ್ತಿರಲಿಲ್ಲವೇನೋ. ಅಂತೂ ನಾಟಕದ ಅಭಿರುಚಿಯಿಂದಾಗಿ ನಾನು ಮತ್ತು ವೆಂಕಟೇಶ್ ಜತೆಯಾಗುವಂತಾಯಿತು.
 - ವೆಂಕಟೇಶ್‌,ಶೋಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.